ಬೇಸಿಗೆಯ ಬೇಗೆ ನೀಗುವುದು ಹೇಗೆ..??
ಈ ಪ್ರಕೃತಿಯ ಬದಲಾವಣೆಯ ಪ್ರತಿಕಾಲಗಳಿಗೆ ಭೂಮಿಯ ಪ್ರತಿ ಜೀವಿಯು ಹೊಂದಿಕೊಂಡು ನಡೆಯಬೇಕಿರುವುದು ಅನಿವಾರ್ಯ ಹಾಗೂ ನಿಯಮವು ಕೂಡ.ಅಂತೆಯೇ ಪರಿಸರದಲ್ಲಿ ಉಂಟಾಗುವ ಪ್ರಮುಖ ಮೂರು ಕಾಲಗಳಾದ ಚಳಿಗಾಲ,ಬೇಸಿಗೆಗಾಲ, ಹಾಗೂ ಮಳೆಗಾಲಗಳಿಗೆ ಅನುಗುಣವಾಗಿ ಮನುಷ್ಯರಾದ ನಾವುಗಳು ಕೂಡ ಹೊಂದಿಕೊಂಡು ನಮ್ಮ ದೇಹ ಹಾಗೂ ಮಾನಸಿಕ ಸ್ವಾಸ್ಥ್ಯದ ಕಡೆಗೆ ಗಮನಹರಿಸುವುದು ಅವಶ್ಯಕವಾಗಿದೆ.
ಅಲ್ಲದೆ ಇತ್ತೀಚಿಗೆ ಜಾಗತಿಕ ತಾಪಮಾನವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ ಇವೆಲ್ಲವೂ ಮಾನವನ ಅತಿಯಾದ ಆಸೆ ಹಾಗೂ ಪರಿಸರದ ದುರುಪಯೋಗದ ಕೆಲಸವು ನಿರಂತರವಾಗಿ ನಡೆಯುವುದರ ಪರಿಣಾಮವಾಗಿದೆ. ಹಾಗಾಗಿ ನಾವು ಮೊಟ್ಟಮೊದಲಿಗೆ ಪರಿಸರ ರಕ್ಷಣಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಮಾಲಿನ್ಯಕಾರಕ ಸಂಗತಿಗಳ ನಿಯಂತ್ರಣ ಕಾರ್ಯ ಜರೂರು ನಡೆಯಬೇಕು ಸಾಕಷ್ಟು ಪ್ರಮಾಣದಲ್ಲಿ ಮರ ಗಿಡಗಳನ್ನು ಬೆಳೆಸಬೇಕು, ಕಾಡಿನ ನಾಶವನ್ನು ತಡೆಯಬೇಕು, ಪರಿಸರ ಕಾಳಜಿಯ ಕುರಿತು ಪ್ರತಿಯೊಬ್ಬರು ಜಾಗೃತರಾಗಬೇಕು.
ಇನ್ನು ಬೇಸಿಗೆಕಾಲದಲ್ಲಿ ನಮ್ಮಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿಯೋಣ ಬೇಸಿಗೆ ಕಾಲದಲ್ಲಿ ತಾಪಮಾನವು ಜಾಸ್ತಿಯಾಗಿ ಜಗತ್ತನ್ನು ಬೆಳಗುತ್ತಿರುವ ಸೂರ್ಯನು ನಮ್ಮನ್ನು ಸಂಪೂರ್ಣವಾಗಿ ಬೆವರುವಂತೆ ಮಾಡುತ್ತಾನೆ.ಆ ಸಮಯದಲ್ಲಿ (ಬೇಸಿಗೆಕಾಲದಲ್ಲಿ) ನಮ್ಮ ದೇಹಕ್ಕೆ ಅಗತ್ಯವಾದ ನೀರಿನಂಶ ಸಿಗದೇ ಇದ್ದರೆ ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಸಮಸ್ಯೆ ಪ್ರಾರಂಭವಾಗುತ್ತದೆ. ನಿಶ್ಯಕ್ತಿಯು ಕೂಡ ಡಿ ಹೈಡ್ರೇಶನ್ ಸಮಸ್ಯೆ ಒಂದು ಲಕ್ಷಣ ಇದನ್ನು ಕಡೆಗಣಿಸಿದರೆ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಬೇಸಿಗೆಕಾಲದಲ್ಲಿ ನಮ್ಮಗಳ ಆಹಾರ ಪದ್ಧತಿ,ಉಡುಪುಗಳ ನಿಯಮ,ಚರ್ಮದ ರಕ್ಷಣೆ ಹಾಗೂ ದೈಹಿಕ ಮಾನಸಿಕ ಸ್ವಾಸ್ಥ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ
ಆಹಾರ ಪದ್ಧತಿ
ಬೇಸಿಗೆಕಾಲದ ತೀಕ್ಷ್ಣವಾದ ಬಿಸಿಲಿನಿಂದಾಗಿ ಶರೀರದಲ್ಲಿ ವಾತ ವೃದ್ಧಿಯಾಗುತ್ತದೆ ಜೀರ್ಣ ಶಕ್ತಿ (ಅಗ್ನಿ) ದುರ್ಬಲವಾಗುತ್ತದೆ . ಹಾಗಾಗಿ ಹಿರಿಯರು ನಮಗೆ ಅಗ್ನಿಯನ್ನು ವೃದ್ಧಿಪಡಿಸುವ, ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ ಪಾನೀಯಗಳನ್ನು ಸೂಚಿಸುತ್ತಾರೆ.
1.. ಆಹಾರ
ನಾವು ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಹ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರಬೇಕು.
* ಹಳೆಯ ಅಕ್ಕಿ ಗೋಧಿಯ ಪದಾರ್ಥಗಳು ಹಾಗೂ ಮೆಂತೆವನ್ನು ಊಟದಲ್ಲಿ ಸಾಕಷ್ಟು ಬಳಸಬೇಕು
*ಬೇಳೆ ಕಾಳುಗಳು ಹಾಗೂ ಗಟ್ಟಿ ಕಾಳುಗಳ ಬಳಕೆ ಮಿತವಾಗಿರಲಿ, ಬಳಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸಬೇಕು.
*ಕೊತ್ತಂಬರಿ ಕರಿಬೇವು , ದಂಟಿನ ಸೊಪ್ಪು ಹರಿವೇಸೊಪ್ಪು ಪಾಲಕ ಮೂಲಂಗಿ ಇತ್ಯಾದಿ ಸೊಪ್ಪುಗಳ ಬಳಕೆ ಯಥೇಚ್ಛವಾಗಿರಲಿ.
* ಪ್ರಾಣಿಜನ್ಯ ಆಹಾರಗಳಾದ ಹಾಲು ಮೊಸರು ಮಜ್ಜಿಗೆ ಬೆಣ್ಣೆ ತುಪ್ಪ ಇವುಗಳ ಬಳಕೆ ಇರಲಿ, ಅತೀ ಹುಳಿಯಾದ ವಸ್ತುಗಳ ಬಳಕೆ ವರ್ಜ್ಯ.
* ಸೌತೆಕಾಯಿ ಮೂಲಂಗಿ ಟೊಮೆಟೊ ಲಿಂಬೆಹಣ್ಣು ಆದಷ್ಟು ನೀರಿನಂಶ ಹಾಗೂ ಫೈಬರ್ ಅಂಶಗಳು ಹೆಚ್ಚಿರುವ ತರಕಾರಿಗಳ ಸೇವನೆ ಅವಶ್ಯಕ.
* ಗಟ್ಟಿ ಆಹಾರಗಳಾದ ಮಾಂಸ ಹಾಗೂ ಕಾಳುಗಳ ಬಳಕೆಯನ್ನು ಕಡಿಮೆ ಮಾಡಬೇಕು.
* ಈ ಸಮಯದಲ್ಲಿ ಮದ್ಯಪಾನ ಧೂಮ್ರಪಾನಗಳನ್ನು ಕಡ್ಡಾಯವಾಗಿ ಬಿಡಬೇಕು.
* ತಿನ್ನುವ ಆಹಾರವು ಸೌಮ್ಯವಾಗಿದ್ದು ಹೆಚ್ಚು ಮಸಾಲೆಯುಕ್ತವಾಗಿರದೆ ಲಘು ಉಪ್ಪು ಹುಳಿ ಕಾರಗಳನ್ನು ಒಳಗೊಂಡಿರಲಿ .
* ಬೇಸಿಗೆ ಸಮಯದಲ್ಲಿ ಬೀದಿ ಬದಿಯ ತಿಂಡಿಗಳು ಹಾಗೂ ಕರಿದ ಪದಾರ್ಥಗಳನ್ನು ತಿನ್ನಲೇಬಾರದು.
* ಆದಷ್ಟು ಹೆಚ್ಚು ನೀರಿನಂಶ ಹಾಗೂ ವಿಟಮಿನ್ “ಸಿ” ಅಂಶಗಳನ್ನು ಹೊಂದಿರುವ ಹಣ್ಣುಗಳ ಸೇವನೆ ಮಾಡಬೇಕು ಉದಾಹರಣೆಗೆ…ಕಲ್ಲಂಗಡಿ ದ್ರಾಕ್ಷಿ ಹಣ್ಣು, ಕರ್ಬೂಜ ಮೋಸಂಬಿ ಮಾವು ಕಬ್ಬಿನರಸ ಎಳನೀರು ಕಿತ್ತಳೆ ಹಾಗೂ ಲಿಂಬೆ ಹಣ್ಣುಗಳ ಬಳಕೆ ಹೆಚ್ಚಾಗಿರಲಿ.
* ಇದೆಲ್ಲಕ್ಕಿಂತ ಮುಖ್ಯವಾಗಿ ನಾವು ಬೇಸಿಗೆಕಾಲದಲ್ಲಿ ಯಥೇಚ್ಛವಾಗಿ ನೀರು ಕುಡಿಯಬೇಕು ಕನಿಷ್ಠ ನಾಲ್ಕರಿಂದ ಐದು ಲೀಟರ್ ನೀರನ್ನು ಕಡ್ಡಾಯವಾಗಿ ಕುಡಿಯಲೇಬೇಕು.
2… ಚರ್ಮದ ರಕ್ಷಣೆ
* ಬೇಸಿಗೆ ಕಾಲದಲ್ಲಿ ಹೊರ ಹೋಗುವಾಗ ಆದಷ್ಟು ಪೂರ್ಣ ದೇಹ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಉತ್ತಮ ಇದರಿಂದ ಚರ್ಮದ ಮೇಲಾಗುವ ತುರಿಕೆ ಅಂತಹ ಅಲರ್ಜಿಯನ್ನು ತಡೆಯಬಹುದು.
* ನೀವು ಧರಿಸುವ ಬಟ್ಟೆಗಳು ಹತ್ತಿ ಬಟ್ಟೆಗಳು ಹಾಗೂ ತಿಳಿ ಬಣ್ಣಗಳಿಂದ ಕೂಡಿದ ಧೀರಿಸುಗಳಾಗಿರಲಿ.
* ದಿನಾಲು ಎರಡು ಬಾರಿ ತಣ್ಣೀರಿನ ಸ್ನಾನ ದೇಹಕ್ಕೆ ಹಿತಕರವೆನಿಸುವುದು.
* ಸುಗಂಧ ಲೇಪನಗಳು ಮಿತವಾಗಿರಲಿ.
* ಅತಿಯಾದ ರಾಸಾಯನಿಕ ಒಳಗೊಂಡ ಸೌಂದರ್ಯವರ್ಧಕಗಳ ಬಳಕೆಯು ಬೇಡ ಮಲಗುವ ಮುಂಚೆ ಸ್ವಲ್ಪ ತೆಂಗಿನ ಎಣ್ಣೆಯ ಲೇಪನ ಚರ್ಮಕ್ಕೆ ಒಳ್ಳೆಯದು.
* ಸನ್ಸ್ಕ್ರೀನ್ ಲೋಶನ್ ಗಳನ್ನು ಹೊರ ಹೋಗುವಾಗ ಕಡ್ಡಾಯವಾಗಿ ಚರ್ಮಕ್ಕೆ ಲೇಪನ ಮಾಡಬೇಕು.
3….. ದೈಹಿಕ – ಮಾನಸಿಕ ಸ್ವಾಸ್ಥ್ಯ
* ಬಿಸಿಲು ಪ್ರಕರವಾಗಿರುವ ಮಧ್ಯಾಹ್ನ ಸಮಯದಲ್ಲಿ ಹೆಚ್ಚು ಕೆಲಸಗಳನ್ನು ಮಾಡಬಾರದು.
* ಬಿಡುವಿಲ್ಲದ ಕೆಲಸ ಮಾಡದೆ ಕೆಲಸದ ಮಧ್ಯದಲ್ಲಿ ಸ್ವಲ್ಪ ಲಘು ವಿಶ್ರಾಂತಿ ಪಡೆಯಬೇಕು.
* ಕೆಲಸದ ಮಧ್ಯದಲ್ಲಿ ಹೆಚ್ಚು ನೀರನ್ನು ಕುಡಿಯಬೇಕು.
* ಹೊರಗೆ ಕೆಲಸ ಮಾಡುವಾಗ ತಲೆಗವಸು ಬಳಕೆ ಸೂಕ್ತ ಇದರಿಂದ ತಲೆನೋವು ಬರುವುದನ್ನು ತಪ್ಪಿಸಬಹುದು.
* ಮೊಬೈಲ್ ಕಂಪ್ಯೂಟರ್ ಗಳ ಬಳಕೆ ಮಿತವಾಗಿರಲಿ ಇಲ್ಲದಿದ್ದರೆ ಕಣ್ಣು ಉರಿ ಹಾಗೂ ಮೈಗ್ರೇನ್ (ತಲೆನೋವು) ಬರುವ ಸಾಧ್ಯತೆ ಹೆಚ್ಚು
* ಬೇಸಿಗೆಯ ಅವಧಿಯಲ್ಲಿ ಧ್ಯಾನ ಏಕಾಂತ ಹಾಗೂ ಲಘು ಸಂಗೀತಗಳನ್ನ ಕೇಳಬೇಕು .
* ದಿನದ ಸ್ವಲ್ಪ ಸಮಯ ನಾವು ಒಳ್ಳೆಯ ಪುಸ್ತಕಗಳನ್ನು ಓದುವುದರೊಂದಿಗೆ ನಮ್ಮ ಮನಸ್ಸನ್ನು ಶಾಂತ ಗೊಳಿಸಬಹುದು.
ಈ ರೀತಿಯಾಗಿ ನಾವು ಬೇಸಿಗೆಕಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ ಸ್ವಲ್ಪ ನಮ್ಮ ಜೀವನದ ದಿನಚರಿಯ ಬದಲಾವಣೆಗಳನ್ನು ಈ ಅವಧಿಯಲ್ಲಿ ಮಾಡಿದ್ದೇ ಆದರೇ ! ನಮ್ಮ ದೈಹಿಕ ಮಾನಸಿಕ ಸ್ವಾಸ್ಥ್ಯದ ಜೊತೆಗೆ ಆರೋಗ್ಯ ವೃದ್ಧಿಯನ್ನು ಮಾಡಿಕೊಳ್ಳಬಹುದಾಗಿದೆ.
ವಿಶೇಷ ಲೇಖಕರು :- ಅಶ್ವಿನಿ ಅಂಗಡಿ ಶಿಕ್ಷಕಿ ಹಾಗೂ ಲೇಖಕಿ. ಬದಾಮಿ..