*ಶ್ರೀ ಚರಣ್ ಕೋ ಅಪರೇಟಿವ್ ಬ್ಯಾಂಕ್ ವಿರುದ್ಧ ವ್ಯವಸ್ಥಿತ ಅಪಪ್ರಚಾರ; ಯಾವುದೇ ಖಾತೆದಾರರ ಹಣ ದುರ್ಬಳಕೆ ಮಾಡಿಕೊಂಡಿಲ್ಲ – ಬ್ಲ್ಯಾಕ್ ಮೇಲ್ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ*
*ಬೆಂಗಳೂರು,ಜೂ, 22;* ಖಾತೆದಾರರ ಹಣ ದುರ್ಬಳಕೆ ಮಾಡಿಕೊಂಡಿರುವುದಾಗಿ ಅಪಪ್ರಚಾರ ಮಾಡಿ ಬ್ಯಾಂಕ್ ನ ವರ್ಚಸ್ಸಿಗೆ ಧಕ್ಕೆ ತರುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಯುಳ್ಳ ವ್ಯಕ್ತಿಗಳು ಸೇರಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಶ್ರೀ ಚರಣ್ ಕೋ ಅಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಶ್ರೀ ಚರಣ್ ಕೋ ಅರಪೇಟಿವ್ ಬ್ಯಾಂಕ್ ಗ್ರಾಹಕರ ಹಿತ ರಕ್ಷಣೆಗೆ ಪರಮೋಚ್ಚ ಆದ್ಯತೆ ನೀಡುತ್ತಿದ್ದು, ಯಾವುದೇ ಖಾತೆದಾರರ ಹಣವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ವಾಸ್ತವ ಸಂಗತಿಯನ್ನು ಮುಚ್ಚಿಟ್ಟು ಬ್ಯಾಂಕ್ ಗೆ ಮಸಿ ಬಳಿದು ಕೆಟ್ಟ ಹೆಸರು ತರುವ ಹುನ್ನಾರ ನಡೆದಿದೆ ಎಂದು ಆರೋಪಿಸಿದೆ.
ಎನ್.ಆರ್. ನಾಗರಾಜ್ ಎಂಬುವರು ಇದೇ ಫೆಬ್ರವರಿ 20 ರಂದು ಬ್ಯಾಂಕ್ ನಲ್ಲಿ ಎಂ.ಎಸ್ ಅಲ್ಟ್ರಾ ಬ್ರೈಟ್ ಸಿಮೆಂಟ್ಸ್ ಲಿಮಿಟೆಡ್ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆದಿದ್ದರು. ತಿಂಗಳು ತುಂಬುವ ಮುನ್ನವೇ ಖಾತೆಯಲ್ಲಿ ಹಣ ಇಲ್ಲದಿದ್ದರೂ ಅವರು 138 ಕೋಟಿ ರೂಪಾಯಿ ಮೊತ್ತದ ಚೆಕ್ ಗಳನ್ನು ಬೇರೆ ಬೇರೆ ಹೆಸರಿನಲ್ಲಿ ನೀಡಿದ್ದರು. ಈ ಎಲ್ಲಾ ಚೆಕ್ ಗಳು ಬೌನ್ಸ್ ಆಗಿವೆ. ತಕ್ಷಣವೇ ಆರ್.ಬಿ.ಐ ಬ್ಯಾಂಕ್ ನಮ್ಮ ಬ್ಯಾಂಕ್ ಗೆ ಕಾರಣ ಕೇಳಿ ನೋಟೀಸ್ ನೀಡಿತ್ತು.
ಈ ನಡುವೆ ಎನ್.ಆರ್. ನಾಗರಾಜ್ ಅವರ ಖಾತೆಯಲ್ಲಿ 71.69 ಲಕ್ಷ ರೂಪಾಯಿ ಹಣ ಬಂದಿತ್ತು. ಮಾರ್ಚ್ ಅಂತ್ಯದ ವೇಳೆಗೆ ಹಣಕಾಸು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಆದ ಮೊತ್ತವನ್ನು ಕ್ರಮವಾಗಿ 19 ಮತ್ತು 16 ಲಕ್ಷ ರೂ ಕಡಿತ ಮಾಡಿಕೊಂಡಿದ್ದೇವೆ. ಜೊತೆಗೆ ಜಿ.ಎಸ್.ಟಿ ಸೇರಿ ಒಟ್ಟು 36,56,909 ರೂಪಾಯಿ ಹಣವನ್ನು ಕಾನೂನುಬದ್ಧವಾಗಿ ಖಾತೆಯಿಂದ ಕಡಿತ ಮಾಡಿದ್ದೇವೆ. ಉಳಿದ ಹಣವನ್ನು ಖಾತೆದಾರರಿಗೆ ನೀಡಿದ್ದೇವೆ. ಇಲ್ಲಿ ಲವಲೇಷದಷ್ಟು ಲೋಪವಾಗಿಲ್ಲ. ಖಾತೆದಾರರಿಂದ ಆರ್.ಬಿ.ಐ ನಿಯಮಾವಳಿಗಳನ್ವಯ ಹಣ ಕಡಿತವಾಗಿದೆ ಎಂದು ತಿಳಿದೆ. ಈ ಮಧ್ಯೆ ಖಾತೆದಾರರ ಹಣ ದುರ್ಬಳಕೆಯಾಗಿದೆ ಎಂದು ಸಂಬಂಧಪಟ್ಟವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಚೆಕ್ ಬೌನ್ಸ್ ಮತ್ತು ಜಿ.ಎಸ್.ಟಿ ಹಣ ಕಡಿತಮಾಡಿಕೊಂಡಿರುವ ವಾಸ್ತವ ಸಂಗತಿಯನ್ನು ನ್ಯಾಯಾಲಯಕ್ಕೆ ಮುಚ್ಚಿಟ್ಟಿದ್ದರು. ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸಿ ಎಂದಷ್ಟೇ ಹೇಳಿತ್ತು. ಆದರೆ ಬಸವನಗುಡಿ ಪೊಲೀಸರು ವಿಚಾರಣೆ ನಡೆಸದೇ, ತನಿಖೆ ಮಾಡದೇ ಬ್ಯಾಂಕ್ ವಿರುದ್ಧ ಏಕಾಏಕಿ ಎಫ್.ಐ.ಆರ್ ದಾಖಲಿಸಿದ್ದಾರೆ. ಬ್ಯಾಂಕ್ ನಿಂದ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂಜೆಕ್ಷನ್ ತಂದಿದ್ದು, [ಒ.ಎಸ್. ಸಂಖ್ಯೆ 2925/2023] ಯಾವುದೇ ಆದೇಶ ಹೊರಡಿಸುವ ಮುನ್ನ ಬ್ಯಾಂಕ್ ಗಮನಕ್ಕೆ ತರಬೇಕು ಎಂದು ಕೋರಲಾಗಿದೆ.ಆದರೆ ಇದೇ ಎಫ್.ಐ.ಆರ್ ಅನ್ನು ಮುಂದಿಟ್ಟುಕೊಂಡು ಖಾತೆದಾರರಾದ ನಾಗರಾಜ್ ಅವರು ಬ್ಯಾಂಕ್ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ. ಅವರ ಜೊತೆ ಹಲವು ಪಟ್ಟಭದ್ರರು ಸಹ ಸೇರಿಕೊಂಡಿದ್ದಾರೆ. ಆದರೆ ನಮ್ಮ ಬ್ಯಾಂಕ್ ಖಾತೆದಾರರ ಹಿತಾಸಕ್ತಿ ಕಾಪಾಡಲು ಪ್ರಧಾನ ಆದ್ಯತೆ ನೀಡಿದೆ. ಆದಾಗ್ಯೂ ಬ್ಯಾಂಕ್ ಗೌರವಕ್ಕೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ವರದಿ-ಹರೀಶ ಶೇಟ್ಟಿ ಬೆಂಗಳೂರು