ವಚನಗಳು…

Spread the love

ವಚನಗಳು…4

 

ವಚನ -01 – ಸದ್ಗುರು

ನೇರ ನುಡಿಯ ತತ್ವವು
ಧೀರ ನಡೆಯ ವ್ಯಕ್ತಿತ್ವವು
ಕಾಯಕ ಕಾಲ ಕಾಸಿನ ಮಹತ್ವವು
ನ್ಯಾಯ ನೀತಿ ಧರ್ಮದ ಸಿದ್ಧಾಂತವು
ಸತ್ಯ ನಿಷ್ಠೆ ಪ್ರಾಮಾಣಿಕತೆಯ ವೇದಾಂತವು
ನಿತ್ಯ ನಿಯಮವಾಗಿಸಿ ಬಾಳಿದರೆಮ್ಮ
ಶ್ರೀ ಶ್ರೀ ಶ್ರೀ ತರಳಬಾಳು ಸದ್ಗುರುವು.

ವಚನ -02 – ಚಿನ್ಮಯ ರೂಪ

ಮನದಂಧಕಾರ ಬರಡು ಭೂಮಿ ನೋಡಿ
ಅನುಭವದ ಎತ್ತಗಳ ನೇಗಿಲನು ಹೂಡಿ
ಜ್ಞಾನದ ಬೀಜವನು ಬಿತ್ತನೆಯ ಮಾಡಿ
ಘನಮೃತದ ಫಸಲನು ಬೆಳೆದು ಕಾಪಾಡಿ
ಎನ್ನಮತಿಯ ಹಸಿವನು ನೀಗಿದ ಗುರುವೇ
ಚಿನ್ಮಯ ರೂಪ ಶ್ರೀ ತರಳಬಾಳು ಸದ್ಗುರುವೇ..

ವಚನ -03 -ಪರಂಜ್ಯೋತಿ

ಕಾಮ ಕ್ರೋಧಾದಿಗಳನು ಸುಟ್ಟು
ಕಾವಿ ಬಟ್ಟೆಯನು ತಾನು ತೊಟ್ಟು
ಕಾಲ ಜ್ಞಾನದ ವಿಭೂತಿಯ ಧರಿಸಿ
ಕಾಲನ ಜಯಿಸುವ ಮಾರ್ಗವ ಬೋಧಿಸಿ
ಭಕ್ತರ ಹೃದಯ ಸಿಂಹಾಸನವೇರಿದೆ
ಭಕ್ತಿಯ ಪರಂಜ್ಯೋತಿಯನು ಬೆಳಗಿದೆ
ಶ್ರೀ ತರಳಬಾಳು ಸದ್ಗುರುವೇ ಜಗದ
ತರಳರನು ಸನ್ಮಾರ್ಗದಲ್ಲಿ ನಡೆಸಿದೆ.

ವಚನ -04 – ಘನಮಹಿಮ

ಮನವೆಂಬ ಬರಡು ಭೂಮಿಯಲ್ಲಿ
ಮನಃಸಾಕ್ಷಿಯೆಂಬ ನೇಗಿಲನೂಡಿ
ಮನೋವಿಕಾರದ ಕಳೆಗಳನು ಕಿತ್ತೆಸೆದು
ಮಾನವೀಯತೆಯ ಬೀಜಗಳನು ಬಿತ್ತಿ
ಮನುಷ್ಯತ್ವದ ಬೆಳೆಯನು ಬೆಳೆದು
ಮನದ ಭೂಮಿ ಫಲವತ್ತೆಂದು ಸಾರಿದರೆಮ್ಮ
ಘನಮಹಿಮ ಶ್ರೀ ತರಳಬಾಳು ಸದ್ಗುರುವು.

ವಚನ -05 – ಮರೆತರೆ

ಕಾವಿಯ ತೊಟ್ಟರೇನಯ್ಯ
ಕಾಮದ ಮನವ ಬಿಡದಿರೆ
ಖಾದಿಯ ಉಟ್ಟರೇನಯ್ಯ
ಗಾದಿಯ ಆಸೆಯ ಬಿಡದಿರೆ
ಖಾಕಿಯ ಧರಿಸಿದರೇನಯ್ಯ
ಶೋಕಿಯ ಲಂಚವ ಬಿಡದಿರೆ
ಭಕ್ತರಂತೆ ನಾಮವ ಹಾಕಿದರೇನಯ್ಯ
ಶಿವ ಶರಣರನು ಅರಿಯದಿರೆ
ಮಾನವರಾಗಿ ಹುಟ್ಟಿದರೇನಯ್ಯ
ಶ್ರೀತರಳಬಾಳು ಸದ್ಗುರುವ ಮರೆತರೆ.

ವಚನ -06 – ಶರಣೆಂಬೆ

ಭಕ್ತರ ಹೃದಯ ಸಿಂಹಾಸನವೇರಿದ ಗುರುವೇ
ಜನರ ಮನೆಮನದಿ ಪೂಜಿಸುವ ಮಹಾಗುರುವೇ
ತರಳರ ಬಾಳನುದ್ದರಿಸಲು ಬಂದ ಜಗದ್ಗುರುವೇ
ಕಾಯಕ ಕಾಲ ಕಾಸಿನ ಮಹತ್ವ ಸಾರಿದ ಪ್ರಭುವೇ
ಶ್ರೀ ತರಳಬಾಳು ಸದ್ಗುರುವೇ ಶರಣು ಶರಣೆಂಬೆ.

ವಚನ -07 – ಪೊರೆಯುವರು

ಮಾರ್ಜಾಲ ತನ್ನ ಮರಿಯನು
ಮಮತೆಯಿಂದ ರಕ್ಷಿಸುವಂತೆ
ಮರ್ಕಟದ ಮರಿಯು ತನ್ನಯ
ಮಾತೆಯನು ಆಶ್ರಯಿಸುವಂತೆ
ಮತ್ಸ್ಯದ ಮರಿಯು ತನ್ನಯ
ವಾತ್ಸಲ್ಯದ ತಾಯಿಯ ಸ್ಮರಿಸುವಂತೆ
ಶ್ರೀ ತರಳಬಾಳು ಸದ್ಗುರುವು ತನ್ನಯ
ಶಿಷ್ಯರ ತಪ್ಪು ಒಪ್ಪುಗಳನು ಪರಿಶೀಲಿಸಿ
ಮಾರ್ಜಾಲ, ಮರ್ಕಟ, ಮತ್ಸ್ಯಗಳ
ಕಿಶೋರ ನ್ಯಾಯದ ತರಹ ಪೊರೆಯುವರು.

ವಚನ -08 -ಪುರುಷಾರ್ಥ

ಧರ್ಮದ ಧರೆಯೊಳಗೆ
ಅರ್ಥದ ಬೇರು ಬಿಟ್ಟು
ಕಾಮದ ಮರವಾಗಿ
ಮೋಕ್ಷದ ಫಲ ಬಿಟ್ಟರೆ
ಪುರುಷಾರ್ಥವು ಧನ್ಯವೆಂದರು
ನಮ್ಮ ಶ್ರೀ ತರಳಬಾಳು ಸದ್ಗುರುವು.

ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್,
ಅನುಭವಮಂಟಪ ದಾವಣಗೆರೆ.
ದೂ.ಸಂ.9591417815.

Leave a Reply

Your email address will not be published. Required fields are marked *