ವಸಂತಾಗಮನದ ಸಂದರ್ಭದಲ್ಲಿ ಪ್ರಕೃತಿಯೊಡನೆ ಒಂದು ಸಂಭಾಷಣೆ…….
( ವಿಶ್ವ ಜಲ ದಿನ ಮತ್ತು ಯುಗಾದಿಯ ದಿನದಿಂದು……….)ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ………ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು…..ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮರುಳಾಗಿ ಪ್ರೇಮ ಭಾವದಲ್ಲಿ ಅದನ್ನು ದಿಟ್ಟಿಸಿದಾಗ ತಣ್ಣನೆಯ ಗಾಳಿಗೆ ಸೋಕಿ ದೂರ ಹಾರಿತು….ಸೂಜಿ ಮಲ್ಲಿಗೆಯ ಸೂಕ್ಷ್ಮ ಕುಸುರಿಗೆ ಮನಸೋತು ವಿಸ್ಮಯ ನೋಟ ಬೀರಿದಾಗ ತುಂತುರು ಮಳೆಗೆ ನಾಚಿ ನೀರಾಗಿ ನೆಲಕ್ಕುದುರಿತು…..ದಾಸವಾಳದ ದಾರಿಯಲ್ಲಿ ಅದನ್ನು ಪ್ರೀತಿಯಿಂದ ಸ್ಪರ್ಶಿಸಿದಾಗ ರೋಮಾಂಚನಗೊಂಡು ನಿಧಾನವಾಗಿ ಬಿರಿದು ಸ್ವಾಗತ ಕೋರಿತು……ದಟ್ಟ ದಳಗಳ ಚೆಂಡು ಹೂ ನನ್ನ ನೋಟಕ್ಕೆ ಸಣ್ಣಗೆ ಬೆದರಿ ಮುಖ ತಿರುಗಿಸಿ ತಲೆ ಬಾಗಿಸಿ ಶರಣಾಯಿತು……ಕೆಂಗುಲಾಬಿಯು ನೋಟವರಳಿಸಿ ಹೃದಯ ಸೇರುವ ಬಯಕೆ ವ್ಯಕ್ತಪಡಿಸುವ ಭಾವ ಸೂಸುವುದು ಮನಸ್ಸಿನಲ್ಲಿ ಅಚ್ಚಾಯಿತು……ಗುಲ್ ಮೊಹರ್ ತಾನು ಆಸ್ವಾದಿಸಿದ ಪ್ರೇಮಿಗಳ ಪ್ರೀತಿ ನಿವೇದನೆಯ ಪಿಸುಮಾತು ನನಗೆ ತಿಳಿಸಲು ಗಾಳಿಯ ಸಹಾಯ ಪಡೆಯಲು ಹವಣಿಸಿದಂತಿತ್ತು……ಸೇವಂತಿಗೆ ದುಂಬಿಗಳ ಪ್ರಣಯ ಕಾವ್ಯದ ರಸ ನಿಮಿಷಗಳನ್ನು ಸುತ್ತಲೂ ಪಸರಿಸುತ್ತಿತ್ತು……ತಾವರೆಯು ಸೂರ್ಯ ರಶ್ಮಿಗೆ ಮೈ ಚಾಚಿ ನೇಸರನ ದೃಷ್ಟಿಸುತ್ತಾ ನೆನಪಿನ ಅಂಗಳಕ್ಕೆ ಜಾರಿದಂತಿತ್ತು….ತೋರಣದ ಬಾಗಿಲಿಗೆ ಸಿಂಗಾರವಾಗಲು ಕನಕಾಂಬರ ಕಾತರಿಸುತ್ತಿತ್ತು…..ಅಶೋಕ, ಸ್ಪಟಿಕ, ಪಾರಿಜಾತ, ಕಣಗಿಲೆ, ಕೇದಗೆ, ಡೇರೆ, ಸುರಗಿ, ತುಂಬೆ, ಜಾಜಿಗಳು ವಸಂತದ ಆಗಮನದಿಂದ ಸಂಭ್ರಮಿಸುತ್ತಾ ತಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಅನುಭವಿಸುವುದನ್ನು ಗಮನಿಸುತ್ತಾ……ಕೋಗಿಲೆಯು ಇಂಪಾದ ಸ್ವರ ಮಾಧುರ್ಯದಲ್ಲಿ ಇನಿಯನನ್ನು ಕರೆಯುತ್ತಾ,……ಗುಬ್ಬಚ್ಚಿಯು ಚಿಲಿಪಿಲಿ ಹಾಡಿ ಮಗುವಿಗೆ ಕಾಳು ಉಣಿಸುತ್ತಾ,…..ಮಿಡತೆಗಳ ಮಿಲನ ಮಹೋತ್ಸವದ ಝೇಂಕಾರದಲ್ಲಿ ತೇಲಾಡುತ್ತಾ,…..ಕಾಗೆಗಳು ಕಲರವದಲ್ಲಿ ತಮ್ಮ ಆಹಾರ ಹಂಚಿಕೊಳ್ಳುತ್ತಾ,…….ಪಾರಿವಾಳಗಳ ಗುಟುರಿನೊಂದಿಗೆ ಶಾಂತಿ ಸಂದೇಶ ಸಾರುತ್ತಾ……, ಗಿಣಿಗಳು ಅಣಿಮುತ್ತಿನಲ್ಲಿ ರಸಸ್ವಾಧಿಸುತ್ತಾ,…..ನವಿಲುಗಳು ನರ್ತನದಲ್ಲಿ ನಲಿಯುತ್ತಾ,…… ಗೀಜಗ ಮಳೆಗಾಲಕ್ಕಾಗಿ ಗೂಡು ನೇಯುತ್ತಾ,……ತೆಂಗು, ಮಾವು, ಬಾಳೆ, ಹಲಸು, ಸೀಬೆ, ದ್ರಾಕ್ಷಿ, ಸೇಬು, ದಾಳಿಂಬೆ, ಅನಾನಸ್, ಕಿತ್ತಳೆ, ಮೂಸಂಬಿ, ಕಲ್ಲಂಗಡಿ, ಕರ್ಬೂಜ, ಪಪ್ಪಾಯಿ, ಸಪೋಟ, ಚಕ್ಕೋತ……..ಕೊತ್ತಂಬರಿ, ಕರಿಬೇವು, ಪುದಿನ, ದಂಟು, ಪಾಲಾಕ್, ಅರಿವೆ, ಬದನೆ, ನುಗ್ಗೆ, ಬೆಂಡೆ, ತೊಂಡೆ, ನಿಂಬೆ, ಸೌತೆ, ಹುರುಳಿ, ಪಡವಲಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸೋರೆ, ಅವರೆ, ತೊಗರಿ, ಕಡಲೆ, ಗುರೆಳ್ಳು, ಗಸಗಸೆ, ಶುಂಠಿ, ಮೆಣಸು, ಜೀರಿಗೆ…….ಬೆಕ್ಕು, ನಾಯಿ, ಹಸು, ಕರು, ಕುರಿ, ಕೋಳಿ, ಹಂದಿ, ಮೊಲ, ಒಂಟೆ, ಕುದುರೆ, ಕತ್ತೆ………ಹುಲಿ, ಸಿಂಹ, ಚಿರತೆ, ಜಿಂಕೆ, ಕರಡಿ, ಹಾವು,……..ಮೀನು, ಮೊಸಳೆ, ಆಮೆ, ಶಂಕ,…..ಹೀಗೆ ಪ್ರಕೃತಿಯ ಮಡಿಲಲ್ಲಿ ಮಾತನಾಡುತ್ತಾ, ಶಬ್ದ ಕೇಳಿಸಿಕೊಳ್ಳುತ್ತಾ, ಭಾವ ಗ್ರಹಿಸುತ್ತಾ, ವಸಂತ ಋತುವಿನಲ್ಲಿ ಒಂದು ಸುತ್ತ ಚರ ಜಂಗಮನಾಗಿ ನಡೆದಾಡಿದರೆ ಮನಸ್ಸು ಮತ್ತೆ ನವ ಉಲ್ಲಾಸ ಪಡೆದು ಚೇತೋಹಾರಿಯಾಗುತ್ತದೆ……ಹೊಸ ವರ್ಷವೆಂದರೆ ಪ್ರಕೃತಿಯೊಂದಿಗಿನ ಒಡನಾಟ, ಪರಿಸರದೊಂದಿಗೆ ಸಂಬಂಧ, ಜೀವಚರಗಳೊಂದಿಗೆ ಅನುಬಂಧ,ಮಾನವೀಯತೆಯ ಋಣಾನುನಂಧ…..ಮತ್ತೆ ಚಿಗುರುವ ಜೀವನೋತ್ಸಾಹ,ಈ ಯುಗಾದಿಯ ಸಂದರ್ಭದಲ್ಲಿ ಎಲ್ಲರೂ ಸಾಧ್ಯವಾದಷ್ಟು ನಮ್ಮೊಳಗೆ ಆತ್ಮಾವಲೋಕನ ಮಾಡಿಕೊಂಡು ಈ ಸಮಾಜವನ್ನು ಒಂದು ನೆಮ್ಮದಿಯ ತಾಣವಾಗಲು ನಮ್ಮ ಕೈಲಾದಷ್ಟು ಶ್ರಮಿಸೋಣ…..ಅಂದಹಾಗೆ, ಇವತ್ತು ವಿಶ್ವ ಜಲದಿನ. ಭೂ ಮಂಡಲದಲ್ಲಿ ಮುಕ್ಕಾಲು ಪಾಲು ನೀರೇ ಇದ್ದರೂ, ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ, ” ನೀರು ಉಳಿಸಿ ” ಎಂಬ ಘೋಷವಾಕ್ಯ ಪ್ರತಿಧ್ವನಿಸುವ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನೀರಿನ ಸರಿಯಾದ ಬಳಕೆ ಮತ್ತು ಅದರ ಮಹತ್ವವನ್ನು ಇದೇ ಸಂದರ್ಭದಲ್ಲಿ ನೆನಪಿಸುತ್ತ……… ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿಶೇಷ ಲೇಖನ :- ವಿವೇಕಾನಂದ ಎಚ್. ಕೆ. 9844013068…