ಆಮಿರ್ ಅಶ್ಅರೀ ಬನ್ನೂರು ಬರಹ || ಹೋರಾಟಕ್ಕೆ ಅಂಬೇಡ್ಕರ ಚಿಂತನೆಗಳೇ ದೊಡ್ಡ ಆಯುಧ..!
ಇಂದು ಸಂವಿಧಾನ ಶಿಲ್ಪಿ ಬಾ.ಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯ ಸ್ಮರಣೆಯ ದಿನ.
ಸತ್ತ ದಿನವನ್ನು ”ಪರಿನಿರ್ವಾಣ್ ದಿವಸ್” ಎಂದು ಕರೆಯುವುದು ಬೌದ್ಧ ಧರ್ಮದ ವಾಡಿಕೆ.
ಅದರಂತೆ ಅಂಬೇಡ್ಕರ ಪರಿ ನಿರ್ವಾಣ ದಿವಸ. ಅಸಮಾನತೆ, ಅಸಹಿಷ್ಣುತೆ ಮತ್ತು ಅಸ್ಪ್ರಶ್ಯತೆ ಸೇರಿದ ಅನೇಕ ಸಾಮಾಜಿಕ ತಲ್ಲನಗಳ ವಿರುದ್ಧ ಸದಾ ಪ್ರತಿಭಟಿಸುತ್ತಿದ್ದ ಮತ್ತೊಂದು ದನಿಯಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಗಲಿ 68 ವರ್ಷಗಳು ಸಂದವು. ಆದರೂ ಅವರ ಹೋರಟ ಮತ್ತು ಸಾಮಾಜಿಕ ನಿಲುವುಗಳು ಸಾರ್ವಕಾಲಿಕವಾಗಿ ನಿಂತಿದೆ. ರಾಷ್ಟ್ರೀಯ ಪ್ರಜ್ಞೆ, ರಾಷ್ಟ್ರ ಪ್ರೇಮ ಮತ್ತು ದೇಶದ ಪ್ರಗತಿಗೆ ಅವರಲ್ಲಿದ್ದ ಚಿಂತನೆಗಳನ್ನು ವಿಮರ್ಶೆಗೆ ಗುರಿಪಡಿಸಿರುವುದೇ ವಿರಳ.
ಅಂಬೇಡ್ಕರ್ ಅವರೊಳಗಿನದ್ದು ಜ್ಞಾನದ ಜ್ಯೋತಿ. ಅದುವೆ, ಸಂವಿಧಾನ ಬರೆಯಲು ಸ್ಪೂರ್ತಿ ಮತ್ತು ಧೈರ್ಯವನ್ನು ತಂದು ಕೊಟ್ಟಿದೆ ಎಂದರೆ ತಪ್ಪಾಗಲಾರದು.
ಬಾಲ್ಯದಿಂದಲೂ ಜಾತಿ ಅಥವಾ ಇನ್ನೇನೋ ಕಾರಣಕ್ಕೆ ಅವಮಾನ ಅಥವಾ ಅಪಮಾನಗಳನ್ನು ಎದುರಿಸುತ್ತಿದ್ದ ಅವರು ಅದೆಲ್ಲವನ್ನೂ ಭೇದಿಸುತ್ತಲೇ ಬದುಕನ್ನು ದಾಟಿಸಿದ ಪರಿ ರೋಚಕ. ಐಕ್ಯತೆ ಮತ್ತು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದ ಅವರು ಅಖಂಡ ಭಾರತದ ನಿರ್ಮಾಪಕ ಹಾಗೂ ಭಾರತದ ಪರಿಪೂರ್ಣತೆಯ ಪ್ರತೀಕ. ದೇಶವು ಅಂಬೇಡ್ಕರ್ ಬರೆದ ಸಂವಿಧಾನವೊಂದೇ ಅಲ್ಲ,ಅದನ್ನು ಹೊರತುಪಡಿಸಿದ ಭಾಷಣ, ಬರಹ ಮತ್ತು ಆದರ್ಶಗಳ ಕಡೆ ದೃಷ್ಟಿಯಿಡುತ್ತಲೇ ಇರಬೇಕು ಮತ್ತು ಅವನ್ನು ಕ್ರಿಯಾತ್ಮಕ್ಕಿಳಿಸಬೇಕು, ಒಂದು ಪಕ್ಷ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಅಪರಿಪೂರ್ಣತೆಯನ್ನು ಕಾಣ ಬೇಕಾಗುತ್ತದೆ. ಸಂವಿಧಾನವನ್ನು ಅರಿಯುವುದು ಅಂಬೇಡ್ಕರನ್ನು ಅರಿಯುವುದರ ಪೂರ್ಣತೆಯಲ್ಲ. ಸಂವಿಧಾನ, ದೇಶವೆಂಬ ಭೌಗೋಳಿಕ ವ್ಯವಸ್ಥೆಯ ಕಟ್ಟುಪಾಡು ಅಥವಾ ನಿಯಮಗಳು. ಆದರೆ ಅಂಬೇಡ್ಕರ್ ಸಂವಿಧಾನ ಮತ್ತು ಇತರ ಜ್ಞಾನದ ಶಿಖರವಾಗಿದೆ. ಕಾರಣ,250 ವರ್ಷಗಳ ಚರಿತ್ರೆಯಲ್ಲಿ ಶ್ರೇಷ್ಠ ವಿದ್ಯಾರ್ಥಿ ಯಾರು? ಎಂದು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯವು ಹುಡುಕಿದಾಗ ಅವರಿಗೆ ದಕ್ಕಿದ್ದ ವಿದ್ಯಾರ್ಥಿ ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರವರಾಗಿತ್ತು. ಅಂಬೇಡ್ಕರ್ ಅವರನ್ನು ದಲಿತರಷ್ಟೆ ಅಲ್ಲದೆ, ದಲಿತೇತರರು ಹಾಗೂ ಭಾರತೀಯೇತರರು ಕೂಡ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹವಾಗಿ ಗೋಚರಿಸುತ್ತದೆ. ಆಧುನಿಕ ಭಾರತದ ತಲೆಮಾರು ಅಂಬೇಡ್ಕರನ್ನು ಅರಿಯುದಾಗಲಿ, ಯಕಶ್ಚಿತ್ ಸಂವಿಧಾನ ಓದುವ ಮಹಾ ಪ್ರಯತ್ನಕ್ಕೆ ಕೈ ಹಾಕದೆ ಹೋದರೆ ಮುಂದೆ ಸಂಕಷ್ಟ ನಿಶ್ಚಿತ. ಅನ್ಯಾಯಗಳ ವಿರುದ್ಧ ನಡೆಸುವ ಹೋರಾಟಕ್ಕೆ ಅಂಬೇಡ್ಕರ ಚಿಂತನೆಗಳೇ ದೊಡ್ಡ ಆಯುಧ, ಜೊತೆಗೆ ಸಂವಿಧಾನದ ಅರಿವಿದ್ದರೆ ಸತ್ಯದ ಗೆಲುವಿನ ಬಗ್ಗೆ ಯಾವುದೇ ಸಂಕೋಚವಿಲ್ಲ. ಪ್ರಜಾಪ್ರಭುತ್ವದ ಪ್ರತಿಪಾದಕರಲ್ಲಿ ಅಂಬೇಡ್ಕರ್ ಪ್ರಮುಖರು ಮತ್ತು ಅದಕ್ಕಾಗಿ ಹಲವಾರು ಕಾರ್ಯ ತಂತ್ರಗಳನ್ನೂ ಹಮ್ಮಿಕೊಂಡಿದ್ದರು. ಮಾರ್ಕ್ಸ್ ವಾದದ ಮೇಲೆ ಅಪಾರ ಹಿಡಿತ ಹೊಂದಿದ್ದ ಅಂಬೇಡ್ಕರ್ ಅದರ ರೈತ ಕಾರ್ಮಿಕ ಅಧಿಕಾರವನ್ನು ಒಪ್ಪಿಕೊಳ್ಳದೆ ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ಕಲ್ಪಿಸಿ ಕೊಟ್ಟಿರುವುದು ವಿಶೇಷ. ವೈಯಕ್ತಿಕ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಜನ ಸಾಮಾನ್ಯರ ಉದ್ಧಾರಕ್ಕಾಗಿ ಮೌಲ್ಯಗಳ ಜೊತೆಯಿರುತ್ತಿದ್ದರು. ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳ ಜೊತೆಗೆ ಭಿನ್ನಾಭಿಪ್ರಾಯಗಳಿದ್ದಾಗಲೂ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕಾರ ಕಾನೂನುಗಳನ್ನು ಜಾರಿ ಮಾಡಿದರು. ಹೀಗೆ ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಪ್ರಗತಿಗಾಗಿ ಮಿಡಿಯುವ ಅಪ್ಪಟ ದೇಶಪ್ರೇಮಿ ಬಾಬಾ ಸಾಹೇಬ್ ಅಂಬೇಡ್ಕರ್. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಸ್ವಾತಂತ್ರ್ಯ ಸೇನಾನಿಗಳನ್ನು ಬ್ರಿಟಿಷ್ ಸರ್ಕಾರ ಬಂಧಿಸಿ, ಸೆರೆಮನೆಗಟ್ಟಿದಾಗ 50ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾಧಿಗಳ ಪರ ಬ್ರಿಟಿಷರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರಬೇಕಾದರೆ, ವ್ಯಕ್ತಿಯೊಬ್ಬರು ಒಂದು ಸಣ್ಣ ಕಾಗದವನ್ನು ಅಂಬೇಡ್ಕರರ ಕೈಗಿಟ್ಟು ಹೋದರು. ನ್ಯಾಯಾಲಯದಲ್ಲಿ ತೀವ್ರ ವಾದ, ಪ್ರದಿವಾದಗಳ ನಡುವೆಯೇ ತೆರೆದು ಓದಿದ ಅಂಬೇಡ್ಕರರ ಕಣ್ಣಲ್ಲಿ ಕಣ್ಣೀರು ಬಂದಿತು. ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ ನ್ಯಾಯಾಧೀಶ ಅಂಬೇಡ್ಕರಲ್ಲಿ ಬಂದು ವಾದ ಮಂಡಿಸುವ ವೇಳೆ ಹಾಕಿದ ಕಣ್ಣೀರಿನ ಬಗ್ಗೆ ಪ್ರಶ್ನಿಸಿದರು. ಅಂಬೇಡ್ಕರರ ಪ್ರತಿಕ್ರಿಯೆ ಹೀಗಿತ್ತು, “ಸಾರ್, ನನ್ನ ಪ್ರೀತಿಯ ಹೆಂಡತಿಯ ಮರಣದ ಬಗ್ಗೆ ನನ್ನ ಗಮನಕ್ಕೆ ತರುವ ಪತ್ರವಾಗಿತ್ತು, ಓದಿ ಹೃದಯ ನೋಂದಾಗ ಹನಿಗಳು ಕಣ್ಣಲ್ಲಿ ಇಳಿದುಬಿಟ್ಟವು” ಅಂಬೇಡ್ಕರರ ಉತ್ತರದಿಂದ ತತ್ತರಿಸಿದ ನ್ಯಾಯಾಧೀಶ ಮುಂದುವರಿದು ಕೇಳುತ್ತಾನೆ ಮತ್ತೇನು ತಡ ತಾಯಿನಾಡಿಗೆ ಮರಳಬಹುದಲ್ಲವೇ.? ಸರ್, ನನ್ನ ಹೆಂಡತಿಯು ನನ್ನನ್ನು ಬಿಟ್ಟು ಹೊರಟು ಹೋಗಿದ್ದಾಳೆ. ಆದರೆ ನನ್ನ ತಾಯಿನಾಡಿಗಾಗಿ ಹೋರಾಡಿ ಅನ್ಯಾಯದಿಂದ ನಿಮ್ಮ ಸೆರೆಮನೆಯ ಕಹಿ ರುಚಿಯನ್ನು ಅನುಭವಿಸುತ್ತಿರುವ ನನ್ನ ದೇಶದ ಸೈನಿಕರು ಇಲ್ಲಿ ಸಾವಿನ ಮುಖ ನೋಡುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆದುಕೊಂಡು ಹೋಗುವುದು ನನ್ನ ದೊಡ್ಡ ಸವಾಬ್ದಾರಿಯಾಗಿದೆ. ಅವರನ್ನು ನಿಮ್ಮ ಅಕ್ರಮಗಳಿಂದ ರಕ್ಷಿಸಿ ಭಾರತಕ್ಕೆ ಕರೆದುಕೊಂಡು ಹೋಗುವ ತನಕ ನಾನು ಬೇರೆ ಯಾವುದನ್ನು ಚಿಂತಿಸುವುದಿಲ್ಲ, ಶವವಾಗಿರುವ ನನ್ನ ಹೆಂಡತಿಗೆ ನನ್ನ ನಿರ್ಧಾರಕ್ಕೆ ಹೆಚ್ಚು ಸಂತೋಷ ಪಡುತ್ತಾಳೆ ಎಂದು ಹೇಳಿಬಿಡುತ್ತಾರೆ. ನಂತರದಲ್ಲಿ ಬ್ರಿಟಿಷರ ನ್ಯಾಯಾಲಯದಲ್ಲಿ ವಾದ ಮಾಡಿ ಅಷ್ಟೂ ಭಾರತ ಸ್ವಾತಂತ್ರ್ಯ ಸೇನಾನಿಗಳನ್ನು ತಾಯಿ ನಾಡಿಗೆ ಕರೆದುಕೊಂಡು ಬಂದದ್ದು ಚರಿತ್ರೆಯಾಗಿದೆ. ಇದಾಗಿತ್ತು ಸಂವಿಧಾನ ಶಿಲ್ಪಿಯ ದೇಶಪ್ರೇಮ. ಇದನ್ನು ನಾವು ಅರಿತು, ಗೌರವಿಸಿ ಅವರ ದೇಶಪ್ರೇಮವನ್ನು ಆದರ್ಶವಾಗಿಟ್ಟುಕೊಂಡು ದೇಶದ ಹಿತ ಕಾಪಾಡುವ ಪ್ರಜ್ಞಾವಂತ ಪ್ರಜೆಗಳಾಗಲು ಪ್ರಯತ್ನಿಸಬೇಕು. ಹಾಗಾದರೆ ಅವರ ಹೋರಾಟ ಮತ್ತು ತ್ಯಾಗ ಸಾರ್ಥಕವಾಗುತ್ತದೆ. ಹೆಸರಿನ ಅಂಬೇಡ್ಕರ್ ವಾದಿಯಾಗದೆ, ಅಂಬೇಡ್ಕರರ ಹಾದಿಯಲ್ಲಿ ಮುನ್ನಡೆಯೋಣ. •ಆಮಿರ್ ಅಶ್ಅರೀ ಬನ್ನೂರು.