ಕಾಲವಿದು..
ಬೆಳೆಸಿದವರನ್ನೇ ಜರೆಯುವವರು
ಜೊತೆಗಿದ್ದವರನ್ನೇ ಮರೆಯುವವರು
ಸ್ವಾರ್ಥಕ್ಕೆ ಸ್ನೇಹ ಮಾಡಿರುವವರು
ಹಿತವಚನ ಹೇಳುವ ಕಾಲವಿದು.
ಇತಿಹಾಸವ ತಿರುಚಿ ಬೋಧಿಸುವವರು
ವಿಚಿತ್ರ ವಿಚಾರಧಾರೆ ಭಾವವಿರುವವರು
ದ್ವೇಷ ಜ್ವಾಲೆಯನು ಹಬ್ಬಿಸುವವರು
ತತ್ತ್ವ ಭೋದಿಸುವ ಕಾಲವಿದು.
ಜಾತಿ ಧರ್ಮದಲ್ಲಿ ಮುಳುಗಿರುವವರು
ಭಾಷೆ ಪ್ರಾಂತ್ಯ ಭೂತ ಹಿಡಿದಿರುವವರು
ಎಡಬಿಡಂಗಿ ಮನೋಭಾವವುಳ್ಳವರು
ಗದ್ದುಗೆಯೇರಿ ಕುಳಿತಿರುವ ಕಾಲವಿದು.
ಶಿಕ್ಷಣವ ವ್ಯಾಪಾರೀಕರಣ ಮಾಡಿರುವವರು
ನ್ಯಾಯ ದೇವತೆಯ ಕುರುಡಾಗಿಸಿರುವವರು
ನೊಂದವರಿಗೆ ನೆರವು ನೀಡದಿರುವವರು
ಕಾಯುವವರೇ ಕೊಲ್ಲುವ ಕಾಲವಿದು.
ಕಣ್ಣಿದ್ದು ಕುರುಡಾಗಿರುವವರು
ಕಿವಿಯಿದ್ದು ಕಿವುಡಾಗಿರುವವರು
ಬಾಯಿಯಿದ್ದು ಮೂಕರಾಗಿರುವವರು
ಬದಲಾಗುವರೆಂದು ಕಾಯುವ ಕಾಲವಿದು.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9591417815.