ಬಂಡಾಯ….ಬಂಡಾಯ…….ಬಂಡಾಯ…ಎಲ್ಲೆಲ್ಲೂ ಬಂಡಾಯ…..
ಶೋಷಣೆ ವಿರುದ್ಧದ ಬಂಡಾಯವೇ,
ಮೌಡ್ಯದ ವಿರುದ್ಧ ಬಂಡಾಯವೇ,
ಅನ್ಯಾಯದ ವಿರುದ್ಧ ಬಂಡಾಯವೇ,
ಭ್ರಷ್ಟಾಚಾರದ ವಿರುದ್ಧ ಬಂಡಾಯವೇ,
ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯವೇ,
ಚುನಾವಣಾ ಅಕ್ರಮಗಳ ವಿರುದ್ಧ ಬಂಡಾಯವೇ,
ಬೆಲೆ ಏರಿಕೆ ವಿರುದ್ಧ ಬಂಡಾಯವೇ……..
ಹಾಗಿದ್ದಲ್ಲಿ ಅದನ್ನು ನಾವೆಲ್ಲರೂ ಬೆಂಬಲಿಸಬಹುದು. ಆದರೆ ತಮಗೆ ಪಕ್ಷದ ಅಭ್ಯರ್ಥಿಯಾಗಲು ಸೀಟು ಸಿಗಲಿಲ್ಲ ಎಂದು ವೈಯಕ್ತಿಕ ಸ್ವಾರ್ಥದ ಬಂಡಾಯದ ಬಗ್ಗೆ ಏನು ಹೇಳುವುದು. ಜೊತೆಗೆ ಆ ಬಂಡಾಯ ಹೇಗಿರುತ್ತದೆ ಎಂದರೆ ತಾವು ಬೆಳೆದ ಅದೇ ಪಕ್ಷದ ವಿರುದ್ಧ ಅಥವಾ ತಾವು ವಿರೋಧಿಸಿದ ಪಕ್ಷಗಳ ಸೇರ್ಪಡೆಯಾಗುವ ಬಂಡಾಯ…..
ಇದು ನಿಜವಾದ ಬಂಡಾಯವಲ್ಲ, ಅವಕಾಶವಾದಿತನ. ಬಹುತೇಕ ರಾಜಕಾರಣಿಗಳ ಮನಸ್ಥಿತಿ ಹೀಗೆ ಇರುತ್ತದೆ. ಸಮಯ ಸಂದರ್ಭ ಬಂದಾಗ ಮುಖವಾಡ ಕಳಚಿ ಬೀಳುತ್ತದೆ ಅಷ್ಟೇ.
ಈಗ ಪಕ್ಷದಲ್ಲಿ ಇರುವ ನಿಷ್ಠಾವಂತರ ಪ್ರಾಮಾಣಿಕತೆ ಸಹ ಶಾಶ್ವತವಲ್ಲ. ಮುಂದೆ ಇನ್ನೊಂದು ಅವಕಾಶ ನಿರಾಕರಿಸಿದಾಗ ಇವರದೂ ಬಂಡಾಯ ಇದ್ದದ್ದೇ. ಒಟ್ಟಿನಲ್ಲಿ ಸೈದ್ದಾಂತಿಕ ಬದ್ದತೆ ಕೇವಲ ಮಾತಿನ ಅಥವಾ ಪುಸ್ತಕದ ಬದನೆಕಾಯಿ ಮಾತ್ರ….
ಹಾಗೆ ನೋಡಿದರೆ ನಿಜವಾಗಿಯೂ ಬಂಡಾಯದ ಧ್ವನಿ ಏರಿಸಬೇಕಿರುವುದು ಮತದಾರರು. ತಮ್ಮ ಮತ ಪಡೆದ ಜನಪ್ರತಿನಿಧಿಗಳು ತಮಗೆ ಮಾಡಿದ ವಂಚನೆಯ ವಿರುದ್ಧ, ತಮ್ಮ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದವರ ವಿರುದ್ಧ. ದುರಾದೃಷ್ಟವಶಾತ್ ಸಾಮಾನ್ಯ ಜನರು ಮೌನವಾಗಿರುತ್ತಾರೆ ಅಥವಾ ಮಾರಾಟವಾಗುತ್ತಾರೆ.
ಈ ಚುನಾವಣಾ ಸಮಯದ ಬಂಡಾಯ ಬಹುತೇಕ ಅಧಿಕಾರಕ್ಕಾಗಿಯೇ ಇರುತ್ತದೆ ಎಂಬುದು ಬಹಿರಂಗ ಸತ್ಯವಾದರು ಅದು ಪಡೆಯುವ ವ್ಯಾಪಕ ಪ್ರಚಾರ, ಸಮರ್ಥನೆಗಳು, ಕೆಲವೊಮ್ಮೆ ಪಡೆಯುವ ಯಶಸ್ವುಗಳು ಮತ್ತಷ್ಟು ಬಂಡಾಯಗಳಿಗೆ ಪ್ರೇರಣೆಯಾಗುತ್ತವೆ. ಅದರ ಪರಿಣಾಮವೇ ಚುನಾವಣೆಯಿಂದ ಚುನಾವಣೆಗೆ ಬಂಡಾಯಗಳು ಹೆಚ್ಚಾಗುತ್ತಲೇ ಇದೆ.
ಒಂದು ಪಕ್ಷದ ಅಭ್ಯರ್ಥಿಯಾಗುವುದು ಅಥವಾ ಆಗದಿರುವುದು ನ್ಯಾಯ ಅನ್ಯಾಯದ, ನಿಷ್ಠೆ ಅಥವಾ ವಂಚನೆಯ ಬಂಡಾಯ ಎನ್ನುವುದಾದರೆ ಸಾಮಾನ್ಯ ಜನ ಪ್ರತಿನಿತ್ಯ ರೊಚ್ಚಿಗೇಳಬೇಕಾಗುತ್ತದೆ. ಅವರ ಮೂಲಭೂತ ಅವಶ್ಯಕತೆಗಳಲ್ಲೇ ಎಷ್ಟೋ ಪ್ರಮಾಣದ ಅನ್ಯಾಯ ನೇರವಾಗಿಯೇ ಆಗುತ್ತಿರುತ್ತದೆ.
ಎಷ್ಟೋ ಜನರಿಗೆ ಅರ್ಹತೆ ಇದ್ದರೂ ಉದ್ಯೋಗ ಸಿಗುವುದಿಲ್ಲ, ಪ್ರತಿಭೆ ಇದ್ದರೂ ಅವಕಾಶ ಸಿಗುವುದಿಲ್ಲ. ಸಾಮರ್ಥ್ಯ ಇದ್ದರೂ ವೇದಿಕೆ ಸಿಗುವುದಿಲ್ಲ. ಆದರೂ ಅವರು ಅನೇಕ ಕಾರಣಗಳಿಗಾಗಿ ಬಂಡಾಯ ಏಳುವುದಿಲ್ಲ. ಆದರೆ ಇಲ್ಲಿ ಅನೇಕರು ಎಲ್ಲಾ ಅಧಿಕಾರ ಸೌಲಭ್ಯ ಮೂರು ತಲೆಮಾರುಗಳಿಗೆ ಆಗುವಷ್ಟು ಹಣ ಗಳಿಸಿಯೂ ಅತೃಪ್ತಿ ಅಸಹನೆಯಿಂದ ಆ ಕ್ಷೇತ್ರವೇ ತಮ್ಮ ಸ್ವಂತ ಆಸ್ತಿ ಎಂಬಂತೆ ಕಿರುಚಾಡಿ ಬಂಡಾಯ ಏಳುತ್ತಾರೆ. ಮಧ್ಯ ವಯಸ್ಸು ದಾಟಿ ಹಿರಿತನದಲ್ಲಿ ಇದ್ದರೂ ಅವರ ಆಸೆಗಳಿಗೆ ಮಿತಿ ಇರುವುದಿಲ್ಲ.
ಸಾರ್ವಜನಿಕ ಸಮಾರಂಭಗಳಲ್ಲಿ ಧರ್ಮ, ದೇವರು, ಆಧ್ಯಾತ್ಮ, ಸರಳತೆ, ವೈರಾಗ್ಯ, ದಯೆ, ಕರುಣೆ, ತ್ಯಾಗದ ಬಗ್ಗೆ ಭಾಷಣ ಮಾಡುವ ಇದೇ ಜನರು ಅವರಿಗೆ ಸೀಟು ಸಿಗಲಿಲ್ಲ ಎಂಬ ಕಾರಣದಿಂದ ಬಂಡಾಯ ಹೇಳುವುದು ಆತ್ಮವಂಚನೆಯ ಪರಮೋಚ್ಚ ಸ್ಥಿತಿ ಎಂದು ಹೇಳಬೇಕಾಗುತ್ತದೆ.
ಇದರಲ್ಲಿ ಕೇವಲ ಆಕಾಂಕ್ಷೆಗಳು ಮಾತ್ರವಲ್ಲ ಅವರ ಹಿಂಬಾಲಕರು ಮತ್ತು ಮತದಾರರ ಪಾಲು ಸಹ ಇದೆ. ದುರಾಸೆ ಮತ್ತು ಸ್ವಾರ್ಥದ ವ್ಯಕ್ತಿ ಎಂದು ತಿಳಿದ ನಂತರವೂ ಆತನ ಪರವಾಗಿ ಪ್ರಚಾರ ಮತ್ತು ಮತದಾನ ಮಾಡುವುದು ಅನೈತಿಕ ಎಂಬ ಸಾಮೂಹಿಕ ಪ್ರಜ್ಞೆಯೇ ಜನ ಸಾಮಾನ್ಯರಲ್ಲಿ ಮೂಡುವುದಿಲ್ಲ. ಎಲ್ಲರೂ ಕಳ್ಳರೇ ನಮಗೆ ಆಯ್ಕೆಗಳಿಲ್ಲ. ವೈಯಕ್ತಿಕವಾಗಿ ನಮಗೆ ಯಾವುದು ಲಾಭವೋ ಅದೇ ನಮ್ಮ ಆಯ್ಕೆ. ಅದೇ ಇಂದಿನ ಸಮಾಜದಲ್ಲಿ ಬದುಕುವ ಜಾಣತನ. ಇಲ್ಲದ ಉಸಾಬಾರಿ ನಮಗೇಕೆ ಎಂಬ ಹತಾಶ ಮನೋಭಾವ ಸಹ ಹೆಚ್ಚು ವ್ಯಾಪಕವಾಗಿ ಹರಡಿದೆ.
ಇದೆಲ್ಲದರ ದುಷ್ಪರಿಣಾಮ ಈಗಿನ ಬಂಡಾಯಗಳು. ಬದುಕಿನಲ್ಲಿ ನಾವು ಬಯಸುವ ಮಹತ್ವಾಕಾಂಕ್ಷೆಗಳು ಇರಬೇಕು ನಿಜ. ಆದರೆ ಇಷ್ಟು ದೊಡ್ಡ ಜನಸಂಖ್ಯೆಯ ಪ್ರಜಾಪ್ರಭುತ್ವ ದೇಶದಲ್ಲಿ ಸಾರ್ವಜನಿಕ ಜೀವನದಲ್ಲಿ ನಾವು ಬಯಸಿದ್ದೆಲ್ಲಾ ಸಿಗುತ್ತದೆ ಎಂದು ನಿರೀಕ್ಷಿಸುವುದು ಕಷ್ಟ ಮತ್ತು ತುಂಬಾ ಹಠ ಮತ್ತು ಶ್ರಮ ಇದ್ದರೆ ಅದಕ್ಕಾಗಿ ದೀರ್ಘಕಾಲ ಕಾಯಬೇಕಾಗುತ್ತದೆ ಅಥವಾ ಅದೇ ರೀತಿಯ ಪರ್ಯಾಯ ಹುಡುಕಬೇಕಾಗುತ್ತದೆ. ನಾವು ಇಷ್ಟಪಡುವ ಗುರಿ ತಲುಪಲು ಮಾರ್ಗಗಳು ಕೂಡ ಮುಖ್ಯವಾಗಬೇಕು. ದಾರಿ ಯಾವುದಾದರೂ ಇರಲಿ ಗುರಿ ಮುಖ್ಯ ಎನ್ನುವುದು ವೈಯಕ್ತಿಕ ಮತ್ತು ಸಾಮಾಜಿಕ ಅಧಃಪತನಕ್ಕೆ ಕಾರಣವಾಗುತ್ತದೆ. ಸ್ವಾಭಿಮಾನ ಇಲ್ಲದ ಬದುಕಿನ ಗುಣಮಟ್ಟ ಅತ್ಯಂತ ಕಳಪೆಯಾಗಿರುತ್ತದೆ. ಆದ್ದರಿಂದ ಪ್ರಯತ್ನ ಇರಲಿ. ನಿರಾಸೆ ಬೇಡ. ಅವಕಾಶ ಮತ್ತು ಪರ್ಯಾಯ ಸಾಧ್ಯತೆಗಳ ಹುಡುಕಾಟ ನಿರಂತರವಾಗಿರಲಿ. ಬಂಡಾಯ ಮಾನಸಿಕ ಗಟ್ಟಿತನದ ಸಂಕೇತವಾಗಿ ಪ್ರದರ್ಶನವಾಗಬೇಕೆ ಹೊರತು ಸ್ವಾರ್ಥದ, ಹತಾಶೆಯ, ಅವಕಾಶವಾದಿತನದ, ಪಲಾಯನವಾದಿ ಮಾರ್ಗದ ಪ್ರದರ್ಶನವಾಗಬಾರದು.
ಬಂಡಾಯ ಎಂಬುದು ಸ್ವಾಭಿಮಾನದ ಸಂಕೇತ. ಸ್ವಾರ್ಥದ ಗುರಾಣಿಯಲ್ಲ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿಶೇಷ ಲೇಖಕರು :-ವಿವೇಕಾನಂದ ಎಚ್ ಕೆ. 9844013068……
Super
ಧನ್ಯವಾದಗಳು ಸರ್