ದೊರೆಗಳು ತಿಂದ ಉಪ್ಪು, ನೀರು ಕುಡಿಯುವ ನಾವು.ಆಮಿರ್ ಬನ್ನೂರು||

Spread the love

ಕೊಡುವುದು, ಕೊಳ್ಳುವುದು

ಈ ಮಣ್ಣಿನ ನೆತ್ತರ ಗುಣ

ಇಲ್ಲಿನ ಕಥೆ, ಕವಿತೆಗಳು ಹೇಳುತ್ತಿದೆ

ಪಣತೊಟ್ಟು ಪಡೆದುಕೊಂಡೆವೆಂದು

ಇತಿಹಾಸಗಳಲ್ಲೂ ಅಷ್ಟೇ…

ಕೊಟ್ಟು, ಕಳೆದುಕೊಂಡ ಮೇಲೆ

ಬರೆದು, ಭಾಷಣ ಮಾಡಿ ಫಲವಾದರೂ ಏನು

ಮರಳಿ ಪಡೆಯಲು ಸಾಧ್ಯವಾದೀತೇ..?

ಈ ವ್ಯಥೆಗೆ ಮೌಲ್ಯವಿಲ್ಲ!

 

ಅವರು ಪ್ರಭಾವಿಗಳೇ ಸರಿ!

ಅದರೆ, ತಪ್ಪು ಮಾಡುವುದಿಲ್ಲವೆಂದಿಲ್ಲ

ಕೇಳಿದ್ದು, ಕೊಟ್ಟಿದ್ದು ಎರಡೂ ತಪ್ಪೇ

ಇದರಿಂದ, ಇವರಿಂದ ಕಳೆದುಕೊಂಡ

ನಷ್ಟ ಭರಿಸುವವರಾರು

ಒಂದು ಎರಡಾಗುವುದೆಂದರೆ ಇದು!

ದೊರೆಗಳು ಉಪ್ಪು ತಿಂದಿದ್ದಕ್ಕೆ

ನಾವು ನೀರು ಕುಡಿಯುತ್ತಿದ್ದೇವೆ…

 

ಕೊಟ್ಟ, ಪಡೆದ

ಅವರು, ಇವರು ಮತ್ತು ನಾವು ತೃಪ್ತರೆ?

ಸ್ವಾರ್ಥಕ್ಕಾಗಿ ಈ ಮಣ್ಣನ್ನು

ನಮ್ಮದು, ನಿಮ್ಮದೆಂದು ವಿಂಗಡಿಸಿದವರೆ

ಸಾಧ್ಯವಾದರೆ

ಆಕಾಶ, ಸೂರ್ಯ, ಚಂದ್ರನ ಹಂಚಿಕೊಳ್ಳಿ…

ಹಾಗಾದಲ್ಲಿ,

ನೀವು ನ್ಯಾಯವಂತರು!

 

ನಮ್ಮವರಿಂದಲೇ ಪ್ರತೀ ದಿನ ಕೊಲೆಯಾಗುತ್ತಿರುವ

ನೆತ್ತರು ಕೊಟ್ಟು ಪ್ರಾಣ ತೆತ್ತು ನಾಡಿಗಾಗಿ ಮಡಿದ

ಕಣ ಕಣದಲ್ಲೂ ಭರವಸೆಯ ಭಾರತಕ್ಕೆ

ಕನಸು ಕಂಡು, ನನಸಾಗದೆ ಮುದುಡಿ ಹೋದ

ಮಹನೀಯರ ಆರ್ಥನಾದ ಕೇಳಿಸಿದರೂ,

ಕೇಳದಂತೆ ನಟಿಸಿ ಸ್ವಾತಂತ್ರ್ಯವನ್ನು ಸಂಭ್ರಮಿಸುವ

ಇಲ್ಲಿನ ಸಂಪೂರ್ಣ ನೆಲ ಉಳಿಸಲಾಗದ

ನಾವು ನಿಜವಾದ ದೇಶ ಪ್ರೇಮಿಗಳು..!

‘ಇಂಡಿಯಾ’ವನ್ನು ಕಟ್ಟುವವರು..!

 

ನೆಲ ಬರೆದು ಕೊಟ್ಟ ದೊರೆಗಳೇ

ಮಣ್ಣಿಗಾಗಿ ಹೋರಾಡಿದ

ಪ್ರತಿ ಹೆಣಗಳ ಒಂದು ಭಾಗವನ್ನು

ಅವರಿಗೂ ಹಂಚಬೇಕಿತ್ತು

ನಾಡಿಗಾಗಿ ಮಿಡಿದ ಹೋರಾಟಗಾರರಿಗೆ

ಆ ಮಣ್ಣಲ್ಲೂ ಮಲಗುವ ಹಕ್ಕಿದೆ

ಅದು ಬೇರೆಯಲ್ಲ, ಒಂದೇ ಊರು

ನಿಮ್ಮೊಳಗಿನ ಧರ್ಮಾಂದತೆ ಎರಡಾಗಿಸಿದೆ

 

ಭಾರತ ಬಿಡುಗಡೆಗೊಂಡಿದ್ದು

ಬ್ರಿಟೀಷರಿಂದಲೋ?

ಧರ್ಮ, ಜಾತಿಯ ಕ್ರಿಮಿಗಳಿಂದಲೋ?

ಇದು ಆತ್ಮಾವಲೋಕನದ ಸಮಯ

ಸ್ವರಾಜ್ಯ ಸುರಾಜ್ಯವಾಗಲು

ಇನ್ನೂ ಹೋರಾಟದ ಅಗತ್ಯವಿದೆ…

-ಆಮಿರ್ ಬನ್ನೂರು.

Leave a Reply

Your email address will not be published. Required fields are marked *