ಅಂಗದಾನದಂತೆ ಚರ್ಮದಾನದ ಜಾಗೃತಿ ಇನ್ನಷ್ಟು ಹೆಚ್ಚಾಗಬೇಕು: ಡಾ. ಕೆ ರಮೇಶ್‌ ವಿಕ್ಟೋರಿಯಾ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ.

Spread the love

ಅಂಗದಾನದಂತೆ ಚರ್ಮದಾನದ ಜಾಗೃತಿ ಇನ್ನಷ್ಟು ಹೆಚ್ಚಾಗಬೇಕು: ಡಾ. ಕೆ ರಮೇಶ್ವಿಕ್ಟೋರಿಯಾ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ.

– ಫ್ರೇಂಡ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ ನ 27 ನೇ ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರ ಉದ್ಘಾಟನೆ

– ಜರ್ಮನಿಯ ಖ್ಯಾತ ಪ್ಲಾಸ್ಟಿಕ್‌ ಸರ್ಜನ್‌ ಗಳಿಂದ ಉಚಿತ ಶಸ್ತ್ರಚಿಕಿತ್ಸೆ

ಬೆಂಗಳೂರು ಜನವರಿ 15: ಅಂಗದಾನದಂತೆ ಚರ್ಮದಾನವೂ ನಡೆಯುತ್ತಿದ್ದು ಈ  ಬಗ್ಗೆ ಇನ್ನಷ್ಟು ಜಾಗೃತಿಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ವಿಕ್ಟೋರಿಯಾ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥರಾದ ಡಾ. ಕೆ ರಮೇಶ್‌ ಅಭಿಪ್ರಾಯಪಟ್ಟರು. ಇಂದು ಬೆಂಗಳೂರಿನ ಗಿರಿನಗರದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಫ್ರೇಂಡ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ 27ನೇ ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುಟ್ಟಗಾಯಗಳ ಚಿಕಿತ್ಸೆಗೆ ಚರ್ಮದ ಅವಶ್ಯಕತೆಯಿದೆ. ಕಳೆದ 5 ವರ್ಷಗಳಿಂದ ಚರ್ಮ ಬ್ಯಾಂಕ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,  ಬಹಳಷ್ಟು ರೋಗಿಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಉಪಯೋಗವನ್ನ ಕರ್ನಾಟಕ ರಾಜ್ಯ ಮತ್ತು ಸುತ್ತಲಿನ ಹಲವು ರಾಜ್ಯಗಳ ರೋಗಿಗಳು ಉಪಯೋಗಿಸಿಕೊಂಡಿದ್ದಾರೆ. ಕೋವಿಡ್‌ ಸಂಧರ್ಭದಲ್ಲಿ ಚರ್ಮದಾನದ ಸಂಖ್ಯೆ ಕಡಿಮೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಜಾಗೃತಿ ಹೆಚ್ಚಾಗಿದೆ. ಇದರ ಜೊತೆಯಲ್ಲೇ ಚರ್ಮದಾನದ ಸಂಖ್ಯೆಯೂ ನಿಧಾನವಾಗಿ ಹೆಚ್ಚಾಗುತ್ತಿದೆ. ಆದರೆ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಚರ್ಮದಾನ ನಡೆದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಈ ಹಿನ್ನಲೆಯಲ್ಲಿ ಅಂಗಾಂಗ ದಾನದಂತೆ ಚರ್ಮದಾನದ ಬಗ್ಗೆಯೂ ಜಾಗೃತಿಯನ್ನು ಹೆಚ್ಚಿಸಬೇಕಾಗಿದೆ. ಫ್ರೇಂಡ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ನಂತಹ ಸಂಸ್ಥೆಗಳು ನಡೆಸುವ ಉಚಿತ ಶಿಬಿರಗಳಿಂದ ಅವಶ್ಯಕತೆಯಿರುವವರು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು. ಫ್ರೇಂಡ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ ನ ಅಧ್ಯಕ್ಷರಾದ ಕುಂಟಾಲ್‌ ಷಾ ಮಾತನಾಡಿ, ಕಳೆದ 27 ವರ್ಷಗಳಿಂದ ರಾಜ್ಯದಲ್ಲಿ ಜರ್ಮನಿಯ ಪ್ರಸಿದ್ದ ಶಸ್ತ್ರಚಿಕಿತ್ಸರ ಸಹಯೋಗದೊಂದಿಗೆ ಉಚಿತವಾಗಿ ಪ್ಲಾಸ್ಟಿಕ್‌ ಸರ್ಜರಿಯನ್ನ ನಡೆಸಲಾಗುತ್ತಿದೆ. ಇದುವರೆಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಅತ್ಯಂತ ಅವಶ್ಯಕತೆಯಿರುವ ಸಾವಿರಾರು ರೋಗಿಗಳಿಗೆ ಎಲ್ಲಾ ಖರ್ಚನ್ನ ನಾವು ಭರಿಸುತ್ತೇವೆ. ಇಂತಹ ಒಂದು ಸೇವೆಯನ್ನು ಒದಗಿಸಲು ನಮಗೆ ಸಾಧ್ಯವಾಗಿರುವುದಕ್ಕೆ ಸಂತಸವಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿಗೆ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಎಂ. ಕೃಷ್ಣಪ್ಪ, ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಮರ್ಸಿ ಮಾರ್ಕರ್‌, ಇಂಟರ್‌ಪ್ಲಾಸ್ಟ್‌ ಜರ್ಮನಿ ತಂಡದ ಮುಖ್ಯಸ್ಥರಾದ ಡಾ. ಪೀಟರ್‌ ಪಾಂಟ್ಲೀನ್‌, ಫ್ರೇಂಡ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ ಎಸ್‌ ಹೆಚ್‌ ಪುಷ್ಪೇಂದ್ರ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನೂರಕ್ಕೂ ಹೆಚ್ಚು ರೋಗಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *