ಗುರು ಈ ಲೋಕದ ಸೃಷ್ಟಿಕರ್ತ ಆಗಿದ್ದಾನೆ, ಆ ಕಾರಣಕ್ಕಾಗಿ ಲೋಕವೇ ಗುರುವಿಗೆ ತಲೆಬಾಗುತ್ತದೆ. ಆದಿಶಂಕರರ ಈ ಮಾತಿನಿಂದ ಹೀಗೂ ತಿಳಿದುಕೊಳ್ಳಬಹುದು. ದೇವರೊಬ್ಬನು ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಅದೇ ಜಗತ್ತನ್ನು ಸಂಕೀರ್ಣಗೊಳಿಸಿ ಅಭಿವೃದ್ಧಿಪಡಿಸಲು ”ಗುರುಗಳು” ಎಂಬ ವಿಶೇಷ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದಾನೆ ಎಂದು. ಶಿಕ್ಷಕರು ಭಗವಂತನ ಹತ್ತಿರದ ವಿಶೇಷವಾದ ಅವನ ಬ್ರಹ್ಮಾಂಡ ಜಗತ್ತನ್ನು ಶ್ರೀಮಂತಗೊಳಿಸುವ ಜವಾಬ್ದಾರಿಯನ್ನ ಹೊತ್ತು ಬಂದ ಪ್ರತಿನಿಧಿಗಳು. ಭಗವಂತನ ಇಚ್ಛೆಯಂತೆ ಶಿಕ್ಷಕರು ನಡೆಯುವುದಾದರೆ ಅವರ ನಡೆ-ನುಡಿಗಳೆಲ್ಲವೂ ಸಮಂಜಸ. ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳ ಬದುಕು ಹಸನಾಗಿಸಲು ಹಾರೈಸಬೇಕು. ಬದುಕಿನಲ್ಲಿ ಗೆದ್ದು ಬರುವ ಬಗ್ಗೆ ಆತ್ಮವಿಶ್ವಾಸವನ್ನು ತುಂಬುವಂತಹ ಆರೋಗ್ಯಕರ ಮಾತುಗಳನ್ನು ಹೇಳಿ ಕೊಡಬೇಕು. ಮಹಾತ್ಮರುಗಳ ಚರಿತ್ರೆಗಳನ್ನು, ಪರಿವರ್ತನೆಗೊಳ್ಳುವ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುತ್ತಲೇ ಇರಬೇಕು. ಕಲಿಸುವ ವಿದ್ಯೆಯಲ್ಲಿ ಪ್ರೀತಿ ಮತ್ತು ವಿಶ್ವಾಸ ಹಾಗೂ ಗೌರವ ಆಳವಾಗಿ ಬೇರೂರಿರಬೇಕು. ಯಾಕೆಂದರೆ ಅದರಿಂದ ಪ್ರೇರಿತವಾಗುವ ಮಕ್ಕಳು ಸಮಾಜದಲ್ಲಿ ಬೆಳೆದು ನಿಂತಾಗಲೇ ಮಾನವ ಜನಾಂಗಕ್ಕೆ ನೆರಳಾಗಲು ಸಾಧ್ಯ. ದ್ವೇಷದ ಹಿನ್ನೆಲೆಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುವುದಾದರೆ ಅದರ ಪರಿಣಾಮ ಸಮಾಜಕ್ಕೆ ಮಾರಕವಾಗಿ ಬಾಧಿಸುತ್ತದೆ. ಅಂತಹ ವಿದ್ಯಾರ್ಥಿಗಳಿಂದ ಭಗವಂತನ ಸಂಪತ್ಭರಿತವಾದ ಈ ನಾಡು ಕಲುಷಿತಗೊಳ್ಳುತ್ತದೆ. ಓರ್ವ ವ್ಯಕ್ತಿಗೆ ಗುರುಗಳು ಎಷ್ಟು ಮುಖ್ಯ ಎಂಬುದನ್ನು ರಾಷ್ಟ್ರಕವಿ ಕುವೆಂಪುರವರು ತಮ್ಮ ಮಾತಿನ ಮೂಲಕ ಹೀಗೆ ಹೇಳುತ್ತಾರೆ:… “ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ನುಗ್ಗಿದುದು ಮುಂದೆ ಧೀರದಂಡು! ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ;ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!. ನೂರಕ್ಕೆ ನೂರರಷ್ಟು ಸತ್ಯವಾದ ಮಾತು ಇದು. ಜೀವನದಲ್ಲಿ ಗುರಿ ಮುಖ್ಯವಾದಷ್ಟು, ಗುರುಗಳೂ ಮುಖ್ಯ. ಯಾಕೆಂದರೆ ಬಹುತೇಕರ ಜೀವನಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದ ಕಾರಣದಿಂದ ಜೀವನದ ದಿಕ್ಕೇ ಬದಲಾಗಿ ಯಶಸ್ವಿಯಾದ ಉದಾಹರಣೆಗಳು ಸಾಕಷ್ಟಿವೆ. “ವಿದ್ಯೆ ಕಲಿಸಿ, ಸರಿ ತಪ್ಪನ್ನು ತಿದ್ದಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ” ಎಂಬ ಮಾತೇ ಅಮೋಘ. ಶಿಕ್ಷಕರು ಸಮಾಜಕ್ಕೆ ಒಳಿತು ಕೆಡುಕು ಯಾವುದೆಂದು ನಿರ್ಣಯಿಸುವವರು. ತಂದೆ ತಾಯಿಯ ನಂತರ ಸಮಾಜದಲ್ಲಿನ ಪ್ರತಿಯೊಬ್ಬರು ಶರಣಾಗುವುದು ವಿದ್ಯೆ ಕಲಿಸುವ ಶಿಕ್ಷಕರಿಗೆ. ಶಿಕ್ಷಣದ ಮೂಲ ಉದ್ದೇಶವನ್ನು ತಿಳಿಸಿ, ಪ್ರತಿ ವ್ಯಕ್ತಿಯ ಬದುಕನ್ನು ಬೆಳಗಿಸುತ್ತಾ, ಮನುಷ್ಯನನ್ನು ಸಮಾಜದ ಉನ್ನತ ನಾಗರಿಕರನ್ನಾಗಿ ರೂಪುಗೊಳಿಸುವ ಅತಿ ದೊಡ್ಡ ಜವಾಬ್ದಾರಿ ಹೊತ್ತು ಕಾರ್ಯಾಚರಿಸುವವರೇ ಶಿಕ್ಷಕರು.”ಆನೆ ನಡೆದದ್ದೇ ದಾರಿ” ಎಂಬ ನಾಣ್ಣುಡಿಯ ಹಾಗೆ ಬಹುತೇಕ ವಿದ್ಯಾರ್ಥಿಗಳು ಶಿಕ್ಷಕರು ತೋರಿಸುವ ದಾರಿಗೆ ಅವಲಂಬಿತರಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಸಂಗಗಳೇ ಹೆಚ್ಚು. ಓರ್ವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಸಮಾಜಕ್ಕೆ ಪೂರಕವಾಗಿ ಅಥವಾ ಮಾರಕವಾಗಿ ಬೆಳೆಯಬೇಕೋ ಎಂಬುದನ್ನು ನಿರ್ಧರಿಸುವವನೇ ಶಿಕ್ಷಕ. ಆದರೆ ಶಿಕ್ಷಣ ಮತ್ತು ಶಿಕ್ಷಕ ಸರಿ ದಾರಿಯನ್ನಸ್ಟೇ ತೋರುತ್ತದೆ ಎಂಬುದಂತೂ ಸತ್ಯ.
ವರದಿ-ಸಂಪಾದಕೀಯಾ.