ತಾವರಗೇರಾ ಸಮೀಪದ ಸರಕಾರಿ ಪ್ರೌಢ ಶಾಲೆ ಜುಮಲಾಪುರದಲ್ಲಿ ಇಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳ ಚಿತ್ರಗಳ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶಾಲಾ ಮೈದಾನದಲ್ಲಿ ಹಂಚಿಕೆ ಮಾಡಿಕೊಡಲಾಗಿದ್ದ ನಿಗದಿತ ಸ್ಥಳವನ್ನು ನಿನ್ನೆಯೇ ಸಗಣಿಯಿಂದ ಸಾರಿಸಿ ಶೃಂಗಾರ ಗೊಳಿಸಿ ಸಿದ್ಧಪಡಿಸಿಕೊಂಡು ಇಂದು ಬೆಳಗ್ಗೆ ಮೂರು ವಿದ್ಯಾರ್ಥಿಗಳ ತಂಡದಲ್ಲಿ ತಮಗೆ ಆಯ್ಕೆಯಲ್ಲಿ ಬಂದಿದ್ದ ಚಿತ್ರದ ರಂಗೋಲಿಯನ್ನು ಮಕ್ಕಳು ಹಾಕಿ ಸಂಭ್ರಮಿಸಿದರು. ಮುಖ್ಯ ಅತಿಥಿಗಳಾಗಿ ಎಸ್ಡಿಎಂಸಿ ಅಧ್ಯಕ್ಷರಾದ ಕನಕಪ್ಪ ನಾಯಕ ಹಾಗೂ ಹಿರಿಯ ಸದಸ್ಯ ಅಮರೇಶ ಕುಷ್ಟಗಿ ಆಗಮಿಸಿದ್ದರು. ಪ್ರತಿಯೊಂದು ತಂಡದ ರಂಗೋಲಿ ಚಿತ್ರದ ವಿವರಣೆಯನ್ನು ವಿದ್ಯಾರ್ಥಿಗಳಿಂದ ಪಡೆದುಕೊಂಡು ಪ್ರೋತ್ಸಾಹಿಸಲಾಯಿತು. ಮುಖ್ಯ ಗುರುಗಳಾದ ಸೋಮನಗೌಡ ಪಾಟೀಲ ಇವರ ನೇತೃತ್ವದಲ್ಲಿ ಹಾಗೂ ವಿಜ್ಞಾನ ಶಿಕ್ಷಕರಾದ ಶಶಿಧರ ಗೊರಬಾಳ ಗಣಿತ ಶಿಕ್ಷಕರಾದ ಅಮರಪ್ಪ ನಾಗಲಿಕರ್ ಮತ್ತು ಸಮಾಜ ವಿಜ್ಞಾನ ಶಿಕ್ಷಕಿ ಅಕ್ಕಮ್ಮ ಅರಳಿಕಟ್ಟಿ ಇವರ ಮಾರ್ಗದರ್ಶನದಲ್ಲಿ ಮೂರು ವಿಷಯಗಳ ರಂಗೋಲಿ ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು. ಮೂರು ವಿಷಯಗಳ ರಂಗೋಲಿಗಳಲ್ಲಿ ಪ್ರಥಮ, ದ್ವಿತೀಯ ,ತೃತೀಯ ಹಾಗೂ ಸಮಾಧಾನಕರ ಬಹುಮಾನ ವಿತರಿಸುವ ಸಲುವಾಗಿ ತಂಡಗಳನ್ನು ಆಯ್ಕೆ ಮಾಡಲಾಯಿತು. ವಿಜ್ಞಾನ ವಿಷಯದ ರಂಗೋಲಿ ಚಿತ್ರ ‘ಮಾನವನ ಮೆದುಳು ‘ಎಲ್ಲರ ಆಕರ್ಷಣೀಯ ಕೇಂದ್ರವಾಗಿತ್ತು. ಮೆದುಳಿನ ಚಿತ್ರ ಹಾಗೂ ವಿವಿಧ ಭಾಗಗಳನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ನಿಖರವಾಗಿ ಗುರುತಿಸಿರುವುದು ವಿಶೇಷವಾಗಿತ್ತು. ನಿರ್ಣಾಯಕರಾಗಿ ಆಯಾ ವಿಷಯ ಶಿಕ್ಷಕರನ್ನು ಒಳಗೊಂಡಂತೆ ಶಿಕ್ಷಕರಾದ ಬಸವರಾಜ ಬಾಗಲಿ , ಹನುಮಂತಪ್ಪ ಹಾಗೂ ಹಂಪಯ್ಯ ಭಾಗವಹಿಸಿ ತೀರ್ಪು ನೀಡಿದರು. ಕಲಿಕಾ ಚೇತರಿಕೆ ವೀಕ್ಷಕರಾಗಿ ಆಗಮಿಸಿದ್ದ ಶಿಕ್ಷಕರಾದ ಶಿವಕುಮಾರ ರಾಮದುರ್ಗ, ಗುರುರಾಜ್ ಶಾವಿ ಹಾಗೂ ಪ್ರಹ್ಲಾದ್ ಜಾದವ್ ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿದರು. ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇವರಿಂದ: ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢ ಶಾಲೆ, ಜಮಲಾಪುರ.
ವರದಿ~ ಸಂಪಾದಕೀಯಾ