ವಿಕಲಚೇತನರ ಸಮಸ್ಯೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದನೆ: ಸಚಿವ ಹಾಲಪ್ಪ ಆಚಾರ್‌.

Spread the love

ವಿಕಲಚೇತನರ ಸಮಸ್ಯೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದನೆ: ಸಚಿವ ಹಾಲಪ್ಪ ಆಚಾರ್‌.

ಬೆಳಗಾವಿಯಲ್ಲಿ ಧರಣಿ ನಿರತ ವಿಕಲಚೇತನರ ಗೌರವಧನ ಕಾರ್ಯಕರ್ತರ ಭೇಟಿ. ಬೆಳಗಾವಿ ಸುವರ್ಣ ಸೌಧ ಡಿ 20: ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ವಿಕಲಚೇತನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲೂ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಚಿವರಾದ ಹಾಲಪ್ಪ ಆಚಾರ್‌ ಹೇಳಿದರು. ಇಂದು ಬೆಳಗಾವಿ ಸುವರ್ಣಸೌಧದ ಬಳಿ ಸಾಂಕೇತಿಕ ಧರಣಿಯಲ್ಲಿ ತೊಡಗಿದ್ದ ನವಕರ್ನಾಟಕ MRW/VRW/URW ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಕಾರ್ಯಕರ್ತರನ್ನು ಭೇಟಿಯಾಗಿ ಮನವಿ ಸ್ವೀಕರಿಸಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ವಿಕಲಚೇತನರ ಸಚಿವರಾಗಿ ಹಲವಾರು ಬಾರಿ ಸಂಘಟನೆಯ ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ವಿಕಲಚೇತನರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ. ಕಳೆದ ಬಾರಿ ನಿಮ್ಮ ಮನವಿಯನ್ನು ಸ್ವೀಕರಿಸಿದ ನಂತರ ಈಗಾಗಲೇ ಶೇಕಡಾ 30 ರಷ್ಟು ಗೌರವಧನವನ್ನು ಹೆಚ್ಚಿಸಿದ್ದೇವೆ. ಇದೇ ರೀತಿ ಇತ್ತೀಚಿಗೆ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಸಂಧರ್ಭದಲ್ಲಿ ಮುಖ್ಯಮಂತ್ರಿಗಳು ತಾವಾಗಿಯೇ ವಿಕಲಚೇತನರಿಗಾಗಿ ವಿಶೇಷ ವಿಮಾ ಯೋಜನೆ, ವಸತಿ ಯೋಜನೆಗಳಲ್ಲಿ ಶೇಕಡಾ 3 ರಷ್ಟು ಮೀಸಲಾತಿ ಹಾಗೆಯೇ, ಹಲವಾರು ಯೋಜನೆಗಳನ್ನು ಘೋಷಿಸುವ ಮೂಲಕ ನಮ್ಮ ಸರಕಾರ ವಿಕಲಚೇತನರ ಅಭಿವೃದ್ದಿಗಾಗಿ ವಿಶೇಷ ಕಾಳಜಿಯನ್ನು ಹೊಂದಿದೆ ಎನ್ನುವುದನ್ನ ತೋರಿಸಿದ್ದಾರೆ. ಇಂದು ನಿಮ್ಮ ಬೇಡಿಕೆಗಳನ್ನು ಆಲಿಸಿದ್ದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಸಚಿವರು ಭರವಸೆ ನೀಡಿದರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *