ಬೆಂಚಮರಡಿ : ಗ್ರಾಮದ ಬಿಜೆಪಿ ಗೂಂಡಾಗಳನ್ನು ಬಂಧಿಸುವಂತೆ ಒತ್ತಾಯಿಸಿ ಕವಿತಾಳ ಪೊಲೀಸ್ ಠಾಣೆ ಮುಂದೆ ಧರಣಿ
ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣ ಸಮೀಪದ ಪಾಮನಕಲ್ಲೂರು ಹೋಬಳಿಯ ಬೆಂಚಮರಡಿ ಗ್ರಾಮದ ಬಿಜೆಪಿ ಗೂಂಡಾಗಳನ್ನು ಬಂಧಿಸುವಂತೆ ಒತ್ತಾಯಿಸಿ ರೈತರು ಕವಿತಾಳ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದರು. ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಬಸನಗೌಡನ ಗೆಲುವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು ಎಂಬ ಕಾರಣಕ್ಕೆ ಬೆಂಚಮರಡಿ ಗ್ರಾಮದ 8 ಜನರ ದಲಿತ ಹಾಗೂ ಹಿಂದುಳಿದ ರೈತರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ.ಈ ಪೈಕಿ 4 ಜನರನ್ನು ಕಳೆದ 13ದಿನಗಳಿಂದ ರಾಯಚೂರು ಜೈಲಿನಲ್ಲಿಡಲಾಗಿದೆ. ಇದಕ್ಕೆ ಪ್ರತಿಯಾಗಿ ದಲಿತರ ದೂರಿನನ್ವಯ ದಾಖಲಾದ ಪ್ರಕರಣದಲ್ಲಿ 14ಜನ ಬಿಜೆಪಿಗರಿದ್ದು ಇದುವರೆಗೂ ಯಾರನ್ನೂ ಬಂಧಿಸಿರುವುದಿಲ್ಲ. ಸರಕಾರದ ಈ ತಾರತಮ್ಯ ಹಾಗೂ ದ್ವೇಷದ ರಾಜಕಾರಣವನ್ನು ವಿರೋಧಿಸಿ, ಕೊಲೆಯತ್ನ ಪ್ರಕರಣದಲ್ಲಿ ಭಾಗಿಗಳಾಗಿರುವ ಬಿಜೆಪಿಗರನ್ನು ಬಂಧಿಸುವಂತೆ ಒತ್ತಾಯಿಸಿ ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಕವಿತಾಳ ಪೋಲಿಸ್ ಠಾಣೆಯ ಮುಂದೆ ಗ್ರಾಮದ ರೈತರ ಸಮೇತ ದ್ವೇಷದ ರಾಜಕಾರಣಕ್ಕೆ ಗುರಿಯಾದ ಸಂತ್ರಸ್ತ ಮಹಿಳೆಯರು ಧರಣಿ ನಡೆಸಿದರು. 3-4 ದಿನಗಳೊಳಗೆ ಬಂಧಿಸುವ ಅಧಿಕಾರಿಗಳ ಭರವಸೆಗೆ ಪ್ರತಿಯಾಗಿ,ನೀವು ಬಂಧಿಸದಿದ್ದರೇ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಠಾಣೆಯ ಮುಂದೆ ಹೋರಾಟ ನಡೆಸುವ ಘೋಷಣೆಯೊಂದಿಗೆ ಧರಣಿ ಹಿಂಪಡೆದರು. ಪ್ರತಿಭಟನೆಯಲ್ಲಿ ನಾಗಪ್ಪ ತಳವಾರ ತಿಪ್ಪಣ್ಣ ಚಿಕ್ಕಹೆಸರೂರ ಬಂದೇನವಾಜ್ ಪಾಮನಕಲ್ಲೂರ ಮೌನೇಶ ಚಲವಾದಿ,ಬಸವರಾಜ ದೊಡ್ಧಮನಿ, ಮಹಾದೇವಪ್ಪ ಶರಣಬಸವ ಕೊನ್ನಾಪೂರ ನಾಗಮ್ಮ ಭೀಮಮ್ಮ ಚನ್ನಮ್ಮ ಮುಂತಾದವರು ಭಾಗವಹಿಸಿದ್ದರು. ವರದಿ – ಆನಂದ್ ಸಿಂಗ್ ಕವಿತಾಳ