ಶಾಸಕರೇ ನಾಟಕ ಬಿಡಿ, ಅಭಿವೃದ್ಧಿ ಮಾಡಿ: ಸಜ್ಜೀಹೊಲ.
ಗಂಗಾವತಿ, ನ.10: ನಾಲ್ಕುವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದೂ ಕೂಡಾ ಕ್ಷೇತ್ರದ ಮತದಾರರ ಮೂಲಭೂತ ಸಮಸ್ಯೆಗಳಿಗೆ ಕಿವಿ ಕೊಡದ ಶಾಸಕ ಪರಣ್ಣ ಮುನವಳ್ಳಿಯವರು ಈಗ ಏಕಾಏಕಿ ಹೈಡ್ರಾಮಾ ಮೂಲಕ ಕ್ಷೇತ್ರ ಅಭಿವೃದ್ದಿ ವೀಕ್ಷಣೆಯ ನಾಟಕದ ಹಿಂದೆ ಮುಂಬರುವ ಸಾರ್ವತ್ರಿಕ ಚುನಾವಣೆಯ ಗಿಮಿಕ್ ಇದೆ ಎಂದು ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜೀಹೊಲ ವ್ಯಂಗವಾಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಜ್ಜೀಹೊಲ, ಗಂಗಾವತಿ ವಿಧಾನಸಭಾಕ್ಷೇತ್ರದ ಮತದಾರರು ಶಾಸಕರ ಈ ನಾಟಕವನ್ನು ಅರಿಯದಷ್ಟು ಮೂರ್ಖರೇನಲ್ಲ. ಎರಡು ಅವಧಿಗೆ ಶಾಸಕರಾಗಿ ಅಧಿಕಾರದಲ್ಲಿದ್ದುಕೊಂಡು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತ ಬಂದಿರುವ ಶಾಸಕರು ಈಗ ವಿಧಾನಸಭಾ ಚುನಾವಣೆಗೆ ಕೇವಲ 150 ದಿನ ಬಾಕಿ ಇರುವಾಗ ಬೈಕ್ ನಲ್ಲಿ ಸಂಚಾರ, ನಗರ ಪ್ರದಕ್ಷಿಣೆ, ಬೀದಿ ಬದಿಯಲ್ಲಿ ಚಹಾ ಸೇವನೆಯಂತಹ ನಾಟಕ ಆರಂಭಿಸಿರುವುದರ ಹಿಂದೆ ಕೇವಲ ಚುನಾವಣೆಯ ಉದ್ದೇಶ ಇದೆಯೇ ಹೊರತು ಜನರ ಬಗ್ಗೆ ಕಾಳಜಿಯಾಗಲೀ, ಸಮಸ್ಯೆ ಬಗೆಹರಿಸುವಲ್ಲಿ ನಿಜವಾದ ಆಸಕ್ತಿಯಾಗಲೀ ಇಲ್ಲ. ಗುಂಡಿಬಿದ್ದ ರಸ್ತೆಗಳು, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಮಹಿಳಾ ಶೌಚಾಲಯದ ಕೊರತೆ, ನಿರ್ಗತಿಕರಿಗೆ ಹಕ್ಕು ಪತ್ರಗಳ ವಿತರಣೆ, ಕಸ ವಿಲೇವಾರಿಯಂತಹ ನೂರಾರು ಗಂಭೀರವಾದ ಸಮಸ್ಯೆಗಳ ಸುಳಿಯಲ್ಲಿ ನಾಗರಿಕರು ಬಿದ್ದು ತೊಳಲಾಡುತ್ತಿರುವಾಗ ಬಂದು ನೋಡದ ಶಾಸಕ, ಈಗ ಚುನಾವಣೆ ಹೊಸ್ತಿಲಲ್ಲಿ ಈ ರೀತಿ ನಾಟಕ ಆಡುತ್ತಿರುವದನ್ನು ನೋಡಿ ಜನ ಅಪಹಾಸ್ಯ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನ ತಕ್ಕ ಪಾಠವನ್ನು ಕಲಿಸುವ ಮೂಲಕ ಶಾಸಕರ ಬಣ್ಣ ಬಯಲು ಮಾಡಲು ಕಾರತದಿಂದ ಕಾದಿದ್ದಾರೆ ಎಂದು ಸಜ್ಜೀಹೊಲ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.