ನನಗೆ ಗೊತ್ತೇ ಇರಲಿಲ್ಲ.
ಕಣ್ಣೀರು ಹಾಕಲೆಂದೆ ಹೆಣ್ಣಕುಲದೊಳಗೆ ಹುಟ್ಟಿದ್ದು ಮಣ್ಣ ಸೇರುವ ವರೆಗೂ ನನಗೆ ಈ ಕಷ್ಟ ತಪ್ಪಿದ್ದಲ್ಲ ಎನ್ನುವ ಕಟು ಸತ್ಯ..
ನನಗೆ ತಿಳಿದೇ ಇರಲಿಲ್ಲ.
ನಾನು ಹುಟ್ಟಿದಾಗ ಅವ್ವ ದಿನವೆಲ್ಲ ಕಣ್ಣೀರು ಹಾಕಿದ್ದು ತಮ್ಮ ಹುಟ್ಟಿದಾಗ ಅಪ್ಪ ಊರ ಮಂದಿಗೆಲ್ಲ ಪೇಡಾ ಹಂಚಿರುವ ಸತ್ಯ.
ನಾನು ಅರಿಯಲೇ ಇಲ್ಲ
ನಿನಗೆಕೆ ಶಿಕ್ಷಣ ಸಾಕುಮಾಡೆಂದು ಅಡುಗೆ ಮನೆಗೆ ನೂಕಿದ್ದು ತಮ್ಮ ಸಮವಸ್ತ್ರ ಧರಿಸಿ ಶಾಲೆಗೆ ಹೋಗಿ ಆಫೀಸರ್ ಆಗುವ ಸತ್ಯ..
ನನಗೆ ಹೊಳಿಯಲೇ ಇಲ್ಲ
ಹದಿನಾರಕ್ಕೆ ಹರಿಕೆಯ ಕುರಿಯಂತೆ ತಾಳಿ ಕಟ್ಟಿಸಿದ್ದು ತಮ್ಮ ಮೂವತ್ತಾದರೂ ಇನ್ನು ಓದು ಮುಂದುವರಿಸಿರುವ ಸತ್ಯ.
ನಾನು ಅಂದುಕೊಂಡಿರಲಿಲ್ಲ
ಗಂಡನ ಮನೆಲಿ ಹಿಂಡ ದನ ಕಾಯೋದು ಹೆಂಡಿ ಬುಟ್ಟಿ ತೆಲಿಮ್ಯಾಲ ಹೊತ್ತು ಭಾಂಡೆ ಬಟ್ಟೆ ತೊಳೆವ ಜಿತದಾಳೆನ್ನುವ ಸತ್ಯ.
ನನ್ನ ಲಕ್ಷಕ್ಕೆ ಬರಲೇ ಇಲ್ಲ
ಹೆಣ್ಣನ್ನು ಮಕ್ಕಳು ಹೇರುವ ಯಂತ್ರ ಎಂದುಕೊಂಡದ್ದು ಗಂಡು ಅಧಿಕಾರ ಚಲಾಯಿಸುವ ಮಂತ್ರ ಎನ್ನುವ ಸತ್ಯ.
ಸತ್ಯಗೊತ್ತಾದ ಮೇಲೆ ನಾನೇಕೆ ಸುಮ್ಮನಿರಲಿ
ಶತಮಾನಗಳ ಹಿಂದೆ ನೆಟ್ಟ ಸಮಾನತೆಯ ಸಸಿಗೆ ನೀರೆರೆದು ಪೋಸಿಸುವೆ ಸರಿಸಮವಾಗಿ ಸನ್ಮಾನ ಸ್ವೀಕರಿಸುವೆ ಹೆಣ್ಣೆಂಬ ಹೆಮ್ಮೆಯಿಂದ..
ಶಿವಲೀಲಾ ಎಸ್ ಧನ್ನಾ..