ಸರ್ಕಾರಿ ಶಾಲೆಯಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಆಗಿದೆ: ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ.
ನೆಲಮಂಗಲ ನಗರದ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲಿನ ಜೊತೆಗೆ ಬೂಸ್ಟ್ ಕೊಡುವ ಕಾರ್ಯಕ್ರಮಕ್ಕೆ ಪತ್ರಿಕಾ ವಿತರಕ ಹುಲುಕುಂಟೆ ಮಹೇಶ್ ಅವರ ಜನ್ಮದಿನದಂದು ಚಾಲನೆ ನೀಡಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ನೆಲಮಂಗಲ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ರವರು ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಪ್ರತಿಭೆಗಳನ್ನು ಮುನ್ನೆಲೆಗೆ ತೆರುವಲ್ಲಿ ಕೆಲಸ ಮಾಡುತ್ತಿದೆ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲ ಪ್ರತಿಭೆ ಬೈರವಿಗೆ ಕೆಲವು ಕಾರ್ಯಕ್ರಮದಲ್ಲಿ ಬಂದ ಪ್ರೋತ್ಸಾಹ ಧನ, “Y” ಮತ್ತು ಶವಸಂಸ್ಕಾರ ಸಿನಿಮಾದ ಸಂಭಾವನೆ ಹಾಗೂ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗಲಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರವಾಹಿಯಿಂದ ಬಂದ ಮುಂಗಡ ಹಣವನ್ನು ಕ್ರೋಡೀಕರಿಸಿ ತನ್ನ ತಂದೆ ಹುಲುಕುಂಟೆ ಮಹೇಶರವರ ಹುಟ್ಟುಹಬ್ಬದ ಪ್ರಯುಕ್ತ ದಿನಕ್ಕೊಂದು ಕೆ.ಜಿ.ಯಂತೆ ಮೂರು ತಿಂಗಳಿಗೆ ಆ ಶಾಲೆಯ ಮಕ್ಕಳಿಗಾಗುವಷ್ಟು ಬೂಸ್ಟ್ ಅನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು. ಇದೇ ರೀತಿ ಸಹಾಯ ಮಾಡುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು. ಇದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯನವರು ಮಾತನಾಡಿ ಸರ್ಕಾರದ ಕ್ಷೀರಭಾಗ್ಯ ಯೋಜನೆಯಿಂದ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಶೇ.20 ರಷ್ಟು ಅಪೌಷ್ಟಿಕತೆ ಕಡಿಮೆ ಆಗಿದೆ. ಈ ಶಾಲೆಗೆ, ತಾಲ್ಲೂಕಿಗೆ, ಇಡೀ ರಾಜ್ಯದಲ್ಲೇ ಮಾದರಿ ಆಗುವಂತಹ ಕಾರ್ಯವನ್ನು ಭೈರವಿ ಮತ್ತು ಕುಟುಂಬದವರು ಮಾಡಿದ್ದಾರೆ. ಬಹುಶಃ ಕರುನಾಡಿನ 400 ಕ್ಕೂ ಹೆಚ್ಚು ಮಕ್ಕಳಿರುವ ಒಂದು ಸರ್ಕಾರಿ ಶಾಲೆಯಲ್ಲಿ ಈ ಒಂದು ಕಾರ್ಯಕ್ರಮ ಆರಂಭವಾಗ್ತಿರೋದು ಇದೇ ಮೊದಲು ಅನಿಸುತ್ತಿದೆ. ಇಂತಹ ಒಂದು ಕಾರ್ಯಕ್ರಮ ಆರಂಭಿಸುತ್ತಿರುವ ಸರ್ಕಾರಿ ಶಾಲೆಯ ಪ್ರತಿಭೆ ಭೈರವಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಪತ್ರಿಕಾ ವಿತರಕ ಹುಲುಕುಂಟೆ ಮಹೇಶ್ ಮಾತನಾಡಿ ದಾನಿಗಳ ನೆರವಿನಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲೂ, ಪ್ರತಿದಿನ ಮಕ್ಕಳಿಗೆ ಕ್ಷೀರಭಾಗ್ಯ ಹಾಲಿನ ಜೊತೆ ಬೂಸ್ಟ್ ವಿತರಿಸುವಂತಾದರೆ ನಮ್ಮ ಈ ಪ್ರಯತ್ನಕ್ಕೆ ಫಲ ದೊರೆತಂತೆ ಎಂದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ರಾಜಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಟಿ.ವಾಸುದೇವಮೂರ್ತಿ, ನೆಲಮಂಗಲ ನಗರ ಸಭೆ ಸದಸ್ಯರಾದ ಕೃಪಾನಂದ್, ಬಸವನಹಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ನರಸಿಂಹ ಮೂರ್ತಿ,ಮುಖ್ಯಶಿಕ್ಷಕ ಭೈಲನರಸಪ್ಪ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಅದ್ಯಕ್ಷ ಮಲ್ಲೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಶಾಲಾ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
ವರದಿ – ಮೌನೇಶ್ ರಾಥೋಡ್ ಬೆಂಗಳೂರು