ನಮ್ಮೂರಿನಿಂದ ಚಂದ್ರಯಾನಕ್ಕೆ-3 ಉಡಾವಣೆ ಯಶಸ್ವಿ.

Spread the love

ನಮ್ಮೂರಿನಿಂದ ಚಂದ್ರಯಾನಕ್ಕೆ-3 ಉಡಾವಣೆ ಯಶಸ್ವಿ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ 3 ‘ಬಾಹುಬಲಿ ರಾಕೆಟ್’ ಉಡಾವಣೆಯಾಗಿದೆ. ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ.  ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಗೆ ಅಧಿಕೃತ ಚಾಲನೆ ಸಿಕ್ಕಿದೆ.

ಪ್ರಧಾನಿ ಮೋದಿಯವರ ಪ್ರತಿಕ್ರಿಯೆ ಹಿಗಿದೆ: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜುಲೈ 14, 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಿ ಬರೆದಿರುವ ದಿನವಾಗಿರುತ್ತದೆ. ಚಂದ್ರಯಾನ-3, ನಮ್ಮ ಮೂರನೇ ಚಂದ್ರನ ಕಾರ್ಯಾಚರಣೆಯನ್ನು ಇಂದು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆಗಳು ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ. ಚಂದ್ರಯಾನ-3ಯನ್ನು ಕಕ್ಷೆಯನ್ನು ಹೆಚ್ಚಿಸುವ ಕುಶಲತೆಯ ನಂತರ ಚಂದ್ರನ ವರ್ಗಾವಣೆ ಪಥಕ್ಕೆ ಸೇರಿಸಲಾಗುತ್ತದೆ. 300,000 ಕಿ.ಮೀ.ಗೂ ಹೆಚ್ಚು ಆವರಿಸುತ್ತದೆ, ಇದು ಮುಂಬರುವ ವಾರಗಳಲ್ಲಿ ಚಂದ್ರನನ್ನು ತಲುಪುತ್ತದೆ. ವೈಜ್ಞಾನಿಕ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತವೆ ಮತ್ತು ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ.  ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಚಂದ್ರಯಾನ-1 ನ್ನು ಜಾಗತಿಕ ಚಂದ್ರನ ಕಾರ್ಯಾಚರಣೆಗಳಲ್ಲಿ ಪಥ್ ಬ್ರೇಕರ್ ಎಂದು ಪರಿಗಣಿಸಲಾಗಿದೆ ಏಕೆಂದರೆ ಇದು ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ಇದು ವಿಶ್ವಾದ್ಯಂತ 200 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳಲ್ಲಿ ಪ್ರಕಟವಾಗಿದೆ.

ಚಂದ್ರಯಾನದ ಸಂಪೂಣ ವಿವರ :-

ಚಂದ್ರಯಾನ -1 ಅನ್ನು ಅಕ್ಟೋಬರ್ 2008 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಉಡಾವಣೆ ಮಾಡಿತು. ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 00:52 UTC ಕ್ಕೆ PSLV-XL ರಾಕೆಟ್ ಅನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಚಂದ್ರಯಾನ -1 8 ನವೆಂಬರ್ 2008 ರಂದು ಚಂದ್ರನ ಕಕ್ಷೆಗೆ ಸೇರಿತು. ಕಾರ್ಯಾಚರಣೆಯು ಚಂದ್ರನ ಕಕ್ಷೆ ಮತ್ತು ಇಂಪ್ಯಾಕ್ಟರ್ ಅನ್ನು ಒಳಗೊಂಡಿತ್ತು. 14 ನವೆಂಬರ್ 2008 ರಂದು, ಚಂದ್ರಯಾನ ಆರ್ಬಿಟರ್‌ನಿಂದ 14:36 UTC ಯಲ್ಲಿ ಚಂದ್ರನ ಇಂಪ್ಯಾಕ್ಟ್ ಪ್ರೋಬ್ ಬೇರ್ಪಟ್ಟಿತು ಮತ್ತು ನಿಯಂತ್ರಿತ ರೀತಿಯಲ್ಲಿ ದಕ್ಷಿಣ ಧ್ರುವವನ್ನು ಸೇರಿತು. ಈ ಕಾರ್ಯಾಚರಣೆಯೊಂದಿಗೆ, ISRO ಚಂದ್ರನ ಮೇಲ್ಮೈಯನ್ನು ತಲುಪಿದ ಐದನೇ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಯಿತು. ಸುಮಾರು ಒಂದು ವರ್ಷದ ನಂತರ ಆರ್ಬಿಟರ್ ಸ್ಟಾರ್ ಟ್ರ್ಯಾಕರ್‌ನ ವೈಫಲ್ಯ ಮತ್ತು ಕಳಪೆ ಥರ್ಮಲ್ ಶೀಲ್ಡ್ ಸೇರಿದಂತೆ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಲಾರಂಭಿಸಿತು. ಚಂದ್ರಯಾನ-1 28 ಆಗಸ್ಟ್ 2009 ರಂದು ಸುಮಾರು 20:00 UTC ಯಲ್ಲಿ ಸಂವಹನವನ್ನು ನಿಲ್ಲಿಸಿತು. ಅದಕ್ಕೂ ಮೊದಲೇ ಹೇಳಿಕೆ ನೀಡಿದ ISRO, ಅಧಿಕೃತವಾಗಿ ಚಂದ್ರಯಾನ 1 ಮಿಷನ್ ಮುಗಿದಿದೆ ಎಂದು ಘೋಷಿಸಿತು.

ಚಂದ್ರಯಾನ 2: ಚಂದ್ರಯಾನ ಒಂದರ ಯಶಸ್ವಿ ಪ್ರಯೋಗದ ಸುಧೀರ್ಘ 10 ವರ್ಷಗಳ ನಂತರ ಮತ್ತೆ ಭಾರತ ಚಂದ್ರಯಾನ 2 ಉಡ್ಡಯನಕ್ಕೆ ತಯಾರಿ ನಡೆಸಿತ್ತು. 2019 ರಲ್ಲಿ ಚಂದ್ರಯಾನ-2 ಯೋಜನೆ ಕೈಗೊಳ್ಳಲಾಗಿತ್ತು. ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ 22 ಜುಲೈ 2019 ರಂದು 09:13:12 UTC ಕ್ಕೆ LVM3-M1 ರಾಕೆಟ್‌ನಿಂದ ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ತನ್ನ ಕಾರ್ಯಾಚರಣೆಯಲ್ಲಿ ಉಡಾವಣೆ ಮಾಡಲಾಯಿತು. ಅವತ್ತು ಖುದ್ದು ಪ್ರಧಾನಮಂತ್ರಿಯವರು ಬೆಂಗಳೂರಿಗೆ ಆಗಮಿಸಿ ಇಸ್ರೋ ಕೇಂದ್ರದಲ್ಲಿ ಬಂದು ಕೂತಿದ್ದರು. ದೇಶಕ್ಕೆ ದೇಶವೇ, ಅಲ್ಲದೆ ವಿದೇಶಗಳು ಕೂಡ ಭಾರತದ ಚಂದ್ರಯಾನ 2 ಮಿಷನ್ ಬಗ್ಗೆ ಕುತೂಹಲಗೊಂಡು ಆ ನೌಕೆ ಚಂದ್ರನ ಮೇಲೆ ಇಳಿಯುವುದನ್ನು ಕಾತುರದಿಂದ ಕಾಯುತ್ತಿದ್ದರು. ಎಲ್ಲ ಪ್ರಕ್ರಿಯೆಗಳೂ ಸರಿಯಾಗಿಯೇ ನಡೆದಿದ್ದವಾದರೂ ಚಂದ್ರನ ಮೇಲೆ ರೋವರ್ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡು ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ಅಂದರೆ ಕೊನೆಯ ಕೆಲವೇ ಮೀಟರುಗಳ ದೂರದಲ್ಲಿ ಸಂಪರ್ಕ ಕಡಿತಗೊಂಡು ರೋವರ್ ಚಂದ್ರನ ಗುರುತ್ವಾಕರ್ಷಣೆಗೆ ಸಿಕ್ಕಿ ಬಿದ್ದುಬಿಟ್ಟಿತ್ತು. ಹಾಗೆ ಚಂದ್ರಯಾನ- 2 ಕೊನೇ ಹಂತದಲ್ಲಿ ವಿಫಲವಾಗಿತ್ತು. ಆಗ ಆಗಿನ ಇಸ್ರೋ ಅಧ್ಯಕ್ಷ ಭಾಸ್ಕರ್ ಕಣ್ಣೀರು ಹಾಕಿ, ದೇಶದ ಪ್ರಧಾನ ಮಂತ್ರಿ ಮತ್ತು ಇಡೀ ದೇಶದ ಕ್ಷಮೆ ಕೇಳಿದ್ದರು. ಅವತ್ತು ಭಾಸ್ಕರ ಅವರನ್ನು ಪ್ರಧಾನಿ ಸಂತೈಸಿದ ಘಟನೆಯು ಇಡಿ ವಿಶ್ವಕ್ಕೆ ಮಾದರಿ ನಡೆ ಎನ್ನಿಸಿತು. ಆ ಘಟನೆಯು ವಿಜ್ಞಾನಿಗಳಲ್ಲಿ ತುಂಬಾ ಆತ್ಮವಿಶ್ವಾಸ ಮೂಡಿಸಿತ್ತು. ಬಹುಶಹ ಆದಿ ಆತ್ಮವಿಶ್ವಾಸ ಮತ್ತು ನಿರಂತರ ಕೆಲಸಗಳ ಪ್ರಯತ್ನಗಳ ಫಲವಾಗಿ ಇದೀಗ ಚಂದ್ರಯಾನ ಮೂರು ಯಶಸ್ವಿಯಾಗಿ ತಯಾರಾಗಿ ಉಡ್ಡಯನ ಆಗಿದೆ. ಈ ಬಾರಿ ಮತ್ತೆ ಭರವಸೆಯ ಹೊತ್ತು ಚಂದ್ರಯಾನ-3 ಚಂದ್ರನ ಅಂಗಳಕ್ಕೆ ತಲುಪಲು ಎಲ್ಲಾ ತಯಾರಿ ಮಾಡಿಕೊಂಡು ಹೊರಟಿದೆ. ಈ ಸಲ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲವಾಗುವುದಿಲ್ಲ. ರಾತ್ರಿ ಹಗಲು ಕೆಲಸ ಮಾಡಿ ನೌಕೆ ಕಟ್ಟಿದ ವಿಜ್ಞಾನಿಗಳ ಪ್ರಯತ್ನ ಈ ಬಾರಿ ವಿಫಲವಾಗುವುದಿಲ್ಲ. ಚಂದ್ರಯಾನ 3 ರ ಮಿಷನ್ ಸಕ್ಸಸ್ ರಿಪೋರ್ಟ್ ತಿಳಿಯಲು ನಾವು ಆಗಸ್ಟ್ ನ ತನಕ ಕಾಯಬೇಕಾಗಿದೆ.

ಚಂದ್ರಯಾನ-3: ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು (ಶುಕ್ರವಾರ) ಮಧ್ಯಾಹ್ನ 2.35 ಕ್ಕೆ ಚಂದ್ರಯಾನ-3 ನೌಕೆಯು ಬೆಂಕಿ ಬೆರೆಸಿಕೊಂಡು ಉರಿಯುತ್ತ ಸುಧೀರ್ಘ ಪ್ರಯಾಣಕ್ಕೆ ಹೊರಟಿದೆ. ಚಂದ್ರಯಾನ ನೌಕೆಯು ಆಗಸ್ಟ್ 23 ಅಥವಾ 24ರಂದು ಚಂದ್ರನ ಅಂಗಳಕ್ಕೆ ತಲುಪಲಿದೆ ಎಂದು ತಿಳಿದುಬಂದಿದೆ.

ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ ಅಂತ್ಯದಲ್ಲಿ ನಡೆಯಲಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಭಾರತ ಆಗಲಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ.

ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ 3 (LM-3) ಎಂದು ಮರುನಾಮಕರಣ ಮಾಡಲಾಗಿದ್ದು, ಈ GSLV 43.5 ಮೀಟರ್ ಎತ್ತರವಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವಿದೆ. ಚಂದ್ರಯಾನ-3 ನ್ನು 615 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಲ್ಯಾಂಡರ್ ರೋವರ್ ಮತ್ತು ಪ್ರೊಪಲ್ಟನ್ ಮಾಡ್ಯೂಲ್‌ಗೆ ಸುಮಾರು 250 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಉಡಾವಣೆಗೆಂದೇ 365 ಕೋಟಿ ರೂಪಾಯಿ ಖರ್ಚಾಗಿದೆ ಎಂದು ತಿಳಿದುಬಂದಿದೆ.

ವರದಿ-ಸಂಪಾದಕೀಯಾ

ನಮ್ಮ.ತಾವರಗೇರಾ ನ್ಯೂಸ್.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9535969428 ನಂಬರ್ ಸೇರಿಸಿಕೊಳ್ಳಿ.

Leave a Reply

Your email address will not be published. Required fields are marked *