ಅದೊಂದು ಪುಟ್ಟ ಪ್ರಪಂಚ ಅಲ್ಲಿರುವವರಿಗೆ ಬಾಹ್ಯಲೋಕದ ಆಗುಹೋಗುಗಳ ಅವಶ್ಯಕತೆ ಇಲ್ಲಾ, ಯಾವುದೇ ಜಾತಿ ಧರ್ಮದ ಸೋಂಕು ಇರುವುದಿಲ್ಲಾ,ಅಧಿಕಾರದ ದಾಹ, ಸಿರಿ ಬಡತನದ ಗೋಜು ಹಾಗೂ ಒಣ ಪ್ರತಿಷ್ಠೆಯ ಗಂಧವೇ ಸುಳಿದಿರುವುದಿಲ್ಲಾ ಕೇವಲ ಸಾಧನೆ ಗುರಿಯನ್ನು ಹಿಂಬಾಲಿಸಿ ತಮ್ಮ ಸ್ವಂತ ಜೀವನದ ಸುಖ,ಕಷ್ಟಗಳನ್ನು ಬದಿಗೊತ್ತಿ ಯಶ ಸಾಧಿಸುವ ಛಲವೊಂದೇ ಆ ಪರಿಶ್ರಮ ಜೀವಿಗಳ ಉದ್ದೇಶ. ಅವರಾರು ಗೊತ್ತೆ ?ಅವರೇ ! ನಮ್ಮ ವಿಜ್ಞಾನಿಗಳು.ಈ ಸೌರಮಂಡಲವು ಒಂದು ವಿಸ್ಮಯ ಲೋಕ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಈ ಮಂಡಲದ ಜೀವಂತ ಗ್ರಹವಾಗಿರುವ ಭೂಮಿಯ ಮೇಲೆ ಜೀವಿಗಳ ಉಗಮವವಾಯಿತು. ಆವಾಗಿನಿಂದ ಇಲ್ಲಿಯ ತನಕ ಒಂದಿಲ್ಲಾ ಒಂದು ವಿಸ್ಮಯಗಳ ಆವಿಷ್ಕಾರಗಳು ನಡೆಯುತ್ತಲೇ ಇವೆ.ಅಲ್ಲದೆ ಬೇರೆ ಬೇರೆ ಗ್ರಹ ಹಾಗೂ ಉಪಗ್ರಹಗಳಲ್ಲಿನ ಕೌತುಕಗಳನ್ನು ಅನ್ವೇಶಿಸುವುದು ಬುದ್ಧಿಜೀವಿಗಳಾದ ಮಾನವರಲ್ಲಿಯ ಒಂದು ಗುರಿಯಾಗಿದೆ.ಅಂತಹ ಗುರಿಯನ್ನು ಬೆನ್ನು ಹತ್ತಿದ ನಮ್ಮ ದೇಶದ ವಿಜ್ಞಾನಿಗಳ ಅವಿರತ ಶ್ರಮಕ್ಕೆ ಒಂದು ಸಲಾಂ !!ಹಗಲು ರಾತ್ರಿಗಳೆನ್ನದೆ ಸ್ವ ಜೀವನದ ಸಮಯವನ್ನು ಮುಡಿಪಿಟ್ಟು ವಿಜ್ಞಾನ ಲೋಕದಲ್ಲಿ ದೇಶದ ಕೀರ್ತಿಯನ್ನು ಅಚ್ಚು ಹಾಕಬೇಕು ಎಂದು ನಿರಂತರ ಅಂದಾಜನೆ, ಆಲೋಚನೆ, ಸಂಯೋಜನೆ ಹಾಗೂ ಯಶಸ್ವಿ ಕಾರ್ಯದಲ್ಲಿ ಸತತ ತೊಡಗಿಸುವ ಕೆಲಸವೂ ಒಂದು ಸಾಧನೆಯಾಗಿದೆ ಅಲ್ಲವೇ !! ಇಂತಹ ಸನ್ನಿವೇಶದಲ್ಲಿ ಐರೋಪ್ಯ ದೇಶಗಳು ನಮ್ಮ ದೇಶದ ವಿಜ್ಞಾನ ತಂತ್ರಜ್ಞಾನದ ಬಗ್ಗೆ ಲಘುವಾಗಿ ಮಾತನಾಡಿದ್ದಲ್ಲದೆ, ಅಪಹಾಸ್ಯ ಮಾಡಿದ್ದರುಈಗ ಅವರೆಲ್ಲರೂ ತಮ್ಮ ಕರಗಳಿಂದಲೇ ತಾವಾಡಿದ ಮಾತುಗಳಿಗೆ ಬೆಲೆ ತೆರಬೇಕಾಗಿದೆ.ಇದಕ್ಕೆ ಕಾರಣ ನಮ್ಮ ದೇಶದ ಹೆಮ್ಮೆಯ ವಿಜ್ಞಾನ ಸಂಶೋಧನಾ ಕೇಂದ್ರವಾದ ಇಸ್ತ್ರೋನ, ಇತಿಹಾಸ ಲಿಖಿತ ಮೂರು ಚಂದ್ರಯಾನ ಉಡಾವಣೆಗಳು. ಅದರಲ್ಲಿ ಅತ್ಯಂತ ಮಹತ್ವದ ಹಾಗೂ ಪ್ರಪಂಚದ “ಮೊದಲ” ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ನಮ್ಮ “ಚಂದ್ರಯಾನ 3” ಉಡಾವಣೆಯಾಗಿದೆ.ಇಂತಹ ನಮ್ಮ ಸಂಸ್ಥೆಯ ಮೈಲುಗಲ್ಲುಗಳ ಬಗ್ಗೆ ತಿಳಿಯೋಣ
ನಮ್ಮ ಭಾರತ ದೇಶದ ಹೆಮ್ಮೆ ಮತ್ತು ಗೌರವವಾದ ಇಸ್ರೊ ಈಗ ಹೊಸ ಮೈಲುಗಲ್ಲಿಗೆ ಕಾಲಿಟ್ಟಿದೆ.
ರಾಕೆಟ್ ಮತ್ತು ಉಪಗ್ರಹದ ಭಾಗಗಳನ್ನು ಸೈಕಲ್ ಮತ್ತು ಎತ್ತಿನ ಗಾಡಿಗಳಲ್ಲಿ ಸಾಗಿಸುವುದರಿಂದ ಮೊದಲ ಪ್ರಯತ್ನದಲ್ಲಿ ಮಂಗಳ ಗ್ರಹವನ್ನು ತಲುಪುವವರೆಗೆ ಇಲ್ಲಿದೆ ನಮ್ಮ ಹೆಮ್ಮೆಯ ಇಸ್ರೋನ ಕಥೆ, 1950 ರಲ್ಲಿ ಯುಎಸ್ಎ ಮತ್ತು ಸೋವಿಯತ್ ಒಕ್ಕೂಟ ರಾಷ್ಟ್ರಗಳು ಮಾತ್ರ ಪ್ರಸಿದ್ಧ ಬಾಹ್ಯಾಕಾಶ ಓಟಕ್ಕೆ ಪ್ರವೇಶಿಸಿದ್ದವು
ಆದರೆ ಭಾರತದಲ್ಲಿ 12 ವರ್ಷಗಳ ನಂತರ, ಇಸ್ರೋ ಎಂಬ ಸಸಿ ಯನ್ನು ಇಬ್ಬರು ಮಹಾನ್ ವಿಜ್ಞಾನಿಗಳಾದ ಹೋಮಿ ಬಾಬಾ ಮತ್ತು ವಿಕ್ರಮ್ ಸಾರಾಬಾಯಿ ಬೆಳೆಸಿದರು, 1962 ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ (INCOSPAR) ಅನ್ನು ಸ್ಥಾಪಿಸಲಾಯಿತು.
ವಿಕ್ರಂ ಸಾರಾಭಾಯಿ ಅವರ ಪರಿಶ್ರಮದ ಫಲ ನಮ್ಮ ಸ್ವತಂತ್ರ ದಿನವಾದ 15-ಅಗಸ್ಟ್-1969 ರಲ್ಲಿ INCOSPAR ಅನ್ನು ISRO ಆಗಿ ಸ್ಥಾಪಿಸಲಾಯಿತು , ಅದರ ಆರಂಭಿಕ ದಿನಗಳಲ್ಲಿ ಇಸ್ರೋಗೆ ಸುಧಾರಿತ ತಂತ್ರಜ್ಞಾನ ಇರಲಿಲ್ಲ,ಅಲ್ಲದೆ ಮತ್ತೊಂದು ಆಘಾತವೆಂದರೆ ಆಗ ವಿಕ್ರಂ ಸಾರಾಭಾಯಿ ಅವರ ನಿಧನ. ಇಸ್ರೋ ಗೆ ಇದು ತುಂಬಲಾಗದ ನಷ್ಟ ಕೊಟ್ಟಿತು,ನಂತರ ಇಸ್ರೋವನ್ನು,ಇಸ್ರೋ ಜವಾಬ್ದಾರಿಯನ್ನೂ Dr, APJ ಕಲಾಂ ಮತ್ತು ಸತೀಶ್ ದವನ್ ವಹಿಸಿಕೊಂಡರು , ಸೋವಿಯತ್ ಒಕ್ಕೂಟ ರಾಷ್ಟ್ರದ ಸಹಾಯದಿಂದ ಭಾರತವು ತನ್ನ ಮೊದಲ ಉಪಗ್ರಹ “ಆರ್ಯಭಟ”ವನ್ನು 1975 ರಲ್ಲಿ ಇಸ್ರೋ ತಯಾರಿಸಿತು , ಆದರೆ ನಂತರ 1980 ರಲ್ಲಿ 5 ವರ್ಷಗಳ ನಂತರ ರೋಹಿಣಿ ಉಪಗ್ರಹವು ಭಾರತದಿಂದ ಸ್ವದೇಶಿ ಉಡಾವಣೆಗೊಂಡ ಮೊದಲ ಉಪಗ್ರಹವಾಯಿತು,
ಇಸ್ರೋ ನಂತರ ತನ್ನದೇ ಆದ ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸಿತು PSLV , GSLV. ಇದರ ಫಲದಿಂದ ನಾವು ಈಗ ದೂರಸಂಪರ್ಕ, ಭೂ ವೀಕ್ಷಣೆ, ವಿಪತ್ತು ನಿರ್ವಹಣೆ ಮುಂತಾದವುಗಳ ಬಗ್ಗೆ ತಿಳಿಯಬಹುದು.
ಇಂದು ಇಸ್ರೋ 3 ವಿಶ್ವ ದಾಖಲೆಗಳನ್ನು ಮಾಡಿದೆ,
1)2008 ರಲ್ಲಿ ಚಂದ್ರಯಾನ 1 ಮಿಷನ್ ಚಂದ್ರನ ಮೇಲೆ ನೀರನ್ನು ಕಂಡುಹಿಡಿದಾಗ ಮೊದಲ ಪ್ರಮುಖ ಮೈಲಿಗಲ್ಲು ಬಂದಿತು.
2) 2013 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ್) ಅನ್ನು ಪ್ರಾರಂಭಿಸಿದಾಗ ಇಸ್ರೋಗೆ ಮತ್ತೊಂದು ಗರಿ.ಪ್ರಮುಖ ಅಂಶವೆಂದರೆ ವಿದೇಶಿ ಮಾಧ್ಯಮಗಳು ಭಾರತವನ್ನು ಅಪಹಾಸ್ಯ ಮಾಡಿದವು, ಆದರೆ 2014 ರಲ್ಲಿ ಭಾರತವು ತನ್ನ ಮೊದಲ ಪ್ರಯತ್ನದಲ್ಲಿ ಮಂಗಳವನ್ನು ತಲುಪಿದ ಏಕೈಕ ರಾಷ್ಟ್ರವಾಯಿತು.
3) ಇಸ್ರೋ 2017 ರಲ್ಲಿ 104 ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆ ಮಾಡುವ ಮೂಲಕ ಮಾಡಿದ ಕಾರ್ಯ ವಿಶ್ವ ದಾಖಲೆಯಾಗಿದೆ.
ಮತ್ತು ನಾವು 36 ಕಿಂತ ಹೆಚ್ಚು ದೇಶಗಳ 342 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದೇವೆ
2019 ರ ಚಂದ್ರಯಾನ 2 ಭಾಗಶಃ ಯಶಸ್ವಿಯಾಗಿತ್ತು, ಆದರೆ ಕೊನೆಯಲ್ಲಿ ಹಂತದಲ್ಲಿ ಯಶ ಕಾಣಲಿಲ್ಲಾ. ಪ್ರಸ್ತುತ 23.08.2023ರ ಬುಧವಾರದಂದು ಸಂಜೆ 6.40 ರ ಸಮಯ ಭಾರತೀಯ ಇತಿಹಾಸದಲ್ಲಿ ಅಷ್ಟೇ ಅಲ್ಲಾ ಪ್ರಪಂಚದ ಇತಿಹಾಸದಲ್ಲೂ ಭಾರತದ ಸಾಧನೆಯನ್ನು ಬರೆದಿಡುವುದು ಔಚಿತ್ಯವಾಗಿದೆ. ಮೊದಲೆರಡು ಉಡಾವಣೆಗಳು ಚಂದ್ರನ ಉತ್ತರ ಭಾಗದಲ್ಲಿ ಕಾರ್ಯನಿರ್ವಹಿಸಿದ್ದರೆ , ಮೂರನೇ ಉಡಾವಣೆಯು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದು ಅನ್ವೇಷಣೆ ಪ್ರಾರಂಭಿಸಿರುವುದು. ಈ ಉಡಾವಣೆಯು ಒಟ್ಟು ಐದು ಉಪಕರಣಗಳನ್ನು ಹೊಂದಿದ್ದು ವಿಕ್ರಂ ಲ್ಯಾಂಡರ್ ನಲ್ಲಿ ಮೂರು ಉಪಕರಣಗಳು ಹಾಗೂ ಪ್ರಗ್ಯಾನ್ ರೋವರ್ ನಲ್ಲಿ ಎರಡು ಉಪಕರಣಗಳು ತಮ್ಮ ಯಶಸ್ವಿ ಅನ್ವೇಷಣಾ ಕಾರ್ಯದಲ್ಲಿ ಮಗ್ನವಾಗಿರುತ್ತವೆ. ಚಂದ್ರನ ನೆಲದ ಮೇಲೆ ಪ್ರಗ್ಯಾನ್ ರೋವರ್ ಇಸ್ರೋದ ಲೋಗೋ,ರಾಷ್ಟ್ರಧ್ವಜ,ಹಾಗೂ ಅಶೋಕ ಸ್ತಂಭದ ಚಿತ್ರಗಳನ್ನು ಅಚ್ಚಾಕಿರುವುದು ಪ್ರತಿಷ್ಠೆಯಾಗಿದೆ.ಅಲ್ಲದೇ ಅಲ್ಲಿಯ ವಾತಾವರಣ,ಖನಿಜ ಸಂಪತ್ತು ಅನ್ಯಜೀವಿಗಳ ಇರುವಿಕೆ, ಇನ್ನೂಅನೇಕ ವಿಸ್ಮಯಗಳ ಆವಿಷ್ಕಾರಕ್ಕೆ ನಮ್ಮ ಯಂತ್ರಗಳು ಯಶಸ್ವಿ ಕಾರ್ಯಾಚರಣೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಇನ್ನೂ ಹೆಚ್ಚಿನ ಆವಿಷ್ಕಾರ, ಅನ್ವೇಷಣೆಗಳು ನಮ್ಮ ಸಂಸ್ಥೆಯಿಂದ ಮೂಡಿಬಂದು ಜಗತ್ತಲ್ಲಿ ಭಾರತ ಒಂದು ಶಕ್ತಿಯಾಗಿ ಪ್ರಜ್ವಲಿಸಬೇಕೆಂಬುದೇ ಸಮಸ್ತ ದೇಶ ಜನತೆಯ ಆಶಯವಾಗಿದೆ.
ವಿಶೇಷ ಲೇಖನ :- ಅಶ್ವಿನಿ.ಅಂಗಡಿ ಬದಾಮಿ.