ಚುಟುಕು ಬ್ರಹ್ಮನ ಅತಃಕರಣ…..
ಅಡುಗೆಯಭಟ್ಟ ನಾಲಿಗೆ ಕೆಟ್ಟ ಬಡಿಸುವ ಮೊದಲೇ ಬಾಯೊಳಗಿಟ್ಟ…
ಅಡುಗೆಯ ಭಟ್ಟ ಬಹಳೇ ದಿಟ್ಟ…
ಮೆಂವ್ ಮೆಂವ್ ಬೆಕ್ಕಿಗೆ ಹೆದರಿಸೆ ಬಿಟ್ಟ…
ಎಂಥ ಅರ್ಥಗರ್ಭಿತವಾದ ತಿಳಿ ಹಾಸ್ಯವಾದ ಮೂಲಕ ಚುಟುಕುಗಳನ್ನು ಬರೆಯುವುದರಲ್ಲಿ ನಿಸ್ಸೀಮ ಸಾಹಿತಿಗಳಾದ ‘ದಿನಕರ ದೇಸಾಯಿ’ಯವರು.ತಮ್ಮ ಬದುಕಿನ ಬಹುಪಾಲು ಹೋರಾಟದ ಸಮಯವನ್ನು ಜನಸೇವೆಗಾಗಿ ಮುಡಿಪಿಟ್ಟ ಅದ್ಧುತ ವ್ಯಕ್ತಿ.ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ದಿನಕರರ ತಂದೆ ದತ್ತಾತ್ರೇಯ ದೇಸಾಯಿ, ಶಾಲಾ ಶಿಕ್ಷಕರು. ತಾಯಿ ಅಂಬಿಕಾ. ಶಿಕ್ಷಣದ ಕೊನೆಯ ಪದವಿ ವರ್ಷದಲ್ಲಿ ಇತಿಹಾಸದ ವಿಷಯದಲ್ಲಿ ಪ್ರಸಿದ್ಧ ” ಕ್ಯಾಂಡಿ ಪಾರಿತೋಷಕ’ ಗಳಿಸಿದರು. ನಂತರ ಬೊಂಬಾಯಿನ, ‘ಸೈಂಟ್ ಝೇವಿಯರ್ ಕಾಲೇಜ್’ ನಲ್ಲಿ ಇತಿಹಾಸದ ವಿಷಯದೊಂದಿಗೆ, ಎಂ.ಎ. ಪದವಿಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದರು. ಅದರ ಜೊತೆಗೆ ಎಲ್.ಎಲ್.ಬಿ ಪರೀಕ್ಷೆಯನ್ನೂ ಮುಗಿಸಿದರು. ತಮ್ಮ ವಯಕ್ತಿಕ ಬದುಕನ್ನು ರೂಪಿಸಿಕೊಳ್ಳುವಲ್ಲಿ ವರದಕ್ಷಿಣೆಯನ್ನು ಪಡೆಯದೆ ಸರಳವಾಗಿ ಮದುವೆಯಾಗಿದ್ದು ಆದರ್ಶಪ್ರಾಯ.ಇವರು ಕೇವಲ ೧೩ ರೂಪಾಯಿಯನ್ನು ಮದುವೆಗಾಗಿ ಖರ್ಚು ಮಾಡಿದರು.ಈಗಿನ ಕಾಲದಲ್ಲಿ ಲಕ್ಷ ಗಟ್ಟಲೆ ಹಣ ವ್ಯಯ ಮಾಡಿಕೊಳ್ಳುವಾಗ ದಿನಕರ ದೇಸಾಯಿ ಅವರು ಈ ಸಮಾಜಕ್ಕೆ ಮಾದರಿ. ಸದಾ ಕಾಲವು ಬಡವರ ಬಗ್ಗೆ, ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚು ಗಮನ ವಹಿಸಿದ್ದ ಇವರು, ಗೇಣಿ ಪದ್ದತಿಯಲ್ಲಿದ್ದ ಸಾಮಾಜಿಕ ಅನ್ಯಾಯದ ಪರ ಪ್ರತಿಭಟಿಸಿ, ರೈತರ ಪರ ಹೆಚ್ಚು ಚಳುವಳಿ ಮಾಡಿ ರೈತ ಸಂಘಟನೆಯ ಪಿತಾಮಹ ಎನಿಸಿದರು. ಮುಂದೆ ಸಕ್ರೀಯವಾಗಿ ಪ್ರಜಾಸತ್ತಾತ್ಮಕ ಸಮಾಜದಲ್ಲಿ ದೃಢ ನಂಬಿಕೆಯಿಂದ ದೀನ ದಲಿತರಿಗೆ ಸಹಾಯ ಮಾಡಲು ೧೯೫೨ರಲ್ಲಿ ಲೋಕಸಭೆಗೆ ಸ್ಪರ್ದಿಸಿ ಸೋತರು. ಏನಾದರೂ ಪ್ರಗತಿ ಮಾಡಬೇಕೆಂದು ನಿಲುವು ಹೊಂದಿದ್ದ ಇವರು, ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಜಯಗಳಿಸಿದರು. ಪ್ರತಿಯೊಬ್ಬ ಮನುಷ್ಯನು ಸಹ ತಿಳಿಯಬೇಕು. ಸೋಲೇ ಗೆಲುವಿನ ಮೆಟ್ಟಿಲು ಎಂದು..! ಸಮರ್ಥವಾಗಿ ಪ್ರತಿನಿಧಿಸಿ ಕಾರಾವಾರ ಮತ್ತು ಹುಬ್ಬಳ್ಳಿ ರೈಲು ಮಾರ್ಗದ ಬೇಡಿಕೆಯನ್ನು ಮೊದಲ ಬಾರಿಗೆ ಮುಂದಿಟ್ಟರು. ಅಲ್ಲಿನ ಜನತೆಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಬಲವಾಗಿ ಬೇಡಿಕೆಯೊಂದಿಗೆ ಯಶಸ್ವಿಯಾದರು. ಇದು ಅವರ ಮುಖ್ಯವಾದ ಹೆಜ್ಜೆಯಾಗಿತ್ತು. ಬಡವರ ಬಗ್ಗೆ ಅಪಾರ ಅನುಕಂಪ ಎಲ್ಲಿಯೂ ಭ್ರಷ್ಟಚಾರವನ್ನು ನಡೆಸದೆ ಎಲ್ಲಿಯೂ ಲಂಚತನಕ್ಕೆ ಹೋಗದೆ, ತಮ್ಮ ಕೆಲಸದಿಂದಲೇ ಅಪಾರ ಜನರ ಮೆಚ್ಚುಗೆಗೆ ಪಾತ್ರರಾದರು. ಇಂದಿನ ರಾಜಕೀಯ ಜನ ನಾಯಕರಿಗೆ ಮಾದರಿ ಎಂದರೆ ಪ್ರಾಯಶಃ ತಪ್ಪಗಾಲಾರದು. ತದನಂತರದಲ್ಲಿ ಪ್ರಾರಂಭಿಸಿದ್ದ ಜನಸೇವಕ ಪತ್ರಿಕೆ.ದೇಸಾಯಿ ಅವರು ಬರೆದ ೨,೫೦೦ ಚುಟಕಗಳ ಸಂಗ್ರಹ ಮಾಡಿ ದಿನಕರ ಚೌಪದಿ ಎಂದು ೧೯೭೮ ರಲ್ಲಿ ಪ್ರಕಟವಾಗಿತ್ತು. ಇವರು ಸಲ್ಲಿಸಿದ ಸಮಾಜ ಸೇವೆಗೆ ಸರ್ಕಾರವು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿದೆ.ಹಲವಾರು ಪ್ರಶಸ್ತಿಗಳು ಕೂಡ ದೋರೆತಿರುವದು ಸಂತಸ. ಜನ ಸೇವೇ ಜನಾರ್ಧನನ ಸೇವೆ ಎಂಬ ನಾಮಾಂಕಿತಕ್ಕೆ ಅರ್ಹರೆಂದೇಳಬಹುದು. ತಮ್ಮ ಬರೆಹದಲ್ಲಿ ನೇರ ಮತ್ತು ನಿಷ್ಟುರತೆಯನ್ನು ರೂಢಿಸಿಕೊಂಡಿದ್ದರು. ಜನಸೇವಕರೆಂದೇ ಹೆಸರು ಪಡೆದ ಇವರು, ನವೆಂಬರ್ ೬ ರಂದು ಹೃದಯಾಘಾತದಿಂದ ತೀರಿಕೊಂಡರು. ಅವರ ಜೀವನದ ಯಶೋಗಾಥೆಯು ಇಂದಿನ ಯುವ ಜನರಿಗೆ ಪ್ರೇರಣೆಯಾಗಬೇಕು.
ವಿಶೇಷ ಲೇಖನ :- ಜ್ಯೋತಿ ಜಿ. ಉಪನ್ಯಾಸಕರು ಮೈಸೂರು.