ಕರ್ನಾಟಕ ರಾಜ್ಯ ಕಂಡ ಸೌಮ್ಯ ಸ್ವಭಾವದ ರಾಜಕಾರಣಿ ಸಿ.ಎಂ.ಉದಾಸಿ.
ಕರ್ನಾಟಕ ರಾಜ್ಯ ಕಂಡ ಅತ್ಯುತ್ತಮ ಮುಸ್ಸದ್ಧಿ ಹಿರಿಯ ರಾಜಕಾರಣಿ, ಇಂದಿನ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದ ಸಿ.ಎಂ.ಉದಾಸಿಯವರು ಸರಳ ಹಾಗೂ ಸೌಮ್ಯ ಸ್ವಭಾವದ ರಾಜಕಾರಣಿ ಎಂದೇ ಚಿರಪರಿಚಿತರು.ರಾಜಕೀಯ ಜೀವನದಲ್ಲಿ ಸತತ ಹೋರಾಟ ಹಾಗೂ ನಾಯಕತ್ವದ ಗುಣಗಳಿಂದ ಪುರಸಭಾ ಸದಸ್ಯರಾಗಿ, ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿ ರಾಜ್ಯಾದ್ಯಂತ ಹೆಸರು ಮಾಡಿದ ಸಿ.ಎಂ.ಉದಾಸಿ ಯವರದು ಒಂದು ವಿಶಿಷ್ಟ ಸೇವಾ ವ್ಯಕ್ತಿತ್ವ.ಹಾಗಾಗಿ ಸಿ.ಎಂ.ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿ ಆರು ಸಲ ಶಾಸಕರಾಗಿ, ಮಂತ್ರಿಗಳಾಗಿ ಸಾರ್ವಜನಿಕ ಜೀವನದಲ್ಲಿದ್ದರು ಸಹ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೇ ರಾಜಕೀಯ ಮಾಡಿದವರು.ಹಾವೇರಿ ಭಾಗದಲ್ಲಿ ಅಣ್ಣಾವ್ರು ಎಂದೇ ಖ್ಯಾತರಾದ ಸಿ.ಎಂ.ಉದಾಸಿ ಅವರು, ಅವರ ಸುದೀರ್ಘ ರಾಜಕಾರಣದಲ್ಲಿ ಹಾಲವಾರು ಏಳು ಬೀಳುಗಳನ್ನು ಕಂಡವರು. ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಅವರು ರಾಜ್ಯದ ರಸ್ತೆಗಳಿಗೆ ಹೊಸಕಾಯಕಲ್ಪ ನೀಡುವ ಮೂಲಕ ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಹತ್ತನೇ ತರಗತಿ ಪಾಸಾಗದಿದ್ದರೂ, ಎಂಟು ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುತ್ತಿದ್ದರು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.ಸುಮಾರು ಅರುವತ್ತನೇ ವಯಸ್ಸಿನವರೆಗೂ ವ್ಯಾಪಾರ ಮತ್ತು ರಾಜಕಾರಣವನ್ನು ಸಮಸಮವಾಗಿ ತೂಗಿಸಿಕೊಂಡು ಬಂದ ಚಾಣಾಕ್ಷರು ಎಂದರೆ ತಪ್ಪಾಗಲಾರದು. ಅಭಿವೃದ್ಧಿಯ ಚಿಂತಕರಾಗಿ, ಹಾನಗಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಸರ್ವೋತ್ತಮ ಉನ್ನತಿಗಾಗಿ ಹಗಲಿರುಳು ದುಡಿದು. ಅತ್ಯಂತ ಜನಪ್ರಿಯ ನಾಯಕರಾಗಿ ಮನ್ನಣೆ ಜೊತೆಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದರು.
ಫೆಬ್ರವರಿ 2, 1937ರಲ್ಲಿ ಸಾವಿತ್ರಮ್ಮ ಮತ್ತು ಮಹಾಲಿಂಗಪ್ಪ ದಂಪತಿಗಳ ಮಗನಾಗಿ
ಜನಿಸಿದ ಚನ್ನಬಸಪ್ಪ ಉದಾಸಿ ಅವರು ಹಾನಗಲ್ಲ ತಾಲೂಕಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದರು.ಆದರೆ ಅಭ್ಯಾಸದ ಕಡೆ ಹೆಚ್ಚು ವಲವು ವಹಿಸದೇ ವ್ಯಾಪಾರ ಕಾಯಕ ಆರಂಭಿಸಿ, ರಾಜಕೀಯ ಜೀವನಕ್ಕೆ ಕಾಲಿಟ್ಟರು. ತರುವಾಯ 1974 ರಲ್ಲಿ ಪುರಸಭೆಗೆ ಸ್ಪರ್ಧಿಸಿ ಪ್ರಥಮ ಅಧ್ಯಕ್ಷರಾಗಿಯೂ ಆಯ್ಕೆಯಾದರು. 1983 ರಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿ ಹಾನಗಲ್ಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದರು. ನಂತರ ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ಉದಾಸಿಯವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ.ಮುಂದೆ 1985 ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಸಚಿವರಾದರು, ಇದೆ ಸಂದರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ, ಅವರ ಕ್ಷೇತ್ರ ಸೇರಿದಂತೆ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆಯನ್ನು ಕೊಟ್ಟರು.ತದನಂತರದ 1989 ರವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅವಿಭವಿಸಿದರು. ಸೋತರೂ ಸಹ ಸಮಾಜ ಸೇವೆಗಳಿಂದ ವಿಮುಖರಾಗದೇ ಜನರ ಮಧ್ಯೆ ನಿಂತು ಜನಸೇವೆ ಮಾಡಿದರು. ಅಷ್ಟರಲ್ಲೇ ಅಂದರೆ 1994 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದಿಂದ ಮತ್ತೆ ಚುನಾಯಿತರಾಗಿ ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡರು. ಈ ಅವಧಿಯಲ್ಲಿಯೇ ಹಾವೇರಿ ಜಿಲ್ಲೆ ರಚನೆಯ ಜೊತೆಗೆ ಅನೇಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರು.ನಂತರ 1999ರ ಚುನಾವಣೆಯಲ್ಲಿ ಸೋಲುಂಡ ಅವರು, ಬದಲಾದ ರಾಜಕೀಯ ಸ್ಥಿತಿಗತಿಯಲ್ಲಿ ಜನತಾದಳ ತೊರೆದು, ಭಾರತೀಯ ಜನತಾ ಪಕ್ಷ ಸೇರಿ ಜಿಲ್ಲೆಯಲ್ಲಿರುವ ತಮ್ಮ ಬೆಂಬಲಿಗರನ್ನು ಕೂಡಾ ಭಾರತೀಯ ಜನತಾ ಪಕ್ಷಕ್ಕೆ ಕರೆತಂದು, 2004 ರಲ್ಲಿ ನಡೆದ ಚುನಾವಣೆಯಲ್ಲಿ ತಾವೂ ಆಯ್ಕೆಯಾಗುವ ಮೂಲಕ ತಮ್ಮಬೆಂಬಲಿಗರನ್ನು ಶಾಸಕರಾಗಿ ಆಯ್ಕೆ ಮಾಡುವಲ್ಲಿ ಸಫಲರಾದರು.(ಶಿವರಾಜ ಸಜ್ಜನರ, ನೆಹರೂ ಓಲೇಕಾರ, ಜಿ.ಶಿವಣ್ಣ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್ ಕೊಡಿಸಿ, ಶಾಸಕರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.) ನಂತರ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ದುಡಿದರು. ಹೀಗೆ ಅವರ ಮತ ಕ್ಷೇತ್ರದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಮೊರಾರ್ಜಿ ವಸತಿ ಶಾಲೆ, ಪಾಲಿಟೆಕ್ನಿಕ್, ಪದವಿ ಕಾಲೇಜ್ ಹೀಗೆ ಹಲವಾರು ಕಾಲೇಜುಗಳನ್ನು ಆರಂಭಿಸುವ ಮೂಲಕ ಶಿಕ್ಷಣರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗೆ ಉದಾಸಿಯವರು ರೈತರ, ಸಮಸ್ಯೆಗಳಿಗೆ ಸ್ಪಂದಿಸಿ,ಪರಿಹಾರ ಕಂಡುಕೊಳ್ಳುವ ಪ್ರಯತ್ನ ಸಹ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರೈತರಿಗೆ ಪ್ರತಿವರ್ಷ ಬೆಳೆಸಾಲ, ಬೆಳೆವಿಮಾ ಪರಿಹಾರ ಒದಗಿಸಿಕೊಡುವಲ್ಲಿ ವಿಶೇಷ ಕಾಳಜಿ ವಹಿಸಿದರು. ಇವುಗಳಲ್ಲದೆ ಹಾವೇರಿ ಹೊಸ ಜಿಲ್ಲೆ ರಚನೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಟೂಂಕ್ ಕಟ್ಟಿ ನಿಲುವು ಮೂಲಕ ಜಿಲ್ಲೆಯ ಸರ್ವಾಂಗೀಣ ಶ್ರೇಯಸ್ಸಿಗೆ ಕಾರಣಿಭೂತರು ಜೊತೆಗೆ ಇವರ ಅಭಿವೃದ್ಧಿಯ ಪಾತ್ರ ಮಹತ್ವದ್ದಾಗಿದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಾರೆ.ಇನ್ನು ಇವರ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗಲೇ ಬೆಳಗಾವಿಯ ಸುವರ್ಣಸೌಧ ಶಿಲಾನ್ಯಾಸ ಪ್ರಾರಂಭಸಿ, ಇವರ ಅಧಿಕಾರಾವಧಿಯಲ್ಲಿ ಲೋಕಾರ್ಪಣೆಯಾಗಿರುವುದು ಐತಿಹಾಸಿಕ ಕಾರ್ಯ.ಲೋಕೋಪಯೋಗಿ ಸಚಿವರಾಗಿ ಸಾವಿರಾರು ಕೋಟಿ ವೆಚ್ಚದ ಸುವರ್ಣ ಸೌಧದ ನಿರ್ಮಾಣದ ಕಾಮಗಾರಿಯಲ್ಲಿ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆಪಾದನೆ ಬರದಂತೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಜನಸಾಮಾನ್ಯರು ಕೊಟ್ಟ ಅಧಿಕಾರವನ್ನು ಜನ ಕಲ್ಯಾಣಕ್ಕಾಗಿ ವಿನಿಯೋಗಿಸಿ ಕರುನಾಡಿಗೆ ಆದರ್ಶ ಹಾಗೂ ಪ್ರೇರಣೆಯ ರಾಜಕಾರಣಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಜೆ.ಹೆಚ್. ಪಟೇಲ್ ,ಶ್ರೀ ಕುಮಾರಸ್ವಾಮಿ ಹಾಗೂ ಶ್ರೀ ಯಡಿಯೂರಪ್ಪನವರ ಸರಕಾರದಲ್ಲಿ ಸಚಿವರಾಗಿ, ಜನಮೆಚ್ಚುವ ಕಾರ್ಯಗಳನ್ನು ಮಾಡುತ್ತಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರು ಸಿ.ಎಂ.ಉದಾಸಿಯವರು ಎಂದರೆ ತಪ್ಪಾಗಕ್ಕಿಲ್ಲ.ಹೀಗೆ ಕರ್ನಾಟಕದ ರಾಜ್ಯದ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಶ್ರೀ ಸಿ.ಎಂ.ಉದಾಸಿಯವರ ನಿಧನದಿಂದಾಗಿ ಕರ್ನಾಟಕ ರಾಜ್ಯದ ಅಪರೂಪ ರಾಜಕಾರಣದ ಪ್ರಮುಖ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಸಾರ್ವಜನಿಕ ಜೀವನ ಬಡವಾಗಿದೆ. ಬಸವಾದಿ ಪ್ರಮಥರು ಇವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.
ವರದಿ : ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.