ಉತ್ಸವಕ್ಕೆ ಕೋಟಿ ಖರ್ಚು ಮಾಡುವಿರಿ, ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಹಣ ಇಲ್ಲವೇ : ಸರಕಾರಕ್ಕೆ ಹೈಕೋರ್ಟ್ ಕ್ಲಾಸ್…..
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಲಾಗಿದ್ದು, ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ವಿಭಾಗಿಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉತ್ಸವ ನಡೆಸಲು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ನೀಡುತ್ತಿಲ್ಲ. ರಾಜ್ಯ ಸರ್ಕಾರ, ಅಧಿಕಾರಿಗಳಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅಧಿಕಾರಿಗಳಿಗೆ ಮರ್ಯಾದೆ, ಆತ್ಮಸಾಕ್ಷಿ ಇಲ್ಲ. ಅವರು ಸರ್ಕಾರಿ ಶಾಲೆ ಮಕ್ಕಳಿಗೆ ಮಾನವೀಯತೆ ತೋರುತ್ತಿಲ್ಲ. ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಖಾಸಗಿ ಶಾಲೆಗಳಿಗೆ ಕಾರಿನಲ್ಲಿ ಹೋಗಿ ಬರುತ್ತಾರೆ ಎಂದು ಹೈಕೋರ್ಟ್ ಚಾಟಿ ಬೀಸಿದೆ. ಮಕ್ಕಳ ವಿಚಾರದಲ್ಲಿ ಮಲತಾಯಿ ಧೋರಣೆ ಸಹಿಸುವುದಿಲ್ಲ. ಸರ್ಕಾರ ಈಗಲಾದರೂ ಕಣ್ಣು ತೆರೆದು ಸಮವಸ್ತ್ರ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಕೆ.ಎಸ್ ಹೇಮಲೇಖಾ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ. ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡಲು ಆದೇಶಿಸಲಾಗಿತ್ತು. 2018ರ ಹೈಕೋರ್ಟ್ ಆದೇಶ ಪಾಲನೆಯಾಗಿಲ್ಲ ಎಂದು ಕೊಪ್ಪಳದ ಮಂಜುನಾಥ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಎರಡು ವಾರದಲ್ಲಿ ಆದೇಶ ಪಾಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಸರಕಾರ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ, 2019-20 ಮತ್ತು 2020-21ನೇ ಶಾಲಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಕೊಟ್ಟಿದ್ದು, ಎರಡನೇ ಜೊತೆ ಖರೀದಿಗೆ ಶಾಲಾ ಮುಖ್ಯಸ್ಥರ ಎಸ್‌ಡಿಎಂಸಿ ಖಾತೆಗೆ ಹಣ ವರ್ಗಾಯಿಸಿರುವ ಸಂಗತಿ ವಿಚಾರಣೆ ವೇಳೆ ಬಹಿರಂಗವಾಯಿತು. ಆಗ ಸಿಟ್ಟಾದ ನ್ಯಾಯಮೂರ್ತಿ ವೀರಪ್ಪ, ‘‘ಸರಕಾರ ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಹೇಳುತ್ತಿದೆ. ಆದರೆ, ಇಲ್ಲಿ ಒಂದು ಜೊತೆಗೆ ಮಾತ್ರ ಇದೆ. ಮಕ್ಕಳಿಗೆ ಸಮವಸ್ತ್ರದ ಜೊತೆ ಶೂ-ಸಾಕ್ಸ್ ಸಿಕ್ಕಿದೆಯೇ ಎಂಬುದು ದೇವರಿಗೆ ಮಾತ್ರ ಗೊತ್ತು? ಏಕೆ ಸರಿಯಾದ ರೀತಿಯಲ್ಲಿಸಮವಸ್ತ್ರ ನೀಡಿಲ್ಲ? ಶೂ-ಸಾಕ್ಸ್ ವಿತರಣೆ ಹೊಣೆ ಹೊತ್ತಿರುವ ಅಧಿಕಾರಿ ಯಾರು ಎಂಬುದನ್ನು ತಿಳಿಸಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು,’’ ಎಂದು ಹೇಳಿತು. ‘‘ಸಮವಸ್ತ್ರವಿಲ್ಲದಿದ್ದರೆ ಮಕ್ಕಳಿಗೆ ಬಹಳ ನೋವಾಗುತ್ತದೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಕೊಡುವುದಾದರೆ ಸೂಕ್ತ ರೀತಿಯಲ್ಲಿಸಮವಸ್ತ್ರ ಕೊಡಿ. ಇಲ್ಲವಾದರೆ ಬೇಡ. ಪೂರ್ತಿಯಾಗಿ ಸಾಯಿಸಿಬಿಡಿ. ಅರ್ಧಂಬರ್ಧ ಸಾಯಿಸಬೇಡಿ. ಅಧಿಕಾರಿಗಳಿಗೆ ಸರಕಾರಿ ಶಾಲಾ ಮಕ್ಕಳ ಬಗ್ಗೆ ಮಾನವೀಯತೆ ಇಲ್ಲ. ಅದೇ ಸಮಸ್ಯೆ ಮೂಲ. ಅವರ ಮಕ್ಕಳು ಸರಕಾರಿ ಶಾಲೆಗೆ ಹೋಗುವುದಿಲ್ಲ. ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ, ಬರುತ್ತಾರೆ. ಮಕ್ಕಳ ವಿಚಾರದಲ್ಲಿ ತಾರತಮ್ಯ ಧೋರಣೆ ಸಹಿಸುವುದಿಲ್ಲ’’ ಎಂದು ಕಟುವಾಗಿ ಹೇಳಿದರು.
ವರದಿ – ಮಹೇಶ ಶರ್ಮಾ
ವಿಸೃತ ವರದಿ ಪ್ರಕಟಿಸಿದ ಮಹೇಶ್ ಸರ್ ಗೆ ತುಂಬಾ ತುಂಬಾ ಧನ್ಯವಾದಗಳು…..
ಹೈಕೋರ್ಟಿನಲ್ಲಿ ಕೇಸ್ ಹಾಕಿದ ಮಂಜುನಾಥ ಅವರ ತಂದೆ ದೇವರಾಜ ಕಿನ್ನಾಳ
9945872044
ಧನ್ಯವಾದಗಳು ಸರ್ ತಮ್ಮ ಸಹಕಾರಕ್ಕೆ