*”ಶರಣರ ಶಕ್ತಿ” ಚಲನಚಿತ್ರ ಬಿಡುಗಡೆ ಮುಂದೂಡಿಕೆ *
ಬೆಂಗಳೂರ: ವಿಶ್ವಗುರು ಬಸವಣ್ಣ ಹಾಗೂ ಚಿನ್ಮಯ ಜ್ಞಾನಿ ಚನ್ನಬಸವಣ್ಣ ಅವರ ೧೨ ನೇ ಶತಮಾನದ ಸಮಾನತೆ ಸಾರುವ ಬಹು ನಿರೀಕ್ಷಿತ ಕನ್ನಡ ಚಲನ ಚಿತ್ರ “ಶರಣರ ಶಕ್ತಿ” ಬಿಡುಗಡೆಯನ್ನು ಮುಂದೂಡಲಾಗಿದೆ.
ಇದೆ ೧೮ ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದ ಚಿತ್ರಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ, ಮಠಾಧೀಶರು, ಬಸವ ಸಮಿತಿ, ಶರಣ ಸಂಘಟನೆಗಳು ಚಿತ್ರದ ಕುರಿತು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಶರಣರ ಶಕ್ತಿ’ ಚಿತ್ರವನ್ನು ನಾಡಿನ ಹೆಸರಾಂತ ಶರಣರು, ಜಗದ್ಗುರುಗಳು, ಗಣ್ಯರು, ಜಾಗತಿಕ ಲಿಂಗಾಯತ ಸಂಘಟನೆಯ ಪ್ರಮುಖರು ವೀಕ್ಷಿಸಿ ಹಲವಷ್ಟು ಸಲಹೆಗಳನ್ನು ನೀಡಿದರು.
ಹನ್ನೆರಡನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ವಿಶ್ವಗುರು ಬಸವಣ್ಣ ಎನ್ನುವುದು ಎಷ್ಟು ಆಕರ್ಷಕವಾಗಿತ್ತು. ಇಂತಹ ಅಂಶಗಳನ್ನು ಸಂಶೋಧನೆ ನಡೆಸಿ ‘ಶರಣರ ಶಕ್ತಿ’ ಎನ್ನುವ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸಿ, ಬಿಡುಗಡೆಗಾಗಿ ತಯಾರಿ ನಡೆಸಿತ್ತು. ಶರಣರ ಶಕ್ತಿ ಚಲನ ಚಿತ್ರ ‘ತಡಿವ್ಯರ ನೋಡು’ ಎಂಬ ಅಡಿಬರಹವಿದೆ. ಶರಣರನ್ನು ತಡುವಿದರೆ ಆಗುವ ಕ್ರಾಂತಿಗಳ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಶ್ರೀಷ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜೊತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿ ಮನೋಜ್ಞ ಅಭಿನಯ ಮಾಡಿದ್ದಾರೆ. ಪದ್ಮ ವಿಭೂಷಣ ಡಾ.ರಾಜ್‌ಕುಮಾರ್ ಸಂಸ್ಥೆಯ ವಜ್ರೇಶ್ವರಿ ಕಂಬೈನ್ಸ್ದಲ್ಲಿ ಕೆಲಸ ಮಾಡಿರುವ ದಿಲೀಪ್ ಶರ್ಮ ಚಿತ್ರಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಶರಣ ಮಡಿವಾಳ ಮಾಚಿದೇವರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಸವಣ್ಣನವರ ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು. ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು. ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವೆ ಮಹಾಶರಣೆಯಾಗಿದ್ದು. ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು. ಚನ್ನಬಸವಣ್ಣನ ಸಾರಥ್ಯದಲ್ಲಿ ಉಳಿವೆ ಮಂಟಪ. ಶರಣರನ್ನು ತಡೆ ಹಿಡಿದರೆ ಏನಾಗುತ್ತದೆ. ಇಂತಹ ಇನ್ನು ಹಲವಾರು ತಿಳಿಯದ ಮಾಹಿತಿಗಳು ಚಿತ್ರದಲ್ಲಿವೆ ಎಂದರು.
ಬಸವಣ್ಣನವರ ಪಾತ್ರದಲ್ಲಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತಾ ಮಡ್ಲೂರ, ಶೀಲವಂತನಾಗಿ ವಿಶ್ವರಾಜ್ ರಾಜ್‌ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದಂತೆ ರಮೇಶ್‌ಪಂಡಿತ್, ಸಾಚಿಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ರವಿಕಾಂತ್ ಅಂಗಡಿ , ಅಬ್ದುಲ್‌ಲತೀಫ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮುನಿವೆಂಕಟಪ್ಪ, ರಮ್ಯಾ ಗೌಡ್ರು, ರಾಘವೇಂದ್ರ ಕಬಾಡಿ , ಸಂಗೀತಾ ವಸಂತ, ಅಮೃತಾ ಸವಡಿ , ಹಾಗೂ ಉತ್ತರ ಕರ್ನಾಟಕದ ೧೪೦ಕ್ಕೂ ಹೆಚ್ಚು ರಂಗಭೂಮಿ ಕಲಾವಿದರುಗಳು ಅಭಿನಯಿಸಿದ್ದಾರೆ. ಮಿಶ್ರಕೋಟಿ, ಕಾಮಧೇನು, ಗಂಜಿಗಟ್ಟಿ, ಉಳವಿ ,ಹುಬ್ಬಳ್ಳಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಚಿತ್ರಕ್ಕೆ ಸಂಗೀತ ಸಂಯೋಜನೆ ವಿನುಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ನಿರ್ವಹಿಸಿದ್ದಾರೆ. ಇದೇ ತಿಂಗಳು ೧೮ ರಂದು ಬಿಡುಗಡೆ ಮಾಡುತ್ತೇವೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಪೂಜ್ಯ ಜಗದ್ಗುರುಗಳ ಸಲಹೆ ಮೇರೆಗೆ ಮುಂದೂಡಲಾಗಿದೆ . ನಂತರದಲ್ಲಿ ಜಗದ್ಗುರುಗಳ ಜೊತೆ ಚರ್ಚಿಸಿ ಚಿತ್ರದ ಬಿಡುಗಡೆ ದಿನಾಂಕ ನಿಗದಿಪೆಡಿಸಲಾಗುವದು ಎಂದು. ಚಿತ್ರದ ನಿರ್ಮಾಪಕಿ ಶ್ರೀಮತಿ ಆರಾಧನಾ ಕುಲಕರ್ಣಿ, ನಿರ್ದೇಶಕರರಾದ ದಿಲೀಪ್ ಶರ್ಮ ತಿಳಿಸಿದ್ದಾರೆ.
** ವರದಿ: ಡಾ.ಪ್ರಭು ಗಂಜಿಹಾಳ.