ತುಂಗಾಭದ್ರ ಎಡದಂಡೆ ಕಾಲುವೆಯ ನೀರಿನ ರಾಜಕೀಯ ಮಾಡಿ ಗೆಲ್ಲುವ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೆ, ಒಂದು ವಾರ ಮುಂಚಿತವಾಗಿ ರೈತರ ಹೊಲಗಳಿಗೆ ನೀರು ಹರಿಯುತ್ತಿತ್ತು. 20,30 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಕಾಲುವೆಗೆ ನೀರು ಬಿಡುವ ಪರಂಪರೆ ಈ ಹಿಂದಿನಿಂದ ಮುಂದುವರೆದಿದೆ. ಕಳೆದ ವರ್ಷ ಜುಲೈ 17 ರಂದೆ ಕಾಲುವೆಗೆ ನೀರು ಬಿಡಲಾಗಿತ್ತು. ಮಳೆ ತಡವಾಗಿ ಬಂದರೂ ಕೂಡ ಕಳೆದ ವಾರವೆ ಜಲಾಶಯದಲ್ಲಿ 20 ರಿಂದ 30 ಟಿಎಂಸಿ ನೀರು ಸಂಗ್ರಹವಾಗಿದೆ. ಬಂಡಿಹರ್ಲಪುರ ಹತ್ತಿರದ (ತುಕ್ಕು ಹಿಡಿದ ಕಾರಣದಿಂದ) ಕ್ರೆಸ್ಟ್ ಗೇಟ್ ರಪೇರಿಯ ಕಾರಣದಿಂದ ಕಾಲುವೆಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗೆ ತುಂಗಭದ್ರಾ ಜಲಾಶಯ ವ್ಯಾಪ್ತಿಯ ಎಲ್ಲಾ ರಾಜಕೀಯ ಮುಖಂಡರು ಮತ್ತು ಶಾಸಕರು, ಸಂಸದರು ಸಚಿವರು ಪ್ರಮುಖ ಹೊಣೆಗಾರರಾಗಿದ್ದಾರೆ. ಊರಿಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡುವ ಗಾದೆಯಂತೆ, ಪರಸ್ಥಿತಿ ಕೈ ಮೀರಿದ ಮೇಲೆಯೆ ಎಲ್ಲರೂ ಕಾಲುವೆ ಮೇಲೆ ಬರುತ್ತಾರೆ. ತಮ್ಮ ಮಕ್ಕಳ ಅಥವಾ ಕುಟುಂಬದ ಸದಸ್ಯರ ಮದುವೆಗಳು ನಡೆದರೆ 6 ತಿಂಗಳ ಮುಂಚೆಯೇ ತಯಾರಿ ಮಾಡಿಕೊಳ್ಳುತ್ತಾರೆ. 15-20 ಲಕ್ಷ ರೈತರ ಜೀವನಕ್ಕೆ ಆಧಾರವಾದ ಕಾಲುವೆ ಕುರಿತು ಮುಂಚಿತವಾಗಿ ಪ್ಲ್ಯಾನ್ ಮಾಡಲಾಗದ ಜನ ಪ್ರತಿನಿಧಿಗಳನ್ನು ಏನೆಂದು ಕರೆಯಬೇಕು. ಸರ್ಕಾರ ಯಾವುದೆ ಇರಲಿ ಅಥವಾ ಬದಲಾಗಲೀ, ಅಧಿಕಾರಿಗಳು, ನಿಗಮಮಂಡಳಿಗಳು ಇದ್ದೆ ಇರುತ್ತವೆ. ಡಿಸೆಂಬರ ಜನವರಿ ತಿಂಗಳಲ್ಲಿ ಕ್ರೆಸ್ಟ್ ಗೇಟ್ ಹಾಗೂ ಕಾಲುವೆಯ, ರಪೇರಿಯ ಕ್ರಿಯಾ ಯೋಜನೆ ತಯಾರಿಸಿಕೊಂಡು ಏಪ್ರಿಲ್‍ನಲ್ಲಿ ಕಾಮಗಾರಿ ಆರಂಭಿಸಿದ್ದರೆ ಈ ರೀತಿಯ ಸಮಸ್ಯೆಗಳು ತಲೆ ದೂರುತಿರಲಿದಲ್ಲ. ಫೆಬ್ರುವರಿ, ಮಾರ್ಚನಲ್ಲಿ ಟೆಂಡರ್ ನಡೆದರೂ ಜೂನ್ ಕೊನೆಯ ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಲಕ್ಷಾಂತರ ರೈತರು ಸಮಸ್ಯೆ ಅನುಭವಿಸಬೇಕಾಗಿದೆ. ಪತ್ರಿಕೆ ಮಾದ್ಯಮಗಳಲ್ಲಿ ಯುದ್ಧ ಮಾಡುವವರು ಈ ಕುರಿತು ಮುಂಚಿತವಾಗಿಯೆ ಮುತುವರ್ಜಿ ವಹಿಸಿದ್ದರೆ, ಅವರು ನಿಜವಾಗಲು ಜನ ಸೇವಕರಾಗುತ್ತಿದ್ದರು.
ಏನೆ ಆಗಲಿ 80-90 ಟಿಎಂಸಿ ನೀರು ಸಂಗ್ರಹವಾಗಿದೆ ತಕ್ಷಣ ನೀರು ಬಿಡಲು ಶಾಸಕರು ಸರ್ಕಾರಕ್ಕೆ ಒತ್ತಾಯಿಸಬೇಕು. ನೀರು ಬಿಟ್ಟ ನಂತರ ಕಾಲುವೆಯ ಯಾವುದೆ ಭಾಗದಲ್ಲಿ ಅವಘಡ ಸಂಭವಿಸದಂತೆ ನೋಡಿಕೊಳ್ಳಬೇಕು. ತಡವಾಗಿ ಮಳೆ ಆಗಿರುವುದರಿಂದ ಕಾಲುವೆ ಅಕ್ಕಪಕ್ಕದಲ್ಲಿ ಬಿರುಕುಗಳು, ಬೊಂಗಾಗಳು ಕಾಣಿಸಿಕೊಳ್ಳುವುದು ಸಹಜ. .ಹಾಗಾಗಿ ನೀರಾವರಿ ಭಾಗದ ಎಲ್ಲಾ ಹಾಲಿ, ಮಾಜಿ ಶಾಸಕರು ಸಚಿವರು ಕನಿಷ್ಠ ಒಂದು ವಾರವಾದರೂ ಕಾಲುವೆ ಕುರಿತು ಮುನ್ನಜಾಗೃತಿ ವಹಿಸಬೇಕು ಮತ್ತು ರಾತ್ರಿ ಕಾಲುವೆಯ ಮೇಲೆ ನಿದ್ರಿಸಿ ಆದರ್ಶ ಪ್ರದರ್ಶನ ಮಾಡಲಿ. ಏಕಂದರೇ ಈಗಾಗಲೆ ಒಂದು ತಿಂಗಳು ತಡವಾಗಿ ನೀರು ಬರುವುದರಿಂದ ಆಕಸ್ಮಿಕ ಏನಾದರು ಸಮಸ್ಯೆಯಾಗಿ ಅವಘಡ ಸಂಭವಿಸಿದರೆ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಇದಲ್ಲದೆ, ಕಂಪನಿ ಕಾರ್ಖಾನೆಗಳು ಜಲಾಶಯದ ನೀರನ್ನು ಅಕ್ರಮವಾಗಿ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು. ನೀರಾವರಿ ಇಲಾಖೆಯ ಪ್ರಮುಖ ಅಧಿಕಾರಿಗಳು ಕಂಪನಿಗಳೊಂದಿಗೆ ಶಾಮೀಲಾಗಿ ರೈತರಿಗೆ ವಂಚನೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈಗಾಗಲೆ ಸುಳ್ಳು ಲೆಕ್ಕ ತೋರಿಸಿ ಹೊಳ ಹರಿವು ಹಾಗೂ ನೀರಿನ ಸಂಗ್ರಹದ ಕುರಿತು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ನಾಳೆ ಅಥವಾ ಇನ್ನೆರಡು ದಿನಗಳಲ್ಲಿ ನೀರು ಬಿಟ್ಟರೆ ರೈತರ ಹೊಲಗಳಿಗೆ ನೀರು ಮುಟ್ಟಲು 10 ರಿಂದ 15 ದಿನಗಳು ಬೇಕಾಗುತ್ತದೆ. ಕೊನೆಯ ಭಾಗದ ರೈತರ ಹೊಲಗಳಿಗೆ ತಿಂಗಳ ನಂತರ ನೀರು ದೊರೆಯುತ್ತವೆ. ಆಗಸ್ಟ್ 15 ರ ನಂತರ ನಾಟಿ ಮಾಡಿದ ಭತ್ತದ ಇಳುವರಿ ಚನ್ನಾಗಿ ಬರುವುದಿಲ್ಲ. ಏಕೆಂದರೆ ಭತ್ತ ತೆನೆ ಬಿಡುವ ವೇಳೆಗೆ ಚಳಿಗಾಲ ಆರಂಭವಾಗುತ್ತದೆ. ಇದೇನೆ ಇರಲಿ ತಕ್ಷಣ ನೀರು ಬಿಡಬೇಕು ಮತ್ತು ಒಂದು ತಿಂಗಳವರಿಗೆ ಮೂರು ಜಿಲ್ಲೆಯ ಜಿಲ್ಲಾಡಳಿತ, ಮಾಜಿ.ಹಾಲಿ ಶಾಸಕರು, ಸಚಿವರು, ಸಂಸದರು ಎಲ್ಲಾ ಜನಪ್ರತಿ ನಿಧಿಗಳು ಪಕ್ಷ ಬೇದ ಬಿಟ್ಟು ರೈತರ ಬದುಕಿಗೆ ಸ್ಪಂದಿಸಬೇಕೆಂದು ಒತ್ತಾಯಿಸುತ್ತೇವೆ. ಡಿ.ಹೆಚ್.ಪೂಜಾರ ರಾಜ್ಯಾಧ್ಯಕ್ಷರು ಡಿ.ಎಸ್.ನಿರ್ವಾಣಪ್ಪ ರಾಜ್ಯಕಾರ್ಯದರ್ಶಿ.
ವರದಿ-ಸಂಪಾದಕೀಯಾ