ಧಾರ್ಮಿಕ ಹಬ್ಬಗಳು ಬಡತನದ ನಿರ್ಮೂಲನೆಗಾಗಿರಲಿ .
ಪವಿತ್ರ ಶವ್ವಾಲ್ ತಿಂಗಳ ಮೊದಲನೆಯ ದಿನ ‘ಈದುಲ್ ಫಿತ್ರ್’ ಹಬ್ಬದ ಆಚರಣೆ ಮತ್ತು ನಮಾಝ್ ನಿರ್ವಹಿಸಲು ಪವಿತ್ರ ಮಸೀದಿಯತ್ತ ಪ್ರವಾದಿ ಪೈಗಂಬರರು ನಡೆದುಕೊಂಡು ಹೋಗಬೇಕಾದರೆ, ದಾರಿಯಲ್ಲಿದ್ದ ಮೈದಾನದಲ್ಲಿ ಬೃಹತ್ ಸಂಖ್ಯೆಯ ಮಕ್ಕಳು ತಂಡೋಪ ತಂಡವಾಗಿ ಆಟವಾಡುತ್ತಿರುವುದನ್ನು ಗಮನಿಸಿದರು. ನಲಿದಾಡುತ್ತಾ, ಕುಣಿದಾಡುತ್ತ ಆಟವಾಡುವ ಮಕ್ಕಳು ಒಂದು ಕಡೆಯಾದರೆ, ಮೈದಾನದ ಮತ್ತೊಂದು ಬದಿಯಲ್ಲಿ ಪುಟ್ಟ ಬಾಲಕನೊಬ್ಬ ಏಕಾಂತ,ನಿಸ್ಸಹಕನಾಗಿ ಕುಳಿತುಕೊಂಡಿರುವುದು ಅವರ ಗಮನ ಸೆಳೆಯಿತು. ಸದಾ ಸಮಯ ಮಕ್ಕಳೊಂದಿಗೆ ಸಮಯ ಕಳೆಯುವ ಪ್ರವಾದಿಗಳಿಗೆ ಆ ಬಾಲಕನ ನಡೆಯುವ ಕುತೂಹಲವನ್ನು ತರಿಸಿತು.ಅಷ್ಟೆಲ್ಲಾ ಮಕ್ಕಳು ಆಟವಾಡುತ್ತಿರಬೇಕಾದರೆ,ಅವರಿಂದ ಅಂತರವನ್ನು ಕಾಯ್ದುಕೊಂಡಿರುವ ಆ ಪುಟ್ಟ ಮಗುವಿನ ನಡೆ ಪೈಗಂಬರರ ಮೇಲೆ ಪರಿಣಾಮಕಾರಿಯಾಗಿ ಬೀರಿದಾಗ ಪೈಗಂಬರರು ನೇರವಾಗಿ ಆ ಪುಟ್ಟ ಮಗುವಿನ ಬಳಿ ತೆರಳಿದರು.
ಆ ಕ್ಷಣ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಗುವಿನ ಪರಿಸ್ಥಿತಿಯು ಪೈಗಂಬರರಿಗೆ ಮತ್ತಷ್ಟು ದುಃಖ ಉಂಟು ಮಾಡಿತು.ಅದೇ ದುಃಖದೊಂದಿಗೆ ತನ್ನ ಕಣ್ಣೀರಿನ ಬಗ್ಗೆ ವಿಚಾರಿಸಿದಾಗ ಆ ಪುಟ್ಟ ಮಗುವಿನ ಉತ್ತರವು ಹೇಗಿತ್ತು; ‘ಓ ಪ್ರವಾದಿಗಳೇ ಈ ದಾರಿಯಲ್ಲಿ ಅದೆಷ್ಟು ಜನರು ಈದ್ ಆಚರಿಸಲು ಮಸೀದಿಯತ್ತ ಹೊರಟು ಹೋಗುತ್ತಿದ್ದಾರೆ. ಅವರ ಪೈಕಿ ಅದೆಷ್ಟೋ ನನ್ನ ಪ್ರಾಯದ ಪುಟ್ಟ ಬಾಲಕರಿದ್ದಾರೆ. ಅವರೆಲ್ಲರೂ ಹೊಸ ಹೊಸ ಬಟ್ಟೆಗಳನ್ನ ತೊಟ್ಟಿದ್ದಾರೆ. ಒಳ್ಳೆಯ ವಾಸನೆಯ ಸುಗಂಧದ ದ್ರವ್ಯ ಇರಿಸಿದ್ದಾರೆ. ಅವರ ಮುಖದಲ್ಲಿ ನಗುವಿದೆ, ಮುಗಿಲು ಮುಟ್ಟಿದ ಸಂತೋಷವಿದೆ,ಎಲ್ಲದಕ್ಕಿಂತಲೂ ಮಿಗಿಲಾಗಿ ಸೃಷ್ಟಿಕರ್ತನ ಮೇಲೆ ಅಪಾರವಾದ ಕೃತಜ್ಞತೆಯ ಭಾವನೆ ಇದೆ. ಆದರೆ ನಿಮ್ಮನ್ನು ಹೊರತುಪಡಿಸಿದ ಮತ್ಯಾರು ಕೂಡ ನನ್ನ ನೋವಿನ ಬಗ್ಗೆ ಕೇಳಲಿಲ್ಲ. ಯಾ ರಸೂಲಲ್ಲಾಹ್ ನೀವು ಅದೆಂತಹ ಕರುಣಾಮಯಿಯಾಗಿದ್ದೀರಾ.
ಮಾತು ಮುಂದುವರಿಸಿದ ಆ ಪುಟ್ಟ ಬಾಲಕ ಇಂದು ಇಡೀ ಜಗತ್ತಿನ ಮುಸಲ್ಮಾನರು ಈದ್ ಹಬ್ಬದ ಸಂಭ್ರಮದಲ್ಲಿದ್ದಾರೆ. ನಾನು ನೋಡಿದ ಹಾಗೆ ತರತರದ ಬಟ್ಟೆ ಬರಹಗಳನ್ನ ಧರಿಸಿ ಮಸೀದಿಗಳತ್ತ ಪ್ರಾರ್ಥನೆಗೆ ಹೆಜ್ಜೆಗಳುತ್ತಿದ್ದಾರೆ. ತರಹೇವಾರು ಆಹಾರ ಪದಾರ್ಥಗಳನ್ನು ಭಕ್ಷಿಸಿರುತ್ತಾರೆ. ಗಮಗಮವಾದ ವಿವಿಧ ಸುಗಂಧದ್ರವ್ಯ ಹಚ್ಚಿರುತ್ತಾರೆ. ಆದರೆ ಹೆತ್ತವರನ್ನೇ ಕಳೆದು ಕೊಂಡ ಈ ಅನಾಥನಿಗೆ ಹಬ್ಬದ ಸಂತೋಷವನ್ನು ಕೊಡಲು ಯಾರಿದ್ದಾರೆ, ಎಂಬ ಪ್ರಶ್ನೆ ಪೈಗಂಬರೊಂದಿಗೆ ಕೇಳಿದಾಗ ಉತ್ತರಿಸಲು ಸಾಧ್ಯವಾಗದ ಪೈಗಂಬರರು ಆ ಪುಟ್ಟ ಮಗುವಿನ ಕೈಗಳನ್ನು ಹಿಡಿದು ನೇರವಾಗಿ ಮನೆಗೆ ಕರೆದುಕೊಂಡು ಬಂದು ಪ್ರಿಯ ಪತ್ನಿಯೊಂದಿಗೆ ಹೇಳುತ್ತಾರೆ. ಪವಿತ್ರವಾದ ಈ ದಿನದಂದು ಹೆತ್ತವರನ್ನು ಕಳೆದುಕೊಂಡು ಅನಾಥನಾಗಿ ಮೈದಾನದ ಒಂದು ಭಾಗದಲ್ಲಿ ಅಳುತ್ತಿರುವ ಈ ಮಗುವನ್ನು ಕಾಣದ ಸಾಧ್ಯವಾಯಿತು. ಇದು ಯಾರ ಮಗುವಾದರೇನಂತೆ ನೀವು ತಕ್ಷಣ ಈ ಮಗುವಿನ ಮುಖದಲ್ಲಿ ನಗುತರಿಸುವ ಕಾರ್ಯ ಮಾಡಬೇಕೆಂಬ ಆಜ್ಞೆಯನ್ನು ಹೊರಡಿಸುತ್ತಾರೆ. ಪತಿಯ ಮಾತನ್ನು ಚಾಚು ತಪ್ಪದೆ ನಿರ್ವಹಿಸುವ ಪತ್ನಿ ಬಲು ಬೇಗನೆ ಮಗುವಿಗೆ ಒಳ್ಳೆಯ ರೀತಿಯಲ್ಲಿ ಸತ್ಕಾರವನ್ನು ನೀಡಿ ಮಸೀದಿಗೆ ತೆರಳಲು ಬೇಕಾದ ವ್ಯವಸ್ಥೆಯನ್ನು ಮಾಡಿ ಆ ಪುಟ್ಟ ಮುಖದಲ್ಲಿ ಅಗಣಿತವಾದ ಮಂದಹಾಸವನ್ನು ತರಿಸಿ ಪುಣ್ಯರಾದರು.
ಅಳುತ್ತಿರುವ ಆ ಬಾಲಕನ ಮುಖದಲ್ಲಿ ಬೀರುತ್ತಿರುವ ಮಂದಹಾಸವನ್ನು ನೋಡಿ ಪ್ರವಾದಿಗಳು ಮತ್ತು ಪ್ರಿಯ ಪತ್ನಿಗೆ ಉಕ್ಕಿದ ಆ ಕ್ಷಣ ಸಂತೋಷಕ್ಕೆ ಮಿತಿ ಇರಲಿಲ್ಲ.ಅನಾಥನಾಗಿ ಎಲ್ಲವನ್ನು ಮತ್ತು ಎಲ್ಲರನ್ನು ಕಳೆದುಕೊಂಡು ಮೈದಾನದ ಭಾಗದಲ್ಲಿ ಅಳುತ್ತಿದ್ದ ಆ ಮಗುವಿನ ಕೈಗಳನ್ನು ಹಿಡಿದು ಪ್ರವಾದಿ ಪೈಗಂಬರರು ನೇರವಾಗಿ ನಡೆದುಕೊಂಡು ಮಸೀದಿಯತ್ತ ಕರೆದುಕೊಂಡು ಬರುತ್ತಾರೆ. ಆ ಬಾಲಕ ಪೈಗಂಬರರೊಂದಿಗೆ ಮತ್ತು ತನ್ನ ಅನುಚರರೊಂದಿಗೆ ಸಂತೋಷ ಭರಿತ ಈದ್ ಹಬ್ಬವನ್ನು ಆಚರಿಸುತ್ತಾರೆ.
ಪ್ರವಾದಿ ಪೈಗಂಬರರು ಕಲಿಸಿರುವ ಧರ್ಮ ಮತ್ತು ಧಾರ್ಮಿಕ ಆಚಾರ ಮತ್ತು ವಿಚಾರಗಳು. ಸಮಾಜದಲ್ಲಿರುವ ಯಾವುದೇ ಒಂದು ಧರ್ಮವಾಗಲಿ ಮತ್ತು ಧಾರ್ಮಿಕ ಕಾರ್ಯಗಳಾಗಲಿ ಇನ್ನಿತರ ಮನುಷ್ಯರ ಜೀವನದಲ್ಲಿ ಒಳಿತಾಗಿ ಪರಿಣಮಿಸಬೇಕು ಮತ್ತು ನೊಂದವರ ಮೇಲಿನ ನೋವಿಗೆ ಮುಲಾಮಾಗಿರಬೇಕೆಂದು ಸಾರುತ್ತದೆ.ಹೊರತುಪಡಿಸಿ ಧಾರ್ಮಿಕ ಹಬ್ಬಗಳು ಬಂದಾಗ ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಲು ಕುಮ್ಮುಕನ್ನು ನೀಡುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿಧಿ ವಿಧಾನಗಳನ್ನು ಹೇರುವುದು ಅಥವಾ ದುಡಿದು ತಿನ್ನುವ ಬಡ ಕುಟುಂಬಗಳ ಅನ್ನಕ್ಕೆ ಕಲ್ಲು ಹಾಕುವ ಅಮಾನುಷಿಕ ಕೃತ್ಯಗಳಿಗೆ ಪ್ರಚೋದನೆ ನೀಡುವುದು ಇದು ಯಾವುದು ಕೂಡ ನಿಜವಾದ ಧರ್ಮ ಸಂದೇಶಗಳೆಲ್ಲ ಹಾಗೂ ಯಾವುದೇ ಧರ್ಮಕ್ಕೂ ಇಂತಹ ಅಮಾನವೀಯ ವಿಚಾರಗಳು ಹೇಳಲಿಕ್ಕಿಲ್ಲ ಅನ್ನೋದು ವಾಸ್ತವ ಸತ್ಯ. ಈದ್ ಹಬ್ಬದ ದಿವಸದಂದು ಪ್ರವಾದಿ ಪೈಗಂಬರರು ಓರ್ವ ಪುಟ್ಟ ಬಾಲಕನ ಕಣ್ಣಲ್ಲಿ ಉಕ್ಕಿದ ಕಣ್ಣೀರನ್ನು ಒರೆಸಿ ಮುಖದಲ್ಲಿ ನಗುವನ್ನು ತರಿಸಿದ್ದರೆ, ಇಂತಹ ಮಾನವಿಯತೆಯ ಸ್ವಭಾವವನ್ನು ಪ್ರತಿಯೊಬ್ಬ ಮುಸಲ್ಮಾನನು ಜೀವನದಲ್ಲಿ ಅಂತರ್ಗತಗೊಳಿಸಿ ಬದುಕಬೇಕು. ಹಬ್ಬಗಳ ಹೆಸರಿನಲ್ಲಿ ಅನಾವಶ್ಯಕವಾಗಿ ಹಣಗಳನ್ನು ಪೋಲು ಮಾಡುವುದಕ್ಕಿಂತ ತಮ್ಮ ಕುಟುಂಬಕ್ಕೆ ಬೇಕಾದಷ್ಟು ಮಾತ್ರ ಬಳಸಿಕೊಂಡು ಇನ್ನುಳಿದ ಹಣಗಳಿಂದ ಸುತ್ತಮುತ್ತಲಿರುವ ಪ್ರತಿಯೊಬ್ಬ ಮನುಷ್ಯರ ಕಷ್ಟ ಮತ್ತು ನಷ್ಟಗಳಲ್ಲಿ ಭಾಗಿಯಾಗಿ, ಸಮಾಜದಲ್ಲಿ ಪಾಂಡವಾಡುತ್ತಿರುವ ಬಡತನಕ್ಕೆ ಕಡಿವಾಣ ಹಾಕಲು ಮುಂದೆ ಬರಬೇಕು. ಎಲ್ಲಾ ಧಾರ್ಮಿಕ ಹಬ್ಬಗಳನ್ನು ಆಚರಿಸುವುದರ ಮೂಲಕ ಸರ್ವ ಸಮಾಜದ ಭಕ್ತಾದಿಗಳು ಧಾರ್ಮಿಕ ಹಬ್ಬಗಳನ್ನು ಬಡತನದ ನಿರ್ಮೂಲನೆಗೆ ಬಳಸಿಕೊಳ್ಳುವುದಾದರೆ ಸುಂದರವಾದ ಶ್ರೀಮಂತ ಸಮಾಜದ ನಿರ್ಮಾಣ ಪ್ರತಿಯೊಂದು ಜನಾಂಗದಿಂದಲೂ ಸಾಧ್ಯ. ಪ್ರತಿಯೊಬ್ಬ ಮನುಷ್ಯನು ಅತಿ ಹೆಚ್ಚು ಸಂತೋಷ ಬರಿತನಾಗುವುದು ಹಬ್ಬಗಳಲ್ಲಾಗಿದೆ ಎಂಬುದು ಜಾಗತಿಕ ಸತ್ಯ. ನಮ್ಮ ಬದುಕಿನ ಉದ್ದಗಲಕ್ಕೂ ನಾವು ಆಚರಿಸುವ ಪ್ರತಿಯೊಂದು ಹಬ್ಬಗಳಲ್ಲೂ ಮತ್ತೊಬ್ಬರ ಹಿತಕ್ಕಾಗಿ ಪ್ರಾರ್ಥಿಸಬೇಕು ಹಾಗೂ ನೊಂದ ಸಮಾಜದ ಸಬಲೀಕರಣಕ್ಕಾಗಿ ಬೇಕಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇಸ್ಲಾಂ ಧರ್ಮವು ಇದಕ್ಕೆ ಪ್ರತ್ಯೇಕವಾದ ಒಲವನ್ನು ತೋರಿದೆ ಎಂಬುದಕ್ಕೆ ಪ್ರವಾದಿ ಪೈಗಂಬರರು ವೇದ ಹಬ್ಬದ ದಿವಸ ಪುಟ್ಟ ಮಗುವಿನ ನೋವಿನಲ್ಲಿ ಭಾಗಿಯಾಗಿ ಸಾಂತ್ವನವನ್ನು ಮಾತಿನಲ್ಲಿ ಹೇಳದೆ ಪ್ರವರ್ತಿಯಲ್ಲಿ ತೋರಿಸಿಕೊಟ್ಟಿರುವುದು ಬಹುದೊಡ್ಡ ಪುರಾವೆಯಾಗಿದೆ,
ವಿಶೇಷ ಲೇಖನ :- –ಆಮಿರ್ ಅಶ್ಅರೀ, ಬನ್ನೂರು