ಕುಷ್ಟಗಿ ; ತಾಲೂಕಿನ ಮುದೇನೂರು ಗ್ರಾಮ ಧಾರ್ಮಿಕವಾಗಿ ಹಾಗೂ ವಾಣಿಜ್ಯವಾಗಿ ಬೆಳೆದ ಗ್ರಾಮವಾಗಿದೆ. ಮುದೇನೂರು ಗ್ರಾಮಕ್ಕೆ ಸುತ್ತಮುತ್ತಿನಿಂದ ಬರುವ ವಿವಿಧ ಗ್ರಾಮಗಳು ಜನ್ರು ಇಲ್ಲಿನ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಾರೆ. ಇದರಿಂದ ಇಲ್ಲಿನ ಗ್ರಾಮಪಂಚಾಯತ್ ಗೆ ಆದಾಯದ ಮೂಲ ಜಾಸ್ತಿಯಾಗುತ್ತಲೇ ಇದೆ. ಆದರೆ ಈ ಗ್ರಾಮಕ್ಕೆ ಬಂದ ತಕ್ಷಣ ಜನರಿಗೆ ಆಮಂತ್ರಣ ನೀಡುವುದೇ ಕಸದ ರಾಶಿಗಳು. ಗ್ರಾಮದ ಪ್ರಮುಖ ರಸ್ತೆ , ಮುಖ್ಯ ಬೀದಿಗಳಲ್ಲಿ ಕಸದ ರಾಶಿ ತುಂಬಿದ್ದು, ಮುದೇನೂರು ಗ್ರಾಮದ ಜನ್ರನ್ನು ತಲೆತಗ್ಗಿಸುವಂತೆ ಮಾಡಿದೆ. ಗ್ರಾಮಗಳ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಎಂದು ಗಾಂಧಿಜಿಯವರ ಕನಸಾಗಿತ್ತು . ಗಾಂಧಿಜೀ ಕನಸಿನಂತೆ ಸರ್ಕಾರ ಗ್ರಾಮೀಣ ಸ್ವಚ್ಛತೆಗೆ ಕೋಟಿಗಟ್ಟಲೆ ಅನುದಾನವನ್ನ ವ್ಯಯ ಮಾಡುತ್ತದೆ. ಆದರೆ ಮುದೇನೂರು ಗ್ರಾಮಪಂಚಾಯತ್ ಮಟ್ಟಿಗೆ ಅದು ಕೇವಲ ಕಾಗದಪತ್ರದಲ್ಲಿ ಮಾತ್ರ ಸೀಮಿತವಾಗಿರುವಂತೆ ಕಾಣ್ತಿದೆ. ಯಾಕೆಂದರೆ ಮುದೇನೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಮುಖ್ಯರಸ್ತೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದು, ಗ್ರಾಮದ ವಿವಿಧ ವಾರ್ಡುಗಳ ಪರಿಸ್ಥಿತಿ ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ. ಉತ್ತಮ ಅಧಿಕಾರಿ ಎಂದು ಮುದೇನೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಪಿಡಿಒ ಹನುಮಗೌಡ ಪಾಟೀಲ್ ಇನ್ನಾದರೂ ಎಚ್ಚೆತ್ತುಕೊಂಡು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುತ್ತಾರಾ ಕಾದು ನೋಡಬೇಕಿದೆ.
ವರದಿ-ಚಂದ್ರುಶೇಖರ ಕುಂಬಾರ ಮುದೇನೂರ