ಹೈದರಾಬಾದ್‌–ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಣೆ,

Spread the love

ಹೈದರಾಬಾದ್ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಣೆ,

ನಳದುರ್ಗ ಮತ್ತು ಮುನಿರಾಬಾದ್‌ ಬಳಿ ಯುದ್ಧವಾಗಿ ನಿಜಾಮನು ನಾಲ್ಕು ದಿನಗಳಲ್ಲಿ ಸೋಲೊಪ್ಪಿಕೊಂಡನು. ಆಗ ಹೈದರಾಬಾದ್ ಪ್ರಾಂತ ಭಾರತದ ಭಾಗವಾಯಿತು. ಅದೇ ಕಾರಣಕ್ಕಾಗಿ ಪ್ರತಿ ವರ್ಷದ ಸೆ. 17ರಂದು ಹೈದರಾಬಾದ್ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಗ್ರಾಮಗಳಲ್ಲಿರುವ ಹಿಂದು ಸಮುದಾಯದ ಮೇಲೆ ದಾಳಿ ಮಾಡಿ ಜಮೀನುಗಳಲ್ಲಿಯ ಬೆಳೆ ನಾಶ ಮಾಡುವದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವದು, ಹೆಂಗಸರ ಮೇಲೆ ಅತ್ಯಾಚಾರಗೈದು ವಿರೂಪಗೊಳಿಸುವದು, ಮಕ್ಕಳು ಮುದುಕರೆನ್ನದೆ ಕಂಡವರನ್ನೆಲ್ಲ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುವದು, ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವದು ಇವೆಲ್ಲ ಪ್ರಜಾ ಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರಗಗಳು. ೧೯೪೬-೪೮ರ ನಡುವೆ ರಜಾಕಾರರು ನಡೆಯಿಸಿದ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ:  ೧. ಕಲಬುರ್ಗಿ ಜಿಲ್ಲೆಯಲ್ಲಿ 98 ಗ್ರಾಮಗಳ ಮೇಲೆ ದಾಳಿ, ೪೨ ಕೊಲೆ, ೩೬ ದರೋಡೆ ಹಾಗು ೩೪ ಮಹಿಳೆಯರ ಮೇಲೆ ದೌರ್ಜನ್ಯ. ೨. ಬೀದರ ಜಿಲ್ಲೆಯಲ್ಲಿ ೧೭೬ ಗ್ರಾಮಗಳ ಮೇಲೆ ದಾಳಿ, ೧೨೦ ಕೊಲೆ, ೨೩ ಮಹಿಳೆಯರ ಮೇಲೆ ದೌರ್ಜನ್ಯ. ೩. ರಾಯಚೂರು ಜಿಲ್ಲೆಯಲ್ಲಿ ೯೪ ಗ್ರಾಮಗಳ ಮೇಲೆ ದಾಳಿ, ೨೫ ಕೊಲೆ, ೬೩ ಮಹಿಳೆಯರ ಮೇಲೆ ದೌರ್ಜನ್ಯ. ‘ಕಾಟೊ, ಲೂಟೊ ಔರ ಬಾಟೊ’ ಎನ್ನುವದು ರಜಾಕಾರರಿಗೆ ಕಾಶೀಮ ರಜವಿಯ ಆದೇಶವಾಗಿತ್ತು.  ಈ ಸಂದರ್ಭದಲ್ಲಿ ರಾಮಚಂದ್ರ ವೀರಪ್ಪ ಎನ್ನುವವರ ಸಾಹಸದ ಕೃತ್ಯವೊಂದನ್ನು ಇಲ್ಲಿ ನೆನೆಯಬೇಕು. ಹುಮನಾಬಾದದಲ್ಲಿಯ ಬಸವೇಶ್ವರ ಗುಡಿಗೆ ಹೋಗಿ ಪೂಜೆ ಮುಗಿಸಿಕೊಂಡು ಬರುತ್ತಿದ್ದ ಮಾನಿನಿಯೊಬ್ಬಳನ್ನು ನೋಡಿದ ರಜಾಕಾರರು ನಡುಬೀದಿಯಲ್ಲಿಯೇ ಅವಳ ಮಾನಹರಣಕ್ಕೆ ಮುಂದಾದರು. ಈ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ರಾಮಚಂದ್ರ ವೀರಪ್ಪ ಎನ್ನುವ ತರುಣ ಜೀವದ ಹಂಗು ತೊರೆದು ಅವಳನ್ನು ರಕ್ಷಿಸಿದ. ಇವನನ್ನು ಸಾಯಹೊಡೆದು ರಜಾಕಾರರು ಅಲ್ಲಿಂದ ತೆರಳಿದರು. ಆದರೆ ರಾಮಚಂದ್ರ ಬದುಕುಳಿದ ಹಾಗು ಸ್ವತಂತ್ರ ಭಾರತದಲ್ಲಿ ಲೋಕಸಭೆಗೆ – ತನ್ನ ಜೀವಿತಾವಧಿವರೆಗೂ– ಸದಸ್ಯರಾಗಿ ಚುನಾಯಿತರಾಗುತ್ತಿದ್ದರು.  ಪೋಲೀಸ ದೌರ್ಜನ್ಯ ಪೋಲೀಸರೂ ಸಹ ರಜಾಕಾರರಿಗೆ ಕಡಿಮೆ ಇಲ್ಲದಂತೆ ವರ್ತಿಸುತ್ತಿದ್ದರು. . ನಿಜಾಮನು ಹೊರಡಿಸಿದ ‘ಕೊಡಲಿ ಬರಾದ್’ ಫರ್ಮಾನ ಮೇರೆಗೆ ಪೋಲೀಸರು ಹಿಂದುಗಳ ಬಳಿಯಿದ್ದ ನಿಯಮಬದ್ಧ ಬಂದೂಕುಗಳನ್ನಲ್ಲದೆ, ಕೊಡಲಿ, ಕುಡಗೋಲುಗಳನ್ನು ಸಹ ಕಿತ್ತುಕೊಂಡು ರಜಾಕಾರರಲ್ಲಿ ಹಂಚಿದರು. ೧೯೪೬ನೆಯ ಇಸವಿಯ ಕಾರಹುಣ್ಣಿವೆಯೆಂದು ಕಲ್ಬುರ್ಗಿಯ ಮಹಾಗಾಂವದ ಗ್ರಾಮಸ್ಥರೆಲ್ಲ ಸೇರಿ ಹಬ್ಬವನ್ನು ಆಚರಿಸುತ್ತಿದ್ದಾಗ, ರಜಾಕಾರರ ದೊಡ್ಡ ಗುಂಪೊಂದು ಗ್ರಾಮದ ಮೇಲೆ ದಾಳಿ ಮಾಡಿತು. ಗಂಡಸರೆಲ್ಲ ಊರಿನ ಒಂದು ಪಾರ್ಶ್ವಕ್ಕೆ ನಡೆದಾಗ ರಜಾಕಾರರು ಊರಿನಲ್ಲಿ ನುಗ್ಗಿ, ಮನೆಗಳನ್ನು ಲೂಟಿ ಮಾಡುತ್ತ, ಹೆಂಗಸರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ತಕ್ಷಣವೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟ್ಟಿ ಗುರುಬಸವ್ವ ಮೊದಲಾದ ಮಹಿಳೆಯರು ಮನೆಗಳ ಮಹಡಿ ಏರಿ ರಜಾಕಾರರ ಮೇಲೆ ಕವಣೆಗಲ್ಲುಗಳನ್ನು ಬೀಸಿದ್ದಲ್ಲದೆ ಕಾದ ಎಣ್ಣೆಯನ್ನು ಸುರುವತೊಡಗಿದರು. ರಜಾಕಾರರು ಹಿಮ್ಮೆಟ್ಟಬೇಕಾಯಿತು. ಆ ದಿನದಿಂದ ಹಲವು ಮಹಿಳೆಯರು ಸಾರ್ವಜನಿಕವಾಗಿ ಗಾಂಧಿ ಟೊಪ್ಪಿಗೆ ಧರಿಸಲಾರಂಭಿಸಿದರು. ಚಿಕ್ಕೇನಕೊಪ್ಪದಲ್ಲಿ ಶ್ರಾವಣಮಾಸದಲ್ಲಿ ಬಸವೇಶ್ವರ ಜಾತ್ರೆ ನಡೆಯುವ ದಿನದಂದು, ೧೨ ಸಪ್ಟಂಬರ ೧೯೪೭ರಂದು ಮಹದೇವಪ್ಪ ಹುಚ್ಚಪ್ಪ ದೊಡ್ಡಮನಿ, ತೇದಿ ಒಕ್ಕಲದ ಚನ್ನಪ್ಪ, ಅಡಿಗೆ ಮನಿ ಶಿವಲಿಂಗಪ್ಪ, ಮಲ್ಲಪ್ಪ ಹಕಾರಿ, ಮಹಾಲಿಂಗಯ್ಯ, ಅಕ್ಕಸಾಲಿ ಗುರಪ್ಪ, ದೇವಪ್ಪ ಮೊದಲಾದವರು “ವಂದೇ ಮಾತರಮ್” ಎಂದು ಘೋಷಿಸುತ್ತ ಚಳುವಳಿ ನಡೆಸಿದರು. ಈ ಸತ್ಯಾಗ್ರಹಿಗಳನ್ನು ಬಂಧಿಸಿದ ಪೋಲೀಸರು , ಪ್ರತೀಕಾರವಾಗಿ ರಜಾಕಾರರೊಡನೆ ಚಿಕ್ಕೇನಕೊಪ್ಪದ ಮೇಲೆ ದಾಳಿ ಮಾಡಿದರು. ಗ್ರಾಮಸ್ಥರನ್ನು ಬಗೆಬಗೆಯಾಗಿ ಹಿಂಸಿಸಿ ಮನೆಗಳನ್ನು ಲೂಟಿ ಮಾಡಿದರು. ಮಹಾದೇವಪ್ಪ ಸ್ಥಾಪಿಸಿದ ವಾಚನಾಲಯವನ್ನು ಸುಟ್ಟು ಬೂದಿ ಮಾಡಿದರು. ಮಳ್ಳಿ ಕೃಷ್ಣರಾವ ಎನ್ನುವ ವಿದ್ಯಾರ್ಥಿ ಸತ್ಯಾಗ್ರಹಿಯನ್ನು ಹುಡುಕುತ್ತ ಮಳ್ಳಿ ಗ್ರಾಮಕ್ಕೆ ಬಂದ ಪೋಲೀಸರು ಕೃಷ್ಣರಾಯರ ತಂದೆ ಮಹಿಪತಿರಾಯರನ್ನು, ಚಿಕ್ಕಪ್ಪ ರಾಮರಾಯರನ್ನು, ಅಣ್ಣ ನಾರಾಯಣರಾಯರನ್ನು ಹಾಗು ತಮ್ಮ ಗುರುರಾಯನನ್ನು ಮನೆಯಂಗಳದಲ್ಲಿಯೆ ಗುಂಡಿಟ್ಟು ಕೊಂದರು. ಅದು ಸಾಲದೆ, ಊರಿನಲ್ಲಿ ಸಿದ್ದರಾಮ, ಶೇಷಪ್ಪ ಪತ್ತಾರ, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ,ಔದೋಜಿ ಮತ್ತು ಬಸಲಿಂಗಪ್ಪ ಎನ್ನುವ ಗ್ರಾಮಸ್ಥರನ್ನು ಸಹ ಗುಂಡಿಟ್ಟು ಕೊಂದರು ೧೯೪೮ ಮೇ ತಿಂಗಳ ಮೊದಲ ವಾರದಲ್ಲಿ ರಜಾಕಾರರು ಬೀದರ ಜಿಲ್ಲೆಯ ಗೋರ್ಟಾ ಎನ್ನುವ ಗ್ರಾಮದ ಮೇಲೆ ದಾಳಿ ಮಾಡಿ, ಅಲ್ಲಿದ್ದ ಎರಡುನೂರು ಹಿಂದುಗಳನ್ನೆಲ್ಲ ಒಟ್ಟುಗೂಡಿಸಿ, ಸುಟ್ಟುಹಾಕಿದರು. ದಕ್ಷಿಣ ಭಾರತದ ಜಾಲಿಯನವಾಲಾಬಾಗ ದುರಂತವೆಂದು ಇದು ಕುಪ್ರಸಿದ್ದವಾಯಿತು. ಭಾಲ್ಕಿಯ ಹಿರೇಮಠ ಸಂಸ್ಥಾನವು ಗಡಿಭಾಗದಲ್ಲಿ ಸಂತ್ರಸ್ಥರಿಗೆ ಆಶ್ರಯ ನೀಡಿತು. ಭೀಮಣ್ಣ ಖಂಡ್ರೆ, ಶಿವಾ ಖಂಡ್ರೆ, ಬಂಡೆಪ್ಪ ಮೊದಲಾದವರು ಬೀದರ ಜಿಲ್ಲೆಯಲ್ಲಿ ರಜಾಕಾರರ ವಿರುದ್ಧ ಹೋರಾಟ ನೆಡೆಸಿದರು. ಇದರ ಪರಿಣಾಮವಾಗಿ, ನಿಜಾಮ್ ಸರ್ಕಾರವು ಅವರ ಆಸ್ತಿಯನ್ನು ಜಪ್ತಿ ಮಾಡಿ, ಅನೇಕ ರೀತಿಯಲ್ಲಿ ತೊಂದರೆ ನೀಡಿತು. ತುಮರಿಕೊಪ್ಪದಲ್ಲಿ ಸಭೆ ನಡೆಯಿಸುತ್ತಿದ್ದ ಜನರ ಮೇಲೆ ಪೋಲೀಸರು ಗುಂಡಿನ ದಾಳಿ ಮಾಡಿ ಹಿರೆಗೊಣ್ಣಾಗರದ ಪಿಂಜಾರ ಅಲಿಸಾಬ ಮತ್ತು ಕುನ್ನಾಪುರದ ಹನುಮಂತಪ್ಪ ಎನ್ನುವವರನ್ನು ಬಲಿ ತೆಗೆದುಕೊಂಡರು. ಅದೇ ಊರಿನ ಮೇಲೆ ಮರುದಿನ ರಜಾಕಾರರ ಜೊತೆಗೆ ಮತ್ತೊಮ್ಮೆ ದಾಳಿ ಮಾಡಿದರು. ಬಾಂದಿನಾಳದ ಮರಗವ್ವನನ್ನು ಹಿಡಿದುಕೊಂಡು ಹಾಡುಹಗಲಲ್ಲೆ ಅತ್ಯಾಚಾರ ಮಾಡಿ ಸಾಯಿಸಿದರು. ಹಾಬಲಕಟ್ಟೆಯ ವೃದ್ಧೆ ಯಮುನವ್ವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದು ಹಾಕಿದರು. []ಈ ಕಾರಣಗಳಿಂದಾಗಿ ಚಳುವಳಿಗಾರರು ವಿಮೋಚನಾ ಚಳುವಳಿಯನ್ನು ಎರಡು ಸ್ತರಗಳಲ್ಲಿ ಸಂಘಟಿಸಬೇಕಾಯಿತು: I. ಅಹಿಂಸಾತ್ಮಕ ಚಳುವಳಿಯನ್ನು ಮುಂದುವರಿಸುವದು.  II. ರಜಾಕಾರರ ವಿರುದ್ಧ ಆತ್ಮರಕ್ಷಣೆಗಾಗಿ ಪ್ರಜೆಗಳ ಸಂಘಟನೆಯನ್ನು ಏರ್ಪಡಿಸುವದು.

ವರದಿ-ಮಹೇಶ ಶರ್ಮಾ

Leave a Reply

Your email address will not be published. Required fields are marked *