ಅಪ್ಪನ ಭೇಟಿಯ ಆ ಕ್ಷಣ………
ಹೊಲದಿ….
ಸೀಳಿದ ಕಾವಿನ ಸಲಿಕೆ
ಅಪ್ಪನ ಕೈಯೊಳು…
ಬಾಡಿ ಬೆಂಡಾದ ಬೆಳೆ
ಬಿಸಿಲ ಕಾವೊಳು…
ತೂತಾಗಿ ಚರ್ಮವ ತುತ್ತಾಗಿಸಿದ
ಅಪ್ಪನಾಸರೆಯ ಬನಿಯನ್ …
ಕಾಡಿತೇಕೊ ಬಾಳ ದಿನದ
ಅಪ್ಪನ ಭೇಟಿಯ ಆ ಕ್ಷಣ
ಬದುಕಿನ ಬವಣೆಯ ನೊಗವ ಹೊತ್ತಪ್ಪನ
ಬೆವರು ಹನಿ ಉಂಡ ಕಾವು…
ಸಾಲಾಗಿ ಹರಿವ ನೀರಲ್ಲಿ ಬೆರೆತ
ಅಪ್ಪನ ಕಣ್ಣೀರು…
ಉಂಡ ಉಳ್ಳಗಡ್ಡೆ ಬೇರು
ಹುಲುಸಾಗಿದೆ ದಣಿವ ತಣಿಸಿ…
ಕಾಡಿತೇಕೋ ಬಾಳ ದಿನದ
ಅಪ್ಪನ ಭೇಟಿಯ ಆ ಕ್ಷಣ
ಕಾವು ಮಾತ್ರ ಕೈಗೆ
ಬೆಳೆ ದಲ್ಲಾಳಿ ಜೇಬಿಗೆ..
ಸಲಿಕೆ ಸವೆದೊಗಿದೆ ಶ್ರಮದಲಿ
ಬೆಲೆ ಕೊಲೆಯಾಗಿದೆ….
ಅಪ್ಪ ಮಾತ್ರ ಅದೆ ಶಾಂತ ಸಾಗರ
ಅದೇ ಹೊಲ ಅದೇ ಜಲ…
ಕಾಡಿತೆಕೋ ಬಾಳ ದಿನದ
ಅಪ್ಪನ ಭೇಟಿಯ ಆ ಕ್ಷಣ
ಅಮ್ಮನ ಕೈಯ
ಸಜ್ಜಿ ರೊಟ್ಟಿ, ಪುಂಡೆಪಲ್ಲೆ
ಗೂರ್ಯಾಳ್ ಚಟ್ನಿ,
ಹಸಿಮೆಣಸಿನ ಕಾಯಿ
ಹಸಿ ಹಸಿ ಸೊಪ್ಪಿನ
ಅಪ್ಪನ ಜೋತೆಯ ನಮ್ಮ ಹೊಲದೂಟ …
ಕಾಡಿತೆಕೋ ಬಾಳ ದಿನದ
ಅಪ್ಪನ ಭೇಟಿಯ ಆ ಕ್ಷಣ
ಮನದ ಮೂರುತಿ
ಮನೆಯ ದೇವರು
ಮಾನವೀಯತೆಯ ಮೇರು ಅಪ್ಪ…
ಸುಪ್ತ ಸಾಗರ
ಸರ್ವ ಸಂಪನ್ನ
ನಿಸ್ವಾರ್ಥಿ ನಿಜಗುಣ ದೈವ ಅಪ್ಪ…
ಕಾಡಿತೆಕೋ ಬಾಳ ದಿನದ
ಅಪ್ಪನ ಭೇಟಿಯ ಆ ಕ್ಷಣ
ರಾಮು ಎನ್ ರಾಠೋಡ್ ಮಸ್ಕಿ.