ನೋಡಿದ ತಕ್ಷಣ ಅದು ಬರೇ
ನಗು ಅಂದುಕೊಳ್ಳಬೇಡಿ
ನಾವು, ನೀವು ಕಂಡಂತಲ್ಲ ಅವರು,
ಅವರೊಳಗಿನ ಸೂಕ್ಷ್ಮತೆ ನಾವು
ಅರಿಯಲೇ ಇಲ್ಲ
ನೋಟು ಬದಲಾಗಿರಬಹುದು
ತಾತನ ಆತ್ಮ ತೃಪ್ತಿಯ ಭಾವನೆಯಲ್ಲ
ನೋಟಿನೊಳಗಿನ ತಾತ ನಗುತ್ತಿರುವನು
ದೇಶಕ್ಕಾಗಿ ಹುತಾತ್ಮನಾದೆನೆಂಬ ತೃಪ್ತಿಗೆ
ನೇರವಾಗಿ ಬನ್ನಿ,
ಗುಂಡು ಹಾರಿಸಲೇ ಬೇಕೆಂದಿದ್ದರೆ ಭಯವೇಕೆ
ನಿಮ್ಮ ಗುಂಡೇಟಿಗಿಂತಲೂ ಮೊದಲು
ನೀವು ನೆಕ್ಕಿದ ಬೂಟನ್ನೇ ದಾಟಿ ಬಂದಿಹೆನು
ನಿಮ್ಮ ತುಪಾಕಿನ ಗುಂಡಿನ ಖಜಾನೆ
ಅವರ ನೆಲದಲ್ಲಿ ಯಾವತ್ತೋ ನೋಡಿದ್ದೇನೆ
ಗುಂಡಿನೇಟು ಎದೆಯನ್ನಪ್ಪಳಿಸಿ ಬಂದರೂ
ತಾತ ನಗು ನಗುತ್ತಲೇ ಇದ್ದಾನೆ
ಕೊಲ್ಲಲು ಬಂದವನೇ
ಕಣ್ಣಲ್ಲಿ ಕಣ್ಣಿಟ್ಟು ನೋಡು
ಎದೆಯೊಳಗೆ ಅಚ್ಛಾಗಿರಲಿ ಈ ಹಟ
ನೋಟುಗಳಲ್ಲಿ ಮುದ್ರಣಗೊಳ್ಳಲಿ ಈ ನೋಟ
ಗಾಂಧಿ ಮುಖದಲ್ಲಷ್ಟೇ ನಗುವಿದೆ
ಮನಸ್ಸಿಂದಲ್ಲದು,
ಎಲ್ಲಾದರೂ ಗಾಂಧಿ ಸಿಕ್ಕರೆ ಕೇಳಿಬಿಡಿ
ಈ ನಗು ಯಾಕೆ..? ಯಾರಿಗಾಗಿ..?
ಪ್ರಶ್ನೆ ಕೇಳುವುದಷ್ಟೇ ಸುಲಭ;
ಉತ್ತರ ಹೇಳುವುದಲ್ಲ!
ಪ್ರತಿ ನಿಲ್ದಾಣಗಳ ಗೋಡೆಗಳ ಮೇಲಿದೆ
ಸ್ವಚ್ಛ ಭಾರತಕ್ಕಾಗಿ
ಕನ್ನಡಕದ ಧರಿಸಿದ ಗಾಂಧಿ ನಗುತ್ತಿದ್ದಾನೆ
ಸ್ವಚ್ಛಗೊಳ್ಳಬೇಕಾಗಿರುವುದು
ಆಳುವ ದೊರೆಗಳ ಮನಸ್ಸುಗಳು…
ಗಾಂಧಿ ಮತ್ತೆ ಬರುತ್ತಿದ್ದರೇ
ಹೀಗೆ ಹೇಳುತ್ತಿದ್ದರೇನೋ…..
ನಗುವ ನೋಟುಗಳೆಂದೂ
ಹೃದಯದ ನೋವಿಗೆ ಮುಲಾಮಾಗದು !!
-ಆಮಿರ್ ಬನ್ನೂರು ಯುವ ಕವಿ, ಮಂಗಳೂರು