ನಮ್ಮ ಮತದಾನ, ನಮ್ಮ ಸ್ವಾಭಿಮಾನ.
ನಮ್ಮ ದೇಶ ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು. ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗಾಗಿ ರಚಿಸಲ್ಪಡುವ ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯನ್ನು ಹೊಂದಿದ್ದು. ಪ್ರಜೆಗಳು ತಮ್ಮನ್ನು ಆಳುವ ಪ್ರಭುಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಳ್ಳಲು ಭಾರತೀಯ ಸಂವಿಧಾನವು ರಾಜಕೀಯ ಹಕ್ಕಿನ ಮೂಲಕ ಮತದಾನದ ಅವಕಾಶವನ್ನು ಕಲ್ಪಿಸಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರ ಪ್ರಭುಗಳು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮುಖೇನ ಗೆಲ್ಲಿಸಿ ಕೇಂದ್ರ ಲೋಕಸಭಾ ಹಾಗೂ ರಾಜ್ಯ ವಿಧಾನ ಸದಸ್ಯರನು ಆಯ್ಕೆ ಮಾಡಿ ಸರ್ಕಾರದ ಪ್ರತಿನಿಧಿಯಾಗಿಯನ್ನಾಗಿ ಚುನಾಯಿಸುತ್ತಾರೆ. ಇದು ಪ್ರಜಾಪ್ರಭುತ್ವವು ಜನತೆಗೆ ನೀಡಿರುವ ರಾಜಕೀಯ ಹಕ್ಕಾಗಿದೆ.
ಆದರೆ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ
ವಿದ್ಯಮಾನಗಳು, ರಾಜಕೀಯ ಪಕ್ಷಗಳ ವಿಚಾರಧಾರೆಗಳು, ರಾಜಕೀಯ ಧುರೀಣರ ಅತಿರೇಕದ ವಿವೇಚನ ರಹಿತ ಮಾತುಗಳು, ಚುನಾವಣೆಯನ್ನು ಗೆದ್ದೇ ಗೆಲ್ಲುಲು ಜನರಿಗೆ ಪ್ರಣಾಳಿಕೆಯ ಮೂಲಕ ತೋರುವ ಅಸಂಬದ್ಧ ಆಸೆ ಆಮಿಷಗಳು, ಚುನಾವಣೆ ಬಂದಾಗ ಮತದಾರರ ಕಾಲಿಡಿಯುವ ದೊಂಬರಾಟಗಳು, ಹೆಂಡ, ದುಡ್ಡಿಗಾಗಿ ತಮ್ಮ ಹಕ್ಕನ್ನು ಮಾರಿಕೊಳ್ಳುವ ಜನರ ವರ್ತನೆಗಳು, ಧರ್ಮ ಜಾತಿ ಪ್ರಾದೇಶಿಕ ಭಾಷೆಗಳನ್ನು ಮುಂದಿಟ್ಟುಕೊಂಡು ಗೆಲ್ಲಲ್ಲು ದೇಶದ ಐಕ್ಯತೆಯನ್ನು ಬಲಿ ನೀಡುವ ರಾಜಕೀಯ ಮುಖಂಡರ ಮಾತುಗಳು, ದೇಶವನ್ನು ಕಟ್ಟಬೇಕಾದವರೆ, ದೇಶ ಒಡೆಯುವ ಮನೋಭಾವಗಳನ್ನು ಗಮನಿಸಿದಾಗ ನಮ್ಮ ಭಾರತ ದೇಶದ ಭವಿಷ್ಯದ ಬಗ್ಗೆ ಆತಂಕ ಮೂಡುತ್ತದೆ.
ನಮ್ಮ ಸಂವಿಧಾನವು ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳನ್ನು ಎಲ್ಲಾರಿಗೂ ನೀಡಿರುವುದು ಎಷ್ಟು ಸತ್ಯವೋ, ಅದೇ ಹಕ್ಕುಗಳು ಇಂದು ಕೆಲವೇ ಕೆಲವರ ಕಪಿಮುಷ್ಠಿಯಲ್ಲಿರುವುದು ಕರಾಳ ಸತ್ಯ.. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದರೂ ಕೆಲವೊಂದು ವಿಧಿ ವಿಧಾನಗಳನು ಕಾಲಕ್ಕೆ ತಕ್ಕಂತೆ ಬದಲಾವಣೆಗೊಳಪಟ್ಟರು ಸಹ ಅಧಿಕಾರ, ಹಣ, ಜನ ಬಲದ ಮೇಲೆ ಕೆಲವು ನಾಯಕರಲ್ಲಿ ಮಾತ್ರ ಕೈಗೊಂಬೆಯಾಗಿದೆಂದರೂ ತಪ್ಪಾಗಲಾರದು.
ನಮ್ಮ ಮತದಾನ ನಮ್ಮ ಸ್ವಾಭಿಮಾನ ಅನ್ನುವ
ಮಾನೋಭಾವನೆಯನ್ನು ಪ್ರತಿಯೊಬ್ಬ ಭಾರತೀಯರಿಗೂ ಅರಿವಾಗಬೇಕಾಗಿದೆ.
ವಂಶಾ ಪಾರಂಪರ್ಯ ಆಡಳಿತ ವ್ಯವಸ್ಥೆ, ಜಾತಿ ಲೆಕ್ಕಾಚಾರದ ಚುನಾವಣೆ ಪ್ರಸಂಗ, ಹಣ ಹೆಂಡದ ಕೀಳು ರಾಜಕಾರಣ ಮಾಡುವ, ವೈಯುಕ್ತಿಕ ನಿಂದನೆ ಮಾಡಿ ರಾಜಕೀಯವೆಂದರೆ ಹೊಲಸೆಂಬಂತೆ ಸಜ್ಜನರಿಗೆ ಅಸಹ್ಯ ಭಾವನೆ ಮೂಡುತ್ತಿರುವುದು ಭಾರತದ ದುರಂತವೇ ಸರಿ.
ಸದೃಢ ಭಾರತ ನಿರ್ಮಾಣ ಮಾಡಬೇಕಾದರೆ ಸದೃಢ ನಾಯಕರ ಆಯ್ಕೆ ಅತ್ಯಂತ ಮುಖ್ಯ. ಇದಕ್ಕಿರುವ ಏಕೈಕ ಮಾರ್ಗ ಚುನಾವಣೆ ಸಮಯದಲ್ಲಿ ಮತದಾರ ಮಹಾಪ್ರಭುಗಳು ತಮ್ಮ ಅಮೂಲ್ಯವಾದ ಮತವನ್ನು ಉತ್ತಮ ನಾಯಕರನ್ನು ಯಾವುದೇ ಜಾತಿ ಧರ್ಮ ಪ್ರಾದೇಶಿಕ ಹಿನ್ನೆಲೆಯ ಪರಿಗಣಿಸದೆ ನೀಡಿ, ಅವರ ಮೂಲಕ ದೇಶಕ್ಕೆ ಸದೃಢ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಆಗಮಾತ್ರ ನಮ್ಮ ನಿಮ್ಮೆಲ್ಲರ ಪ್ರಗತಿ ಸಾಧ್ಯ.
ಇದರ ಜೊತೆಗೆ ರಾಜಕೀಯ ಧುರೀಣರಿಗೂ ಕೆಲವೊಂದು ಅರ್ಹತೆಗಳನ್ನು ಸಹ ಸಂವಿಧಾನ ಕಡ್ಡಾಯಗೊಳಿಸಬೇಕು. ಯಾಕೆಂದ್ರೆ ಒಂದು ಸಣ್ಣ ಸರ್ಕಾರಿ ನೌಕರಿ ಪಡೆಯಲು ಹಲವು ದೈಹಿಕ ಮತ್ತು ಬೌದ್ಧಿಕ ಪರೀಕ್ಷೆಗಳನ್ನು ನಡೆಸಿ, ಉತ್ತೀರ್ಣಗೊಂಡವರನ್ನು ಮಾತ್ರ ಆಯ್ಕೆ ಮಾಡುವಂತೆ ಹಾಗೂ 60 ವರ್ಷಕ್ಕೆ ನಿವೃತ್ತಿ ಹೊಂದುವಂತೆ, ಅಲ್ಲದೇ ಕ್ರಿಮಿನಲ್ ಮೊಕದ್ದಮೆ ಆರೋಪ ಎದುರಿಸುತ್ತಿರುವರನ್ನು ಸರ್ಕಾರಿ ಕೆಲಸದಿಂದ ತೆಗೆದು ಹಾಕುವಾಗೆ, ಒಬ್ಬ ವ್ಯಕ್ತಿ ಒಂದೇ ಕಡೆ ಸ್ಪರ್ಧೆಯ ಮಾಡುವಂತೆ, ಆನ್ಲೈನ್ ಮತದಾನ ಹಾಗೂ ಮತದಾನ ಕಡ್ಡಾಯ ವ್ಯವಸ್ಥೆ, ಮತದಾನ ಮಾಡಿದವರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು, ನಾಗರೀಕರಿಗೆ ಮೂಲಭೂತ ಸೌಕರ್ಯಗಳು ದೊರೆಯುತ್ತದೆ ಹಾಗೂ ಮತದಾನ ಮಾಡದೇ ನಿರ್ಲಕ್ಷ್ಯ ಮಾಡುವವರಿಗೆ, ಕಳ್ಳ ಮತದಾನಕ್ಕೆ ಪ್ರೋತ್ಸಾಹಿಸುವ ರಾಜಕಾರಣಿಗಳಿಗೆ, ಕಠಿಣ ಕಾನೂನು ಕ್ರಮದ ಮೂಲಕ ಶಿಕ್ಷೆ ವಿಧಿಸುವ ಕಟ್ಟಳೆ ಜಾರಿ ಮಾಡಿದರೆ ಮಾತ್ರ ಸಮರ್ಥ ನಾಯಕರ ಆಯ್ಕೆ ಸಾಧ್ಯವೆಂದು ಹೇಳಬಹುದು.
ವಿದ್ಯಾದಾನ ಒಬ್ಬರ ಜೀವನ ರೂಪಿಸಿದರೆ, ಅನ್ನದಾನ – ರಕ್ತದಾನ ಒಬ್ಬರ ಜೀವ ಉಳಿಸಿದರೆ, ಮತದಾನ ನಮ್ಮ ದೇಶದ ಜನರ ಭವಿಷ್ಯವನ್ನು ರೂಪಿಸುತ್ತದೆ. ಆದರಿಂದ ನಮ್ಮ ಮತದಾನ, ನಮ್ಮ ಸ್ವಾಭಿಮಾನವಾಗಿದ್ದು ಪ್ರತಿಯೊಬ್ಬರೂ ಕೂಡ ಮತದಾನ ದಿನದಂದು ಮತಗಟ್ಟೆಗಳ ಕಡೆಗೆ ಧಾವಿಸಿ ಬಂದು ಮತ ಚಲಾಯಿಸಿದರೆ ಭವ್ಯ ಭಾರತದ ಸತ್ಪ್ರಜೆಗಳಾಗಿದ್ದಕ್ಕೂ ಸಾರ್ಥಕವೆನಿಸುತ್ತದೆ.
ವಿಶೇಷ ಲೇಖನ :- ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು ಬಸಾಪುರ ಗ್ರಾಮ,
ದಾವಣಗೆರೆ.ತಾ)ಜಿ). ದೂರವಾಣಿ ಸಂಖ್ಯೆ – 9591417815.