ಕನ್ನಡ ನಾಡು ಕಂಡ ಶ್ರೇಷ್ಠ ಮುತ್ಸದ್ದಿ ರಾಜಕಾರಣಿ, ಸ್ವಾಭಿಮಾನದ ಜನನಾಯಕ, ಯುವಕರ ಆಶಾಕಿರಣ, ಅಭಿವೃದ್ಧಿ ಹರಿಕಾರ,ಸರಳ ಸಜ್ಜನಿಕೆಯ ಸಾಕಾರ ಮೂರ್ತಿ
ಶ್ರೀನಿವಾಸ್ ಪ್ರಸಾದ್ ರವರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ರಾಜ್ಯದ ಜನತೆಗೆ ಬರ ಸಿಡಿಲು ಬಡಿದಂತಾಗಿದೆ. ರಾಜ್ಯದಲ್ಲಿ ತಮ್ಮದೇ ಆದಂತಹ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತ ಅನೇಕ ಜನಪರ ಸೇವೆಗಳನ್ನು ಮಾಡಿ, ಜನರ ಹೃದಯ ಶ್ರೀಮಂತಿಕೆ ಗೆದ್ದ ಧೀಮಂತ ರಾಜಕಾರಣಿ ಶ್ರೀನಿವಾಸ ಪ್ರಸಾದ್ ರವರು.
ವೆಂಕಟಯ್ಯ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರಿನ ಅಶೋಕಪುರಂನಲ್ಲಿ ಎಂ . ವೆಂಕಟಯ್ಯ ಮತ್ತು ಡಿ.ವಿ.ಪುಟ್ಟಮ್ಮ ದಂಪತಿಗಳ ಮಗನಾಗಿ 6 ಜುಲೈ 1947 ರಂದು ಜನಿಸಿದರು. ಮೈಸೂರಿನಲ್ಲಿ ತಮ್ಮ ಬಾಲ್ಯ ಜೀವನವನ್ನು ಕಳೆದರು, ಪ್ರಾಥಮಿಕ , ಪ್ರೌಢಶಾಲೆ ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಿದರು. ನಂತರ ಶಾರದ ವಿಲಾಸ ಕಾಲೇಜಿನಲ್ಲಿ ವಿಜ್ಞಾನ ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದರು.
ಶ್ರೀಯುತರು ಸಾಮಾಜಿಕ ಸೇವೆಗಳನ್ನು ಮಾಡುತ್ತಾ, ಜನಮನ್ನಣೆಯನ್ನು ಪಡೆದುಕೊಂಡು, ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ 1974 ರಲ್ಲಿ ನಡೆದ ಉಪಚುನಾವಣೆಯಲ್ಲಿ
ಕೃಷ್ಣರಾಜ ವಿಧಾನಸಭೆಗೆ ಸ್ವತಂತ್ರವಾಗಿ ಸ್ಪರ್ಧಿಸಿದರು.
ತರುವಾಯ ಅವರು 1976 ರಲ್ಲಿ ಜನತಾ ಪಕ್ಷಕ್ಕೆ ಮತ್ತು 1979 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು. ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಅವರು 1999 ಮತ್ತು 2004 ರ ನಡುವೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ,ಪ್ರಸಾದ್ ಅವರು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ, ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿದ್ದ ಸಮತಾ ಪಕ್ಷದ ಲೋಕಸಭೆಯ ಸದಸ್ಯರಾಗಿದ್ದರು. ಈ ವೇಳೆ ಅನೇಕ ಜನಪರ ಸೇವೆಗಳನ್ನು ನೀಡಿದ ಹೆಗ್ಗಳಿಕೆ ಇವರದ್ದು.
ತದನಂತರ 2004 ರಲ್ಲಿ, ಪ್ರಸಾದ್ ರವರು ಕರ್ನಾಟಕ ರಾಜ್ಯ ರಾಜಕೀಯಕ್ಕೆ ಮರಳಿದರು. ಅವರು ಮೊದಲು ಜನತಾ ದಳ (ಜಾತ್ಯತೀತ) (ಜೆಡಿ (ಎಸ್)) ಪಕ್ಷದಲ್ಲಿ
ಕೆಲ ಸಮಯ ಕಳೆದರು. ಆದರೆ ಜೆಡಿಎಸ್ ಪಕ್ಷದಲ್ಲಿ ಹೊಂದಾಣಿಕೆ ಆಗದೆ ಇರುವ ಹಿನ್ನೆಲೆಯಲ್ಲಿ ಪುನಃ ಎರಡು ವರ್ಷಗಳ ನಂತರ, ಪ್ರಸಾದ್ ಮತ್ತೆ INC ಗೆ ಸೇರ್ಪಡೆಯಾದರು. ಅವರು 2013 ರಲ್ಲಿ ನಂಜನಗೂಡಿನಿಂದ ಕರ್ನಾಟಕದ ಶಾಸಕಾಂಗ ಸಭೆಯ ಸದಸ್ಯರಾಗಿ ಆಯ್ಕೆಯಾದರು . 2013 ಮತ್ತು 2016 ರ ನಡುವೆ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿ ಸೇವೆ ಸಲ್ಲಿಸಿದರು. ತದನಂತರ ಅವರು ಮತ್ತೆ ತಮ್ಮ ಪಕ್ಷವನ್ನು ಬದಲಾಯಿಸಿದ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)ಗೆ ಸೇರ್ಪಡೆ ಆದರೂ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡರು. ನಂತರ ಚಾಮರಾಜ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡು ಐದು ವರ್ಷಗಳ ಕಾಲ ಕ್ಷೇತ್ರದ ಜನರ ಸೇವೆಯನ್ನು ಮಾಡಿದರು. ಹೀಗೆ
ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿಯಾಗಿ, ಅನೇಕ ಪ್ರಗತಿಪರ ಕೈಂಕರ್ಯಗಳು ಮಾಡಿ,ಜನರ ಒಡನಾಟವನ್ನು ಹೊಂದಿದ್ದರು.ಅವರು ಹಳೆಯ ಮೈಸೂರು ಪ್ರದೇಶದಲ್ಲಿ ಪ್ರಮುಖ ದಲಿತ ನಾಯಕರಾಗಿ ಗುರುತಿಸಲ್ಪಟ್ಟರು. ಸಿದ್ದಾರ್ಥ ಎಜ್ಯಕೇಷನ್ ಸೊಸೈಟಿ, ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನಲ್ ಅಂಡ್ ಕಲ್ಚರಲ್ ಸೊಸೈಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಮಾರ್ಚ್, 2024 ರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಬಡವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ ಅವರು ಕಾಂಗ್ರೆಸ್, ಜನತಾ ದಳ, ಬಿಜೆಪಿ ಮತ್ತು ಪಕ್ಷೇತರರಾಗಿಯೂ ಒಟ್ಟು 14 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಅವರು 11 ಬಾರಿ ಗೆಲುವು ಸಾಧಿಸಿದ್ದರು. ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿದ್ದ ಅವರು,
ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಗೌರವ ನಮನ: ರಾಜ್ಯದ ಪ್ರಭಾವಿ ನಾಯಕರು, ಸ್ವಾಭಿಮಾನಕ್ಕೆ ಹೆಸರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರು ದಿ. 29-04-2024 ರಂದು ವಿಧಿವಶರಾಗಿರುವ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವಾಯಿತು. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಸೃಷ್ಟಿಕರ್ತ ಅವರ ಕುಟುಂಬ ವರ್ಗದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುವೆ.ಗೌರವ ನಮನಗಳು ಸಲ್ಲಿಸುತ್ತೇವೆ.
ವಿಶೇಷ ವರದಿಗಾರರು :- ಸಂಗಮೇಶ ಎನ್ ಜವಾದಿ ಬರಹಗಾರರು,ಚಿಂತಕರು.