ಹರಿದು ಹೋಗಿದೆ ಕೌದಿ ಹೊಲಿಯುವವರ ಬದುಕು.

Spread the love

ಹರಿದು ಹೋಗಿದೆ ಕೌದಿ ಹೊಲಿಯುವವರ ಬದುಕು.

ಮನೆಯಲ್ಲಿನ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರ ಬಟ್ಟೆಗಳನ್ನು ಬಳಸಿ ತಯಾರಾಗುವ ಕೌದಿ ಅವಿಭಕ್ತ ಕುಟುಂಬದ ಅನ್ಯೋನ್ಯತೆಯನ್ನು ಸಾರಿ ಹೇಳುವಂತಿರುತ್ತದೆ. ಒಂದೇ ಸೂರಿನಡಿ, ಒಂದೇ ಹಾಸಿಗೆಯಲ್ಲಿ ಮನೆಯ ಸದಸ್ಯರೆಲ್ಲರೂ ಮಲಗುವ ಪರಿಪಾಠ ಇತ್ತು. ಪ್ರತ್ಯೇಕತೆ ಎಂಬ ಮಾತೇ ಆಗಿರಲಿಲ್ಲ. ಆಗೆಲ್ಲ ಹೊದೆಯಲು ದೊಡ್ಡದಾದ ಒಂದೇ ಕೌದಿ ಬಳಸುತ್ತಿದ್ದರು. ಮನೆಯಲ್ಲಿನ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರ ಬಟ್ಟೆಗಳನ್ನು ಬಳಸಿ ತಯಾರಾಗುವ ಕೌದಿ ಅವಿಭಕ್ತ ಕುಟುಂಬದ ಅನ್ಯೋನ್ಯತೆಯನ್ನು ಸಾರಿ ಹೇಳುವಂತಿರುತ್ತದೆ. ಮಲಗುವಾಗ ನನಗೆ ಜಾಸ್ತಿ ಬೇಕು, ನನಗೆ ಜಾಸ್ತಿ ಬೇಕು ಎಂದು ಕೌದಿಗಾಗಿ ಜಗಳವಾಡುತ್ತಿದ್ದ ಬಾಲ್ಯದ ದಿನಗಳು ಎಲ್ಲರಿಗೂ ನೆನಪಿರಬಹುದು. ಉತ್ತರ ಕರ್ನಾಟಕದಲ್ಲಿ ಕೌದಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಇಲ್ಲಿನ ಬಹುತೇಕ ಕುಟುಂಬಗಳಲ್ಲಿ ಇಂದಿಗೂ ಮಲಗುವಾಗ ಹೊದ್ದುಕೊಳ್ಳಲು ಕೌದಿ ಬಳಸುತ್ತಾರೆ. ಕೌದಿ ಇರದ ಮನೆಯೇ ಇಲ್ಲ ಎನ್ನಬಹದು ಅಷ್ಟರಮಟ್ಟಿಗೆ ಕೌದಿ ಇಲ್ಲಿನ ಜನ ಜೀವನವನ್ನು ಆವರಿಸಿದೆ. ಕೌದಿ ಹೊಲೆಯಲು ಇಂಥದ್ದೇ ಬಣ್ಣದ, ಇಷ್ಟೇ ಗಾತ್ರದ ಬಟ್ಟೆಗಳೇ ಬೇಕೆಂದೇನಿಲ್ಲ. ಮನೆಯಲ್ಲಿನ ಹಳೆಯ ಸೀರೆ, ನೈಟಿ, ಚೂಡಿದಾರ್ ಸೇರಿದಂತೆ ನಿಷ್ಪ್ರಯೋಜಕ ಯಾವ ಬಟ್ಟೆಗಳನ್ನಾದರೂ ಬಳಸಿ ಕೌದಿ ಹೊಲೆಯಲಾಗುತ್ತದೆ. ಸಾಂಪ್ರದಾಯಿಕ ಕೌದಿಗಳಲ್ಲಿ ಒಂದು ಕೌದಿಯಂತೆ ಮತ್ತೊಂದನ್ನು ತಯಾರಿಸಲು ಆಗುವುದಿಲ್ಲ. ಏಕೆಂದರೆ ಆ ಕೌದಿಗಳಲ್ಲಿ ಬಳಸುವ ಬಟ್ಟೆಗಳು ಬೇರೆಬೇರೆಯೇ ಆಗಿರುತ್ತವೆ. ಆ ಎಲ್ಲ ಬಟ್ಟೆಗಳನ್ನು ನಿರ್ದಿಷ್ಟ ಆಕಾರಕ್ಕೆ ಕತ್ತರಿಸಿ, ಜೋಡಿಸಿಕೊಂಡು, ಸೂಜಿ ದಾರದಿಂದ ಹೊಲೆದು ತಯಾರಾಗುವ ಬಣ್ಣ ಬಣ್ಣದ ಕೌದಿ ಜಾನಪದ ಸೊಗಡಿನ ಸಂಕೇತದಂತೆ ಕಾಣುತ್ತದೆ.

ದುಡಿಯಲು ಬೇರೆ ಬೇರೆ ಊರುಗಳಿಗೆ ತೆರಳಿದ ಜನರಿಗೆ ಮನೆಯಲ್ಲಿದ್ದಾಗ ದೊರೆಯುತ್ತಿದ್ದ ಅಮ್ಮನ, ಅಜ್ಜಿಯ ಮಡಿಲು ಸಿಕ್ಕದೇ ಹೋಗುತ್ತದೆ. ಅವರಿಗೆಲ್ಲ ಪ್ರೀತಿಪಾತ್ರರ ನೆನಪು ಕಾಡುತ್ತಲೇ ಇರುತ್ತದೆ. ಆಗೆಲ್ಲ ಕೌದಿ ಸಹಾಯಕ್ಕೆ ಬರುತ್ತದೆ. ಅಮ್ಮ, ಅಜ್ಜಿಯಂದಿರ ಸೀರೆಗಳಿಂದಲೇ ತಯಾರು ಮಾಡಲಾದ ಕೌದಿಗಳು ಅವರು ದೂರದಲ್ಲಿದ್ದರೂ ಸಹ ಅವರ ಮಡಿಲಲ್ಲಿ ಮಲಗಿರುವಂತೆ ಭಾಸವಾಗುತ್ತದೆ. ಕೌದಿಯಲ್ಲಿನ ಪರಿಮಳ ಅವರ ನೆನಪನ್ನು ಮತ್ತೆ ತಾಜಾ ಆಗಿಸುತ್ತದೆ. ಇದು ತಾತ್ಕಾಲಿಕ ಎನ್ನಿಸಿದರೂ ಇಂದಿನ ಸ್ಪಧಾತ್ಮಕ ಯುಗದಲ್ಲಿ ಅನಿವಾರ್ಯವಾಗಿದೆ. ಕೌದಿ ಕಲೆ ಹಳೆಯ ತಂತ್ರಜ್ಞಾನ ನಿಜ. ಆದರೆ ಕೌದಿ ಬೇಸಿಗೆಯಲ್ಲಿ ತಣ್ಣನೆಯ, ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಇದೊಂಥರ ಬಹುಪಯೋಗಿ ಹೊದಿಕೆ ಎಂದರೂ ತಪ್ಪಾಗಲಾರದು. ಇಂದಿನ ಆಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ಯಾವ ಚಾದಾರ, ಬ್ಲಾಂಕೆಟ್‍ಗಳು ಸಹ ಮಲಗುವಾಗ ಕೌದಿಯಷ್ಟು ಮುದ ನೀಡಲಾರವು. ಹಿಂದೆಲ್ಲ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದವು. ಆಗೆಲ್ಲ ಒಂದೇ ಸೂರಿನಡಿ, ಒಂದೇ ಹಾಸಿಗೆಯಲ್ಲಿ ಮನೆಯ ಸದಸ್ಯರೆಲ್ಲರೂ ಮಲಗುವ ಪರಿಪಾಠ ಇತ್ತು. ಪ್ರತ್ಯೇಕತೆ ಎಂಬ ಮಾತೇ ಆಗಿರಲಿಲ್ಲ. ಆಗೆಲ್ಲ ಹೊದೆಯಲು ದೊಡ್ಡದಾದ ಒಂದೇ ಕೌದಿ ಬಳಸುತ್ತಿದ್ದರು. ಮನೆಯಲ್ಲಿನ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರ ಬಟ್ಟೆಗಳನ್ನು ಬಳಸಿ ತಯಾರಾಗುವ ಕೌದಿ ಅವಿಭಕ್ತ ಕುಟುಂಬದ ಅನ್ಯೋನ್ಯತೆಯನ್ನು ಸಾರಿ ಹೇಳುವಂತಿರುತ್ತದೆ. ಮಲಗುವಾಗ ನನಗೆ ಜಾಸ್ತಿ ಬೇಕು, ನನಗೆ ಜಾಸ್ತಿ ಬೇಕು ಎಂದು ಕೌದಿಗಾಗಿ ಜಗಳವಾಡುತ್ತಿದ್ದ ಬಾಲ್ಯದ ದಿನಗಳು ಎಲ್ಲರಿಗೂ ನೆನಪಿರಬಹುದು.

ಇಂದಿನ ಆಧುನಿಕ ಯುಗದಲ್ಲೂ ಕೌದಿಯೇನೋ ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವುದು ಸಂತಸದ ಸಂಗತಿಯೇ. ಆದರೆ ಅದನ್ನು ಹೊಲಿಯುವವರ ಬದುಕು ಮಾತ್ರ ಹರಿಯುತ್ತ ಸಾಗಿರುವುದು ಶೋಚನೀಯ. ಹೌದು ಮೋಚಿಗೇರ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದವರಾದ ಕೌದಿ ಹೊಲೆಯುವವರ ಜೀವನ ಇಂದು ಅತಂತ್ರವಾಗಿದೆ. ಕೈತುಂಬ ಕೆಲಸವಿದ್ದರೂ ಸಹ ಸೂಕ್ತ ಮೌಲ್ಯ ದೊರೆಯದೇ ಅವರ ಜೀವನ ಮಟ್ಟ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಆಳುವ ಸರ್ಕಾರಗಳು ಈವರೆಗೂ ಕೂಡ ಇವರತ್ತ ಗಮನಹರಿಸದಿರುವುದು ವಿಪರ್ಯಾಸ.

ಕೊಪ್ಪಳ ಸಹ ಕೌದಿ ತಯಾರಿಸುವ ಕಲೆಗೆ ಹೆಸರುವಾಸಿ. ರಾಜ್ಯದಲ್ಲೇ ಅತೀ ಹೆಚ್ಚು ಕೌದಿ ತಯಾರಿಸುವ ಕುಟುಂಬಗಳು ಕೊಪ್ಪಳ ಜಿಲ್ಲೆಯಲ್ಲಿವೆ. ಹನುಮಸಾಗರ, ಮಂಗಳೂರು, ಕಿನ್ನಾಳ, ಭಾಗ್ಯನಗರ ಭಾಗದಲ್ಲಿ ಬಹುಪಾಲು ಮಹಿಳೆಯರೇ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮೀಪದ ಭಾಗ್ಯನಗರವೊಂದರಲ್ಲೇ ಕೌದಿ ಹೊಲೆಯುವುದನ್ನೇ ವೃತ್ತಿಯಾಗಿಸಿಕೊಂಡಿರುವ ಸುಮಾರು ಸಾವಿರ ಕುಟುಂಬಗಳಿವೆ ಎಂಬುದು ಬಹುಪಾಲು ಜನರಿಗೆ ಗೊತ್ತಿರಲಿಕ್ಕಿಲ್ಲ. ಭಾಗ್ಯನಗರ ಪ್ರವೇಶಿಸಿದರೆ ಸಾಕು ದಿನನಿತ್ಯ ಮನೆಯಂಗಳದಲ್ಲಿ, ಪಕ್ಕದ ಕಟ್ಟೆಯ ಮೇಲೆ ಕೌದಿ ಹೊಲೆಯುತ್ತ ಕುಳಿತಿರುವ ನೂರಾರು ಮಹಿಳೆಯರನ್ನು ನೋಡಬಹುದು.

ಇವರೆಲ್ಲ ಸಮೀಪದ ಊರುಗಳಿಂದ, ಓಣಿ, ಓಣಿಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ, ಪ್ರತ್ಯೇಕ ಮೂಟೆಗಳನ್ನು ಕಟ್ಟಿಕೊಂಡು ತರುತ್ತಾರೆ. ಬಳಿಕ ಕೆಲಸದ ಒತ್ತಡ ನೋಡಿಕೊಂಡು ಅವುಗಳನ್ನು ತಮ್ಮ ತಮ್ಮಲ್ಲಿಯೇ ಹಂಚಿಕೊಳ್ಳುತ್ತಾರೆ. ನಿರ್ದಿಷ್ಟ ಆಕಾರಕ್ಕೆ ಬಟ್ಟೆಗಳನ್ನು ಕತ್ತರಿಸಿಕೊಂಡು. ಹೊಲೆಯುವ ಪ್ರಕ್ರಿಯೆ ಆರಂಭಿಸುತ್ತಾರೆ. ಸಣ್ಣಪುಟ್ಟ ಬಟ್ಟೆಗಳನ್ನು ಮೊದಲಿಗೆ ಒಳಪದರದಲ್ಲಿ ಹೊಲೆದುಕೊಳ್ಳುತ್ತಾರೆ. ನಂತರ ಇರುವ ಬಟ್ಟೆಗಳನ್ನು ಆಧರಿಸಿ ಕೌದಿಯ ದಪ್ಪ, ಪದರಗಳನ್ನು ನಿರ್ಣಯಿಸುತ್ತಾರೆ. ಕೌದಿಯ ಒಳಮೈಯ್ಯಲ್ಲಿ ಬಣ್ಣಬಣ್ಣದ ಸಣ್ಣ ಬಟ್ಟೆಗಳಿದ್ದರೆ, ಹೊರಮೈ ದೊಡ್ಡ ಮತ್ತು ಒಂದೇ ಬಣ್ಣದ ಬಟ್ಟೆಯಿಂದ ತಯಾರಿಸಲಾಗುತ್ತದೆ. ಬಹುತೇಕ ಕೌದಿಗಳ ತಯಾರಿಕೆಯಲ್ಲಿ ಮಧ್ಯಮ ಗಾತ್ರದ ಸೂಜಿ ಮತ್ತು ಬಿಳಿ ಬಣ್ಣದ ದಾರವನ್ನೇ ಹೆಚ್ಚಾಗಿ ಬಳಸಲಾಗುತ್ತದೆ.

ಕೌದಿಗಳನ್ನು ಸಣ್ಣ ಹೊಲಿಗೆ ಹಾಕಲಾಗುವ ಹಾಗೂ ದೊಡ್ಡ ಹೊಲಿಗೆ ಹಾಕಲಾಗುವ ಕೌದಿಗಳಾಗಿ ವಿಂಗಡಿಸಲಾಗುತ್ತದೆ. ಸಣ್ಣ ಹೊಲಿಗೆಯ ಕೌದಿಗಳನ್ನು ಪರಿಣಿತಿ ಹೊಂದಿದ ಮಹಿಳೆಯರು ಮಾತ್ರ ತಯಾರಿಸುತ್ತಾರೆ ಎಂಬುದು ವಿಶೇಷ. 4*4 ಮೊಳ ಅಳತೆಯ ಒಂದು ಕೌದಿ ತಯಾರಿಸಲು ಒಬ್ಬ ನುರಿತ ಮಹಿಳೆಗೆ ಸುಮಾರು 4 ದಿನಗಳು ಬೇಕು. ಆದರೂ ಅವರಿಗೆ ದೊರೆಯುವುದು ಕೇವಲ ರೂ. 400 ಮಾತ್ರ. ಅಂದರೆ ದಿನವೊಂದಕ್ಕೆ ಅವರಿಗೆ ಕೇವಲ ರೂ.100 ಕೂಲಿ ದೊರೆತಂತೆ. ಸರ್ಕಾರವೇ ಹೇಳುವಂತೆ ಕೂಲಿಕಾರರಿಗೆ ಕನಿಷ್ಠ ರೂ.268 ಕೂಲಿ ದೊರೆಯಬೇಕು. ಆದರೆ ಒಂದು ಕೌದಿಗೆ ದಿನಗಟ್ಟಲೇ ಕುಳಿತುಕೊಂಡು, ಕೈಯಿಂದಲೇ ಸಾವಿರಾರು ಹೊಲಿಗೆ ಹಾಕಿ, ಸಾಕಷ್ಟು ಶ್ರಮ ಪಡುವ ಇವರಿಗೆ ದೊರೆಯುತ್ತಿರುವುದು ಅತ್ಯಲ್ಪ ಮಾತ್ರ. ಇಷ್ಟರಲ್ಲೇ ಇವರು ಜೀವನ ನಿರ್ವಹಿಸಬೇಕಿರುವುದು ದುರಂತವೇ ಸರಿ. ಕೌದಿಗೇನ ಭಾಳ ಬೇಡಿಕೆ ಐತ್ರಿ. ಮದ್ಲೆಲ್ಲ ಬಟ್ಟಿ ಇಸ್ಕಂದ್ ಬರಾಕ ಊರೂರು, ಓಣೋಣಿ ಅಡ್ಡ್ಯಾಡತಿದ್ವಿ. ಆದ್ರ ಈಗ ಮಂದಿ ನಮ್ಮನ್ನ ಹುಡಿಕ್ಯಂದು ಬರಾಕತ್ತಾರ. ಕ್ಯಲಸೇನಾ ಐತ್ರಿ. ಆದ್ರ ಕೂಲಿ…ನ ಗೀಟಂಗಿಲ್ರೀ. ಮುಂಜಾನಿಂದ ರೋಡ್‍ನ್ಯಾಗ ಕುಂತಗಂದು, ನಡಾ ಹೋಗಂಗ ಹೊಲದ್ರು ದಿನಕ್ಕ ನೂರುಪೆ ಕೂಲಿ ಬೀಳಂಗಿಲ್ಲ. ಈ ಕ್ಯಲಸಾ ಬ್ಯಾಡ ಬಿಡಬೇ ಯವ್ವ ಅಂತ ಮಕ್ಕಳ ಸತ ಬೈತಾವು. ಮನ್ಯಾಗ ಸುಮ್ನ ಕುಂತು ಏನ್ಮಾಡ್ಬಕ್ರೀ? ನಿರ್ವ ಇಲ್ಲದ ಮಾಡಿಕ್ಯಂದು ಹೊಂಟೀವಿ’ ಎಂದು 70 ವರ್ಷದ ರೇಣುಕಮ್ಮ ಬೇಸರ ವ್ಯಕ್ತಪಡಿಸಿದರು. ಅಖಿಲ ಕರ್ನಾಟಕ ಮೋಚಿಗಾರ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೋಳೂರು ಅವರು ಹೇಳುವಂತೆ ಕೌದಿ ಹೊಲೆಯುವ ವೃತ್ತಿಯನ್ನು ಗುಡಿ ಕೈಗಾರಿಕೆಗೆ ಒಳಪಡಿಸಬೇಕು. ಕಾರ್ಮಿಕ ಕಾಯ್ದೆ ವ್ಯಾಪ್ತಿಗೆ ಇವರನ್ನು ಸೇರಿಸಬೇಕು. ಕೌದಿಗಳ ಮಾರಾಟಕ್ಕೆ ಖಾದಿ ಭಂಡಾರ ಮಾದರಿಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಈ ವೃತ್ತಿಯಲ್ಲಿರುವವರಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ರಾಜಕೀಯವಾಗಿ ಸಾಮಾಜಿಕವಾಗಿ ಸೂಕ್ತ ಸ್ಥಾನಮಾನ ಒದಗಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಈ ಸಮುದಾಯಕ್ಕಾಗುತ್ತಿರುವ ಅನ್ಯಾಯ ಸರಿಪಡಿಸಲು ಶಿರಹಟ್ಟಿ ಶಾಸಕರಾಗಿದ್ದ ಮೋಚಿ ಸಮುದಾಯದ ರಾಮಕೃಷ್ಣ ದೊಡ್ಮನಿ ಅವರೊಂದಿಗೆ ತೆರಳಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮದೇ ಸಮುದಾಯದ ಮೀರಾ ಕುಮಾರ್ ಲೋಕಸಭೆಯ ಸ್ಪೀಕರ್ ಆಗಿದ್ದವರು. ಅಲ್ಲದೆ ಅನೇಕರು ಉನ್ನತ ಸ್ಥಾನದಲ್ಲಿದ್ದಾರೆ. ಅವರ್ಯಾರೂ ಕೂಡ ಈ ಸಮುದಾಯಕ್ಕೆ ನ್ಯಾಯ ಒದಗಿಸುವ ಗೋಜಿಗೆ ಹೋಗಿಲ್ಲ’ ಎಂದ ಅವರ ಮಾತಿನಲ್ಲಿ ಅಸಹಾಯಕತೆ ಎದ್ದು ತೋರುತ್ತಿತ್ತು. ಈ ವೃತ್ತಿಯಲ್ಲಿರುವವರು ಬಹುತೇಕರು ಅನಕ್ಷರಸ್ಥರು. ಈ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಸಮುದಾಯದ ಯುವ ಪೀಳಿಗೆ ಈ ವೃತ್ತಿ ಕಲಿಯಲು ಆಸಕ್ತಿ ತೋರಿಸುತ್ತಿಲ್ಲ. ಜಾನಪದ ಕೌದಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ಮನಸ್ಸು ಮಾಡಬೇಕಿದೆ.

ವಿಶೇಷ ವರದಿ ವ್ಯಾಟ್ಸಪ್ ಕೃಪೆ.

Leave a Reply

Your email address will not be published. Required fields are marked *