ಸಂಗಮೇಶ ಎನ್. ಜವಾದಿಯವರ ವಿಶೇಷ ಲೇಖನ : ವಿಶ್ವ ಪ್ರಜಾಪ್ರಭುತ್ವದ ಪಿತಾಮಹ ಬಸವಣ್ಣ.
ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಆಗಾಧವಾದ ನಿಸ್ವಾರ್ಥ ಸೇವೆ ಸಲ್ಲಿಸಿ ಜಾಗತಿಕ ಪ್ರಪಂಚ ಎಂದೆಂದಿಗೂ ಮರೆಯದ ಕಾಯಕ ದಾಸೋಹದ ಪರಿಕಲ್ಪನೆಯನ್ನು ನೀಡಿದ ಮಾಹಾನ ದಾರ್ಶನಿಕ ಬಸವಣ್ಣ
ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವವಾದಿ. ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಬದುಕಿನುದ್ದಕ್ಕೂ,ಬದುಕನ್ನು ಸಮಾಜದ ಉನ್ನತಿಗಾಗಿ ಸಮರ್ಪಿಸಿದ ಸಮರ್ಪಕ. ಅಂದು ಸಮಾಜದಲ್ಲಿ ಬೇರೂರಿದ್ದ ಹತ್ತು ಹಲವು ಸಮಸ್ಯೆಗಳನ್ನು ಕಿತ್ತೆಸೆದು ಸರ್ವರೂ ಸಮಾನರು ಎಂಬ ಐತಿಹಾಸಿಕ ಕ್ರಾಂತಿ ಮಾಡಿದ ಮಾನವೀಯತೆಯ ಹರಿಕಾರ, ಕ್ರಾಂತಿ ಪುರುಷ,ಮೌಲ್ಯಾಧಾರಿತ ಪರಿವರ್ತಕ ಅಣ್ಣ ಬಸವಣ್ಣ. ನೊಂದು, ಬೆಂದವರ, ಅನಾಥರ ಸೇವೆ ಮಾಡಿದ ಸೇವಕ. ಜಗತ್ತಿನಲ್ಲಿ ಇಲ್ಲಿಯವರೆಗೆ ಎಲ್ಲೂ ನಡೆಯದ ಸ್ವಾಭಿಮಾನದ,ನೈಜತೆಯ – ಸತ್ಯ ಪ್ರತಿಪಾದಿಸುವ ವೈಜ್ಞಾನಿಕ – ವೈಚಾರಿಕ ಕ್ರಾಂತಿ ಈ ನಾಡಿನಲ್ಲಿ ಅಣ್ಣನವರ ನೇತೃತ್ವದಲ್ಲಿ ನಡೆದುಹೋಗಿದೆ. ಈ ಕ್ರಾಂತಿಯ ಮೂಲಕ ಸಮಸ್ತ ಮನುಕುಲದ ಹಾಗೂ ಸಕಲ ಜೀವಾತ್ಮರಿಗು ಲೇಸನ್ನು ಬಯಸಿ, ಶ್ರೇಷ್ಠ ಮನುಕುಲದ ಒಳಿತಿಗಾಗಿ ಹತ್ತು ಹಲವು ಜನಪರ ಕಾರ್ಯಕ್ರಮಗಳು ತಂದು ಜನಸಾಮಾನ್ಯರ ಬವಣೆಗಳನ್ನು ಪರಿಹರಿಸುವ ಕೆಲಸ ಮಾಡಿದ್ದಾರೆ. ಬಡವರಿಗಾಗಿ ಹೊಸ ಹೊಸ ವಿಶಿಷ್ಟ ಸೇವಾ ಕೈಂಕರ್ಯಗಳು ಆರಂಭವಾಗಿದ್ದೇ ಬಸವಾದಿ ಶರಣರ ಕಾಲದಲ್ಲಿ. ಇದುವೇ ಪರಿರ್ವತೆಯ ಜಗದ ನಿಯಮ, ಇದುವೇ ಸೃಷ್ಟಿಯ ಸಂಕೇತ, ಇದುವೇ ಶರಣರು ಕೊಟ್ಟ ಸಮಾಜಿಕ, ಧಾರ್ಮಿಕ – ಆಧ್ಯಾತ್ಮಿಕ ಶುಚಿತ್ವದ ವೈಜ್ಞಾನಿಕ ನೀತಿ ಅಂದರೆ ತಪ್ಪಾಗಲಾರದು. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕಾದ ಎಲ್ಲಾ ಚಿಂತನೆಗಳು ಜಾರಿಗೆ ತಂದು ಅನುಭವ ಮಂಟಪ ಸ್ಥಾಪಿಸಿ, ವಚನ ಸಾಹಿತ್ಯ ರಚನೆಗೆ ಕಾರಣಿಕರ್ತರು.
ಸಮಾನತೆ ಮತ್ತು ಸಹೋದರತೆಯ ಸಹಬಾಳ್ವೆ, ವೈಚಾರಿಕ ತಳಹದಿ ಮೇಲೆ ವಿಚಾರ ಮಂಥನವನ್ನು ಮಾಡಿ ಶರಣ ಧರ್ಮವನ್ನು ವಿಶ್ವ ಧರ್ಮವಾಗಿಸಿದ ಅಪ್ಪ ಬಸವಣ್ಣನವರ ವಿಚಾರಗಳ ಕ್ರಾಂತಿಯು ಜಾಗತಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಭದ್ರಬುನಾದಿಯ ಅಡಿಪಾಯದ ಜೊತೆಗೆ
ಪರಿಣಾಮಕಾರಿಯಾಗಿ ಅಷ್ಟೇ ವ್ಯವಸ್ಥಿತವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿದೆ.
ಅಂದು ಬಸವಣ್ಣನವರು ಅಂತರ್ಜಾತಿ ವಿವಾಹವನ್ನು ಮಾಡಿ ಮಾನವರೆಲ್ಲರೂ ದೇವರ ಮಕ್ಕಳು ಎಂಬ ನಿಲುವು ಪ್ರತಿಪಾದಿಸಿ,ಸರ್ವರೂ ಸಮಾನರು ಎಂದು ಜಾಗತಿಕ ಪ್ರಪಂಚಕ್ಕೆ ಪ್ರತಿ ಪಾದಿಸಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವಂತಾಗಬೇಕೆಂದು ಹೋರಾಟ ಮಾಡಿದ್ದು ಕಾಣುತ್ತೇವೆ. ಇನ್ನು ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡುವ ಮೂಲಕ
ಸಮಾಜವನ್ನು ಸರಿ ದಾರಿಯಲ್ಲಿ ಕೊಂಡ್ಯೊಯುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದಾರೆ.ಅಂದು ಬಸವಣ್ಣನವರು ಕೆಳಗೆ ಬಿದ್ದವರನ್ನ ಯಾವ ರೀತಿ ಅಪ್ಪಿಕೊಂಡರು ಎಂಬುದಕ್ಕೆ ನಮಗಿಲ್ಲಿ ಅವರ ವಚನಗಳೆ ಸಾಕ್ಷಿಪ್ರಜ್ಞೆಯಾಗಿವೆ. ಬಸವಣ್ಣನವರು ತಮ್ಮನ್ನು ತಾವು ಕನಿಷ್ಠ ಮಟ್ಟದಲ್ಲಿ ಇಳಿದುಕೊಂಡು ಬಹು ಎತ್ತರಕ್ಕೆ ಬೆಳೆದ ಮಹಾನ್ ಚೇತನರಾಗಿದ್ದರು, ಅದಕ್ಕೆ ಅವರ ವಚನವೇ ಸಾಕ್ಷಿ, ಅವರ ಸಂಪೂರ್ಣ ವ್ಯಕ್ತಿತ್ವವನ್ನು ನಿರೂಪಿಸುತ್ತದೆ.
“ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ, ಎನಗಿದೇ ದಿಬ್ಯ.” ಎಂಬುದಾಗಿ ಹೇಳುತ್ತಾರೆ, ಅಂದರೆ ಅಂದಿನ ಎಲ್ಲ ಜನಾಂಗವನ್ನ ಯಾವ ರೀತಿ ಒಲಿಸಿಕೊಂಡು ಅವರನ್ನು ಉನ್ನತ ಮಟ್ಟಕ್ಕ ಕರೆದುಕೊಂಡು ಹೋಗಬೇಕು ಎಂಬ ಸತ್ಯದ ದಾರಿ ಅಪ್ಪ ಬಸವಣ್ಣನವರಿಗೆ ಚೆನ್ನಾಗಿ ತಿಳಿದಿತ್ತು, ಹಾಗಾಗಿ ಅವರು ಪ್ರತಿಯೊಬ್ಬರನ್ನು ಸಂಪರ್ಕಿಸಿ ನಿಮ್ಮ ಮನೆಯ ಮಗನೆಂದು ಹೇಳಿಕೊಳ್ಳುತ್ತ ಅವರನ್ನ ಆಲಿಂಗಿಸಿಕೊಂಡು, ಯಾರು ಮಾಡದಂತ ಸಮಾಜಿಕ ಕ್ರಾಂತಿಯನ್ನು 12ನೇ ಶತಮಾನದಲ್ಲಿ ಮಾಡಿ ತೋರಿಸಿದ್ದಾರೆ. ಅವರ ಹಲವು ವಚನಗಳಲ್ಲಿ ಕಾಣಬಹುದಾಗಿದೆ.”ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.”ಕೂಡಲಸಂಗಮದೇವನ ಸಾಕ್ಷಿಯಾಗಿ ಎನ್ನಬೇಕಾದರೆ ಬಸವಣ್ಣನವರಿಗೆ ಅದೆಂಥ ತ್ಯಾಗದ ಮನೋಭಾವ, ನಾನು ಸಣ್ಣವ,ನಾನು ಅತ್ಯಂತ ಕೆಳ ಸಮಾಜದವ, ನಾನು ದಾಸ – ದಾಸಿಯ ಮಗ ಎಂದು ಹೇಳುವ ಈ ವಚನ ಅವರ ಎತ್ತರದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಅಲ್ಲವೇ, ಇನ್ನು ನಾನು ಕೆಳಸ್ತರದ ಜನಾಂಗದಲ್ಲಿ ಹುಟ್ಟಿದ ಮಗ ಎಂದು ಗೌರವದಿಂದ ಹೇಳುವ ಅವರ ಮಾತು ನಿಜಕ್ಕೂ ದೊಡ್ಡದು,ಮಾನವೀಯ ನಡೆಗೆ ಇದು ಸಾಕ್ಷಿಯಾಗಿದೆ.ಇದೆ ತೆರನಾಗಿ ಎಲ್ಲ ಸಮುದಾಯದ ಜನರಲ್ಲಿ ಹೋಗಿ ಅವರೆಲ್ಲರನ್ನೂ ಒಂದಡೆ ಸೇರಿಸುವ ಅವರ ಪ್ರಯತ್ನ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಅವರನ್ನು ಗೌರವದಿಂದ ಕಾಣುವ ಮನೋಧರ್ಮ ಬಸವಣ್ಣನವರದಾಗಿತ್ತು. ನಡೆನುಡಿಗೆ, ಅವರ ಸಿದ್ಧಾಂತಕ್ಕೆ ಎಲ್ಲರು ಮಣಿದು ಒಂದಡೆ ಸೇರಬೇಕೆಂದರೆ ಬಸವಣ್ಣನವರು ಬಹಳಷ್ಟು ಕಷ್ಟಪಟ್ಟಿದ್ದಾರೆ. ಅವರೆಲ್ಲರಿಗೆ ತಿಳಿ ಹೇಳುತ್ತ, ಸಂತೈಸುತ್ತ, ಸಕರಾತ್ಮಕವಾದ ಭಾವನೆಗಳನ್ನ ಜನರಲ್ಲಿ ತುಂಬಿ ಸತ್ಯದ ಕಡೆಗೆ ಅಂದರೆ ಸನ್ಮಾರ್ಗದ ಕಡೆಗೆ ಸೆಳೆದುಕೊಳ್ಳುತ್ತಾರೆ. ಅದಕ್ಕೆ ಅವರ ಈ ವಚನವು ಸಹ ನಮಗೆ ಸಾಕ್ಷಿಕರಿಸುತ್ತೆ.
“ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ.”
ನಿಮ್ಮ ಶರಣರ ಮನೆಯ ಮಗನು ನಾನಾಗಿದ್ದೇನೆ, ಎಂದು ಈ ವಚನದಲ್ಲಿ ಇಡೀ ಮಾನವ ಸಮಾಜದ ಮಗುವಾಗಿದ್ದೇನೆ ಎಂಬರ್ಥದಲ್ಲಿ ಹೇಳುತ್ತ. ಅವರಲ್ಲಿ ಉತ್ಸಾಹ ಹುರುಪು ತುಂಬಿ, ನವ ಚೈತನ್ಯವನ್ನೆ ಬರುವಂತೆ ಮಾಡುತ್ತಾರೆ ಬಸವಣ್ಣನವರು. ಕೊನೆಯಲ್ಲಿ ಅವರು ತಮ್ಮ ವಚನದ ಮೂಲಕ ಶೋಷಿತ ಸಮುದಾಯಕ್ಕೆ ತಮ್ಮನ್ನು ಅವರೆಲ್ಲ ಅಪ್ಪಿಕೊಳ್ಳಲಿ ಎಂಬ ಮನೋಭಾವದಿಂದ ಅವರಿಗೆ ಈ ರೀತಿಯಾಗಿ ನೀವೆದನೆ ಮಾಡಿಕೊಳ್ಳುತ್ತಾರೆ.
“ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.”
ಈ ರೀತಿಯಾಗಿ ಅಪ್ಪ ಬಸವಣ್ಣನವರು ವಚನ ಚಳುವಳಿಯನ್ನು ಆರಂಭಿಸಿ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಅಂದು ಅಪ್ಪ ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಲು ಅವರ ಪಟ್ಟ ಪರಿಶ್ರಮ ಬಹಳ ದೊಡ್ಡದು.ಅದು ಇಂದಿಗೂ ಯಾರು ಪಟ್ಟಿಲ್ಲಾ ಎನ್ನುವುದು ನಿಮ್ಮ ಗಮನಕ್ಕೆ ಇರಲಿ.
ಇನ್ನು ಒಂದು ಸಂಘಟನೆ, ಒಂದು ಚಳುವಳಿಯನ್ನ ಮಾಡಬೇಕಾದರೆ ಸಣ್ಣ ಕೆಲಸವಲ್ಲವದು, ಅದಕ್ಕೆ ಬೇಕಾದ ತಯಾರಿ, ಸಿದ್ಧಿಗಳನ್ನು ನಾವು ಮಾಡಿಕೊಂಡಿರಬೇಕಾಗುತ್ತದೆ ಎಂಬುದಕ್ಕೆ ಬಸವಣ್ಣನವರೆ ನಮಗೆ ಮಾದರಿ.
ಆದರೆ ಬಸವಣ್ಣನವರನ್ನು ವಿಶ್ವವೇ ಒಪ್ಪಿಕೊಂಡರೂ ದೇಶದಲ್ಲಿರುವ ಕೆಲ ಮೂಲಭೂತವಾದಿಗಳು, ಸಂಪ್ರದಾಯವಾದಿಗಳು ಇನ್ನು ಒಪ್ಪಿಕೊಳ್ಳದಿರುವುದು ದುರಂತ. ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವಿಕರಿಸುವ ಇಂದಿನ ಕುತಂತ್ರಿಗಳ ಆಟ ಬಸವಣ್ಣನವರ ತತ್ವಗಳ ತಳಹದಿ ಮೇಲೆ ನಡೆಯುವುದಿಲ್ಲ. ಅದಕ್ಕಾಗಿ ಇವರು ಬಸವಣ್ಣನವರ ಆಶಯಗಳ ವಿರುದ್ದವಾಗಿ ಸಾಗುತ್ತಿರುವುದು ಕಾಣುತ್ತೇವೆ. ಇನ್ನು ಅನೇಕರು ಬಸವತತ್ವ ವಿರುದ್ಧ ನಿರಂತರವಾಗಿ ಕೆಲಸ ಮಾಡುತ್ತಿರುವುದು ನೋಡುತ್ತೇವೆ. ಇದು ಹೇಡಿತನದ ಕೆಲಸವಲ್ಲದೇ ಮತ್ತೇನೂ ಅಲ್ಲವೇ ಅಲ್ಲ. ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವಿಕರಿಸುವ ಅಯೋಗ್ಯರಿಗೆ ಸತ್ಯ ಮುನ್ನೆಲೆಗೆ ಬರುವುದು ಅವರಿಗೆ ಇಷ್ಟ ಇರುವುದಿಲ್ಲ.ಅದಕ್ಕಾಗಿ ಬಸವಾದಿ ಶರಣರ ವಿರುದ್ಧ ನಿರಂತರವಾಗಿ ಷಡ್ಯಂತ್ರಗಳು ಮಾಡುತ್ತಲೇ ಇರುತ್ತಾರೆ.
ಇಂತಹ ಕುತಂತ್ರಿಗಳ ಮಾತುಗಳಿಗೆ ಹೆಚ್ಚು ಆದ್ಯತೆ ನೀಡದೇ, ನಾವೆಲ್ಲರೂ ಸತ್ಯ ಧರ್ಮದ ಕಡೆಗೆ ಸಾಗಬೇಕು.ಅಂದಾಗಲೇ ಮನುಷ್ಯರಾಗಿ ಹುಟ್ಟಿದ್ದಕ್ಕೂ ಸಾರ್ಥಕ ಆಗಲಿದೆ.
ಅಂದಹಾಗೇ ಮೇಲು ಕೀಳು ಎಂಬ ಭಾವನೆ ತೊಡೆದು ಹಾಕಿ, ಸರ್ವರಿಗೂ ಸಮಪಾಲು, ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಇವು ಬಸವತತ್ವದ ಅನುಷ್ಠಾನದಿಂದ ಮಾತ್ರ ಸಾಧ್ಯವಾಗುತ್ತದೆ. ಇದನ್ನೇ ಶರಣರು ಹನ್ನೆರಡನೇ ಶತಮಾನದಲ್ಲಿ ಬದುಕಿನ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರಗಳನ್ನು ಸೂಚಿಸಿದ್ದಾರೆ.
ಅದಕ್ಕಾಗಿಯೇ ಮತ್ತೆ ಶರಣರ ವೈಚಾರಿಕ ವಿಚಾರಗಳನ್ನು ಜಾರಿಗೆ ತರಬೇಕು. ಅವರ ಮಾರ್ಗದರ್ಶನದಲ್ಲಿ ನಡೆದು, ಸಮಾಜದಲ್ಲಿ ಬೇರೂರಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸುಂದರ, ಆದರ್ಶ, ಸಂಪತ್ತ ಭರಿತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ಆಶಯ ಮಾತು:ಯಾವುದೇ ಒಂದು ಜನಾಂಗದ ಸೊತ್ತಾಗಿರದೆ, ಸಕಲ ಜೀವರಾಶಿಗಳ ಜೀವಾಳವಾಗಿದ್ದ ಅಣ್ಣ ಬಸವಣ್ಣನವರು ವಿಶ್ವದ ಮೊದಲ ಪ್ರಜಾಪ್ರಭುತ್ವದ ಪಿತಾಮಹ , ಮೌಲ್ಯಾಧಾರಿತ ವಿಚಾರವಾದಿ ಪ್ರತಿಪಾದಕ, ಜಾಗತಿಕ ಸಮುದಾಯದಕ್ಕೆ ಸೌಹಾರ್ದತೆ, ಸಮಾನತೆ ಸಾರಿದ ಭಾವೈಕ್ಯತೆಯ ಮಾಹಾಸಂತ. ಶೋಷಿತ ವರ್ಗದವರನ್ನು, ನಿರ್ದೋಷಿಗಳನ್ನು ಸಂರಕ್ಷಣೆ ಮಾಡಿದ ಸಮತಾವಾದಿ. ವಚನಗಳು ಕನ್ನಡದಲ್ಲಿ ರಚನೆ ಮಾಡಿ, ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಹಿರಿಮೆ ಇವರದು. ಅದಕ್ಕಾಗಿಯೇ ವಿಶ್ವಸಮುದಾಯವು ಇವರನ್ನು ವಿಶ್ವದ ಪ್ರಜಾಪ್ರಭುತ್ವದ ಪಿತಾಮಹ ಎಂದು ಹೆಮ್ಮೆಯಿಂದ ಕರೆಯುತ್ತಾರೆ. ಕೊನೆಯ ಮಾತು : ಆತ್ಮೀಯ ಶರಣ ಬಂಧುಗಳೇ, ಒಂದು ದಿನ ಮಾತ್ರ ಬಸವಣ್ಣನವರ ಜಯಂತಿ ಆಚರಿಸಿದರೆ ಸಾಲದು.ಇದರಿಂದ ಯಾವುದೇ ಪ್ರಯೋಜನವಂತೂ ಖಂಡಿತವಾಗಿಯೂ ಆಗಲಾರದು. ಬಸವಣ್ಣನವರ ತತ್ವಗಳು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಮಾರ್ಗದಲ್ಲಿ ಸಾಗಿ, ಇತರರಿಗೆ ಮಾದರಿಯಾಗಬೇಕು. ಅಂದಾಗಲೇ ಬಸವಣ್ಣನವರ ಜಯಂತಿ ಆಚರಣೆ ಮಾಡಿದ್ದು ಸಾರ್ಥಕ ಆಗಲಿದೆ.
ಲೇಖಕರು – ಸಂಗಮೇಶ ಎನ್. ಜವಾದಿ.