ಗೋವಾ ಕನ್ನಡಿಗರಿಗೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ನೀಡಲು ಸಿದ್ದ – ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್..
ಗೋವಾದಲ್ಲಿ 15 ವರ್ಷಗಳಿಂದ ವಾಸ್ತವ್ಯದ ದಾಖಲಾತಿ ಹೊಂದಿರುವ ಎಲ್ಲಾ ಕನ್ನಡಿಗರಿಗೆ ಗೋವಾ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಲಭಿಸುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ಅವರು ಗೋವಾದ ಬಿಚೋಲಿಯಂ ನ ಹೀರಾಬಾಯಿ ಸಭಾಂಗಣದಲ್ಲಿ ಅಖಿಲ ಗೋವಾ ಕನ್ನಡ ಮಹಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಕರ್ಮಭೂಮಿ ಕನ್ನಡ ಸಂಘ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಗೋವಾದ ಕನ್ನಡಿಗರ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕನ್ನಡಿಗರ ಬೇಡಿಕೆಯಾಗಿದೆ. ಇದು ನಮಗೆ ತಿಳಿದಿದೆ. ಆದರೆ ಇಲ್ಲಿ ಸರಕಾರದ ವತಿಯಿಂದ ಜಾಗ ನೀಡಲು ಸರ್ಕಾರದ ಬಳಿ ಅಷ್ಟೊಂದು ಪ್ರಮಾಣದಲ್ಲಿ ಜಾಗವಿಲ್ಲ. ಇದರಿಂದಾಗಿ ನೀವು ಖುದ್ದಾಗಿ ಇಲ್ಲಿ ಜಾಗ ಖರೀದಿಸಿದರೆ ಅಲ್ಲಿ ಕನ್ನಡ ಭವನ ನಿರ್ಮಾಣ ಮಾಡಬಹುದು. ಅದು ನಿಮ್ಮ ಭವನವಾಗಿ ಉಳಿಯಲಿದೆ. ಗೋವಾ ಸರ್ಕಾರದಿಂದ ಯಾವುದೇ ರೀತಿಯ ಅಡಚಣೆ ತಕರಾರು ಇರುವುದಿಲ್ಲವೆಂದರು
ಸರಕಾರದ ಸೌಲಭ್ಯ ಪಡೆಯದವರು ಕೂಡಲೇ ಇಲ್ಲಿ ಕಳೆದ 15 ವರ್ಷಗಳಿಂದ ವಾಸಿಸುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಸಾವಂತ್ ಕರೆ ನೀಡಿದರು. ಸಮ್ಮೇಳನದ ಸಾನಿಧ್ಯ ವಹಿಸಿದ್ದ ಬೆಳಗಾವಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರದಿಂದ ಎರಡು ಎಕರೆ ಜಾಗ ಕೊಡುವುದಾಗಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಕಳೆದ ಬಾರಿ ಇದೇ ವೇದಿಕೆಯಲ್ಲಿ ಭರವಸೆ ನೀಡಿದ್ದರು ಆದರೆ ಅದು ಈಡೇರಿಲ್ಲ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರ 10 ಕೋಟಿ ರೂಪಾಯಿ ನೀಡಲು ಸಿದ್ಧವಿದೆ. ಇದರಿಂದಾಗಿ ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿ ಕೊಡಬೇಕು ಎಂದು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದರು. ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹಾಗೂ ಅಖಿಲಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.
ಗೋವಾದಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಸಂಚಾಲಕ ಶ್ರೀ ಮಹೇಶ್ ಬಾಬು ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ನರೇಶ್ ಸಾವಳ, ಮಾಜಿ ಸಭಾಪತಿ ರಾಜೇಶ್ ಪಾರ್ಟ್ನೇಕರ್, ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕನ್ನಡಿಗರಾದ ರಜನಿ ಪೈ ಬೆಂಗಳೂರು-ಪತ್ರಿಕೋದ್ಯಮ ಸಂಗೀತ ಎಸ್ ಬೀದರ್-ಪೊಲೀಸ್ ಸೇವೆ ಪೃಥ್ವಿರಾಜ್ ಕುಲಕರ್ಣಿ ಬೆಂಗಳೂರು-ಕೊಳಲು ವಾದನ ಬಾಲಪ್ಪ ಕುಪ್ಪಿ ಯಾದಗಿರಿ-ಪತ್ರಿಕೋದ್ಯಮ ನರಸಪ್ಪ ಚೆನ್ನ ದಾಸರ್ ಹಾಸಗಲ್ ಕೊಪ್ಪಳ-ರಂಗಭೂಮಿ ಇತರ ಪ್ರತಿಭಾವಂತ ಸಾಧಕರಿಗೆ ಗೋವಾದ ತೋಟಗಾರಿಕೆ ಸಚಿವ ಹಲ್ಮನ್ಕರ್ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದರು ಕನ್ನಡ ಕಂಪ್ಯೂಟರ್ ಲೋಕಕ್ಕೆ 40,000 ಶಬ್ದಗಳ ಜೋಡಣೆ ಮಾಡಿದ ಬಿಜಾಪುರದ ಡಾ. ಭುವನೇಶ್ವರಿ ಮೇಲಿನಮಠ ಅವರಿಗೆ ಕಂಪ್ಯೂಟರ್ ಕನ್ನಡತಿ ಎಂಬ ಪ್ರಶಸ್ತಿ ನೀಡಿ ಒಂದು ಲಕ್ಷ ರೂಪಾಯಿ ಗಳೊಂದಿಗೆ ಸನ್ಮಾನಿಸಲಾಯಿತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ಕಲಾತಂಡಗಳಾದ ವಿದ್ಯಾ ಮಂಗಳೂರು ಕೊಪ್ಪಳ. ಬೆಂಗಳೂರು ರುಕ್ಮಿಣಿ ಸುರುವೆ ಬೆಂಗಳೂರು. ಸಂಜೀವ್ ಕುಮಾರ್ ನಿರಂಜನ್ ಸ್ವಾಮಿ ಬೀದರ್. ಸಂಕಲ್ಪ ಮಾಲಿ ಪಾಟೀಲ್ ಕಲ್ಬುರ್ಗಿ ಮಾಧುರಿ ಬಂದ್ರೆ ಬೆಳಗಾವಿ ಯಮುನಾ ಜಲ್ಕರ್ ಧಾರವಾಡ ಬಸವರಾಜ್ ಸಿಂಧನೂರ್ ಯಾದಗಿರಿ ರೂಪಕಲಾ ನೃತ್ಯ ಶಾಲೆ ಬೆಂಗಳೂರು. ಕಾವೇರಿ ಎಕ್ಸ್ಪ್ರೆಸ್ ನೃತ್ಯ ತಂಡ ಹುಣಸೂರು ಮತ್ತು ಇತರ ತಂಡಗಳಿಂದ ಜಾನಪದ ನೃತ್ಯ ಸಮೂಹ ನೃತ್ಯ ಭರತನಾಟ್ಯ, ನೃತ್ಯರೂಪಕ ಪಾಶ್ಚಿಮಾತ್ಯ ನೃತ್ಯಗಳ ಮೂಲಕ ನೆರೆದಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಕನ್ನಡ ಪ್ರೇಕ್ಷಕರನ್ನ ರಂಜಿಸಿದರು ಕಾರ್ಯಕ್ರಮಕ್ಕೂ ಮುನ್ನ 300ಕ್ಕೂ ಹೆಚ್ಚು ಗೋವಾದ ಮಹಿಳೆಯರಿಂದ ಪೂರ್ಣಕುಂಭದೊಂದಿಗೆ ವೈವಿಧ್ಯಮಯ ಜಾನಪದ ಕಲಾತಂಡಗಳ ಮೆರವಣಿಗೆಯ ಮೂಲಕ ಹುಕ್ಕೇರಿ ಶ್ರೀಗಳನ್ನು ಹಾಗೂ ಸಮ್ಮೇಳನ ಅಧ್ಯಕ್ಷರನ್ನು ಶಾಂತದುರ್ಗ ದೇವಸ್ಥಾನದಿಂದ ಸಭಾಂಗಣದವರೆಗೂ ಅದ್ದೂರಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸತೀಶ್ ಕುಮಾರ್ ಹೊಸಮನಿಯವರು ಸನ್ಮಾನ ಸ್ವೀಕರಿಸಿ ಸಮ್ಮೇಳನ ಅಧ್ಯಕ್ಷರ ನುಡಿಗಳನ್ನು ಮಾತನಾಡಿದರು. ಗೋವಾ ಪ್ರಾಚೀನವಾದದ್ದು, ಹಲವು ಪುರಾಣ ಶಾಸನಗಳಲ್ಲೂ ಉಲ್ಲೇಖ ಸಿಗುತ್ತದೆ. ಪರಶುರಾಮ ಮಿತಿಲೆಯಿಂದ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಇಲ್ಲಿ ನೆಲೆಗೊಳಿಸಿದನೆಂದು ಪ್ರತೀತಿ ಇದೆ. ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು ಎಂದು ಗೋವಾದ ಇತಿಹಾಸವೇ ಹೇಳುತ್ತದೆ. ಮೌರ್ಯರಾಳಿದ ಉಲ್ಲೇಖ ಐಹೊಳೆ ಶಾಸನದಿಂದ ತಿಳಿದುಬಂದಿದೆ. ಶಾತವಾಹನರು ಬನವಾಸಿ ಕದಂಬರು, ಬಾದಾಮಿ ಚಾಲುಕ್ಯರು ಇಮ್ಮಡಿ ಪುಲಿಕೇಶಿ ರಾಷ್ಟ್ರಕೂಟರು ಆಳ್ವಿಕೆ ನಡೆಸಿದ್ದರು ಎಂದು ಇತಿಹಾಸ ನಮಗೆ ತಿಳಿಸುತ್ತದೆ. ನಂತರ ಗೋವಾ ಪ್ರದೇಶವು ವಾಣಿಜ್ಯ ಕೇಂದ್ರ ಆಗಿರುವುದರಿಂದ ಹಾಗೂ ಬಂದರುಗಳು ಇರುವುದರಿಂದ ಅರೇಬಿಯಾ, ಪರ್ಷಿಯಾ ಮತ್ತು ಈ ಭಾಗದ ನಡುವೆ ವ್ಯಾಪಾರ ಸಂಪರ್ಕ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ವಿದೇಶಿ ಹಡಗುಗಳು, ಗೋವಾ ಬಂದರುಗಳಿಗೆ ಬರುತ್ತಿದ್ದವು. ಗೋವಾ ವ್ಯಾಪಾರ ಕೇಂದ್ರವಾಗಿರುವುದರಿಂದ ನೆಲೆಸಿ ಬಿಟ್ಟಿದ್ದರು. 11ನೇ ಶತಮಾನದಲ್ಲಿ ಆಳುತ್ತಿದ್ದ ಎರಡನೆಯ ಗುಹಿಲ್ ದೇವನ ಕಾಲದಲ್ಲಿ ಗೋವಾದ ವಿಶಾಲವಾದ ಬೀದಿಗಳು, ದೊಡ್ಡ ದೊಡ್ಡ ಮಳಿಗೆಗಳು ಹಾಗೂ ಉದ್ಯಾನವನಗಳು ಇದ್ದವು ಎಂದು ಶಾಸನಗಳೆ ತಿಳಿಸುತ್ತವೆ. ನಂತರ ಮುಂದೆ ಮಲ್ಲಿಕ್ ಕಾಪರ್ ದಂಡಯಾತ್ರೆಯಿಂದಾಗಿ ದೇವಗಿರಿ ವಶಪಡಿಸಿಕೊಳ್ಳುತ್ತಾನೆ. ಮಹಮ್ಮದ್ ಬಿನ್ ತುಘಲಕ್ ನಿಂದಾಗಿ 350 ವರ್ಷಗಳ ಕಾಲ ಆಡಳಿತ ಮಾಡಿದ ಗೋವಾ ಕದಂಬರ ಕಾಲದಲ್ಲಿ ಕೊನೆಗೊಳ್ಳುತ್ತದೆ. ಆದರೆ ಗೋವಾ ರಾಜ್ಯ ಬಹುಕಾಲ ಮಹಮದ್ದೀಯರ ಆಳ್ವಿಕೆಯಲ್ಲಿ ಉಳಿಯಲಿಲ್ಲ. ನಂತರ ವಿಜಯನಗರ ಸಾಮ್ರಾಜ್ಯದ ಹರಿಹರ ಬುಕ್ಕರು, ಗೋವಾ ಪ್ರಾಂತ್ಯವನ್ನು ಮಹಮದಿಯರಿಂದ ವಿಮೋಚನೆಗೊಳಿಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡು 1470ರ ವರೆಗೆ ಅವರೇ ಆಳಿದರು. ಅನಂತರ ಬಿಜಾಪುರದ ಮಂತ್ರಿ ಮಹಮ್ಮದ್ ಗವಾನ್ ನನು ಗೋವಾವನ್ನು ಗೆದ್ದು ತನ್ನ ಬಿಜಾಪುರಕ್ಕೆ ಸೇರಿಸಿಕೊಂಡನು. ಹಾಗೆಯೇ ಆದಿಲ್ ಶಾಹಿ ಆಡಳಿತ ಮುಂದುವರೆದಾಗಲೇ ಸಂಪತ್ಭರಿತ, ಅತ್ಯದ್ಭುತ ನಗರ ಗೋವಾದ ಮೇಲೆ ಕಣ್ಣು ಬಿತ್ತು. ನಂತರ ಪೋರ್ಚುಗೀಸರು ವಶಪಡಿಸಿಕೊಂಡರು. 1510ರಲ್ಲಿ ಗೋವಾವನ್ನು ಅಲ್ಬಕರ್ಕನು ಪೋರ್ಚುಗೀಸರ ವಸಾಹತಾಗಿ ಮಾರ್ಪಟ್ಟಿತು ಎಂದು ಹೇಳಿ ಗೋವಾ ರಾಜ್ಯದ ಪ್ರವಾಸೋದ್ಯಮ, ಆಹಾರ, ಸಾಂಸ್ಕೃತಿಕ, ಸಂಪ್ರದಾಯಗಳ ಬಗ್ಗೆ ವಿವರಿಸಿದರು. ಅಖಿಲ ಗೋವಾ ಕನ್ನಡ ಮಹಾಸಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಕರ್ಮಭೂಮಿ ಕನ್ನಡ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಸಂತೋಷವಾಗಿದೆ.ಈ ಎರಡು ಸಂಘಟನೆಗಳು ಕನ್ನಡ ಭಾಷೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಅಖಿಲ ಗೋವಾ ಕನ್ನಡ ಮಹಾಸಂಗ ಆ ಆಯೋಜಿಸಿದ್ದ ಈ ಸಾಂಸ್ಕೃತಿಕ ಸಮ್ಮೇಳನದಲ್ಲಿ ಗೋವಾ ರಾಜ್ಯದ 30ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.
ವರದಿ – ಸಂಪಾದಕೀಯಾ