ಮೋಹನ್ ಕುಮಾರ್ ರ ಕಾರ್ಯ ಜನರಿಗೆ ಇನ್ನಷ್ಟು ಪ್ರೇರಣೆಯನ್ನು ನೀಡಲಿ– ಸಿಎಂ ಬೊಮ್ಮಾಯಿ.
ಬೆಂಗಳೂರು: ಡಿ-02, 75 ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಸಂಭ್ರಮಾಚರಣೆಯ ದಿನದ ಅಂಗವಾಗಿ ಬೆಂಗಳೂರು ಮಹಾನಗರದಲ್ಲಿ ” ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ’ ಎಂದು ಜಾಗೃತಿಗಾಗಿ 21 ಕಿಲೋ ಮೀಟರ್ ಮ್ಯಾರಥಾನ್ ಓಟ ಮಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಪತ್ರ ಬರೆದು ಅಭಿನಂದಿಸಿದ್ದಾರೆ! ಮುಖ್ಯ ಮಂತ್ರಿಗಳು ಬರೆದ ಪತ್ರದಲ್ಲಿ- ಬೆಂಗಳೂರಿನ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ದಾನಪ್ಪ ಅವರು ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ಒದಗಿಸುವ ಬಗ್ಗೆ ‘ಆಂಬುಲೆನ್ಸ್ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ’ ಎಂಬ ಜನಜಾಗೃತಿ ಓಟ ಕೈಗೊಂಡಿರುವುದು ಅತ್ಯಂತ ಸಂತೋಷದ ವಿಚಾರ. ರಸ್ತೆ ಅಪಘಾತದ ವೇಳೆ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸಾವು ಸಂಭವಿಸುವ ಪ್ರಸಂಗಗಳು ಹೆಚ್ಚಾಗಿದೆ, ರಸ್ತೆ ಅಪಘಾತಕ್ಕೊಳಗಾದವರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ತಲುಪಿಸುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾದುದು ನಾಗರೀಕರ ಕರ್ತವ್ಯ. ಅಪಘಾತದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರ ಜೀವವನ್ನು ಉಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮೋಹನ್ ಕುಮಾರ್ ದಾನಪ್ಪರವರ ಸಾರ್ಥಕ ಕಾರ್ಯ ಅಭಿನಂದನೀಯ. ಶ್ರೀಯುತರ ಮಾನವೀಯ ಕೆಲಸಕ್ಕೆ ಹೆಚ್ಚಿನ ಜನಸ್ಪಂದನೆ ದೊರೆತಿದೆ, ಸಂಕಷ್ಟಕ್ಕೊಳಗಾದವರ ಬಾಳಿಗೆ ನೆರವಿನ ಹಸ್ತ ನೀಡುವ ಕಾರ್ಯಕ್ರಮಗಳು ಜನರಿಗೆ ಇನ್ನಷ್ಟು ಪ್ರೇರಣೆಯನ್ನು ನೀಡಲಿ ಎಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಪತ್ರದ ಮೂಲಕ ಅಭಿನಂದಿಸಿ ಹಾರೈಸಿದ್ದಾರೆ!
ವರದಿ – ಸೋಮನಾಥ ಹೆಚ್.ಸಂಗನಾಳ