ಪೋಲೀಸರನ್ನ ರಾಕ್ಷಸರಂತೆ ಕಾಣುವ ಜನ ಸಾಮಾನ್ಯರಿಗೆ, ಪುಂಡ ಪೋಕರಿಗಳಿಗೆ, ಈ ಬರಹ.
ಕಳೆದ ವಾರ ಶವಾಗಾರ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು, ಅಲ್ಲಿ ಪೋಲೀಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಉರಿಯುವ ಬಿಸಿಲಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರಿಗೆ ಸುಡುವ ಹೆಣಗಳ ಮುಂದೆ ನಿಂತು ಹೊರ ಬರುವ ಹೊಗೆಯನ್ನು ಲೆಕ್ಕಿಸದೆ ಅಲ್ಲೇ ಇದ್ದ ಸಿಬ್ಬಂದಿ ಒಂದು ಕಡೆ, ಆಂಬುಲೆನ್ಸ್ ನಲ್ಲಿ ಬಂದ ಹೆಣಗಳ ಸಂಬಂಧಿಕರನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿ ಮತ್ತೊಂದು ಕಡೆ, ಸುಸ್ತಾಗಿ ಗೋರಿ ಮೇಲೆ ಕೂತಿದ್ದವರನ್ನು ನೋಡಿ ನಿಜವಾದ ಹೀರೋಗಳು ಇವರೇ ಅನ್ನಿಸಿತು. ಇತ್ತೀಚೆಗೆ ನಾನು ನೋಡಿದಂತೆ ಕೆಲವರು ಪೋಲೀಸರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡೋದು, ಅವರನ್ನ ಬೈಯ್ಯೋದು, ಅವರಿಗೆ ಮಾನವೀಯತೆನೇ ಇಲ್ಲವೇನೋ ಅವರು ರಾಕ್ಷಸರೇನೋ ಅನ್ನೋ ರೀತಿ ಮಾತನಾಡೋದನ್ನ ಮಾಡ್ತಿದಾರೆ. ಅಂಥದ್ದನ್ನ ಓದಿದಾಗ ಇಂಥವರಿಗೋಸ್ಕರ ಅಷ್ಟೆಲ್ಲಾ ತ್ಯಾಗ ಮಾಡ್ಬೇಕಾ ಪೋಲೀಸಿನೋರು ಮತ್ತವರ ಕುಟುಂಬ ಅಂತ ಸಂಕಟ ಆಯ್ತು. ಬಹುತೇಕ ಜನರು ಪೋಲೀಸ್ ಕೆಲಸಕ್ಕೆ ಹೊಟ್ಟೆಪಾಡಿಗಾಗಿಯೇ ಬಂದಿರ್ತಾರೆ. ಮೇಲಿನ ಅಧಿಕಾರಿಗಳಿಂದ ಬಂದ ಆದೇಶಗಳನ್ನ ಅವರು ಪಾಲಿಸಲೇಬೇಕು. ಯಾವುದೋ ಮುಷ್ಕರ ನಡೆದಾಗಲೋ, ಗಲಭೆ ನಡೆದಾಗಲೋ ಮೇಲಿನ ಅಧಿಕಾರಿಗಳಿಂದ ಲಾಠಿಚಾರ್ಜ್ ಆದೇಶ ಬಂದಾಗ ಪೋಲೀಸರು ಲಾಠಿ ಎತ್ತಲೇ ಬೇಕಾಗುತ್ತದೆ, ಏಕೆಂದರೆ ಅದು ಅವರ ಡ್ಯೂಟಿ. ಕೆಲಸ ಮಾಡದಿದ್ದರೆ ಅವರನ್ನೇ ನಂಬಿದ ಕುಟುಂಬ ಉಪವಾಸ ಬೀಳಬೇಕಾಗುತ್ತದೆ. ಮೀಡಿಯಾದವರು ಪೋಲೀಸರು ಲಾಠಿ ಎತ್ತೋದನ್ನ “ರಾಕ್ಷಸರ” ರೀತಿ ಬಿಂಬಿಸ್ತಾರೆ. ಅದನ್ನ ನೋಡಿದ ವಿವೇಚನೆಯಿಲ್ಲದ ಜನ ಪೋಲೀಸರ ಬಗ್ಗೆ ಗೌರವವಿಲ್ಲದೆ ಮಾತಾಡ್ತಾರೆ. ಪೋಲೀಸರಿಗೆ ತಮ್ಮ ಬಗ್ಗೆ ತಾವು ಹೇಳಿಕೊಳ್ಳೋಕೆ, ತಮ್ಮ ಕಷ್ಟಗಳನ್ನ ಹಂಚಿಕೊಳ್ಳೋಕೆ, ತಮ್ಮ ಮಾನವೀಯತೆಯನ್ನ ಪ್ರಚಾರ ಮಾಡೋಕೆ ಸಮಯವಿಲ್ಲ ಯಾಕೆಂದರೆ ಅವರಿಗೆ ಪುರುಸೊತ್ತಿಲ್ಲದಷ್ಟು ಕೆಲಸವಿದೆ. ಲಂಚ ತಗೋತಾರೆ ಅಂತ ಇಡೀ ಇಲಾಖೆಯನ್ನೇ ಬೈಯುವ ಮೊದಲು ಆಲೋಚಿಸಿ ಮಾತನಾಡಿ. ಇಡೀ ಸರ್ವೀಸ್ ನಲ್ಲೇ ಬೇರೆಯವರ ಹಣದಿಂದ ಒಂದೇ ಒಂದು ಲೋಟ ಕಾಫಿ ಕೂಡ ಕುಡಿಯದ ಪೋಲೀಸರಿದ್ದಾರೆ. ಸಂಕಟವಿದ್ದರೆ ದುಡ್ಡು ತೆಗೆದುಕೊಂಡವರ ಹೆಸರನ್ನ ಹೇಳಿ ಬೈದುಕೊಳ್ಳಿ, ಅದುಬಿಟ್ಟು ಇಡೀ ಇಲಾಖೆಯನ್ನೇ ಭ್ರಷ್ಟ ಎಂದು ಹೇಳುವುದು ಸರಿಯಲ್ಲ. ಬೇರೆ ಇಲಾಖೆಗಳಲ್ಲಿರುವಂತೆಯೇ ಅಲ್ಲೂ ದೌರ್ಬಲ್ಯಗಳಿವೆ, ಅದಕ್ಕಿಂತ ಹೆಚ್ಚಾಗಿ ಅವರ ಶ್ರಮವಿದೆ. ಏನೇನೋ ಸಾಧನೆ ಮಾಡುವ ಕನಸನ್ನ ಹೊತ್ತು, ಒಳ್ಳೊಳ್ಳೆ ವಿದ್ಯಾಭ್ಯಾಸ ಮಾಡಿದ ಹೆಣ್ಣು ಮಕ್ಕಳು ಪೋಲೀಸರನ್ನ ಮದುವೆಯಾದ ಮೇಲೆ, ಅನಿವಾರ್ಯವಾಗಿ ಎಲ್ಲಾ ಕನಸುಗಳನ್ನ ತ್ಯಾಗ ಮಾಡಿ ಕುಟುಂಬದ ನೊಗ ಹೊರ್ತಾರೆ. ಅವರ ತ್ಯಾಗಕ್ಕೆ ಬೆಲೆಯಿಲ್ಲವೇ…! ಎಷ್ಟೋ ಜನ ಪೋಲೀಸರಿಗೆ ಮಕ್ಕಳೊಂದಿಗೆ ಆಡುವುದಿರಲಿ, ಅವರ ಮುಖ ನೋಡೋಕೂ ಸಮಯ ಇರಲ್ಲ. ಎಲ್ಲರಂತೆಯೇ ತಿಂಗಳ ಕಷ್ಟಕ್ಕೆ ಒಳಗಾದ ಪೋಲೀಸ್ ಹೆಣ್ಣು ಮಕ್ಕಳು, ಆ ಸಂದರ್ಭದಲ್ಲಿ ದೇಹದ ಆರೋಗ್ಯಕ್ಕೆ ಒಗ್ಗದಿದ್ದರೂ ಯೂನಿಫಾರ್ಮ್ ಧರಿಸಿ ಗಂಟೆಗಟ್ಟಲೆ ಕರ್ತವ್ಯ ನಿರ್ವಹಿಸ್ತಾರೆ. ಆಗಿನ ಅವರ ನೋವು, ಸಂಕಟದ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಪೋಲೀಸರೂ ಎಲ್ಲರಂತೆ ಮನುಷ್ಯರೇ, ಅವರಿಗೇನು ಅತೀಂದ್ರಿಯ ಶಕ್ತಿ ಇರೋದಿಲ್ಲ. ಆದರೂ ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ “ನಾವಿದೀವಿ… ಭಯ ಬೇಡ” ಅನ್ನೋ ಭರವಸೆ ತುಂಬ್ತಾರೆ. ಅಷ್ಟೇ ಅಲ್ಲ ಎಲ್ಲಾ ಸಂದರ್ಭಗಳಲ್ಲೂ ಹಿಂದೆ ಜಗ್ಗದೆ ಮುನ್ನುಗ್ಗಿ ಕೆಲಸ ಮಾಡ್ತಾರೆ. ಕೋವಿಡ್ ಸಮಯದಲ್ಲಿ ಎಲ್ಲರೂ ಜೀವಭಯಕ್ಕೆ ಬಿದ್ದು ಮನೆಯಲ್ಲಿ ಬಚ್ಚಿಟ್ಟುಕೊಳ್ಳಬೇಕಾಯ್ತು. ಆದರೆ ಪೋಲೀಸರು ಪರಿಸ್ಥಿತಿಗೆ ಎದೆಯೊಡ್ಡಿ ನಿಂತು ಬೀದಿಗಿಳಿದರು. ಜನರೆಲ್ಲಾ ರಾತ್ರಿ ವೇಳೆ ನೆಮ್ಮದಿಯಾಗಿ ಕುಟುಂಬದೊಂದಿಗೆ ಬೆಚ್ಚಗೆ ನಿದ್ದೆ ಮಾಡ್ತಿದ್ರೆ, ಕುಟುಂಬ ತೊರೆದು ಬಂದು, ಚಳಿ ಮಳೆಯಲ್ಲಿ ನಿಂತು ಪೋಲೀಸರು ಬೆಚ್ಚಗೆ ನಿದ್ದೆ ಮಾಡೋರನ್ನ ಕಾಯೋ ಕೆಲಸ ಮಾಡ್ತಿರ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಕೋಟ್ಯಾಂತರ ಜನ ಓಡಾಡೋ ರಸ್ತೆಗಳಲ್ಲಿ ನಿಂತು, ವಿಷದ ಗಾಳಿಯನ್ನ ಕುಡೀತಾ, ಓಡಾಡುವವರ ಸುರಕ್ಷತೆಗಾಗಿ ಶ್ರಮಿಸ್ತಿರ್ತಾರೆ. ಆರೋಗ್ಯಕ್ಕೋಸ್ಕರ ನೆಮ್ಮದಿಯಾಗಿ ಜನ ವಾಕಿಂಗ್ ಹೊರಟರೆ, ಅವರ ಆಭರಣ ಕಳುವಾಗದೇ ಇರಲಿ, ಯಾರಿಗೂ ತೊಂದರೆಯಾಗದೇ ಇರಲಿ ಅಂತ ಪೋಲೀಸಿನವರು ಅವರನ್ನ ಕಾಯೋ ಕೆಲಸ ಮಾಡ್ತಾರೆ. ನೆಮ್ಮದಿಯಾಗಿ ವಾಕಿಂಗ್ ಹೋಗೋ ಅದೃಷ್ಟ ಅವರಿಗಿಲ್ಲ. ಮನೆ ಮಕ್ಕಳೊಂದಿಗೆ ಹಬ್ಬ ಮಾಡುವ ಕನಸಂತೂ ಅವರು ಕಾಣೋ ಹಾಗೇ ಇಲ್ಲ. ಇನ್ನೂ ಕುಟುಂಬದೊಂದಿಗೆ ಟೂರ್ ಹೋಗೋದಂತೂ ಅವರು ನೆನೆಸಿಕೊಳ್ಳೋ ಹಾಗೇ ಇಲ್ಲ. ಯಾರು ಎಲ್ಲಿ ಸತ್ರೂ, ಕೆಟ್ರೂ ಪೋಲೀಸರೇ ಬೇಕು. ಯಾವುದೇ ಸಭೆ, ಸಮಾರಂಭ, ಚುನಾವಣೆ ಅವರ ಕೊಡುಗೆ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ ಬೆಂಗಳೂರಿನ ಎಲ್ಲಾ ಪೋಲೀಸರೂ ಒಟ್ಟಿಗೇ ಒಂದೇ ಒಂದು ರಾತ್ರಿ ರಜೆ ತಗೊಳ್ಳಲಿ ಸಾಕು. ಟೀಕೆ ಮಾಡುವ ಜನರಿಗೆ ಅವರ ಬೆಲೆಯೇನು ಅಂತ ಅರ್ಥವಾಗತ್ತೆ. ಪೋಲೀಸರಲ್ಲಿ ಅತಿಹೆಚ್ಚು ಮಾನವೀಯತೆ ಇದೆ, ಅದನ್ನ ಡಂಗೂರ ಸಾರೋಕೆ ಅವರಿಗೆ ಪುರುಸೊತ್ತಿಲ್ಲ ಅಷ್ಟೇ. ಪೋಲಿಸರು ರಾಕ್ಷಸರಲ್ಲ, ಅವರು ನಮ್ಮೆಲ್ಲರ ರಕ್ಷಕರು ಅನ್ನೋದು ನೆನಪಿರಲಿ.
ವರದಿ – ವ್ಯಾಟ್ಯಾಪ್ ಕೃಪೆ.
ಸಂಪಾದಕೀಯ