ಅಪ್ಪಟ ದೇಶಭಕ್ತ ರತನ್ ಟಾಟಾ, ಬಡವರ ಬಂಧು,ಅಪ್ಪಟ ದೇಶ ಭಕ್ತ,
ಉಪ್ಪಿನಿಂದ ಹಡಗಿನವರೆಗೆ ಕಾರ್ಮಿಕನಂತೆ ದುಡಿದು ರತನ್ ಟಾಟಾ `ಟಾಟಾ’ ಸಾಮ್ರಾಜ್ಯ ಕಟ್ಟಿದ್ದ ನಮ್ರತೆಯ ಸರಳ ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿ. ಭಾರತೀಯರು ಮೆಚ್ಚಿದ ಶ್ರೇಷ್ಠ ಉದ್ಯಮಿ, ಟಾಟಾ ಸಮೂಹಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತಂದ, ದೇಶದ ಹೆಮ್ಮೆಯ ಕುವರ ರತನ್.
ರತನ್ ಟಾಟಾ ರವರು ನೇವಲ್ ಟಾಟಾ ಮತ್ತು ಸುನಿ ಟಾಟಾ ರವರ ಪುತ್ರರಾಗಿ 28 ಡಿಸೆಂಬರ್
1937ರ ಜನಿಸಿದರು. ತಂದೆಯಿಂದ ತಾಯಿ ಸುನಿ ಟಾಟಾ 1948 ರಲ್ಲಿ ಬೇರ್ಪಟ್ಟಾಗ ಅಜ್ಜಿಯ ಮೇಲ್ವಿಚಾರಣೆಯಲ್ಲಿ ಬಾಲ್ಯದ ಬದುಕನ್ನು ಕಳೆದರು.ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಸೇರಿದಂತೆ ಮುಂಬೈ ಮತ್ತು ಶಿಮ್ಲಾದಲ್ಲಿ ಓದಿದ ಟಾಟಾ ನಂತರ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಉನ್ನತ ಶಿಕ್ಷಣ ಪಡೆದರು. ಆದನಂತರ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ನಂತರ ಅವರು ಅಮೆರಿಕದಲ್ಲಿ ಕೆಲಸ ಮಾಡಲು ಬಯಸಿದ್ದರು. ಆದರೆ ಅವರ ಅಜ್ಜಿಯ ಆರೋಗ್ಯ ಏರುಪೇರಾದಾಗ ಅವರು ಭಾರತಕ್ಕೆ ಬರಬೇಕಾಯಿತು. ಭಾರತದಲ್ಲಿ, ಅವರು IBM ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಟಾಟಾ ಗ್ರೂಪ್ ಅಧ್ಯಕ್ಷ ಜೆಆರ್‌ಡಿ ಟಾಟಾ ಅವರಿಗೆ ಈ ವಿಷಯ ತಿಳಿದಾಗ, ತೀವ್ರ ಕೋಪಗೊಂಡಿದ್ದರು. ಜೆಆರ್‌ಡಿ ಟಾಟಾ ಅವರ ಆದೇಶದ ಮೇರೆಗೆ ಅವರು ತಮ್ಮ ಸಿವಿಯನ್ನು ಟಾಟಾ ಗ್ರೂಪ್‌ಗೆ ಕಳುಹಿಸಿದರು ಮತ್ತು ಟಾಟಾ ಗ್ರೂಪ್‌ನಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ,
ಟಾಟಾ ಸ್ಟೀಲ್‌ನಲ್ಲಿ ಕಾರ್ಮಿಕರಂತೆ ಕೆಲಸ ಮಾಡಿದರು.
ಗ್ರೂಪ್‌ನಲ್ಲಿ ಕೆಲಸ ಮಾಡುವಾಗ, ಅವರು ಇತರ ಉದ್ಯೋಗಿಗಳೊಂದಿಗೆ ಕೆಲಸದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತರು. ಎಲ್ಲರೊಂದಿಗೆ ನಗುನಗುತ್ತಲೇ ಕೆಲಸ ಮಾಡಿ, ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದರು. ತರುವಾಯ 1991 ರಲ್ಲಿ, ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಅಧ್ಯಕ್ಷರಾದರು ಮತ್ತು ಸುಮಾರು 21 ವರ್ಷಗಳ ಕಾಲ ಇಡೀ ಗುಂಪನ್ನು ಮುನ್ನಡೆಸಿದರು. ಈ ಅವಧಿಯಲ್ಲಿ, ರತನ್ ಟಾಟಾ ಅವರು ಟಾಟಾ ಸಮೂಹವನ್ನು ಸ್ಮರಣೀಯವಾಗಿ ಮುನ್ನಡೆಸಿದರು ಮಾತ್ರವಲ್ಲದೆ ಉದ್ಯಮದಲ್ಲಿ ಭಾರತಕ್ಕೆ ಕೀರ್ತಿ ತಂದರು. ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾಗ, ರತನ್ ಟಾಟಾ ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ದೊಡ್ಡ ಬ್ರಾಂಡ್‌ಗಳನ್ನು ಜಗತ್ತಿಗೆ ಪರಿಚಯಿಸಿದರು.
ರತನ್ ಟಾಟಾ ಅವರ ಟಾಟಾ ಗ್ರೂಪ್ ಉಪ್ಪು ತಯಾರಿಕೆಯಿಂದ ಹಿಡಿದು ಹಾರುವ ವಿಮಾನಗಳವರೆಗೆ ಉತ್ಪಾದನೆ ಮಾಡಿದರು. ರತನ್ ಟಾಟಾ ಅವರಿಂದಲೇ ಇಂದು ಭಾರತದ ಪ್ರತಿಯೊಂದು ಮನೆಯಲ್ಲೂ ಕೆಲವು ಟಾಟಾ ಉತ್ಪನ್ನವನ್ನು ಬಳಸಲಾಗುತ್ತಿದೆ. ರತನ್ ಟಾಟಾ ಅವರು ಇಂತಹ ಉತ್ಪನ್ನಗಳನ್ನು ದೇಶಕ್ಕೆ ನೀಡಿದರು, ಇದನ್ನು ಭಾರತದ ಮೇಲ್ವರ್ಗದಿಂದ ಕೆಳವರ್ಗದವರೆಗೆ ಎಲ್ಲರೂ ಬಳಸುತ್ತಿದ್ದಾರೆ.
ಟಾಟ ಸಮೂಹದ ಬೆಳವಣಿಗೆಯ ಸರದಾರ:
ಟಾಟ ಸಮೂಹದ ಮುಖ್ಯಸ್ಥ ‘ಭಾರತರತ್ನ ಜೆ.ಆರ್.ಡಿ ಟಾಟ’ ಅಪಾರ ಸಾಧಕರು. ಒಂದು ರೀತಿಯಲ್ಲಿ ವರ್ಣರಂಜಿತ ಮೋಹಕ ವ್ಯಕ್ತಿತ್ವ ಅವರದು. ಅವರ ಸ್ಥಾನದಲ್ಲಿ ಈ ಗಂಭೀರ ಹೃದಯಿ ಬಂದಾಗ ಅಯ್ಯೋ ಆ ಸ್ಥಾನದಲ್ಲಿ ಈತ ಸಲ್ಲುತ್ತಾನೆಯೇ ಎಂಬ ಮಾತು ಎಲ್ಲೆಲ್ಲಿಯೂ ಮೂಡಿತ್ತು. ಆದರೆ ರತನ್ ಮಾತನಾಡಲಿಲ್ಲ. ಸುಮ್ಮನೆ ಕೆಲಸ ಮಾಡುತ್ತಾ ಹೋದರು. ಈಗ ಅವರು ಮಾಡಿದ್ದೆಲ್ಲಾ ತಾನೇ ತಾನಾಗಿ ಪುಟಗಟ್ಟಲೆ ಕಥೆ ಹೇಳುತ್ತಿವೆ. ಜೆ.ಆರ್.ಡಿ ಅವರು ನಿವೃತ್ತರಾದ ದಿನಗಳಿಂದ ರತನ್ ಆಳ್ವಿಕೆಯ ಕೊನೆಯ ಅವಧಿಯ ವೇಳೆಗೆ (ಡಿಸೆಂಬರ್ 2012) ಟಾಟಾ ಸಮೂಹ ನಲವತ್ತು ಪಟ್ಟು ಬೆಳೆಯಿತು. ವಿಶ್ವದ ಪ್ರಮುಖ ಅಮೂಲ್ಯತೆಗಳನ್ನು ತನ್ನದಾಗಿಸಿಕೊಂಡಿತು. ಟಾಟ ಸಮೂಹದ ಬೆಳವಣಿಗೆಯ ಸರದಾರ ಎನಿಸಿಕೊಂಡರು.
ಜೊತೆಗೆ ತನ್ನನ್ನು ಎಲ್ಲೆಡೆ ಅಮೂಲ್ಯವಾಗಿಸಿಕೊಂಡು ಬೆಳೆದು ದೇಶಕ್ಕೆ ಕೀರ್ತಿ ತಂದರು.
ಮಾದರಿ ವ್ಯಕ್ತಿತ್ವ :
ಇಂದು ವ್ಯಾಪಾರಿ ಉದ್ಯಮಗಳಲ್ಲಿ ಬಿಲಿಯನ್, ಟ್ರಿಲಿಯನ್ ಡಾಲರುಗಳ ಹಣ, ಷೇರು ಮೌಲ್ಯಗಳ ಬಗ್ಗೆ ಮಾತುಗಳನ್ನು ಕೇಳುತ್ತೇವೆ. ಅದರ ಪ್ರಮುಖ ವ್ಯಕ್ತಿಗಳು ವೈಯಕ್ತಿಕವಾಗಿ ಎಷ್ಟು ಬಿಲಿಯನ್ನುಗಳ ಸರದಾರರು ಎಂದು ಪ್ರತಿದಿನ ಓದುತ್ತೇವೆ. ಅಂತಹ ಪ್ರಮುಖ ಬಿಲ್ಲಿಯನ್ನಾಧಿಪತಿ ರತನ್ ಟಾಟ ಅವರನ್ನು ನೋಡಿದವರಿಗೆ ಅದು ಆ ರತನ್ ಎಂಬ ಈ ‘ರತ್ನ’ ವ್ಯಕ್ತಿತ್ವದ ಮುಂದೆ ಅತೀ ಸಣ್ಣದು ಎನಿಸುತ್ತದೆ. ಬ್ರಹ್ಮಚಾರಿಯಾದ, ಜೀವನದಲ್ಲಿ ಬಹಳಷ್ಟು ವರ್ಷಗಳ ಕಾಲ ಸಾಮನ್ಯವಾದ ಬ್ಯಾಚಲರ್ ಅಕಾಮಡೇಷನ್ ಎಂದು ಬಣ್ಣಿಸಲಾಗುವ ಜೋಪಡಿಯಲ್ಲಿ ಜೀವನ ಕಳೆದ ಅವರಿಗೆ ಅವರ ಶ್ರೀಮಂತಿಕೆ ಎಂದೂ ಪ್ರಾಧಾನ್ಯವಾಗಲಿಲ್ಲ. ಅವರಿಗೆ ಬದುಕಿನ ಶ್ರೀಮಂತಿಕೆಯು ಸಾಧನೆ, ಪರಿಶ್ರಮ ಮತ್ತು ಬದುಕಿನ ಮೌಲ್ಯಗಳಿಗೆ ಸೇರಿದ್ದಾಗಿತ್ತು. ಇಂತಹ ಅತ್ಯುತ್ತಮ ರತ್ನಗಳು ಅಲ್ಲಲ್ಲಿ ಅರಳಿದ ಕಮಲಗಳಂತೆ ಕಂಗೊಳಿಸುತ್ತವೆ. ಆದರೆ ಈ ಕಮಲಗಳ ಆಚೆಗೆ ಹರಡುತ್ತಿರುವ ಕೆಸರಿನಿಂದ ಭಾರತ ದೇಶ ತಲ್ಲಣಗೊಂಡಿದೆ. ನೈತಿಕ, ಸಾಮಾಜಿಕ, ಆರ್ಥಿಕ ಬಡತನಗಳ, ಭ್ರಷ್ಟ-ಭಂಡತನಗಳ ಮಧ್ಯೆ ಕಮಲಗಳು ಉದ್ಭವಿಸುವುದೇ ದುಸ್ತರವೇನೋ ಎನಿಸುತ್ತವೆ. ಇಂತಹ ಪ್ರಶ್ನೆಗಳು ಬಂದಾಗಲೆಲ್ಲಾ ರತನ್ ನಾವಲ್ ಟಾಟ ಅವರು ವ್ಯಕ್ತಿತ್ವ ಎಂತವರಿಗೂ ಮಾದರಿಯಾಗಿ ನಿಲ್ಲುತ್ತದೆ.ಅವರು ತಮ್ಮ ಹಿಂದಿನವರ ಮಾನವೀಯ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಧಾನರಾಗಿ ಕಂಗೊಳಿಸುತ್ತಾರೆ.
ನಮ್ರತೆಯ ಮಾಹಾನ ವ್ಯಕ್ತಿ :
ಮುಂಬೈನಲ್ಲಿ ಭಯೋತ್ಪಾದನೆಯ ದೆಸೆಯಿಂದ ಅವರ ಹೋಟೆಲ್ ನಿರ್ನಾಮವಾದ ಹಿನ್ನಲೆಯಲ್ಲಿ, ಅಲ್ಲಿನ ಎಲ್ಲಾ ಉದ್ಯೋಗಿಗಳನ್ನೂ ಅಷ್ಟೇ ಅಲ್ಲ ಆ ಹೋಟೆಲಿನ ಬಳಿ ಇದ್ದ ಪಾವ್ ಬಾಜಿ ಮಾರಾಟಗಾರ, ಪಾನ್ ವಾಲ ಇತ್ಯಾದಿ ಎಲ್ಲರನ್ನೂ ಅವರ ಬದುಕಿನ ಅವಶ್ಯಕತೆಗಳ ಬಗ್ಗೆ ಗೌರವಯುತವಾಗಿ ನೋಡಿಕೊಂಡಿರುವುದು ಯಾರು ಮರೆಯುವಂತಿಲ್ಲ
ರತನ್ ಅವರ ಬಗ್ಗೆ ಇಂದು ಭಾರತದ ಸಾಮಾನ್ಯ ಪ್ರಜೆ ಕೂಡಾ ಅತ್ಯಂತ ಗೌರವಯುತನಾಗಿ ಮಾತನಾಡುತ್ತಾರೆ. ಟಾಟಾ ಸಂಸ್ಥೆಯ ಜನೋಪಯೋಗಿ ಚಟುವಟಿಕೆಗಳಲ್ಲಿ ಅವರ ನೇತೃತ್ವ ನಿರಂತರವಾಗಿ ಮುನ್ನಡೆದಿತ್ತು. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ಮಾಹಾನ ವ್ಯಕ್ತಿ.
ಇಂತಹ ಸುಪುತ್ರರು ನಮ್ಮ ಕಾಲದಲ್ಲಿದ್ದರು ಎಂದು ಹೇಳಲು ಹೃದಯತುಂಬಿ ಬರುತ್ತಿದೆ. ಎಲ್ಲದಕ್ಕೂ ಕೊನೆಯಿದೆ. ಈ ಲೋಕದಲ್ಲಿ ಮೂಡಿದ ಶ್ರೇಷ್ಠ ಜೀವಿಗಳೂ ಇದಕ್ಕೆ ಹೊರತಲ್ಲ. ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ.
ರತನ್ ಟಾಟಾ ಅವರು ದೊಡ್ಡ ಕನಸುಗಳನ್ನು ಕಾಣಲು ಮತ್ತು ಹಿಂತಿರುಗಿಸಲು ಸಮರ್ಪಿತರಾಗಿದ್ದರು. ರತನ್ ಟಾಟಾ ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದಲೇ ಅವರು ದೇಶದ ನಿಜವಾದ ‘ಹೀರೋ’ ಆಗಿ ಗುರುತಿಸಿಕೊಂಡರು. ಅಂತೆಯೇ ಈ ಬಿಲಿಯನೇರ್ ಉದ್ಯಮಿ ಚಾರಿಟಿ ದೇಣಿಗೆಗಳನ್ನು ನೀಡಲು ಹೆಸರುವಾಸಿಯಾಗಿದ್ದರು. ರತನ್ ಟಾಟಾ ಅವರಿಗೆ 2000 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವ್ಯಾಪಾರ, ಪರೋಪಕಾರ ಮತ್ತು ನಮ್ರತೆಯಲ್ಲಿ ಅವರ ಪರಂಪರೆ ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರೇಪಣೆಯಾದರು.
ಚಿರಶಾಂತಿ ದಯಪಾಲಿಸಲಿ :
ಅಂದಹಾಗೆ ರತನ್ ಟಾಟಾ ಅವರು ತಮ್ಮ ಆದಾಯದ ಶೇ. 60-65 ರಷ್ಟನ್ನು ಚಾರಿಟಿಗೆ ದಾನ ಮಾಡಿದ್ದಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ರತನ್ ಟಾಟಾ ಅವರನ್ನು ಕೇವಲ ದಾನಧರ್ಮಕ್ಕಾಗಿ ಮಾತ್ರವಲ್ಲ, ಅವರ ಸೌಜನ್ಯತೆ ಮತ್ತು ಗೌರವಾನ್ವಿತ ಸ್ವಭಾವಕ್ಕಾಗಿ ಭಾರತೀಯರು ಪ್ರೀತಿಸುತ್ತಾರೆ. ಕೈಗಾರಿಕೋದ್ಯಮಿ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ. ಇಂದು ನಾವು ರತನ್ ಟಾಟಾ ಅವರಂತಹ ಪ್ರಸಿದ್ಧ, ಯಶಸ್ವಿ, ಶ್ರೀಮಂತ ಮತ್ತು ವಿನಮ್ರ ವ್ಯಕ್ತಿಯನ್ನು ಮತ್ತೆಂದೂ ನೋಡಲು ಸಾಧ್ಯವೇ ಇಲ್ಲ..
ನಮ್ರತೆ ಮತ್ತು ಸಮಾಜಮುಖಿ ಕಾರ್ಯಗಳಿಂದ ರತನ್ ಟಾಟಾ ದೇಶದ ಹೃದಯವನ್ನು ಗೆದ್ದ ಧೀಮಂತ ವ್ಯಕ್ತಿಯಾಗಿದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
2024ರ ಅಕ್ಟೋಬರ್ 9 ರ ಸಾಯಂಕಾಲ ರಂದು ರತನ್ ನಾವಲ್ ಟಾಟ ಈ ಲೋಕವನ್ನಗಲಿದರು. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಟಾಟಾರವರ ಆತ್ಮಕ್ಕೆ ಸೃಷ್ಟಿಕರ್ತ ಚಿರಶಾಂತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಗೌರವ ನಮನ : ಈ ದೇಶ ಕಂಡ ಅಪ್ರತಿಮ ಅನುಭವಿ, ಕ್ರಿಯಾಶೀಲ ವ್ಯಕ್ತಿತ್ವದ ಜನಪರ ಕಾಳಜಿಯುಳ್ಳ, ಸಮಾಜ ವಿಜ್ಞಾನ, ವಿಜ್ಞಾನ, ಹಾಗೂ ಗ್ರಂಥಾಲಯಗಳಿಗೆ ಮಹತ್ವಕೊಟ್ಟು ಅವುಗಳ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿರುವ, ಲಕ್ಷಾಂತರ ಜನರ ಅನ್ನದಾತ, ಕರೋನಾ ಸಂದರ್ಬದಲ್ಲಿ ಸಾಕಷ್ಟು ಸಹಾಯ ಸಹಕಾರ ಮಾಡಿದ ಹಿರಿಯ ಜೀವ ಅಗಲಿದ್ದು. ಅವರ ಪವಿತ್ರಾತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಪ್ರಾರ್ಥನೆ. ದೇಶವಿಂದು ಬಡವಾಯಿತು. ಮತ್ತೆ ಹುಟ್ಟಿ ಬನ್ನಿರಿ.
**
– ಸಂಗಮೇಶ ಎನ್ ಜವಾದಿ
ಬರಹಗಾರರು,ಚಿಂತಕರು,ಬೀದರ ಜಿಲ್ಲೆ.