ಸಮಾಜದೊಳಗಿನ ಸೈನಿಕರಾದ ಪೊಲೀಸ್ ಮಕ್ಕಳಿಗೂ ಮೀಸಲಾತಿ ಸಿಗಲಿ: ಡಾ ವಿಕ್ರಂ ಸಿದ್ದಾರೆಡ್ಡಿ.
ಬೆಂಗಳೂರು ಅ. 22: ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರ ಸೇವೆ ಅವಿಸ್ಮರಣೀಯ. ಇದರ ಜತೆಗೆ ಸಮಾಜದೊಳಗಿನ ಸೈನಿಕರಾಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಮತ್ತವರ ಕುಟುಂಬದವರಿಗೂ ಸೈನಿಕರ ಸೌಲಭ್ಯಗಳು ಸಿಗುವುದು, ನ್ಯಾಯಸಮ್ಮತ ಎಂದು ಯುನೈಟೆಡ್ ಆಸ್ತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ ಸಿದ್ದಾರೆಡ್ಡಿ ಅಭಿಪ್ರಾಯಪಟ್ಟರು. ಕಲಬುರಗಿಯ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ, ಹುತಾತ್ಮ ಸ್ಮಾರಕಕ್ಕೆ ಪುಷ್ಟ ನಮನ ಸಲ್ಲಿಸಿ ಅವರು ಮಾತನಾಡಿದರು. ಸಮಾಜ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿಯಾಗಬೇಕಾದರೆ ಶಾಂತಿ ಮತ್ತು ಸುರಕ್ಷತೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರ ಯೋಗದಾನ ಅಪಾರವಿದೆ. ಸಮಾಜಕ್ಕಾಗಿ, ಮತ್ತೊಬ್ಬರ ಜೀವಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುವ ಪೊಲೀಸರ ಬಗ್ಗೆ ಸಮಾಜಕ್ಕೂ ಹೆಮ್ಮೆ ಗೌರವಾದರ ಇರಬೇಕು. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಆತ್ಮಸ್ಥೆರ್ಯ ತುಂಬುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜನರ ಜೀವನದ ಜತೆಗೆ ಆಸ್ತಿಪಾಸ್ತಿ ಸಂರಕ್ಷಣೆಗಾಗಿ ಅವಿರತವಾಗಿ ಸೇವೆ ಸಲ್ಲಿಸುವ ಪೊಲೀಸರ ಮಕ್ಕಳಿಗೆ ಸೇವೆ ಮಾದರಿಯಲ್ಲಿ ಉನ್ನತ ವೃತ್ತಿಪರ ಶಿಕ್ಷಣ ಮತ್ತು ನೇಮಕದಲ್ಲಿ ಮೀಸಲಾತಿ ಸೌಲಭ್ಯಗಳು ಸಿಗುವ ಅಗತ್ಯವಿದೆ. ಮೆಡಿಕಲ್, ಇಂಜಿನಿಯರಿಂಗ ಇತರೆ ವೃತ್ತಿಪರ ಕೋರ್ಸ್ ಪ್ರದೇಶದಲ್ಲಿ ಪೊಲೀಸರ ಮಕ್ಕಳಿಗೆ ಕೋಟಾ ಇಡಬೇಕು. ಸರ್ಕಾರದ ವಿವಿಧ ನೇಮಕಾತಿಗಳಲ್ಲೂ ಮೀಸಲಾತಿ ಕಲ್ಪಿಸಬೇಕು. ಇದು ಪೊಲೀಸರಿಗೆ ಇನ್ನಷ್ಟು ನೈತಿಕ ಬಲ ತುಂಬಲಿದೆ ಎಂದು ಹೇಳಿದರು.
ವರದಿ – ಹರೀಶ ಶೇಟ್ಟಿ ಬೆಂಗಳೂರು