ಜನಪ್ರಿಯತೆಯ ಜನ ನಾಯಕ ಸಿದ್ಧರಾಮಯ್ಯನವರು.

Spread the love

ಜನಪ್ರಿಯತೆಯ ಜನ ನಾಯಕ ಸಿದ್ಧರಾಮಯ್ಯನವರು.

ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ, ಸಮಾಜವಾದಿ, ಹೋರಾಟಗಾರ, ಗಂಭೀರ ಸ್ವಭಾವದವರು. ಮಾತಿನಲ್ಲೇ ಚತುರತೆಯನ್ನು ತೋರುವ ಧೀರ ವ್ಯಕ್ತಿತ್ವ. ಸದಾ ಕ್ರಿಯಾಶೀಲ ಚಟುವಟಿಕೆಗಳ ಉತ್ಸಾಹಿ ನೇತಾರ, ಹೇಳಿದ್ದನ್ನು ಮಾಡುವ ಎದೆಗಾರಿಕೆಯ ಮನಸ್ಥಿತಿಯವರು. ಕನ್ನಡ ನಾಡು ನುಡಿ ನೆಲ ಜಲ ಭಾಷೆ ಗಡಿ ಸಮಸ್ಯೆಗಳು ಎದುರಿಗೆ ಬಂದಾಗ ಟೊಂಕ ಕಟ್ಟಿ ನಿಂತವರು, ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್, ಗಾಂಧಿಜಿ, ಕುವೆಂಪುರವರ ತತ್ವ ಪಾಲಕರು ಮೈಸೂರಿನ ಸಿದ್ದರಾಮನಹುಂಡಿಯ ಸಿದ್ದರಾಮಯ್ಯನವರು. ಮೂಲತಃ ಸಿದ್ದರಾಮಯ್ಯನವರು ಮೈಸೂರಿನ ವರುಣಾ ಕ್ಷೇತ್ರದ ಸಿದ್ಧರಾಮನಹುಂಡಿಯಲ್ಲಿ 1948 ರ ಆಗಸ್ಟ್ 12 ರಂದು  ತಂದೆ ಸಿದ್ಧರಾಮೇಗೌಡ ತಾಯಿ ಬೋರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಸಿದ್ಧರಾಮೇಗೌಡ ಮತ್ತು ಬೋರಮ್ಮ ದಂಪತಿಯ ಪುತ್ರ ಸಿದ್ದರಾಮಯ್ಯ ಕುರಿ ಮೇಯಿಸುತ್ತಾ ಬಾಲ್ಯವನ್ನು ಕಳೆದ  ಪುಟ್ಟ ಬಾಲಕನಾಗಿದ್ದ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದ್ದನ್ನು ಕಾಣುತ್ತೇವೆ. ಪ್ರಾರಂಭದಲ್ಲಿ ಶಾಲೆಗೆ ಹೋಗದಿದ್ದರು ಮರಳಿನ ಮೇಲೆ ಅಕ್ಷರ ಅಭ್ಯಾಸ ಮಾಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಚಿಕ್ಕಂದಿನಲ್ಲೇ ಜಾನಪದ ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದ್ದಾರೆ. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 1978 ರವರೆಗೆ ಸ್ವಂತ-ವಕೀಲಿ ವೃತ್ತಿ ಕಾಯಕವನ್ನು ಮಾಡಿಕೊಂಡು ಬಂದಿರುವುದು ನೋಡುತ್ತೇವೆ.ಇಂತಹ ಸಂದರ್ಭದಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಸಂಪರ್ಕಕ್ಕೆ ಸಿದ್ದರಾಮಯ್ಯನವರು ಬರುತ್ತಾರೆ. ಇವರ ಪರಿಚಯವಾದ ನಂತರ ಅನೇಕ ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸಿರುತ್ತಾರೆ. ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ.ಹೀಗೆ ಅನೇಕ ಹೋರಾಟಗಾರರ ಪ್ರಭಾವಕ್ಕೆ ಒಳಗಾಗಿ ಜನಪರ, ರೈತಪರ, ನಾಡಿನ ಅಭಿವೃದ್ಧಿ ಪರ ಹೋರಾಟಗಳಲ್ಲಿ ಭಾಗವಹಿಸುತ್ತಾರೆ.  1947ರಲ್ಲಿ ಜೆಪಿ ಚಳುವಳಿ, 1975ರಲ್ಲಿ ತುರ್ತುಪರಿಸ್ಥಿಯನ್ನು ವಿರೋಧಿಸಿ ಜೈಲು ಸೇರಿದ್ದು ಕಾಣುತ್ತೇವೆ.ತದನಂತರ ಸಿದ್ದರಾಮಯ್ಯರವರು ರಾಜಕೀಯ ಕಡೆ ಮುಖ ಮಾಡಿ, 1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ನಿಂತು ಸೋಲುತ್ತಾರೆ. 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲುತ್ತಾರೆ. ನಂತರ ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷದ ಸೇವೆಯನ್ನು ಮಾಡಿರುತ್ತಾರೆ.ಅನಂತರ ಅಂದಿನ ಸರಕಾರ ಇವರನ್ನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರು. ಜವಾಬ್ದಾರಿ ಹೊತ್ತುಕೊಂಡು ಪ್ರಾಮಾಣಿಕವಾಗಿ ಗಡಿ ಭಾಗಗಳ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ಅಲ್ಲಿನ ವಸ್ತುಸ್ಥಿತಿ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ, ತರುವಾಯ ಆ ಭಾಗಗಳಿಗೆ  ಹೆಚ್ಚಿನ ರೀತಿಯಲ್ಲಿ ಅನುದಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಸಾಗಿ ಬಂದು ಅಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. 1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೇ ಗೆಲುವು ಪಡೆದರು. ಈ ಸಮಯದಲ್ಲಿ ಪಶುಸಂಗೋಪನೆ ಸಚಿವರನ್ನಾಗಿ ಕಾರ್ಯಭಾರ ಮಾಡಿ ಸೈ ಎನಿಸಿಕೊಂಡಿದ್ದಾರೆ.  ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ದರಾಮಯ್ಯನವರು ಮುಂದೆ ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ಆಗ 1992 ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದ ನೇತೃತ್ವದ  ಜನತಾದಳದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಂತರ ನಡೆದ 1994ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾಗಿ ಆರ್ಥಿಕ ಸಂಪನ್ಮೂಲಗಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಆ ಇಲಾಖೆಯನ್ನು ಸದೃಢ ಮಾಡಿರುತ್ತಾರೆ.1999ರ ಚುನಾವಣೆಯ ಹೊತ್ತಿಗೆ ಜನತಾ ದಳ  ಇಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. ಆದರೆ 1999ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು. ಮತ್ತೆ 2004ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. ಆದರೆ 2004ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ರಾಜ್ಯಾದ್ಯಂತ ಸಂಚರಿಸಿ ಸಾವಿರಾರು ಅಭಿವೃದ್ಧಿ ಕಾರ್ಯಗಳು ಮಾಡಿರುತ್ತಾರೆ.ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬವಣೆಗಳನ್ನು ಪರಿಹರಿಸುವ ಕೆಲಸ ನಿರ್ವಹಿಸಿದ್ದಾರೆ. ಅತ್ಯಂತ ಜನಪ್ರಿಯತೆಯ ಉತ್ತುಂಗದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿದರು. ಇಂತಹ ಹೊತ್ತಲ್ಲಿ ಇವರ ಜನಪ್ರಿಯತೆ ಕಂಡು ಕೆಲವರಿಗೆ  ಸಹಿಸಿಕೊಳ್ಳಲು ಆಗದೇ ಇರುವ ಹಿನ್ನೆಲೆಯಲ್ಲಿ ಮತ್ತು ಅಂದಿನ ಜೆಡಿಎಸ್ ಪಕ್ಷದ ಸ್ವಾರ್ಥ ರಾಜಕೀಯ ನಡೆಗಳಿಂದ ಬೆಸತ್ತು, ಜೆಡಿಎಸ್ ಪಕ್ಷವನ್ನು ತೇಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಕರ್ನಾಟಕ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ದಿನವನ್ನು ಸಿದ್ಧರಾಮಯ್ಯ ನವರು ಯಾವತ್ತೂ ಮರೆಯಲಾಗದ ಐತಿಹಾಸಿಕ ದಿನವೆಂದೇ ಪರಿಗಣಿಸುತ್ತಾರೆ. ಪ್ರಯುಕ್ತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯನವರು.ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಅನೇಕ ಜನಪರ ಯೋಜನೆಗಳನ್ನು ನಾಡಿಗೆ ನೀಡಿದರು. ದಲಿತವರ್ಗಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ವ್ಯವಸ್ಥೆ ಕಲ್ಪಿಸಿದರು. ಸಾವಿರಾರು ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಈ ಸಂದರ್ಭದಲ್ಲಿ ಕರುನಾಡಿನ ಧಾರೆಯೆರೆದು ಧನ್ಯರಾಗಿದ್ದಾರೆ. ಹೀಗೆ ನಾಡಿನ ಸಂಪೂರ್ಣವಾಗಿ,ಸಮಗ್ರ ಅಭಿವೃದ್ಧಿ ವಿಕಾಸಕ್ಕಾಗಿ  ಸಿದ್ಧರಾಮಯ್ಯನವರು ತನು ಮನ, ನಿಷ್ಕಲ್ಮಶ ಮನಸ್ಸಿನಿಂದ ದುಡಿದಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ರಾಜ್ಯದ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿ, ಕರ್ನಾಟಕದ ಸಮಗ್ರ ಏಳಿಗೆಗಾಗಿ ಶ್ರಮಿಸಿದ್ದಾರೆ.

ಇನ್ನು 2018ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಅವುಗಳ ಪೈಕಿ ಚಾಮುಂಡೇಶ್ವರ ಕ್ಷೇತ್ರದಲ್ಲಿ ಸೋತರು. ಬಾದಾಮಿ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.  ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯನವರು 2019 ರಿಂದ  19 ಮೇ 2023 ರ ವರೆಗೆ ಸಮರ್ಥವಾಗಿ ವಿರೋಧ ಪಕ್ಷದ ನಾಯಕತ್ವವನ್ನು ನಿಭಾಯಿಸಿದ್ದಾರೆ. ಹೀಗೆ ರಾಜಕೀಯ ಜೀವನದ ಉದ್ದಕ್ಕೂ ಅಧಿಕಾರವನ್ನು ಜನರ ಹಾಗೂ ನಾಡಿನ ಸರ್ವಾಂಗೀಣ ಅಭಿವೃದ್ಧಿ ಉನ್ನತಿಗಾಗಿ ಮೀಸಲಿಟ್ಟು, ಹಗಲಿರುಳು ದುಡಿಯುತ್ತಿದ್ದಾರೆ.

ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ.ನೀತಿ ರಾಜಕೀಯ ಮೇಲೆ ನಂಬಿಕೆ ಇಟ್ಟು ಆದರ್ಶ ರಾಜಕಾರಣ ಮಾಡಿದವರು, ಮಾಡುತ್ತಿದ್ದಾರೆ. ಎಂದೆಂದಿಗೂ ಜಾತಿವಾದಿ ನಾಯಕರಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಬಸವಣ್ಣ, ಅಂಬೇಡ್ಕರ್,ಗಾಂಧೀಜಿ ಮತ್ತು ಕುವೆಂಪು ಅವರ ಚಿಂತನೆಗಳ ತತ್ವದ ಮೇಲೆ ರಾಜಕೀಯ ಮಾಡುತ್ತಿರುವವರು.  ಜಾತ್ಯತೀತ ಚಿಂತನೆಗಳ  ಮೂಲಕವೇ ಇನ್ನು ರಾಜಕಾರಣ ಮಾಡುತ್ತಿರುವುದು ನೋಡುತ್ತಿದ್ದೇವೆ. ಅಲ್ಲದೇ ಸಿದ್ಧರಾಮಯ್ಯನವರ ಗಟ್ಟಿ ನಿಲುವು ಏನೆಂದರೆ ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ಇತಿಹಾಸದಿಂದ ಕಲಿತ ಪಾಠವಾಗಿದೆ. ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ ಎಂಬುದು ಇವರ ಅಂತರಾಳದ ಸ್ವಷ್ಟ ಸಂದೇಶಗಳ ನುಡಿಗಳಾಗಿವೆ. ಅಂತೆಯೇ ಸಂವಿಧಾನ ಬದ್ಧ ಕೆಲಸ ಮಾಡುವ ಮೂಲಕ ಜನಸಾಮಾನ್ಯರ ಅಶೋತ್ತರಗಳನ್ನು ಪ್ರಮಾಣಿಕವಾಗಿ ಈಡೇರಿಸುವ ಕೆಲಸವನ್ನು ನಿತ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಇವರನ್ನು  ಜನಸಾಮಾನ್ಯರ ಅಚ್ಚುಮೆಚ್ಚಿನ ಜನನಾಯಕನೆಂದು ಕರೆಯುವುದುಂಟು. ಹೀಗೆ ಸಮಾಜವಾದಿ ನೇತಾರರಾಗಿ ಸಿದ್ಧರಾಮಯ್ಯನವರು ಈ ನಾಡಿನ ಸಮಗ್ರ ವಿಕಾಸಕ್ಕಾಗಿ  ಶ್ರಮಿಸುತ್ತಿದ್ದಾರೆ.ಆಶಯ ಮಾತು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಿ ಭಾವೈಕ್ಯತೆಯನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಕರುನಾಡಿನ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೃದಯ ಶ್ರೀಮಂತಿಕೆಯ ಸಾಕಾರಮೂರ್ತಿ ಜನನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು  ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಗಳಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಈ ಅವರ ಅವಧಿಯಲ್ಲಿ ಸತ್ಯ,ನ್ಯಾಯ, ನೀತಿ,ಪ್ರಾಮಾಣಿಕತೆ, ಪ್ರಬುದ್ಧತೆಗೆ ಹೆಚ್ಚು ಒತ್ತು ಕೊಟ್ಟು, ಇದೆ ದಾರಿಯಲ್ಲಿ ಸಾಗುವ ಕೆಲಸ ಮಾಡಲಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ,ಮೂಢನಂಬಿಕೆಗಳ ವಿರುದ್ಧ ಸಮರ ಸಾರಲಿ,  ಜನಪರ,ರೈತಪರ ಕೆಲಸ ಮಾಡಲೆಂದು ಆಶಿಸುತ್ತೇವೆ.

ಲೇಖಕರುಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *