ಪರಿಸರ ಸಂರಕ್ಷಣೆ, ನಮ್ಮೆಲ್ಲರ ಹೊಣೆ. ಸಂಗಮೇಶ ಎನ್ ಜವಾದಿ.

Spread the love

ಪರಿಸರ ಸಂರಕ್ಷಣೆ, ನಮ್ಮೆಲ್ಲರ ಹೊಣೆ. ಸಂಗಮೇಶ ಎನ್ ಜವಾದಿ.

ಜೂನ್ 5 ವಿಶ್ವ ಪರಿಸರ ದಿನಾಚರಣೆಯ ದಿನ. ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನದಂದು ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿವಸ ಎನ್ನಬಹುದು. ಅಂದಹಾಗೆ ನಾವೆಲ್ಲರೂ ಈ ಪರಿಸರದ ಶಿಶುಗಳು, ಪರಿಸರವಿಲ್ಲದೆ ನಮ್ಮ  ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪರಿಸರವನ್ನು  ಕಾಪಾಡಿಕೊಳ್ಳುವುದರ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಪರಿಸರದ ಸಂರಕ್ಷಣೆಗೆ ಮುಂದಾಗಬೇಕಾಗಿದೆ, ಅನಿವಾರ್ಯತೆ ಸಹ ಇದೆ ಎನ್ನುವುದು ಮರೆಯುವಂತಿಲ್ಲ. ಮಾನವರು ಸಮಾಜಜೀವಿ ಎನ್ನುವಷ್ಟೇ ಸಹಜವಾದದ್ದು , ಇವರು ಈ ಸೃಷ್ಟಿಯ ಶಿಶು ಎನ್ನುವುದು ಸಹ ಅಷ್ಟೇ ಸತ್ಯ. ನಮ್ಮ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗಿದೆ, ಹಲವಾರು ಮರಗಿಡಗಳಿವೆ. ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳಿವೆ.  ವೈವಿಧ್ಯಮಯವಾದ ಕೀಟ ಪ್ರಪಂಚವಿದೆ. ಅನೇಕ ಸೂಕ್ಷ್ಮ ಜೀವಿಗಳಿವೆ. ಅಷ್ಟೇ ಅಲ್ಲ. ಹಲವಾರು ಚಿಕ್ಕ ದೊಡ್ಡ ನದಿ, ಸಾಗರ ಸರೋವರಗಳಿವೆ. ಸಣ್ಣಪುಟ್ಟ ಗುಡ್ಡ ಬೆಟ್ಟಗಳಿವೆ, ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ. ಗಾಳಿ, ಬೆಳಕು ಹಾಗು ಅಪರಿಮಿತ ಖನಿಜ ಸಂಪತ್ತಿದೆ. ಆದರೆ ಈ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹೆಸರುಗಳ ಸೋಗಿನಲ್ಲಿ ಪರಿಸರಕ್ಕೆ ತೀವ್ರ ಹಾನಿ ಉಂಟಾಗುತ್ತಿದೆ. ಇನ್ನು ನಮ್ಮ ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದರೂ ನಾವು ಅದನ್ನು ನಗಣ್ಯ ಎಂಬಂತೆ ವರ್ತಿಸುತ್ತಿದ್ದೇವೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಉದ್ದೇಶದಿಂದಲೇ 1972 ನೇ ಇಸವಿಯಿಂದ ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸುತ್ತ ಬರಲಾಗುತ್ತಿದೆ.ಆದರೆ ಒಂದು ದಿನ ಮಟ್ಟಿಗೆ ಪರಿಸರ ಸಂರಕ್ಷಣೆ ಆಚರಣೆ ಮಾಡಿ, ಇದರ ಬಗ್ಗೆ ಮಾತನಾಡಿದರೆ ಸಾಲದು,ಪ್ರತಿದಿನ ಪರಿಸರ ರಕ್ಷಣೆ ಮಾಡಿದರೆ ಮಾತ್ರ ಪರಿಸರ ಉಳಿಸಿ, ಬೆಳೆಸಲು ಸಾಧ್ಯವಿದೆ ಎನ್ನುವುದನ್ನು ಇಲ್ಲಿ  ನಾವೆಲ್ಲರೂ ಗಮನಿಸಲೇಬೇಕು.ಇತ್ತಿಚೆಗಂತೂ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ವಾಹನಗಳಿಗಾಗಿ ರಚನೆಯಾಗುತ್ತಿರುವ ಚತುಷ್ಪಥ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ನಿರಂತರವಾಗಿ ಕಡಿದೆಸೆಯುತ್ತಿರುವ ವೃಕ್ಷ ಸಂಪತ್ತಿನಿಂದಾಗಿ ಹಾಗೂ ನದಿಗಳಿಗೆ ಅಡ್ಡಲಾಗಿ ಕಟ್ಟುತ್ತಿರುವ ಜಲಾಶಯಗಳು ಇತ್ಯಾದಿಗಳಿಂದಾಗಿ ಪರಿಸರ ಮಾಲಿನ್ಯ ಮತ್ತಷ್ಟು ಹೆಚ್ಚಾಗಿ, ಹವಾಮಾನ ವೈಪರೀತ್ಯಗಳು ಸಹ ಉಂಟಾಗುತ್ತಿವೆ. ಅಲ್ಲದೆ, ಹೆಚ್ಚುತ್ತಿರುವ ಜನಸಂಖ್ಯೆ, ವಸತಿ ಸಮುಚ್ಚಯಗಳು, ಹೊಗೆ ಉಗುಳುವ ವಾಹನಗಳ ಸಂದಣಿ, ಪ್ಲಾಸ್ಟಿಕ್ ಸಾಮ್ರಾಜ್ಯ ಇತ್ಯಾದಿಗಳಿಂದಾಗಿ ನಮ್ಮ ಪರಿಸರವು ಸಂಪೂರ್ಣವಾಗಿ ಹಾಳಾಗುತ್ತಿದೆ.ಇದಕ್ಕೆಲ್ಲ ಕಾರಣ ನಾವು ಅಂದರೆ ತಪ್ಪಾಗಲಾರದು. ಇನ್ನು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತೀದ್ದೇವೆ. ಇದರಿಂದಾಗಿ ಹಸಿರು ವಿರಳವಾಗುತ್ತ ಹೋಗುತ್ತಿದೆ. ಕಾರಣ ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ಅನಾಹುತಕ್ಕೆ ನಾವೇ ಕಾರಣಿಭೊತರಾಗುತ್ತೇವೆಂಬುದು ಸದಾ ನೆನಪಿಡಬೇಕಾದ ಅಂಶವಾಗಿದೆ.ಈಗಾಗಲೇ ಸುನಾಮಿ, ಬರ, ಮಹಾಪೂರದಂಥ ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿರುವುದರ ಜೊತೆಗೆ ಇನ್ನೂ ಅತ್ಯಂತ ದಾರುಣವಾದ ಆಮ್ಲಜನಕದ ಕೊರತೆಯನ್ನು ಕೂಡ ಅನುಭವಿಸಬೇಕಾದ ಪರಿಸ್ಥಿತಿ ನಮ್ಮೆಲ್ಲರ ಕಣ್ಣು ಮುಂದೆ ಕಾಣುತ್ತಿದೆ. ಅದಕ್ಕಾಗಿಯೇ ಈ ನಮ್ಮ ಪರಿಸರವನ್ನು, ನಮ್ಮ ವನ್ಯಜೀವಿಗಳನ್ನು,  ನಮ್ಮ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಕಾಲ ಈಗ ಕೂಡಿ ಬಂದಿದೆ. ಅನಿವಾರ್ಯವಾಗಿದೆ. ಆದಕಾರಣ ಪರಿಸರ ಎಂಬ ಈ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವ ಬೀರುತ್ತವೆ . ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ ಬೆಸೆದು, ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನೂ ನಿಕಟಗೊಳಿಸಿ ಈ  ಜೀವಜಾಲವನ್ನಾಗಿಸಿದೆ. ಅಂಥ ಈ ಜೀವಜಾಲದ ಸರಪಣಿಯನ್ನು ನಾವು ನಿರಂತರವಾಗಿ ಉಳಿಸಬೇಕಾಗಿದೆ. ಗಿಡಮರಗಳನ್ನು ಕಡಿಯುವಾಗ ಒಂದಕ್ಕೆರಡು ಮರಗಳನ್ನು ನೆಡಬೇಕು. ಈ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಎನ್ನುವುದು ನಾವೆಲ್ಲರೂ ಮರೆಯಬಾರದು. ಇನ್ನೂ ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳಾದ ಪ್ಲಾಸ್ಟಿಕ್ ಇತ್ಯಾದಿಗಳ ಅನಧಿಕೃತ ಮಾರಾಟವನ್ನು ತಡೆಗಟ್ಟಬೇಕು ಹಾಗೂ ಪರಿಸರಕ್ಕೆ ಹಾನಿಯಾಗದ ಅಗ್ಗದ ಇಂಧನಮೂಲಗಳ ಅನ್ವೇಷಣೆ ಮಾಡಿ, ಇದನ್ನು ಬಳಸಬೇಕು.ಬಡವ ಬಲ್ಲಿದರಾದಿಯಾಗಿ ಎಲ್ಲರೂ ಈ ಇಂಧನವನ್ನು ಉಪಯೋಗಿಸುವಂತಾಗಬೇಕು. ಭೂ ಸಂಪನ್ಮೂಲಗಳಾದ ಅರಣ್ಯ , ಮಣ್ಣುಗಳ, ನದಿಯಲ್ಲಿಯ ಉಸುಕು, ಕಲ್ಲುಬೆಟ್ಟಗಳನ್ನು ಸಂರಕ್ಷಿಸುವುದು, ಜೈವಿಕ ತಂತ್ರಜ್ನಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದರ  ಮಹತ್ವವನ್ನು  ಸಾಮಾನ್ಯ್ ನಾಗರಿಕರಿಗೂ ತಿಳಿಸುವ ಕೆಲಸ ಪರಿಸರ ಇಲಾಖೆ ಸಮರ್ಪಕವಾಗಿ ಮಾಡಬೇಕು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೂ ಕೂಡ ಶಾಲೆಗಳಲ್ಲಿ ಈ ಬಗ್ಗೆ ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಿಸಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾ­ಮ­ಗಳ ಕುರಿತು ತಿಳಿಸುವ ಕೆಲಸ ನಿರಂತರವಾಗಿ ಮಾಡಬೇಕು, ಹೀಗಾದರೆ ಮಾತ್ರ ಮುಂದಿನ ದಿನಗಳಲ್ಲಿ ಇದರ ಉತ್ತಮ ಫಲಿತಾಂಶ ಸಿಗುತ್ತದೆ. ಪಠ್ಯ ಪುಸ್ತಕದಲ್ಲೂ ಪರಿಸರ ಸಂರ­ಕ್ಷಣೆಯ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಆದಷ್ಟು ಬೇಗನೆ ಮಾಡಬೇಕಾಗಿದೆ. ಅಂದಾಗಲೇ ಮಾತ್ರ ಪರಿಸರ ಸ್ನೇಹಿ ಜೀವನವನ್ನು ನಮ್ಮ ಮುಂದಿನ ಪೀಳಿಗೆಗಳು ನಡೆಸಬಹುದಾಗಿದೆ. ಇನ್ನು ಪರಿಸರ ಶಿಕ್ಷಣ ನಮ್ಮ ಸುತ್ತಮುತ್ತಲಿನ ಪರಿಸರ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಆಗಬೇಕು. ಅದೇ ರೀತಿ ಶಾಲಾ ಕಾಲೇಜುಗಳಲ್ಲಿ ಪ್ರತಿ ನಿತ್ಯವೂ ಪರಿಸರ ಸಂರಕ್ಷಣೆಯ ಕುರಿತು ನೀತಿ ಪಾಠಗಳು ಹೇಳಲೇಬೇಕು. ಹೀಗೆ ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ತಿಳಿ ಹೇಳುವ ಕೆಲಸ ಮಾಡಿದಾಗ ಮಾತ್ರ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಕಾಪಾಡಲು ಸಾಧ್ಯವಾಗುತ್ತದೆ. ಜೊತೆ ಜೊತೆಗೆ ಪರಿಸರ ರಕ್ಷಣೆಯ ಕುರಿತು ಘೋಷಣೆಗಳು ಒಂದು ದಿನದ ಮಟ್ಟಿಗೆ ಘೋಷಣೆಗಳಾಗಿಯೇ ಉಳಿಯದೆ, ಆಚರಣೆಗೂ ಬರುವಂತಾ­ಗ­ಬೇಕು. ಮನೆ ಆವರಣ ಮತ್ತು ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು.  ಈ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಮಾದರಿ. ಪ್ರತಿಯೊಬ್ಬ ನಾಗರಿಕರಲ್ಲೂ ಪರಿಸರದ ಬಗ್ಗೆ ಈ ಜಾಗೃತಿ ಮೂಡಬೇಕು. ಕೇವಲ‌ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ.ಹೀಗಾಗಿ ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು‌ ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದಾದ ಲಕ್ಷಣಗಳು ಕಾಣುತ್ತೀವೆ.ಕಾರಣ ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ. ಆದಕಾರಣ ಪರಿಸರ ಉಳಿಸುವ ಮೂಲಕ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸವನ್ನು ತಪ್ಪದೇ ಮಾಡಬೇಕಾಗಿದೆ.

ಸಕಲ ಜೀವಾತ್ಮರಿಗೂ ಲೇಸನೇ ಬಯಸೋಣ : ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹತ್ತು ಹಲವು ಹೆಸರನ ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈಗ ಜೂನ್ 5 ರಂದು  ಪರಿಸರ ದಿನಾಚರಣೆಯಲ್ಲಿ ಅಡಗಿದೆ.ಈ ದಿನದ ವಿಶೇಷವೇನೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ.ಎಲ್ಲರಿಗೂ ಶುದ್ಧ ಗಾಳಿ, ನೀರು, ಆಹಾರ ಸಿಗಬೇಕೆಂದರೆ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದೆ. ಇದಕ್ಕಾಗಿ ಗಿಡಮರಗಳನ್ನು ಬೆಳೆಸಬೇಕಾಗಿದೆ. ಕಾಡಿನ ನಾಶದಿಂದ ಪ್ರಾಣಿ ಪಕ್ಷಿಗಳ ಸಂತತಿಯು ನಶಿಸುತ್ತಿದೆ. ವಿವಿಧ ರೋಗಾಣುಗಳು ಹುಟ್ಟಿಕೊಂಡು ಎಲ್ಲ ಜೀವಿಗಳಿಗೆ ಮಾರಕವಾಗುತ್ತಿವೆ. ಜಲ, ವಾಯು, ಭೂ ಮಾಲಿನ್ಯವನ್ನು ತಡೆಯಬೇಕಾದರೆ ವನಗಳನ್ನು ಬೆಳೆಸಬೇಕು. ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲಿ ಎಸೆಯದೆ ವಿಲೇವಾರಿ ಮಾಡಬೇಕು ಎನ್ನುವುದು ನಾವ್ಯಾರು ಮರೆಯಬಾರದು. ಜೊತೆಗೆ ಪರಿಸರದ ಸ್ಥಿತಿ ಗತಿ ತಿಳಿಯುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಮೂಡಿಸುವಂತಹ ಘನೋದ್ದೇಶಗಳು ಪರಿಸರ ಆಚರಣೆಯಲ್ಲಿ ಸೇರಿವೆ.ಬರುವಂತಹ ಯುವಕರಿಗೆ  ಉತ್ತಮ ಪರಿಸರವು ಅವಶ್ಯಕ ಇದೆ ಆದುದರಿಂದ ಪ್ರತಿಯೊಬ್ಬ ಪ್ರಜೆಯೂ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಧ್ಯೇಯವಾಕ್ಯದಂತೆ ನಡೆದುಕೊಳ್ಳೋಣ ಹಾಗೆ ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಶುದ್ಧ ಮಾಡುವ ಸಂಕಲ್ಪ ಮಾಡೋಣ,ಪರಿಸರ ಉಳಿಸಿ – ಪರಿಸರ ಬೆಳೆಸಿ, ಸಕಲ ಜೀವಾತ್ಮರಿಗೂ ಲೇಸನೇ ಬಯಸೋಣ. ಆಶಯ ಮಾತು : ಪ್ರಕೃತಿಯೇ ನಮ್ಮ ದೇವರು –  ಪ್ರಕೃತಿಯೇ ನಮ್ಮ ಉಸಿರು.ತ್ಯಾಜ್ಯ ವಸ್ತುಗಳ ಪುನರ್ ಬಳಕೆ ಮಾಡಿ – ಪರಿಸರ ಸಂರಕ್ಷಣೆ ಮಾಡೋಣ, ಹಸಿರೇ ಉಸಿರು, ಉಸಿರೇ ಹಸಿರು ಎಂದು ಜಗತ್ತಿಗೆ ಸಾರೋಣ, ಸಾಗುವ ಮೂಲಕ ಪರಿಸರ ಅಭ್ಯುದಯಕ್ಕಾಗಿ ದುಡಿಯೋಣ,ಪ್ರಕೃತಿಯನ್ನು ತಾಯಿಯೆಂದು ಪೂಜಿಸಿ, ದೇವರೆಂದು ಗೌರವಿಸಿ, ಮಗುವೆಂದು ಸಂರಕ್ಷಿಸೋಣ.

ಲೇಖಕರು: ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *