ಕೊಪ್ಪಳ ಜಿಲ್ಲೆಯ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ-….
ಕೊಪ್ಪಳ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 66 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಕೊಪ್ಪಳ ಜಿಲ್ಲೆಯ ಇಬ್ಬರು ಸಾಧಕರು ರಾಜ್ಯೋತ್ಸವ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಂಕೀರ್ಣ ಕ್ಷೇತ್ರದಲ್ಲಿ ಹಾಸ್ಯ ದಿಗ್ಗಜ, ಗಂಗಾವತಿ ಪ್ರಾಣೇಶ್ ಹಾಗೂ ಶಿಲ್ಪಕಲೆ ಕ್ಷೇತ್ರದಲ್ಲಿ ವೆಂಕಣ್ಣ ಚಿತ್ರಗಾರ ಇಬ್ಬರು ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ಅನೇಕ ಮಹನೀಯರ ಹೆಸರನ್ನು ಹೆಕ್ಕಿ ತೆಗೆದ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಗಳ ಮುಂದೆ ಇಡಲಾಗಿತ್ತು. ಸಮಗ್ರ ಪರಿಶೀಲನೆಯ ನಂತರ ಆಯ್ಕೆ ಸಮಿತಿ ಯು ಅಂತಿಮಗೊಳಿಸಿದ ಹೆಸರುಗಳನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ. ಈ ಬಾರಿ ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಪ್ರಶಸ್ತಿ ದೊರಕಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಮೂಡಿಸಿದೆ. ಗಂಗಾವತಿ ಬೀಚಿ ಎಂದೇ ಖ್ಯಾತಿ ಪಡೆದ ಅಂತಾರಾಷ್ಟ್ರೀಯ ಹಾಸ್ಯ ದಿಗ್ಗಜ ಬಿ. ಪ್ರಾಣೇಶ್ ಅವರಿಗೆ ರಾಜ್ಯೋತ್ಸವ ದೊರಕಿದೆ. ಇದಲ್ಲದೆ ಗಂಗಾವತಿ ನಗರದವರೇ ಆದ ಶಿಲ್ಪಕಲೆ ಕಲಾಕಾರ ವೆಂಕಣ್ಣ ಚಿತ್ರಗಾರ ಅವರಿಗೂ ರಾಜ್ಯೋತ್ಸವ ದೊರೆತಿದೆ. ಆ ಮೂಲಕ ಕೊಪ್ಪಳ ಜಿಲ್ಲೆಗೆ ಈ ಬಾರಿ ತುಸು ಹೆಚ್ಚು ಸಂತಸವಾಗಿದೆ. ಕನ್ನಡದ ಮೇರು ನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ಪಟ್ಟಿ ಘೋಷಣೆಯಲ್ಲಿ ವಿಳಂಬ ವಾಗಿದ್ದು, ಅಂತ್ಯಕ್ರಿಯೆಯ ಪ್ರಕ್ರಿಯೆ ಮುಗಿದ ನಂತರ ಈ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿ ಈ ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಸಮಾಜಮುಖಿ ಚಿಂತ ನೆಯ ಜೊತೆಗೆ ಸಮಾಜದ ವಿವಿಧ ವರ್ಗಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಸಂಸ್ಥೆಗಳನ್ನು ಈ ಪುಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶೇಷ ಎಂದರೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಜನರಿಗೆ ಆಹ್ವಾನ ನೀಡಿತ್ತು. ಪರಿಣಾಮ ಈ ಬಾರಿ 28 ಸಾವಿರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 66 ಸಾಧಕರನ್ನು ಸರಕಾರ ಆಯ್ಕೆ ಮಾಡಿದೆ. ರಾಜ್ಯೊತ್ಸವದ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ..
ವರದಿ – ಉಪ-ಸಂಪಾದಕೀಯ