ನಮ್ಮ ಶಾಲೆ ನಮ್ಮ ಹೆಮ್ಮೆ
ಸಾಧಕರನ್ನು ಕೊಟ್ಟ ಗರಿಮೆ
ಸ್ಪೂರ್ತಿ ತುಂಬೋ ಚಿಲುಮೆ
ಸರ್ಕಾರಿ ಶಾಲೆಯಂಬ ಹಿರಿಮೆ
ಗುರು ಕಲಿಸಿದ ಅಕ್ಷರದ ಮಂತ್ರ
ಇದುವೇ ಸುಂದರ ಜೀವನ ತಂತ್ರ
ದೈವ ಬೆಸದ ಗುರು ಶಿಷ್ಯರ ಬಂಧ
ಅದುವೇ ನಿಷ್ಕಲ್ಮಶ ಸಂಬಂಧ…..
ಸುಮಾರು 45 ರಿಂದ 48 ದಿನಗಳವರೆಗೆ ಬೇಸಿಗೆ ರಜೆಯನ್ನು ಕಳೆದು ಮತ್ತೆ ಬಾಲ್ಯದ ಸವಿ ಪ್ರಪಂಚವಾದ ಶಾಲೆಗೆ ಬನ್ನಿ ಮಕ್ಕಳೇ.ಅದೋ ! ಆ ಶಾಲೆಗಳು ನಿಮಗಾಗಿ ನಿಮ್ಮ ತುಂಟಾಟದ ಪಾಠ ಪ್ರವಚನಗಳಿಗೆ ನೀವಿಲ್ಲದೆ ಮಂಕಾಗಿ ಕುಳಿತಿದ್ದು ನಿಮ್ಮ ಬರುವಿಕೆಗೆ ಕಾದಿದೆ. ಏನೇ ! ಹೇಳಿ ಶಾಲೆಯಲ್ಲಿ ಆ ಪುಟ್ಟ ಮಕ್ಕಳ ಕಲರವ ಇಲ್ಲದಿರೆ ಶಾಲೆಗಳು ಜೀವ ಕಳೆದುಕೊಂಡಿರುತ್ತದೆ ಮಕ್ಕಳ ಆಗಮನದಿಂದ ಜೀವಕಳೆ ತುಂಬಿಕೊಂಡು ಅದೊಂದು ಪುಟ್ಟ ಪ್ರಪಂಚ ವಾಗುವುದು.
ಬೇಸಿಗೆ ರಜೆಯಲ್ಲಿ ಸಾಕಷ್ಟು ಮೋಜು ಮಸ್ತಿಗಳು ಹಾಗೂ ಸಂಬಂಧಿಕರ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಹೊಸ ಬಟ್ಟೆ ತೊಟ್ಟು ಬೀಗುತ್ತ ಓಡಾಡಿದ್ದು, ಜೊತೆಗೆ ಹಬ್ಬ ಜಾತ್ರೆಗಳಲ್ಲಿ ಬೇಡವೆಂದರು ಹಾಳು-ಮೂಳು ತಿಂದು ಹೊಟ್ಟೆ ಕೆಡಿಸಿಕೊಂಡು ಅನಾರೋಗ್ಯಕ್ಕೆ ಒಳಗಾಗಿ ತಾಯಿಯ ಕೈಯಲ್ಲಿ ಏಟು ತಿಂದದ್ದು ಅಲ್ಲದೆ ಪಾಲಕರ ಒತ್ತಾಯದ ಮೇಲೆ ಕೆಲ ಬೇಸಿಗೆ ಟ್ಯೂಷನ್ ಗಳನ್ನು ಸೇರಿ ತರಾ ತುರಿಯಲ್ಲಿ ಅರ್ಧಂಬರ್ಧ ಪಾಠ ಕಲಿತು ದಿನಕಳೆದದ್ದು ಇವೆಲ್ಲವೂ ಬೇಸಿಗೆಯ ರಜದಲ್ಲಿ ನಡೆಯುವಂತಹ ಸಾಮಾನ್ಯ ಕುಚೇಷ್ಟೆಗಳು ಅಂತೆಯೇ ಒಂದು ಇಂಗ್ಲಿಷ್ ಗಾದೆ ಹೀಗೆ ಹೇಳುತ್ತದೆ “student life is Golden life” ಎಂದು ಮಕ್ಕಳು ಏನೇ ಮಾಡಿದರು ಅದು ಉಚಿತ ಹಾಗೂ ಮನೋಲ್ಲಾಸವಾಗಿರುತ್ತದೆ.ಈ ಎಲ್ಲಾ ತುಂಟಾಟಗಳು ಪಾಲಕರಿಗಂತೂ ಸಾಕು – ಸಾಕು ಮಾಡಿರುತ್ತವೆ. ಯಾವಾಗ ಶಾಲೆಗಳು ಪ್ರಾರಂಭವಾಗುವುದು ? ಮಕ್ಕಳನ್ನು ಶಾಲೆಗೆ ಯಾವಾಗ ಕಳಿಸುತ್ತೇವೆ ಎಂದು ಪಾಲಕರು ಕಾದು ಕುಳಿತಿರುತ್ತಾರೆ. ಏಕೆಂದರೆ ಮಕ್ಕಳು ಕೇಳುವ ಅವಶ್ಯಕತೆಗಳು ಹಾಗೆಯಿರುತ್ತವೆ ಬಗೆ ಬಗೆಯ ಖಾದ್ಯಗಳನ್ನು ಮಾಡಿ ಮಾಡಿ ಅಮ್ಮಾ ರೋಸಿಹೋಗಿರುತ್ತಾಳೆ, ಇನ್ನೂ ಅಪ್ಪ ಪ್ರೇಕ್ಷಣೀಯ ಸ್ಥಳಗಳು ಹೋಟೆಲ್, ರೇಸಾಲ್ಟ್ ಹಾಗೂ ಫ್ಯಾಷನ್ ಬಟ್ಟೆ ಆಟಿಕೆಗಳನ್ನು ಪೂರೈಸುವುದರಲ್ಲಿ ಸೋತು ಹೋಗಿರುತ್ತಾನೆ. ಅದಕ್ಕಾಗಿಯೇ ಶಾಲೆಗಳ ಮರು ಪ್ರಾರಂಭಕ್ಕೆ ಪಾಲಕರು ಜಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ.
ಬನ್ನೀ ಮಕ್ಕಳೇ ಇನ್ನೇನು ಇದೇ ಮೇ 31 ರಂದು ಶಾಲೆಗ 2024 -25ನೇ ಶೈಕ್ಷಣಿಕ ವರ್ಷವೂ ಪ್ರಾರಂಭವಾಗಿದ್ದು ಎಲ್ಲರೂ ನವೋತ್ಸಾಹದಿಂದ ಶಾಲೆಗೆ ಆಗಮಿಸಿ ನಿಮ್ಮ ನೆಚ್ಚಿನ ಗುರುಗಳ ಪಾಠಗಳನ್ನು ಕೇಳಲು,ಜೊತೆಗೆ ಪ್ರೀತಿಯ ಸ್ನೇಹಿತರ ಜೊತೆ ಆಟ ಪಾಠದ ಸಮಯ ಕಳೆಯಲು.
ಮರಳುವ ಮಕ್ಕಳೆಲ್ಲರೂ ಹೊಸ ಕನಸು ಹೊತ್ತುಕೊಂಡು ಮುಂದಿನ ತರಗತಿಗೆ ಸೇರಿ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಒಳಪಟ್ಟು ಸರ್ವಾಂಗೀಣ ಅಭಿವೃದ್ದಿ ಹೊಂದಬೇಕಾಗಿದೆ ಹಿಂದಿನ ತರಗತಿಯಲ್ಲಿ ಕಲಿತ ವಿಷಯಾಂಶವನ್ನು “ಸೇತುಬಂಧ”ಎಂಬ ಕಾರ್ಯಕ್ರಮದ ಮೂಲಕ ಮರು ಮಮನ ಮಾಡಿಕೊಳ್ಳುತ್ತಾ ಮುಂದಿನ ವಿಷಯ ಹಾಗೂ ತರಗತಿಗಳಿಗೆ ಅಣಿಯಾಗಬೇಕು.
“ವಿದ್ಯಯಿಲ್ಲದೆ ಮತಿ ಹೋಯಿತು,
ಮತಿಯಿಲ್ಲದೆ ನೀತಿ ಹೋಯಿತು
ನೀತಿಯಿಲ್ಲದೆ ಗತಿ ಮುಗಿಯಿತ.” ಎಂದು ಜ್ಯೋತಿರಾವ್ ಫುಲೆ ಅವರು ಶಿಕ್ಷಣವು ಪ್ರತಿಯೊಬ್ಬರಲ್ಲಿ ಎಷ್ಟು ಮುಖ್ಯವಾದದ್ದು ಎಂದು ತಮ್ಮದೇ ಆದ ವಾಕ್ಯಗಳಲ್ಲಿ ಹೇಳಿದ್ದಾರೆ. ಹೀಗಿದ್ದಾಗ ! ನೀವು ಶಾಲೆಗೆ ಗೈರು ಆಗದೆ ನಿಯಮಿತವಾಗಿ ಶಾಲೆಗೆ ಹೋಗಿ ಜ್ಞಾನಾರ್ಜನೆಯನ್ನು ಪಡೆಯುವುದಾದರೆ ಈ ಸಮಾಜದಲ್ಲಿ ಒಬ್ಬ ಉನ್ನತ ವ್ಯಕ್ತಿಯಾಗಿ ಬೆಳೆಯಬಹುದಾಗಿದೆ. ಇಂದಿನ ಸರ್ಕಾರ ವ್ಯವಸ್ಥೆಯು ಕೂಡಾ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಗಳನ್ನು ನೀಡಿದ್ದು, ವಿವಿಧ ರೀತಿಯ ಬೋಧನಾ ಚಟುವಟಿಕೆಗಳು, ವಿವಿಧ ಯೋಜನೆಗಳು,ಮಕ್ಕಳಿಗಾಗಿ ಕಲಿಕಾ ಸಮೃದ್ಧ ಉಪಕರಣಗಳು ಹಾಗೂ ಅವಶ್ಯಕತೆಗಳನ್ನು ನೀಡುವುದರ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ಅವಿರತ ಪ್ರಯತ್ನ ಮಾಡುತ್ತಲಿದೆ. ಪ್ರತಿ ಮಗುವಿನ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಸ್ವಾಸ್ಥತೆ ಕಡೆಗೆ ಹೆಚ್ಚು ಗಮನ ಹರಿಸಿದ್ದು ದೈಹಿಕ ಬಲಕ್ಕಾಗಿ ಪೌಷ್ಟಿಕ ಮಧ್ಯಾಹ್ನದ ಬಿಸಿ ಊಟದ ಯೋಜನೆ ಜೊತೆಗೆ ಕ್ಷೀರ, ಮೊಟ್ಟೆ ಹಾಗೂ ರಾಗಿ ಗಂಜಿ ವಿತರಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದು ಮಕ್ಕಳನ್ನು ಸಮೃದ್ಧ ಸದೃಢವಾಗಿ ಬೆಳೆಯುವಲ್ಲಿ ಸಹಾಯಕವಾಗಿದೆ. ಜೊತೆಗೆ ಸಮವಸ್ತ್ರ ಶೂ-ಸಾಕ್ಸ್ ಹಾಗೂ ಉಚಿತ ಪಠ್ಯ ಪುಸ್ತಕದ ಜೊತೆಗೆ ಅವಶ್ಯಕ ಪಾಠೋಪಕರಣಗಳನ್ನು ಒದಗಿಸಿ ಮಕ್ಕಳು ಸಂಪೂರ್ಣ ಹಾಗೂ ಸಮೃದ್ಧವಾಗಿ ಕಲಿಯಲು ಅನುಕೂಲಿಸಿವೆ. ನುರಿತ ಹಾಗೂ ತರಬೇತಿ ಹೊಂದಿದ ಶಿಕ್ಷಕರುಗಳು ನಿಮ್ಮ ಕಲಿಕೆಗೆ ಅನುಕೂಲಿಸುತ್ತಾ ಮಾರ್ಗದರ್ಶಿಸುತ್ತಿದ್ದಾರೆ. ಆದ್ದರಿಂದ ಮತ್ತೆ ಓಡೋಡಿ ಬನ್ನೀ ಮಕ್ಕಳೇ ನಿಮ್ಮಯ ದರ್ಬಾರಿಗೆ. ಎಲ್ಲರೊಂದಿಗೆ ಬೆರೆತು, ಎಲ್ಲವನ್ನು ಕಲಿತು, ನಿಮ್ಮ ನಿಮ್ಮಗಳ ಭವಿಷ್ಯವನ್ನು ರೂಪಿಸಿಕೊಳ್ಳಿ ಉತ್ತಮ ಗುರಿಯ ಬೆನ್ನಟ್ಟಿ ಸತತ ಪರಿಶ್ರಮದಿಂದ ಈ ದೇಶಕ್ಕೆ ಒಬ್ಬ ಉಚಿತ ಮಾನವ ಸಂಪನ್ಮೂಲವಾಗಿ ಬೆಳೆಯಿರಿ. “ಓಡಿರಿ ಶಾಲೆಯತ್ತ ಮುಖ ಮಾಡಿ ನಡೆಯಿರಿ ಸಂತಸದಿ ಕಲಿಯುತ್ತಾ ಎಲ್ಲರೂ ಕೂಡಿ.”
ವಿಶೇಷ ಲೇಖನ :- ಅಶ್ವಿನಿ ಅಂಗಡಿ ಬದಾಮಿ……