ಕರುನಾಡಿನ ಪ್ರಗತಿಪರ ವಿಚಾರಧಾರೆಯ ಸಾಹಿತಿ, ಬರಹಗಾರರು, ವೈಚಾರಿಕ ಚಿಂತಕರು, ಅನುಭಾವಿಗಳು,
ನೇರ ನುಡಿಯ ಶ್ರೇಷ್ಠ ವಿದ್ವಾಂಸರು, ಆಧ್ಯಾತ್ಮಿಕ ಸಾಧಕರು, ನಿಸ್ವಾರ್ಥ ಸೇವೆಯ ಶ್ರೀಗಳು ನಮ್ಮ ಸಾಣೇಹಳ್ಳಿ ಶ್ರೀಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳವರು.
ಪರಮ ಪೂಜ್ಯ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ದಿನಾಂಕ- ೦4-೦9-1951 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದ ತಂದೆ ನಾಗಯ್ಯ ತಾಯಿ ಶಿವನಮ್ಮನ ದಂಪತಿಗಳ ಮಗನಾಗಿ ಜನಿಸಿದರು.
ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣ ಸುಣಕಲ್ಲ ಬಿದರಿಯಲ್ಲಿ, ಸಿರಿಗೆರೆಯಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿ ಪಿಯುಸಿ ಯನ್ನು ಪಡೆದು. ಇದೇ ವಿಷಯದಲ್ಲಿ ಬಿಎ ಪದವಿಯನ್ನು ಚಿನ್ನದ ಪದಕ ಪಡೆಯುವುದರೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ನಂತರ
1974 ರಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿಯೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಸಹ ಪೂರೈಸಿದ್ದಾರೆ. ಹೀಗೆ ಶಾಲಾ ಕಾಲೇಜುಗಳ ಶಿಕ್ಷಣದ ಸಮಯದಲ್ಲಿ ರಂಗಭೂಮಿ ಕಡೆಗೆ ಶ್ರೀಗಳು ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು ಎಂಬುದನ್ನು ಕಾಣುತ್ತೇವೆ. ರಂಗಭೂಮಿ ಕಡೆಗೆ ಹೆಚ್ಚು ಒಲವು ಇದರಿಂದ ಪೂಜ್ಯ ಪಂಡಿತಾರಾಧ್ಯ ಶ್ರೀಗಳು 1987 ರಲ್ಲಿ ಶಿವಕುಮಾರ ಕಲಾ ಸಂಘ ಸ್ಥಾಪನೆ ಮಾಡಿರುತ್ತಾರೆ. ದಶಕದ ನಂತರ 1997 ರಲ್ಲಿ ಒಳಗಡೆ ಶಿವಸಂಚಾರ (ರೆಪರ್ಟರಿ) ಆರಂಭಗೊಳಿಸಿರುತ್ತಾರೆ. ತದನಂತರ ರಂಗಕರ್ಮಿ ಸಿ.ಜಿ ಕೃಷ್ಣಸ್ವಾಮಿ (ಸಿಜಿಕೆ) ಅವರ ಆಸಕ್ತಿಯಿಂದ 2003 ರಲ್ಲಿ 5000 ಆಸನಗಳ ಸಾಮರ್ಥ್ಯದ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ ಮಾಡಿದ್ದು ಐತಿಹಾಸಿಕ ಶ್ಲಾಘನೀಯ ಸೇವಾ ಕೆಲಸ ಎಂದರೆ ತಪ್ಪಾಗಲಾರದು. ಇನ್ನು ಶಿವಕುಮಾರ ಕಲಾಸಂಘ ಶಿವಸಂಚಾರದ ಮೂಲಕ ವರ್ಷಕ್ಕೆ ಮೂರು ನಾಟಕ ನೀಡುತ್ತಾ, ಇಲ್ಲಿಯವರೆಗೆ ಸುಮಾರು 150 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದಿದ್ದಾರೆ. ಈ ನಾಟಕಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಶರಣತತ್ವ ಮತ್ತು ಸಾಮಾಜಿಕ ಪರಿವರ್ತನೆ ಹೆಚ್ಚಿನ ರೀತಿಯಲ್ಲಿ ನೋಡಬಹುದು. ಸಮಾಜವನ್ನು ಸರಿ ದಾರಿಯಲ್ಲಿ ತರುವ ಪ್ರಯತ್ನ ಈ ನಾಟಕಗಳ ಮೂಲಕ ಶ್ರೀಗಳು ಹಗಲಿರುಳು ಎನ್ನದೆ ಮಾಡುತ್ತಿದ್ದಾರೆ. ಹೀಗೆ ಶಿವಸಂಚಾರ ಪ್ರಾರಂಭವಾಗಿ. ಸಂಚಾರದ ನಾಟಕಗಳು ಜನಮನ್ನಣೆಯನ್ನು ಪಡೆದುಕೊಂಡು ಯಶಸ್ವಿಯತ್ತ ದಾಪುಕಾಲು ಹಾಕುತ್ತಿವೆ. ಅಲ್ಲದೇ ಶಿವಸಂಚಾರ ನಾಟಕ ಪ್ರದರ್ಶನಗಳು ಕರ್ನಾಟಕದಲ್ಲಿ ಮನೆಮಾತಾಗಿವೆ. ಜನರು ನಾಟಕಗಳನ್ನು ನೋಡಲು ಮುಗಿ ಬೀಳುತ್ತಿದ್ದಾರೆ.ಅನೇಕ ಮಠಾಧೀಶರು, ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ನಾಟಕಗಳನ್ನು ನೋಡಿ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಜನಸಾಮಾನ್ಯರ ಭಾವನೆಗಳನ್ನು ಗೌರವಿಸಿದ ಈ ನಾಟಕಗಳು ಸರ್ವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.ಆರಂಭದ ದಿನಗಳಲ್ಲಿ ನಾಟಕ ಪ್ರದರ್ಶನ ಮಾಡುವುದು ಸವಾಲಾಗಿತ್ತು. ಈ ಸವಾಲನ್ನು ಗಂಭೀರವಾಗಿ ತೆಗೆದುಕೊಂಡು ನಾಟಕ ಪ್ರದರ್ಶನಗಳು ಯಶಸ್ವಿಯಾಗುವಂತೆ ನೋಡಿಕೊಂಡರು ಎಂಬುದು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ರಂಗಭೂಮಿ ಬೆಳೆಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿವಕುಮಾರ ಕಲಾಸಂಘ ಹನ್ನೆರಡು ವರ್ಷಗಳಿಂದ ಸತತವಾಗಿ ಶ್ರಮಿಸುತ್ತಿದೆ.
ಬಸವಾದಿ ಶರಣರ ತತ್ವ ಪ್ರಚಾರ ಮತ್ತು ಸಾಮಾಜಿಕ ಸತ್ಕಾರ್ಯಗಳು ಮಾಡುವುದು ಒಂದೇ ನಾಣ್ಯದ ಎರಡು ಮುಖಗಳೆಂದು ಪರಮ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಭಾವಿಸುತ್ತಾರೆ. ಅಂತೆಯೇ ಸಮಾಜ ಸುಧಾರಣೆಗೆ ಹೆಚ್ಚು ಒತ್ತು ಕೊಟ್ಟು ಧರ್ಮದ ಕೈಂಕರ್ಯಗಳು ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ. ಸತ್ಯದ ಸರಿದಾರಿಗೆ ಕೊಂಡೊಯ್ಯಲು ಧರ್ಮ ಬೇಕು.ಅದೇ ರೀತಿ ಸಮಾಜದಲ್ಲಿ ಬೇರೂರಿರುವ ಹಲವು ಸಮಸ್ಯೆಗಳಿಗೆ ಕಡಿವಾಣ ಹಾಕಿವ ಮೂಲಕ ಅವುಗಳನ್ನು ಬಗೆಹರಿಸುವ ಕಾರ್ಯ ಸುಸೂತ್ರವಾಗಿ ಮಾಡಿದರೆ ಸೇವೆ ಆಗಬಹುದು ಎಂಬ ಅಚಲ ನಂಬಿಕೆಯಿಂದ ಆ ದಿಸೆಯಲ್ಲಿ ಶ್ರೀಗಳು ಹೆಜ್ಜೆ ಹಾಕುತ್ತಿದ್ದಾರೆ.
ಈ ಎರಡೂ ವಿಚಾರಗಳನ್ನು ಸಮಾನಾಂತರವಾಗಿ ತೆಗೆದುಕೊಂಡು ಹೋಗುತ್ತಿರುವ ಶ್ರೀಗಳು 25 ವರ್ಷಗಳಿಗೂ ಹೆಚ್ಚು ಕಾಲ ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆ ಸಾಕ್ಷಿಯಾಗಿದ್ದಾರೆ. 2007 ರಲ್ಲಿ ಭಾರತ ಸಂಚಾರಿ ನಾಟಕಗಳನ್ನು ಆರಂಭಿಸಿ ‘ಶಿವದೇಶ ಸಂಚಾರ’ದ ಮೂಲಕ ಭಾರತಾದ್ಯಂತ ಪರ್ಯಟನೆ ಮಾಡಿ, 21 ರಾಜ್ಯಗಳಲ್ಲಿ ‘ಮರಣವೇ ಮಹಾನವಮಿ’, ‘ಶರಣಸತಿ ಲಿಂಗಪತಿ’, ‘ಜಂಗಮದೆಡೆಗೆ’ ಸೇರಿದಂತೆ ಶರಣ ತತ್ವ ಪ್ರತಿಪಾದಿಸುವ 10 ನಾಟಕಗಳನ್ನು ಹಿಂದಿ ಅವತರಣಿಕೆಯಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.ಹೀಗೆ ಎರಡು ದಶಕಗಳಿಂದ ನಡೆಯುತ್ತಿರುವ ಶಿವಸಂಚಾರ ನಾಟಕ ರಾಷ್ಟ್ರೀಯ ನಾಟಕೋತ್ಸವ ಯಶಸ್ವಿಯತ್ತ ಸಾಗುತ್ತದೆ. ಇಲ್ಲಿಯವರೆಗೂ ಸುಮಾರು 2000 ಕ್ಕಿಂತ ಹೆಚ್ಚು ನಾಟಕಗಳ ಪ್ರದರ್ಶನಗೊಂಡಿವೆ.ಸಾಣೇಹಳ್ಳಿ ಮಠದಲ್ಲಿ ನಾಟಕ ಪ್ರದರ್ಶನಗಳ ಜೊತೆಗೆ ರಂಗತರಬೇತಿ ನಡೆಯುತ್ತದೆ. ವರ್ಷಕ್ಕೆ ಹದಿನೈದು ವಿದ್ಯಾರ್ಥಿಗಳಂತೆ ಇನ್ನೂರೈವತ್ತಕ್ಕೂ ಹೆಚ್ಚು ನುರಿತ ಕಲಾವಿದರು ರಂಗಕರ್ಮಿಗಳು ಈ ಕಲಾಸಂಘದಿಂದ ಹೊರಹೊಮ್ಮಿದ್ದಾರೆ. ಹತ್ತಾರು ಕಲಾವಿದರು ಕಿರುತೆರೆ, ಹಿರಿತೆರೆಗಳಲ್ಲಿ ಹೆಸರು ಮಾಡಿದ್ದಾರೆ ಮತ್ತು ಸ್ವತಂತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಹೆಮ್ಮೆಯ ಪಡುವ ವಿಚಾರವಾಗಿದೆ.
ಸ್ವಾಮಿಗಳೆಂದರೆ ಮೂಗು ಮುರಿದು, ಅನುಮಾನದಿಂದ ನೋಡುವ ಕಾಲವಿದು.ಈ ಕಾಲದಲ್ಲೂ ಇದಕ್ಕೆ ಅಪವಾದವಾಗಿದ್ದಾರೆ ಪಂಡಿತಾರಾಧ್ಯ ಶ್ರೀಗಳು. ಶ್ರೀಗಳ ಪರಿಶ್ರಮ, ಜನಪರ ಕಾಳಜಿ, ವೈಚಾರಿಕ ಚಿಂತನೆ, ರಂಗಾಸಕ್ತಿ, ಸಾಹಿತ್ಯಕ ಅಭಿರುಚಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಒಲವು, ಪ್ರಗತಿಪರ ವಿಚಾರಧಾರೆಗಳ ಮೂಲಕ ಸರ್ವ ಜನಾಂಗದವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ. ಜನಸಾಮಾನ್ಯರು ಶ್ರೀಗಳ ಬಗ್ಗೆ ಗೌರವ, ಕಾಳಜಿ ತೋರುತ್ತಿದ್ದಾರೆ. ಇಂದು ಸಾಣೇಹಳ್ಳಿ ನಾಡಿನ ಎಲ್ಲ ವರ್ಗದ ಜನರ ಗಮನ ಸೆಳೆಯಲು ಕಾರಣವಾದದ್ದು ಶ್ರೀಗಳವರ ರಂಗಭೂಮಿಯ ಚಟುವಟಿಕೆಗಳೇ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ಹೀಗಾಗಿ ಶ್ರೀಗಳು ಧಾರ್ಮಿಕ ರಂಗಭೂಮಿಯ ಪಿತಾಮಹರೆಂದೇ ಪ್ರಖ್ಯಾತರಾಗಿದ್ದಾರೆ.
ಶ್ರೀಗಳ ಸಾಹಿತ್ಯ/ಚಿಂತನೆ : ಕವಿತೆ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ ಸೇರಿದಂತೆ ಶರಣ ಸಾಹಿತ್ಯ, ಪ್ರಕೃತಿ, ಅಧ್ಯಾತ್ಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವ ಶ್ರೀಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ
ಪ್ರಮುಖ ಕೃತಿಗಳು ಹೀಗಿವೆ : ಜೀವನ ದರ್ಶನ (1985),ಕೈದೀವಿಗೆ (1988),ಬದುಕು (1990),ಹುಟ್ಟು ಸಾವುಗಳ ಮಧ್ಯೆ (1990),ಸಮಾಧಿಯ ಮೇಲೆ (1991),ಸಮರಸ (1992),ಸಮಕಾಲೀನತೆ ಮತ್ತು ವಚನ ಸಾಹಿತ್ಯ (1992),ಮರುಭೂಮಿ (1993),ಕಾಯಕ ದಾಸೋಹ (1994),ಹುತ್ತ ಮತ್ತು ಹಾವು (1994),ಆದರ್ಶ ವಾಸ್ತವ (1995),ಜಾಗೃತ ವಾಣಿ (1996),ಪ್ರಳಯ! ಮುಂದೇನು? (1998),ಬದುಕು ಹೀಗೇಕೆ? (1999),ಜ್ಞಾನ ಪುಷ್ಪ (1999),ಸುಖ ಎಲ್ಲಿದೆ? (2000),ಧರ್ಮಗುರು (2000),ಕನ್ನಡಿ (2001),ಸುಜ್ಞಾನ (2001),ಮನಸು ಮಲ್ಲಿಗೆಯಾಗಲಿ (2002),ಅಂತರಾಳ (2005),ಶಿವಬೆಳಗು (2005),ಬಾಳ ಬುತ್ತಿ (2006),ಜೇಡರ ದಾಸೀಮಯ್ಯ (2007),ಮಾದರ ಚೆನ್ನಯ್ಯ (2008),ರೊಟ್ಟಿ ಬುತ್ತಿ (2008),ವಚನ ವೈಭವ (2009),ಬಸವಧರ್ಮ (2009),ಪ್ರಸ್ತುತ (2010),ವ್ಯಕ್ತಿತ್ವ (2011),ಕಲ್ಯಾಣ (2012),ದಿಟ್ಟ ಹೆಜ್ಜೆಯ ಧೀರ ಪ್ರಭು (2012),ಮನದನಿ (2012),ಸಂಪತ್ತು (2013),ನೋಯದವರೆತ್ತ ಬಲ್ಲರು? (2014),ಶರಣ ಸಂಕುಲ (2015),ಆತ್ಮ ವಿಕಾಸದ ಮಾರ್ಗ (2015),ನಡೆನುಡಿ ಸಿದ್ಧಾಂತ (2017),ಲಿಂಗಾಯತ ಧರ್ಮ (2017),ವಚನಕಾರರ ಬದ್ಧತೆ (2018),ಮನದ ಮಾತು (2018),ಧರ್ಮಜ್ಯೋತಿ (2018),ಸಮಸಮಾಜದ ಕನಸು (2019),ಮತ್ತೆ ಕಲ್ಯಾಣದೆಡೆಗೆ (2019),ಶರಣಸಂದೇಶ. (2020) ಸೇರಿದಂತೆ ಇತ್ಯಾದಿ. ಇವುಗಳಲ್ಲದೆ ನಾಟಕ ಕೃತಿಗಳು ಹೀಗಿವೆ : ಅಂತರಂಗ-ಬಹಿರಂಗ (2000),ಸ್ವಾಮಿ ವಿವೇಕಾನಂದ (2002),ಜಂಗಮದೆಡೆಗೆ (2003),ಅಂಕುಶ (2008),ಮೋಳಿಗೆ ಮಾರಯ್ಯ (2017),ಗುರುಮಾತೆ ಅಕ್ಕ ನಾಗಲಾಂಬಿಕೆ (2019) ಮತ್ತು 1997 ರಲ್ಲಿ ಪ್ರವಾಸ ಕಥನ ಶಿವಾನುಭವ ಪ್ರವಾಸ ಕೃತಿ ಬಿಡುಗಡೆಗೊಂಡಿದೆ.ಅದೇ ರೀತಿ
ಒಲಿದಂತೆ ಹಾಡುವೆ (1996), ಅಮೃತ ಬಿಂದು (2012) ವಚನಗಳ ಕೃತಿಗಳು ಸಹ ನಾಡಿನ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ.
ಶ್ರೀಗಳಿಗೆ ಸಂದ ಪ್ರಮುಖ ಪ್ರಶಸ್ತಿಗಳು ಹೀಗಿವೆ : ಪಾಲ್ ಹ್ಯಾರಿಸ್ ಪ್ರಶಸ್ತಿ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ನಾಟಕ ಅಕಾಡೆಮಿ ಗೌರವ ಫೆಲೋಶಿಪ್,
ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ,
ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಸನ್ಮಾನ, ಪ್ರಶಸ್ತಿಗಳು ಪಡೆದಿದ್ದಾರೆ.
ಕಚುಸಾಪ ಸರ್ವಾಧ್ಯಕ್ಷರಾಗಿ ಪಂಡಿತಾರಾಧ್ಯ ಶ್ರೀಗಳು ಆಯ್ಕೆ:
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಘಟಕದಿಂದ ಪ್ರತಿ ವರ್ಷ ಚುಟುಕು ಸಾಹಿತ್ಯ ಸಮ್ಮೇಳನಗಳು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ.ಅದೇ ರೀತಿಯ ಬೀದರ ಜಿಲ್ಲೆಯ ಭಾಲ್ಕಿ ಹಿರೇಮಠ ಸಂಸ್ಥಾನದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ
11ನೆಯ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಕರುನಾಡಿನ ಹೆಮ್ಮೆಯ ವೈಚಾರಿಕ ಚಿಂತಕರು, ಸಾಹಿತಿಗಳು, ಬರಹಗಾರರು ಆಗಿರುವ ನಮ್ಮೆಲ್ಲರ ಪೂಜ್ಯನೀಯ ಡಾಕ್ಟರ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡು, ಸಮ್ಮೇಳನ ಯಶಸ್ವಿಗೊಳಿಸಿರುವುದು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಹಾಗೆಯೇ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಚುಟುಕು ಭೊಷಣ ಪ್ರಶಸ್ತಿಗೆ ಪರಮ ಪೂಜ್ಯ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭಾಜನರಾಗಿ, ಪ್ರಶಸ್ತಿ ಸ್ವೀಕರಿಸಿದ್ದು ಸರ್ವರಿಗೂ ಸಂತಸ ತಂದಿದೆ.
ಲೇಖಕರು: ಸಂಗಮೇಶ ಎನ್ ಜವಾದಿ.