ಗೌಡರ ಮೊಮ್ಮಗನಾದ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ರದ್ಧು !!
ನಾಮ ಪತ್ರ ಸಲ್ಲಿಕೆಯ ವೇಳೆ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದಂತಹ ಪ್ರಜ್ವಲ್ ರೇವಣ್ಣ ಇವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ ಹೈಕೋರ್ಟ್ ನಿನ್ನೆ ತಾನೆ ಆದೇಶ ಹೊರಡಿಸಿದೆ. ಆದರೆ ಈ ಅನರ್ಹತೆಗೆ ಸ್ವತಃ ಜೆಡಿಎಸ್ ನ ಈ ಹಾಲಿ ಶಾಸಕರೇ ಕಾರಣರಾಗಿದ್ದಾರೆ. ಹೌದು, ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಶಾಸಕರಾಗಿರುವ ಎ. ಮಂಜುರವರು ಪ್ರಜ್ವಲ್ ರೇವಣ್ಣನವರ ವಿರುದ್ಧ ಹೈಕೋರ್ಟ್ ಮೊರೆ ಹೋಗಿರುವದೇ ಸದ್ಯ ಸಂಸದ ಸ್ಥಾನ ಅನರ್ಹ ಆಗಲು ಕಾರಣವಾಗಿದೆ. ಹಾಗಿದ್ರೆ ನಡೆದದ್ದಾರು ಏನು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. ಏನಿದು ಘಟನೆ? ಸದ್ಯ ಜೆಡಿಎಸ್ ಶಾಸಕರಾಗಿರುವ ಎ ಮಂಜು ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಭಾರೀ ಪೈಪೋಟಿಯ ನಡುವೆಯೂ JDS ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ವಿರುದ್ಧ ಸೋತಿದ್ದರು. ಸೋಲುಂಟಾಗಿದ್ದರಿಂದ ಈ ವೇಳೆ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಿ ನನಗೆ ಸಂಸದ ಸ್ಥಾನವನ್ನು ನೀಡಬೇಕು ಎಂದು ಎ.ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಇನ್ನು ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಬೆನ್ನಲ್ಲಿಯೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿ, ಅಭೂತಪೂರ್ವ ಗೆಲುವು ಸಾಧಿಸಿ ಈಗ JDS ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ವಿಪರ್ಯಾಸ ಎಂಬಂತೆ ಸದ್ಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ಅರ್ಜಿ ಪರಿಶೀಲಿಸಿ ಪ್ರಜ್ವಲ್ ರೇವಣ್ಣನವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಎ. ಮಂಜು ಅವರ ಪ್ರತಿಕ್ರಿಯೆ ಏನು? ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎ. ಮಂಜು ಅವರು, ಹೈಕೋರ್ಟ್ ಆದೇಶ ಸ್ಬಾಗತಿಸುತ್ತೇನೆ. ಆದೇಶದ ಪ್ರತಿ ನೋಡಿ ಮುಂದೆ ಕಾನೂನು ಹೋರಾಟ ಮಾಡುವ ಬಗ್ಗೆ ತಿರ್ಮಾನ ಮಾಡಲಾಗುತ್ತದೆ. ಈಗ ಒಂದೇ ಪಕ್ಷದಲ್ಲಿ ಇದ್ದೇವೆ. ದೇವೆಗೌಡರು, ರೇವಣ್ಣ ಹಾಗೂ ಪ್ರಜ್ವಲ್ ಜೊತೆಗೆ ಚರ್ಚೆ ಆಗಲಿದೆ. ನಂತರ ಮುಂದೇನು ಅಂತ ತಿರ್ಮಾನ ಮಾಡ್ತೇನೆ. ನಾನು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡುವ ಬಗ್ಗೆ ಮುಂದೆ ತಿರ್ಮಾನ ಮಾಡುತ್ತೇನೆ. ನನ್ನ ಮನವಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಅರ್ಜಿ ಹಾಕುವಾಗ ಪಕ್ಷ ಬೇರೆಯಾಗಿತ್ತು. ನಾನು ಬಿಜೆಪಿ ಯಲ್ಲಿ ಇದ್ದಾಗ ಅರ್ಜಿ ಹಾಕಿದ್ದೆನು. ಈಗ ಜೆಡಿಎಸ್ ನಲ್ಲಿ ಇದ್ದೇನೆ. ಕೊನೆಗಾದರೂ ಆದೇಶ ನಮ್ಮ ಪರ ಬಂದಿದೆ ಎಂದು ಹೇಳಿದರು. ಅಲ್ಲದೆ ಅವರು ಸರಿಯಿದ್ದೇವೆ ಅನ್ನುವುದಾದರೆ ಕಾನೂನು ಹೋರಾಟ ಮಾಡಲಿ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಮಾಡಿ ಸಮರ್ಥಿಸಿಕೊಳ್ಳಲಿ. ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರೆ ಶಿಕ್ಷೆ ಅನುಭವಿಸಲಿ. ಯಾರೇ ಆದರೂ ಸರಿ, ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು. ಬದಲಾದ ಸನ್ನಿವೇಶದಲ್ಲಿ ನಾನು ಜೆಡಿಎಸ್ ಶಾಸಕನಾಗಿದ್ದೇನೆ. ಹಾಗೆಂದು ಜೆಡಿಎಸ್ ಸೇರುವಾಗ ಯಾವುದೇ ಷರತ್ತು ವಿಧಿಸಿರಲಿಲ್ಲ. ಪ್ರಜ್ವಲ್ ವಿರುದ್ಧ ಕೇಸ್ ದಾಖಲಿಸಿದ್ದ ವಿಚಾರವಾಗಿ ಅಂದೇ ಮಾಹಿತಿ ನೀಡಿದ್ದೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ವೇಳೆಯೂ ಹೇಳಿದ್ದೆ ಎಂದರು.
ವರದಿ-ಸಂಪಾದಕೀಯಾ