ರೈತ ಹೋರಾಟಕ್ಕೆ 6 ತಿಂಗಳು: ಮೇ 26 ರಂದು ಕಪ್ಪು ದಿನ ಆಚರಿಸಲು ರೈತರ ನಿರ್ಧಾರ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಮೇ 26 ರಂದು 6 ತಿಂಗಳು ತುಂಬುತ್ತಿದೆ. ಈ ದಿನವನ್ನು ಕಪ್ಪು ದಿನವನ್ನಾಗಿ ಆಚರಿಸಲು ರೈತರು ನಿರ್ಧರಿಸಿದ್ದಾರೆ ಎಂದು ರೈತ ಸಂಘಟನೆಗಳು ಒಕ್ಕೂಟ ತಿಳಿಸಿದೆ. 40 ಕ್ಕೂ ಹೆಚ್ಚು ರೈತ ಸಂಘಗಳ ಸಂಸ್ಥೆಯಾದ ಸಂಯುಕ್ತಾ ಕಿಸಾನ್ ಮೋರ್ಚಾ, ಮೇ 26 ಅನ್ನು ‘ಕಪ್ಪು ದಿನ’ ಎಂದು ಆಚರಿಸುವುದಾಗಿ ಶನಿವಾರ ಘೋಷಿಸಿದೆ. ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ್ ಮತ್ತು ಶಹಜಾನ್‌ಪುರ್ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತಿದೆ. ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಅವರು ಮೇ 26 ರಂದು ತಮ್ಮ ಮನೆ, ವಾಹನಗಳು ಮತ್ತು ಅಂಗಡಿಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಲು ಮನವಿ ಮಾಡಿದ್ದಾರೆ. “ಮೇ 26 ರಂದು ರೈತ ಪ್ರತಿಭಟನೆ ಆರು ತಿಂಗಳುಗಳನ್ನು ಪೂರ್ಣಗೊಳಿಸುತ್ತದೆ. ಅದೇ ದಿನ ಪ್ರಧಾನಿ ಮೋದಿ ಸರ್ಕಾರ ರಚಿಸಿ ಏಳು ವರ್ಷಗಳಾಗುತ್ತವೆ. ಆ ದಿನವನ್ನು ನಾವು ಕಪ್ಪು ದಿನವೆಂದು ಆಚರಿಸುತ್ತೇವೆ. ಅಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಪ್ರತಿಭಟನೆಯ ರೂಪದಲ್ಲಿ ಸುಡುತ್ತೇವೆ” ಎಂದು ರಾಜೇವಾಲ್ ಹೇಳಿದ್ದಾರೆ. “ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತರು ಇಟ್ಟಿರುವ ಬೇಡಿಕೆಗಳನ್ನು ಒಕ್ಕೂಟ ಸರ್ಕಾರ ಈಡೇರಿಸಿಲ್ಲ. ಇದಲ್ಲದೇ ರಸಗೊಬ್ಬರಗಳು, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಹೆಚ್ಚಾಗಿರುವುದರಿಂದ ಕೃಷಿ ವ್ಯವಹಾರವು ಸಾಧ್ಯವಿಲ್ಲದಂತಾಗಿದೆ” ಎಂದು ರೈತ ಮುಖಂಡ ಹೇಳಿದ್ದಾರೆ. 2020 ರ ನವೆಂಬರ್ 26 ರಿಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಈ ಕಾನೂನುಗಳನ್ನು ರದ್ದಿಗೊಳಿಸಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಖಾತರಿಪಡಿಸುವ ಹೊಸ ಕಾನೂನು ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ವರದಿ – ಸಂಪಾದಕೀಯ