ರಾಜ್ಯಮಟ್ಟದ ೧೧ ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಅದ್ದೂರಿ..
ಭಾಲ್ಕಿ, ಬೀದರ್ ಜಿಲ್ಲೆ, ಮೇ ೨೫; ಇಲ್ಲಿನ ಚನ್ನಬಸವಾಶ್ರಮದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ೧೧ ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು, `ಚುಟುಕು ಭೂಷಣ’ ಪ್ರಶಸ್ತಿ ಪುರಸ್ಕೃತರಾದ ಶ್ರೀ ತರಳಬಾಳು ಜಗದ್ಗುರು ಶಾಖಾ ಶ್ರೀಮಠ ಸಾಣೇಹಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಲ ಯಾರಿಗೂ ಕಾಯುವುದಿಲ್ಲ. ಎಲ್ಲರೂ ಕಾಲನ ಅಧೀನರು. ಹೀಗಾಗಿ ಯಾವುದೇ ಕಾರ್ಯಕ್ರಮಗಳೂ ಕಾಲಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನಿಜ ಸಾಹಿತಿಗಳಿಗೆ ಆಸೆ-ಆಕಾಂಕ್ಷೆಗಳು ಬಹಳ ಕಡಿಮೆ. ಅವರು ಇದ್ದುದರಲ್ಲಿಯೇ ತೃಪ್ತಿ ಪಡುವಂಥವರು. ಹಾಗಾಗಿ ಅವರು ರಚಿಸುವ ಸಾಹಿತ್ಯದಲ್ಲಿಯೂ ಯಾವುದೇ ಆಡಂಭರವಿಲ್ಲದೆ ಸರಳತೆಯಿಂದ, ಸತ್ವಪೂರಿತವಾಗಿ ಇರಲು ಸಾಧ್ಯವಾಗುತ್ತದೆ. ಚುಟುಕು ಸಾಹಿತ್ಯ ಜನಪದ ಕವಿಗಳಿಂದ, ವಚನಕಾರರಿಂದ, ಸರ್ವಜ್ಞ ಮತ್ತಿತರ ಕವಿಗಳಿಂದ ಬೆಳೆದು ಬಂದಿದೆ. ಅವರು ಅಂಥ ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದರು. ಸರಳವಾಗಿ ಅರ್ಥಗರ್ಭಿತವಾಗಿ ಕಡಿಮೆ ಶಬ್ದಗಳಲ್ಲಿ ಹೇಳುವುದೇ ಚುಟುಕು ಸಾಹಿತ್ಯ. ಇವುಗಳನ್ನು ರಚಿಸುವುದಕ್ಕೂ ಬೇರೆ ಸಾಹಿತ್ಯ ಪ್ರಕಾರಗಳಿಗೆ ಬೇಕಾದಂತೆ ಪರಿಣಿತಿ ಬೇಕು. ಶರಣರ ಎಲ್ಲ ವಚನಗಳಲ್ಲಿ ಸತ್ಯ, ಶಕ್ತಿ, ತತ್ವಗಳು ಅಡಕವಾಗಿವೆ. ಆದರೆ ಇಂದಿನ ಆಧುನಿಕ ಚುಟುಕು ಸಾಹಿತ್ಯದಲ್ಲಿ ಅದೇ ರೀತಿಯ ಸತ್ವವನ್ನು ಕಾಣಲು ಸಾಧ್ಯವಿಲ್ಲ. ಆಧುನಿಕ ಚುಟುಕು ಸಾಹಿತ್ಯದಲ್ಲೂ ಇಂಥ ಶಕ್ತಿ ಅಡಕವಾದರೆ ವಚನಗಳಿಗೆ ಸಿಕ್ಕ ಮಹತ್ವ ಚುಟುಕು ಸಾಹಿತ್ಯಕ್ಕೂ ದೊರೆಯಲು ಸಾಧ್ಯ ಎಂದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಮತ್ತು `ಚುಟುಕು ಭೂಷಣ’ ಪ್ರಶಸ್ತಿ ಪುರಸ್ಕೃತರಾದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ `ಬಯಸಿ ಬಂದುದು ಅಂಗಭೋಗ, ಬಯಸದೇ ಬಂದುದು ಲಿಂಗಭೋಗ’ ಎನ್ನುವಂತೆ ನಾವು ಬಯಸದೇ ಬಂದುದು `ಚುಟುಕು ಭೂಷಣ’ ಪ್ರಶಸ್ತಿ. ಪಂಡಿತಾರಾಧ್ಯ ಶ್ರೀಗಳನ್ನು ೧೧ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಸಮಯ ಪಾಲಿಸುವ ಏಕೈಕ ಮಠ ತರಳಬಾಳು ಮಠ, ಏಕೈಕ ಸ್ವಾಮಿಗಳು ಪಂಡಿತಾರಾದ್ಯ ಶ್ರೀಗಳು. ಚುಟುಕು ಸಾಹಿತ್ಯದ ಜನಕರು ೧೨ ನೆಯ ಶತಮಾನದ ಬಸವಾದಿ ಶಿವಶರಣರು. ಈಗ ಆಧುನಿಕವಾಗಿಯೂ ಚುಟುಕು ಸಾಹಿತ್ಯ ಬೆಳೆಯುತ್ತಿದೆ. ವಚನಗಳಂತೆ ಅರ್ಥಗರ್ಭಿತವಾದ ಚುಟುಕುಗಳಿಂದ ವ್ಯಕ್ತಿತ್ವ ಬೆಳೆಯಲು ಪ್ರೇರಣೆ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಚುಟುಕು ಸಾಹಿತ್ಯಕ್ಕೆ ಇನ್ನಷ್ಟು ವ್ಯಾಪಕ ಪ್ರಚಾರ, ಪ್ರಸಾರದ ಅವಶ್ಯಕತೆ ಇದೆ. ಇದನ್ನು ಚುಟುಕು ಸಾಹಿತ್ಯ ಪರಿಷತ್ತು ಮತ್ತಷ್ಟು ಶ್ರಮವಹಿಸಿ ನಿರ್ವಹಿಸಬೇಕಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಬೆಳಗುವುದರ ಮೂಲಕ ನೆರವೇರಿಸಿದ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ ಎಸ್ ಬಿರಾದಾರ ಮಾತನಾಡಿ ಶಿಕ್ಷಣ ನೀಡುವಲ್ಲಿ ಭಾಲ್ಕಿ ಹಿರೇಮಠದ ಕಾರ್ಯ ಶ್ಲಾಘನೀಯವಾದುದು. ಅಂತೆಯೇ ವಚನ, ಕನ್ನಡ ಸಾಹಿತ್ಯ ಪ್ರಚಾರ, ಪ್ರಸಾರಕ್ಕೂ ಅವರಿತವಾಗಿ ಶ್ರಮಿಸುತ್ತಿದೆ. ಈ ಶರಣರ ನಾಡಿಗೆ ಸೇವೆ ಸಲ್ಲಿಸುವ ಅವಕಾಶ ನನ್ನದಾಗಿರುವುದು ನನ್ನ ಸೌಭಾಗ್ಯವೇ ಸರಿ ಎಂದರು. ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರಿಗೆ `ಚುಟುಕು ಚೇತನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಣೇಹಳ್ಳಿಯ ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಸರ್ವಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪರಿಚಯವನ್ನು ಚುಟುಕು ರೂಪದಲ್ಲಿ ಮಾಡಿಕೊಟ್ಟದ್ದು ವಿಶೇಷವಾಗಿತ್ತು. ವೇದಿಕೆಯ ಮೇಲೆ ಶಂಭುಲಿAಗ ವಿ ಕಾಮಣ್ಣಾ, ಡಾ ಜಗನ್ನಾತ ಹೆಬ್ಬಾಳೆ, ರಾಜಕುಮಾರ್ ಪಾಟೀಲ, ಬೀದರ ವಿಶ್ವವಿದ್ಯಾಲಯದ ಕುಲಸಚಿವ ನಾಯಕ್, ಚನ್ನಬಸಪ್ಪ ಧಾರವಾಡ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು. ವಿಚಾರ ಗೋಷ್ಠಿಯಲ್ಲಿ `ಭಾವ-ಭಾಷೆ, ಬಾಂಧವ್ಯ-ಶರಣ ಸಾಹಿತ್ಯ’ ಕುರಿತಂತೆ ಗಣಪತಿ ಭಟ್ ವರ್ಗಾಸರ್, `ಯುವ ಜನತೆಯಲ್ಲಿ ಸಾಹಿತ್ಯ ಪ್ರೇಮ’ ಕುರಿತಂತೆ ಡಾ. ರವೀಂದ್ರಶೆಟ್ಟಿ, `ಶರಣ ಸಾಹಿತ್ಯ-ದಾಸ ಸಾಹಿತ್ಯ ಬಹು ಮಾಧ್ಯಮ’ ಕುರಿತಂತೆ ಎನ್ ವಿ ರಮೇಶ ವಿಷಯ ಮಾತನಾಡಿದರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಭೃಂಗಿಮಠ ವಹಿಸಿದ್ದರು. ಚುಟುಕು ಕವಿಗೋಷ್ಠಿಯಲ್ಲಿ ಮಾನಶೆಟ್ಟಿ ಬೆಳಕೇರಿ, ಓಂಕಾರ ಉಪ್ಪೆ, ಮಾಣಿಕ ನೇಳಗಿ, ಡಾ. ಕಾಶಿನಾಥ ಚಲುವಾ, ಗಣಪತಿ ಭೂರೆ, ವೀರಣ್ಣ ಕುಂಬಾರ, ಶೇಖರಗೌಡ ಪಾಟೀಲ, ಮೃತ್ಯುಂಜಯ ಮಟ್ಟಿ, ಜಿ ಡಿ ಘೋರ್ಪಡೆ, ಮಾಯಣ್ಣ ಕಿರಂಗೂರು, ಹನುಮಂತರಾವ ಘಂಟೇಕರ್, ಶ್ರೀಕಾಂತ, ಜಗದೀಶ ಸಾಲಳ್ಳಿ, ವಿರೂಪಾಕ್ಷಪ್ಪ ಲಮಾಣಿ, ಮಂಜುಲಾ ನಾಮದೇವ, ವಂದನಾ ಕರಾಳೆ, ಡಾ. ಪಲ್ಲವಿ ಪಾಟೀಲ, ಎಸ್ ಎಸ್ ಕಲ್ಯಾಣರಾವ, ಅಶೋಕ್ ರಾಜೋಳೆ ಕವಿತೆಗಳನ್ನು ವಾಚಿಸಿದರು. ಕೃಷ್ಣಾ ಪದಕಿ ಆಶಯನುಡಿಗಳನ್ನಾಡಿದರೆ, ಅಧ್ಯಕ್ಷತೆಯನ್ನು ಚಂದ್ರಕಾAತ ಬಿರಾದಾರ ವಹಿಸಿದ್ದರು. ಸರ್ವಾಧ್ಯಕ್ಷರೊಂದಿಗೆ ಸಂವಾದದಲ್ಲಿ ಗಣಪತಿ ಭೂರೆ, ಎಸ್ ಎಸ್ ಮಲ್ಲಶೆಟ್ಟಿ, ಪ್ರೊ ವೀರನಗೌಡ ಮರಿಗೌಡ, ತಿಪ್ಪಣ್ಣ ಶರ್ಮಾ, ನಾಗಭೂಷಣ ಮಾಮಡಿ, ಜಗದೀಶ ಸಾಲಳ್ಳಿ ಪಾಲ್ಗೊಂಡಿದ್ದರು. ಸಂವಾದದಲ್ಲಿ ನೀವು ಶರಣ ತತ್ವ ಪ್ರಚಾರ ಪ್ರಸಾರ ಮಾಡಲು ರಂಗಭೂಮಿಯನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ? ಇಂದು ಧಾರ್ಮಿಕ ನೇತಾರರು ತಮ್ಮ ಅನುಯಾಯಿಗಳಿಗೆ ಸರಿದಾರಿಯನ್ನು ತೋರಿಸುತ್ತಿದ್ದಾರೆ ಎನ್ನುವ ನಂಬಿಕೆ ನಿಮಗಿದೆಯೇ? ವೇದಿಕೆಯ ಮೇಲೆ ಮಹಿಳೆಯರ ಸಂಖ್ಯೆ ಬೆರಳಣಿಕೆಯಷ್ಟಿದೆ ಯಾಕೆ? ಧರ್ಮ ಮತ್ತು ರಾಜಕಾರಣ ಒಂದಕ್ಕೊAದು ಪೂರಕವೇ? ನಿಮ್ಮ ಸಾಹಿತ್ಯದಲ್ಲಿ ಮಾನವೀಯ ಅಂತಃಕರಣವೇ ತುಂಬಿರಿವುದರ ಕಾರಣ ಏನು? ಸಮಯದ ಬಗ್ಗೆ ನಿಮಿಗಿರುವ ನಿಷ್ಠೆ ಬೇರೆ ಸ್ವಾಮೀಜಿಗಳ ಬಳಿ ಯಾಕಿಲ್ಲ? ನಾಟಕ ಕ್ಷೇತ್ರದಲ್ಲಿ ನಿಮಗೆ ಆದ ಸಿಹಿ-ಕಹಿ ಅನುಭವಗಳೇನು? ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಾಹಿತ್ಯಕ್ಕೆ ಸಮಾಜವನ್ನು ಬದಲಾವಣೆ ಮಾಡುವ ಶಕ್ತಿಯಿದೆ. ಆದರೆ ಇಂದು ಸಾಹಿತ್ಯ ಸಾಹಿತಿಗಳ, ಓದುಗರ ಸ್ವಾರ್ಥಕ್ಕೆ ಬಳಕೆಯಾಗುತ್ತಿರುವುದು, ಧ್ವನಿಯೆತ್ತಿ ಮಾತನಾಡುವ ಶಕ್ತಿಯನ್ನೇ ಸರಕಾರಗಳು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ನಮ್ಮಲ್ಲಿ ಆತ್ಮಬಲ, ಮನೋಸ್ಥೆöರ್ಯ, ಶರಣ ವಚನಗಳ ಹಿನ್ನೆಲೆ ಬಂದರೆ ನಮ್ಮಲ್ಲಿ ಜಾಗೃತಿಯುಂಟಾಗುವುದರಲ್ಲಿ ಅನುಮಾನವಿಲ್ಲ. ಶರಣರು ಯಾರೂ ಸ್ವಾರ್ಥಿಗಳಾಗಿರಲಿಲ್ಲ. ಅವರು ಕಾಯಕವೇ ಕೈಲಾಸ ಎನ್ನುವ ತತ್ವವನ್ನು ನಂಬಿಕೊಂಡವರು. ದಾಸೋಹ ಪ್ರಜ್ಞೆ, ಇಷ್ಟಲಿಂಗ ನಿಷ್ಠೆಯನ್ನು ಮೈಗೂಡಿಸಿಕೊಂಡಿದ್ದರಿಂದ ಸಾಮಾನ್ಯರೂ ಅಸಾಮಾನ್ಯ ಶರಣರಾದರು. ಚುಟುಕು ಸಾಹಿತ್ಯಕ್ಕೆ ನೆಲೆಗಟ್ಟನ್ನು ಒದಗಿಸಿದ್ದು ಜಾನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ. ಜನಪದರು ಅಕ್ಷರಸ್ಥರಲ್ಲದಿದ್ದರೂ ವಿಚಾರವಂತರಾಗಿದ್ದರು, ವಿವೇಕಿಗಳಾಗಿದ್ದರು. ಹೀಗಾಗಿ ಅವರು ಸನ್ಮಾರ್ಗದಲ್ಲಿ ಸಮಾಜವನ್ನು ಕರೆದೊಯ್ಯುವ ಶಕ್ತಿಯನ್ನು ಹೊಂದಿದ್ದರು. ಅವರ ಅನುಭವವನ್ನು ಚಿಕ್ಕ ಚಿಕ್ಕ ಮಾತುಗಳಲ್ಲಿ, ವಚನಗಳಲ್ಲಿ ಕವಿತೆಗಳಲ್ಲಿ, ಹಾಡುಗಳಲ್ಲಿ ಹೇಳುತ್ತಿದ್ದರು. ಅವರ ಭಾವ, ಹೃದಯ ಶ್ರೀಮಂತಿಕೆ ಅತ್ಯಂತ ದೊಡ್ದದಾಗಿತ್ತು. ಇಂದು ನಾವು ಹಣದ ಶ್ರೀಮಂತಿಕೆಯ ಹಿಂದೆ ಓಡುತ್ತಿರುವುದರಿಂದ ನೈತಿಕ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಾಯಕ ಶ್ರದ್ಧೆಯಿಂದ ಹಣವನ್ನು ಸಂಪಾದಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ದುರದೃಷ್ಟಕರ ಸಂಗತಿಯೆಂದರೆ ಈ ದೇಶವನ್ನು ಆಳುತ್ತಿರುವವರು ವಿಚಾರವಂತರು, ಪ್ರಜ್ಞಾವಂತರಲ್ಲ; ಮೌಢ್ಯವನ್ನು ಬಿತ್ತುವ ಶೋಷಕರು. ಹೀಗಾಗದಂತೆ ಎಚ್ಚರಿಕೆ ವಹಿಸಿಬೇಕಾದರೆ ಜನರಲ್ಲಿ ಜಾಗೃತಿಯಾಗಬೇಕು. ಇಂಥ ಜಾಗೃತಿಯನ್ನು ಚುಟುಕು ಸಾಹಿತ್ಯ ಕ್ಷಿಪ್ರವಾಗಿ ಮೂಡಿಸುವುದು. ವಚನಸಾಹಿತ್ಯ ನಮ್ಮ ಚುಟುಕು ಸಾಹಿತ್ಯದ ಬರವಣಿಗೆಗೆ ಪ್ರೇರಣೆಯಾಗಿದೆ. ಕಳೆದ ಒಂದೂವರೆ ವರ್ಷದಿಂದ ನಾವು ನಿತ್ಯವೂ ಒಲಿದಂತೆ ಹಾಡುವೆ ಎನ್ನುವ ಶೀರ್ಷಿಕೆಯಡಿ ನಮ್ಮ ಆಲೋಚನೆಗಳನ್ನು ವಾಟ್ಸಾಪ್ ಮೂಲಕ ನಿತ್ಯವೂ ಹಂಚಿಕೊಳ್ಳುತ್ತಿದ್ದೆವು. ಅವುಗಳಲ್ಲಿ ನೂರು ಆಲೋಚನೆಗಳನ್ನು ಒಳಗೊಂಡ ಕೃತಿ ಆಧುನಿಕ ತಂತ್ರಜ್ಞಾನದ ಕಾರಣದಿಂದ ಕೇವಲ ಎರಡು ದಿನಗಳಲ್ಲಿ ಸಿದ್ದಗೊಂಡು ಇಂದು ಲೋಕಾರ್ಪಣೆಗೊಳ್ಳಲು ಸಾಧ್ಯವಾಗಿದೆ. ಸ್ವಾಮಿಗಳಿಗೆ ನಿಜವಾದ ಆಸ್ತಿ ಭಕ್ತರೇ ಹೊರತು ಮಠಕ್ಕಿರುವ ಚಿರ-ಚರ ಆಸ್ತಿ, ಶಾಲಾ ಕಾಲೇಜುಗಳು, ಬ್ಯಾಂಕ್ ಬ್ಯಾಲೆನ್ಸ್ ಅಲ್ಲ. ನಮ್ಮ ಮಠದ ಹಿರಿಯ ಶ್ರೀಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಕೋಟಿ ಕೋಟಿ ಶಿಷ್ಯರೇ ಆಸ್ತಿಯೆಂದು ಭಾವಿಸಿದ್ದರ ಫಲವಾಗಿ ಇಂದು ತರಳಬಾಳು ಮಠ ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಠಗಳಿಗೆ ಬಾಹ್ಯ ಆಸ್ತಿ ಗೌಣವಾಗಬೇಕು. ಶಿಷ್ಯರು, ಭಕ್ತರು, ಅನುಯಾಯಿಗಳೇ ನಿಜವಾದ ಆಸ್ತಿಯೆಂದು ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಇಂದಿನ ಸ್ವಾಮಿಗಳು, ಮಠ-ಪೀಠಗಳು, ಭಕ್ತರು ಆಲೋಚಿಸಬೇಕು ಎಂದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ೧೨೧ನೆಯ `ಒಲಿದಂತೆ ಹಾಡುವೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ಪೂಜ್ಯರು ಚುಟುಕು ಸಾಹಿತ್ಯದಲ್ಲಿ ಪರಿಣಿತಿ ಹೊಂದಿರುವುದು ಈ ಕೃತಿಯಿಂದ ತಿಳಿದು ಬರುತ್ತದೆ. ಈ ಸಮ್ಮೇಳನದಲ್ಲಿ ಈ ಕೃತಿಯ ಲೋಕಾರ್ಪಣೆಗೊಂಡಿರುವುದು ಸಮ್ಮೇಳನಕ್ಕೇ ಕಳಶವಿಟ್ಟಂತಾಗಿದೆ. `ಬದ್ಧತೆ’ ಕುರಿತ ಅವರು ನಾಲ್ಕಾರು ಸಾಲುಗಳ ಚುಟುಕು ಸಾಹಿತ್ಯ ಓದುಗರ ಬದ್ಧತೆಯನ್ನೇ ಒರೆಗಲ್ಲಿಗೆ ಹಚ್ಚುತ್ತದೆ. ಪೂಜ್ಯರು ತಮಗೆ ಅನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಸ್ವಭಾವದವರು. ಶಿಸ್ತಿಗೆ, ಸಮಯಕ್ಕೆ, ನಿಷ್ಠುರ ಮಾತುಗಳಿಗೆ ಹೆಸರಾದವರು. ಪೂಜ್ಯರ ಈ ಗುಣಗಳನ್ನು ನಮ್ಮ ಮಠದ ಶ್ರೀ ಗುರುಬಸವ ಪಟ್ಟದ್ದೇವರು ಮೈಗೂಡಿಸಿಕೊಂಡರೆ ನಮ್ಮ ಶ್ರೀಮಠ ಇನ್ನಷ್ಟು ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗುವುದು. ಅವರು ಪಂಡಿತಾರಾಧ್ಯ ಶ್ರೀಗಳ ರೀತಿನೀತಿಗಳನ್ನು ಅನುಸರಿಸಲಿ. ಇದುವರೆಗೆ ನಡೆದ ಹತ್ತು ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಅತ್ಯಂತ ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ಆರಂಭವಾಗಿ ಮುಕ್ತಾಯಗೊಂಡು ಸಮ್ಮೇಳನ ಇದಾಗಿದೆ. ಇಂಥ ಸಾಹಿತ್ಯ, ಸಂಸ್ಕೃತಿ, ಸಂಗೀತ, ನಾಟಕ, ಕಲೆಯ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತವೆಯಲ್ಲದೆ, ಉತ್ತೇಜನ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಇಂಥ ಕಾರ್ಯಕ್ರಮಗಳನ್ನು ನಮ್ಮ ಮಠ ಮುಂದುವರೆಸಿಕೊಂಡು ಹೋಗುವುದು ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಗುರುಬಸವ ಪಟ್ಟದ್ದೇವರು ಚುಟುಕು ಸಾಹಿತ್ಯಕ್ಕೆ ಮನಸ್ಸನ್ನು ಅರಳಿಸುವ, ಜಾಗೃತಗೊಳಿಸುವ, ಮನೋರಂಜನೆ ನೀಡುವ ಶಕ್ತಿ ಇದೆ. ಪಂಡಿತಾರಾಧ್ಯ ಶ್ರೀಗಳು ಸಮಯಪಾಲನೆಗೆ, ಶಿಸ್ತಿಗೆ ಕೊಡುವ ಮಹತ್ವದ ಕಾರಣಕ್ಕಾಗಿ ಈ ಸಮಾರಂಭ ಬೆಳಗ್ಗೆಯಿಂದ ಸಮಯಕ್ಕೆ ಸರಿಯಾಗಿ ಆರಂಭವಾಗಿ ಸಮಯಕ್ಕೆ ಸರಿಯಾಗಿ ಅಂತ್ಯಗೊಳ್ಳುತ್ತಿದೆ. ಈ ಸಮಾರಂಭದ ಯಶಸ್ಸು ಪೂಜ್ಯ ಪಂಡಿತಾರಾಧ್ಯ ಶ್ರೀಗಳವರಿಗೆ ಸಲ್ಲಬೇಕು. ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಕೃತಜ್ಞತೆಗಳು. ಪಂಡಿತಾರಾಧ್ಯ ಶ್ರೀಗಳ ಒಲಿದಂತೆ ಹಾಡುವೆ ವಾಟ್ಸಾಪ್ ಸಂದೇಶಗಳನ್ನು ನಿತ್ಯವೂ ನಾವು ತಪ್ಪದೆ ಓದುತ್ತಿದ್ದೇವೆ. ಅದು ನಮಗೆ ನಿತ್ಯದ ಪ್ರೇರಣೆಯಾಗಿದೆ. ಅಂಥ ನುಡಿಗಳುಳ್ಳ ಕೃತಿ `ಒಲಿದಂತೆ ಹಾಡುವೆ’ ಇಂದು ಭಲ್ಕಿಯಲ್ಲಿ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿರುವುದು ವೈಯುಕ್ತಿಕವಾಗಿ ನಮಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು:
೧. ಬಸವಣ್ಣನವರು ಸೇರಿದಂತೆ ಅನುಭವ ಮಂಟಪದ ಸಾವಿರಾರು ಶರಣರು ಶರಣೆಯರು ನಡೆದಾಡಿದ, ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದಲ್ಲಿ ರಾಜ್ಯ ಸರ್ಕಾರ ಶರಣ ಸಾಹಿತ್ಯ ವಿಶ್ವವಿದ್ಯಾಲಯ ತೆರೆದು ವಚನ ಸಾಹಿತ್ಯಕ್ಕೆ ಮೆರಗು ತರಬೇಕು.
೨. ಕಚುಸಾಪ ಕೇಂದ್ರ ಸಮಿತಿಗೆ ರಾಜ್ಯ ಸರ್ಕಾರ ಅಗತ್ಯದ ಅನುದಾನ ಬಿಡುಗಡೆ ಮಾಡಬೇಕು.
೩. ಕೈಗಾರಿಕೆ ಕ್ಷೇತ್ರದಲ್ಲಿ ಬಹಳ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜ್ಯ ಇಲ್ಲವೇ ಕೇಂದ್ರ ಸರ್ಕಾರ ಭಾರಿ ಉದ್ಯಮವೊಂದನ್ನು ತೆರೆದು ಈ ಭಾಗದಲ್ಲಿ ಕೈಗಾರಿಕಾ ಕ್ರಾಂತಿ ಜೊತೆ ನಿರುದ್ಯೋಗಿ ಜನಾಂಗಕ್ಕೆ ಅವಕಾಶ ಕಲ್ಪಿಸಬೇಕು. ವೇದಿಕೆಯ ಮೇಲೆ ಸಾಹಿತಿ, ಪತ್ರಕರ್ತರಾದ ಸಂಗಮೇಶ್ ಎನ್ ಜವಾದಿ, ಕಾಶಿನಾಥ ಭೂರೆ, ಡಾ. ರಾಜಶೇಖರ ಮಠಪತಿ, ವಿಶ್ವನಾಥ ಬಿರಾದಾರ, ನಾಗಶೆಟ್ಟಿ ಲಂಜವಾಡೆ, ಗುಂಡಪ್ಪ ಸಂಗಮಕರ, ಶಿವಕುಮಾರ ಘಂಟೆ, ವಸಂತ ಹುಣಸನಾಳೆ, ಸೂರ್ಯಕಾಂತ ಸುಂಟೆ, ರಾಜೇಶ ಮುಗಟೆ, ಪಾರ್ವತಿ ಧೂಮ್ಮನಸೂರೆ, ಪ್ರೆಮಲತಾ ಮೊದಲಾದವರು ಇದ್ದರು. ಕಾರ್ಯಕ್ರಮದ ನಿಮಿತ್ತ ಮುಂಜಾನೆ ಷಟ್‌ಸ್ಥಲ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಾಜಾರೋಹಣ ನೆರವೇರಿಸಲಾಯಿತು. ನಂತರ ಶ್ರೀ ಬಸವೇಶ್ವರ ವೃತ್ತದಿಂದ ಚನ್ನಬಸವಾಶ್ರಮದವರೆಗೆ ಪಾದಯಾತ್ರೆಯನ್ನು ಆಯೋಜಿಸಲಾಯಿತು. ನಂತರ ಕಲ್ಯಾಣ ಮಂಟಪದಲ್ಲಿ ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ, ಕವಿಗೋಷ್ಠಿ, ಸಂವಾದ, ಸಮಾರೋಪ ಸಮಾರಂಭಗಳ ನೆರವೇರಿದವು.
ಬೀದರ್ ಜಿಲ್ಲಾ ಕಚುಸಾಪದ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಗೌರವ ಉಪಸ್ಥಿತರಿದ್ದರು. ಕಾಶಿನಾಥ ಭೂರೆ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಆಶಯನುಡಿಗಳನ್ನು ಆಡಿದರು. ಗುಂಡಪ್ಪ ಸಂಗಮಕರ್ ಶರಣು ಸಮರ್ಪಣೆ ಸಲ್ಲಿಸಿದರು. ಪ್ರಸ್ತಾವಿಕವಾಗಿ ಜಿಲ್ಲಾಧ್ಯಕ್ಷ ಸಂಗಮೇಶ್ ಎನ್ ಜವಾದಿ ಮಾತನಾಡಿದರು. ದೀಪಕ್ ಥಮಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕಲಾವಿದರು ಮತ್ತು ಮಕ್ಕಳು ವಚನಗೀತೆಗಳನ್ನು ಹಾಡಿದರು. ವಚನ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ನಾಡಗೀತೆ ಮತ್ತು ರೈತಗೀತೆಯನ್ನು ಹಾಡಿ ಗೌರವಿಸಲಾಯಿತು. ಸರ್ವರಿಗೂ ಕೃತಜ್ಞತೆಗಳು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ 11ನೇ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಅಷ್ಟೇ ವೈಚಾರಿಕ ನೆಲಗಟ್ಟಿನ ಅಡಿಯಲ್ಲಿ ಮತ್ತು ಸಮಯದ ಮಿತಿಯೊಳಗೆ ಸಮ್ಮೇಳನ ಯಶಸ್ವಿಗೊಂಡಿದೆ. ಈ ಸಮ್ಮೇಳನ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಕಚುಸಾಪ ಪದಾಧಿಕಾರಿಗಳಿಗೂ, ಸಾಹಿತಿಗಳಿಗೂ, ವಿಶೇಷವಾಗಿ ತನು ಮನದಿಂದ ಸಹಕಾರ, ಮಾರ್ಗದರ್ಶನ ನೀಡಿ, ಸಂಪನ್ಮೂಲ ಒದಗಿಸಿ, ಹಗಲಿರುಳು ಶ್ರಮಿಸಿದ ಭಾಲ್ಕಿ ಹಿರಿಯ, ಕಿರಿಯ ಹಿರೇಮಠ್ ಸಂಸ್ಥಾನದ ಪೀಠಾಧಿಪತಿಗಳಿಗೂ ಅಭಿಮಾನದ ಅಭಿನಂದನೆಗಳು, ಕೃತಜ್ಞತೆಗಳು ಸಲ್ಲುತ್ತೇವೆ. ಸದಾ ಚೀರ ಋಣಿಯಾಗಿರುತ್ತೇವೆ.
ವಿಶೇಷ ವರದಿ- ಸಂಗಮೇಶ ಎನ್ ಜವಾದಿ