ಸ್ವಾಮಿ ವಿವೇಕಾನಂದರ ಜನ್ಮ ದಿನ – ರಾಷ್ಟ್ರೀಯ ಯುವ ದಿನ – ಜನವರಿ 12…….

Spread the love

ಸ್ವಾಮಿ ವಿವೇಕಾನಂದರ ಜನ್ಮ ದಿನರಾಷ್ಟ್ರೀಯ ಯುವ ದಿನಜನವರಿ 12…….

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಹೀಗೆ ಆಚರಿಸಲಾಗುತ್ತದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ, ಗೌರವ, ಅಭಿಮಾನದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು…..

ಭಾರತದ ನಿಜವಾದ ಖಾವಿ ಧಾರಿ ಸ್ವಾಮಿ ವಿವೇಕಾನಂದರು ಮಾತ್ರ ಎಂದು ಕೆಲವರು ಹೇಳುತ್ತಾರೆ…..

” ಉಕ್ಕಿನ ದೇಹದ – ಕಬ್ಬಿಣದ ನರಮಂಡಲದ – ದೃಢ ಮತ್ತು ಕಠಿಣ ಮನಸ್ಸನ್ನು ”  ಭಾರತದ ಯುವ ಶಕ್ತಿ ಹೊಂದಿರಬೇಕು ಎಂದು ಆಶಿಸಿದ್ದವರು ಸ್ವಾಮಿ ವಿವೇಕಾನಂದರು.

ಆದರೆ ಈಗಿನ ವಾಸ್ತವ ಏನು……

ಸೀಡ್ ಲೆಸ್ ಯುವ ಜನಾಂಗ…..

ಹೌದು ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ….

ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಊಟ, ಬಟ್ಟೆ, ವಸತಿಯ ವಿಷಯದಲ್ಲಿ ಮಕ್ಕಳಿಗೆ ಹೆಚ್ಚಿನ ಕೊರತೆಯಾಗದಂತೆ ಪೋಷಕರು ನೋಡಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿತು. ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಸಂಸಾರಗಳು ಅಸ್ತಿತ್ವಕ್ಕೆ ಬಂದವು……

ಅದರಿಂದಾಗಿ ಮಕ್ಕಳ ಮೇಲೆ ಪೋಷಕರ ಪ್ರೀತಿ ಹೆಚ್ಚಾಯಿತು. ಟಿವಿ, ಮೊಬೈಲ್, ವಿಡಿಯೋ ಗೇಮ್, ಸಿನಿಮಾ, ಮನರಂಜನೆ ಮುಂತಾದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಮಕ್ಕಳ ಮನಸ್ಥಿತಿ ಹೆಚ್ಚು ಶಾರ್ಪ್ ಆಯಿತು. ಕಲಬೆರಕೆ ಆಹಾರ, ಜಂಕ್ ಪುಡ್ ಮುಂತಾದ ರಸಾಯನಿಕ ಮಿಶ್ರಿತ ಪದಾರ್ಥಗಳ ತಿಂಡಿಗಳು  ಮತ್ತು ಅತಿಯಾದ ವಾಹನಗಳ ಬಳಸುವಿಕೆ ಹಾಗು ಪರಿಸರ ಮಾಲಿನ್ಯದಿಂದ ದೇಹ ಮತ್ತು ಮನಸ್ಸುಗಳಲ್ಲಿ ಆಲಸ್ಯ ಉಂಟಾಯಿತು……

ತೀರಾ ಹಸಿವಿನ ಸಂಕಷ್ಟಗಳ ಅನುಭವ ಅವರಿಗೆ ಆಗಲೇ ಇಲ್ಲ. ಯಾವುದೇ ಭಯಂಕರ ಯುದ್ಧ, ಪ್ರಾಕೃತಿಕ ವಿಕೋಪ, ಹಿಂಸೆಯ ಕ್ರಾಂತಿ  ಇತ್ತೀಚಿನ ವರ್ಷಗಳಲ್ಲಿ ನಡೆಯಲಿಲ್ಲ. ಇದರ ಜೊತೆಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಉಚಿತ ಇಂಟರ್ ನೆಟ್ ಸೌಲಭ್ಯ ಮತ್ತು ಓಡಾಡಲು ದ್ವಿಚಕ್ರ ವಾಹನ ದೊರೆಯಿತು. ಕೈಗೊಂದಿಷ್ಟು ಕಾಸು, ಹತ್ತಿರದಲ್ಲಿ ಮಾಲ್ ಗಳು. ಇಷ್ಟು ಸಾಕಲ್ಲವೇ…….

ಇತಿಹಾಸದ ನೋವುಗಳ ನೆನಪುಗಳಿಲ್ಲ, ಭವಿಷ್ಯದ ಕನಸುಗಳ ಮುನ್ನೋಟವಿಲ್ಲ. ಈ ಕ್ಷಣದ ಮಜಾ ಮಾತ್ರ ಅವರ ಪ್ರಾಮುಖ್ಯತೆಯಾಯಿತು. ಸ್ವಂತಿಕೆ ಮತ್ತು ಸ್ವಾಭಿಮಾನ ಇಲ್ಲದೇ ಹೋಯಿತು……

 

ಇದಕ್ಕಾಗಿಯೇ ಹೊಂಚು ಹಾಕಿ ಕುಳಿತಿದ್ದ ಕೆಲವು ರಾಜಕೀಯ ಪಕ್ಷಗಳು ಕೋತಿಗಳಿಗೆ ಕಡಲೆ ಬೀಜ ಹಾಕಿ ಭೋನಿಗೆ ಬೀಳಿಸುವಂತೆ ಭ್ರಷ್ಟಾಚಾರ, ಧರ್ಮ, ಜಾತಿ, ಭಾಷೆ, ಪಂಥ, ದೇಶಪ್ರೇಮ, ಅದು ಇದು ಎಂಬ ಮಸಾಲೆ ಹಾಕಿದ ಕಡಲೇ ಬೀಜಗಳನ್ನು ಎಸೆದರು ನೋಡಿ. ಈ ಯುವಕರು ಸುಲಭವಾಗಿ ಅವರ ಬಲೆಗೆ ಬಿದ್ದರು…….

ಇದರ ಜೊತೆಗೆ ಎಲ್ಲೆಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಶಾಪಿಂಗ್ ಮಾಲ್ ಗಳು, ಸಿಗರೇಟು, ಗಾಂಜಾಗಳು ಸುಲಭವಾಗಿ ದೊರೆಯತೊಡಗಿದವು, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಹೃತಿಕ್ ರೋಶನ್, ರಣಭೀರ್ ಕಪೂರ್, ಅಲ್ಲು ಅರ್ಜುನ್ ಗಳು, ಕರೀನಾ, ತಮನ್ನಾ, ದೀಪಿಕಾ ಪಡುಕೋಣೆ, ಕತ್ರಿನಾ ಕೈಪ್ ಗಳು, ದರ್ಶನ್, ಸುದೀಪ್,  ಯಶ್ ಗಳು, ಜೊತೆಗೊಂದಿಷ್ಟು ಬೆಟ್ಟಿಂಗ್ ಕಟ್ಟಲು ತೆಂಡೂಲ್ಕರ್, ಕೊಹ್ಲಿ, ಧೋನಿಗಳು, ಹುಚ್ಚೆಬ್ಬಿಸಲು ಮೋದಿ, ರಾಹುಲ್ ಮಮತಾಗಳು,…..

ಇನ್ನೆಲ್ಲಿಯ ಸ್ವಂತಿಕೆ. ಸೀಡ್ ಲೆಸ್ ಜನಾಂಗ ಸೃಷ್ಟಿಯಾಗದೆ ಇನ್ನೇನಾಗುತ್ತದೆ. ಆದರ್ಶಗಳಿಲ್ಲದ ಕೇವಲ ಆಡಂಬರಗಳು……

ಖ್ಯಾತ ಹೃದ್ರೋಗ ತಜ್ಞರಾದ ಡಾಕ್ಟರ್ ಮಂಜುನಾಥ್ ಅವರು ಹೇಳಿದಂತೆ

” ಹಿಂದೆ ಮಕ್ಕಳು ತಂದೆ ತಾಯಿ ಮುಂತಾದ ಹಿರಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಗಳು ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ಬದಲಾವಣೆಯ ದೃಶ್ಯಗಳನ್ನು ನೋಡುತ್ತಿದ್ದೇವೆ “………

ಇದು ದೇಹ ಸೀಡ್ ಲೆಸ್ ಆಗಿರುವುದಕ್ಕೆ ಒಂದು ಉದಾಹರಣೆ ಮಾತ್ರ. ಹಾಗೆಯೇ ಇಂದು ಯಾವುದೇ ಗಹನವಾದ ತರ್ಕಬದ್ಧವಾದ ಆಳವಾದ ಚಿಂತನೆಯಿಲ್ಲದೆ ವಿಷಯವನ್ನು ಕೇವಲ ವಾಕ್ಚಾತುರ್ಯ ಮತ್ತು ನಿರೂಪಣೆಯಿಂದ ಯುವ ಸಮೂಹವನ್ನು ಮೆಚ್ಚಿಸಿ ಅವರಿಂದ ಚಪ್ಪಾಳೆ ಮತ್ತು ಓಟು ಪಡೆಯಬಹುದು ಎಂಬುದು ಅವರ ಮಾನಸಿಕ ಸೀಡ್ ಲೆಸ್ ತನಕ್ಕೆ ಮತ್ತಷ್ಟು ಉದಾಹರಣೆಗಳು. ಆದ್ದರಿಂದಲೇ ಹಣ ಇರುವ, ಜಾತಿ ರಾಜಕಾರಣದ ಭ್ರಷ್ಟ ವ್ಯಕ್ತಿಗಳು ಸುಲಭವಾಗಿ ಜನ ಪ್ರತಿನಿಧಿಗಳಾಗಿ ಮತ್ತೆ ಮತ್ತೆ ಆಯ್ಕೆಯಾಗುತ್ತಿದ್ದಾರೆ……

ಮದುವೆಯಾಗಲು ಹುಡುಗ ಹುಡುಗಿಯರು ಕೇಳುತ್ತಿರುವ ಅಥವಾ ಬಯಸುತ್ತಿರುವ ಬೇಡಿಕೆಗಳು, ಕೆಲವೇ ತಿಂಗಳುಗಳಲ್ಲಿ ಅವರ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳು, ಹಣದ ಬಗೆಗಿನ ಮೋಹ, ವ್ಯಕ್ತಿತ್ವ ಮತ್ತು ಮೌಲ್ಯಗಳ ಬಗೆಗಿನ ತಿರಸ್ಕಾರ ಗಮನಿಸಿದರೆ ಈ ಸೀಡ್ ಲೆಸ್ ಜನಾಂಗದ ಬಗ್ಗೆ ಸ್ವಲ್ಪ ಅರ್ಥವಾಗಬಹುದು…..

ಸ್ವಾಮಿ ವಿವೇಕಾನಂದರ ಕನಸಿನ

ಕಠಿಣ ಮನಸ್ಥಿತಿಯ, ಶುದ್ದ ವ್ಯಕ್ತಿತ್ವದ, ಕ್ರಿಯಾತ್ಮಕ ಚಿಂತನೆಯ ಭಾರತದ ಯುವ ಜನಾಂಗ ಎಲ್ಲಿ ಹೋಯಿತು….

ದ್ವೇಷ ಕಾರುವ, ಶ್ರೇಷ್ಠತೆಯ ವ್ಯಸನದ, ಸಣ್ಣ ಮನಸ್ಸಿನ ಅಸೂಯಾಪರ ಯುವ ಜನಾಂಗವನ್ನು ನೋಡಿ ಮನಸ್ಸು ಒದ್ದಾಡುತ್ತಿದೆ….

ಒಳ್ಳೆಯ ಅಂಶಗಳು ಇಲ್ಲವೆಂದಲ್ಲ. ಅದು ಸಾಕಷ್ಟು ಇದೆ. ಆದರೆ ಪಾಪ ಅವರಿಗೆ ಒಳ್ಳೆಯ ಮಾರ್ಗದರ್ಶನ ಮತ್ತು ಆದರ್ಶ ವ್ಯಕ್ತಿತ್ವಗಳು ಸಿಗುತ್ತಿಲ್ಲ. ಒಳ್ಳೆಯದನ್ನು ಗ್ರಹಿಸುವ ಮನಸ್ಥಿತಿಯನ್ನು ಅವರಲ್ಲಿ ನಾವು ಬೆಳೆಸುತ್ತಿಲ್ಲ…..

ಎಳನೀರಿನ ಜಾಗದಲ್ಲಿ ಪೆಪ್ಸಿ ಕೋಲಾಗಳು, ಗ್ರಂಥಾಲಯದ ಜಾಗದಲ್ಲಿ ಬಾರುಗಳು, ಮೈದಾನದ ಜಾಗದಲ್ಲಿ ಡಾಬಾಗಳು, ಸಹಜತೆಯ ಜಾಗದಲ್ಲಿ ಕೃತಕ ಬಣ್ಣಗಳು ಅವರನ್ನು ಆಕರ್ಷಿಸುತ್ತಿವೆ…..

ಅಂದು ಐತಿಹಾಸಿಕ  ಚಿಕಾಗೋ ಭಾಷಣ, ಇಂದು ನಮ್ಮ ಕಾಲ್ಪನಿಕ ಅಭಿಪ್ರಾಯ. ಮತ್ತೊಮ್ಮೆ ಅವರ ಮನದಿಂಗಿತ ಹೀಗಿರಬಹುದೆ………

ಭಾರತ ದೇಶದ

ನನ್ನ ಪ್ರೀತಿಯ ಸಹೋದರ ಸಹೋದರಿಯರೆ………

ನನ್ನ ನೆಲ ಭಾರತ ಇಂದು ಸರ್ವತಂತ್ರ ಸ್ವತಂತ್ರ ರಾಷ್ಟ್ರ. ವಿಭಜನೆಯ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪ್ರದೇಶವೇ ನನ್ನ ಭಾರತ….

ಅಂದು ನಾನು ಚಿಕಾಗೋ ಭಾಷಣದಲ್ಲಿ ಹೇಳಿದ್ದೆ, ವಿಶ್ವ ಆಧ್ಯಾತ್ಮದ ತವರೂರು ಭಾರತ. ಸರ್ವ ಧರ್ಮ ಸಮನ್ವಯ ಮತ್ತು ಸಹೋದರತೆಯ ಸೌಹಾರ್ದ ನಾಡು ನಮ್ಮ ದೇಶ. ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದ ನೆಲ ನಮ್ಮದು. ಇಡೀ ವಿಶ್ವಕ್ಕೆ ಧಾರ್ಮಿಕ ಸಹಾನುಭೂತಿಯನ್ನು ಕಲಿಸಿದ ದೇಶ. ಎಲ್ಲಾ ಧರ್ಮಗಳನ್ನು ಸತ್ಯ ಎಂದು ಒಪ್ಪಿಕೊಳ್ಳುವ ದೇಶ ಭಾರತ. ಧಾರ್ಮಿಕ ಸ್ವಾತಂತ್ರ್ಯದ  ಹೆಮ್ಮೆಯ ಧರ್ಮ ಹಿಂದೂ ಧರ್ಮ ಎಂದು ಘಂಟಾಘೋಷವಾಗಿ ಹೇಳಿದ್ದೆ……

ಬಂಧುಗಳೇ ,

ಅಂದು ವಿದೇಶದಲ್ಲಿ ನನ್ನ ಧರ್ಮ ಮತ್ತು ದೇಶದ ಅಭಿಮಾನದಿಂದ ಅದರ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಇಲ್ಲಿನ ಕೊರತೆಗಳನ್ನು ಹೇಳದೆ ಕೇವಲ ಧರ್ಮದ ಶ್ರೇಷ್ಠತೆಯ ಬಗ್ಗೆ  ಮಾತ್ರ ಮಾತನಾಡಿದೆ. …..

ಆದರೆ,……ಇಂದು ಈ ಕ್ಷಣದಲ್ಲಿ ಅದೇ ಮಾತುಗಳನ್ನು ಪುನರುಚ್ಚರಿಸಲು ನನ್ನ ಗಂಟಲು ಹಿಡಿಯುತ್ತಿದೆ. ನಾಲಿಗೆ ತೊದಲುತ್ತಿದೆ. ಧ್ವನಿ ತಗ್ಗಿದೆ. ಮನಸ್ಸು ಆತ್ಮವಿಶ್ವಾಸ ಕಳೆದುಕೊಂಡಿದೆ……

ನನ್ನ ಭಾರತೀಯರೆ,…..ಸ್ವಾತಂತ್ರ್ಯದ ನಂತರವೂ ಅಸ್ಪೃಶ್ಯತೆ ಎಲ್ಲರ ಆತ್ಮಗಳಲ್ಲಿ ಇನ್ನೂ ಜೀವಂತವಿದೆ. ದೇವಸ್ಥಾನ, ಮಠ, ಮಂದಿರಗಳಲ್ಲಿ ಪ್ರತ್ಯೇಕತೆಯ ಪ್ರವೇಶದ ಆಚರಣೆ ಈಗಲೂ ಇದೆ‌‌. ದಲಿತರ ಮೇಲೆ ಜಾತಿಯ ಕಾರಣಕ್ಕೆ ಹಲ್ಲೆಗಳಾಗುತ್ತಿವೆ. ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಕೆಲಸಗಳಿಗೂ ಜಾತಿಯ ಸರ್ಟಿಫಿಕೇಟ್ ಅನಿವಾರ್ಯವಾಗಿದೆ. ಜಾತಿಯ ಜನಗಣತಿ ನಡೆಯುತ್ತಿದೆ. ಜಾತಿಯ ಅಸಮಾನತೆಯಿಂದ ಮೀಸಲಾತಿಯೂ ಅಸ್ತಿತ್ವದಲ್ಲಿದೆ…..

ಭಾರತದ ಮಕ್ಕಳೇ,……

ಹೆಣ್ಣನ್ನು ಪೂಜಿಸಲ್ಪಡುವ ದೇಶ ನನ್ನದೆಂಬ ಹೆಮ್ಮೆ ನನಗಿತ್ತು. ಆದರೆ, ವಿವಿಧ ರೂಪದಲ್ಲಿ ಹೆಣ್ಣಿನ ಮಾರಾಟ, ಹೆಣ್ಣು ಭ್ರೂಣ ಹತ್ಯೆ , ಸಾರ್ವಜನಿಕ ಸಾಮೂಹಿಕ ಅತ್ಯಾಚಾರ ಪ್ರತಿನಿತ್ಯದ ಘಟನೆಗಳೇ ಆಗಿರುವುದರಿಂದ ಅದನ್ನು ನಾನು ಹೇಗೆ ವರ್ಣಿಸಲಿ…..

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅಪೂರ್ವ ಅವಕಾಶ ಮತ್ತು ಪಾವಿತ್ರ್ಯವನ್ನು ಹಣ, ಹೆಂಡ, ಸೀರೆ ,ಪಂಚೆ, ಜಾತಿ, ಧರ್ಮಗಳಿಗೆ ಮಾರಿಕೊಳ್ಳುತ್ತಿರುವಾಗ ದೇಶದ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿ…..

ಹಸಿವಿಗಿಂತ ಹಸು ಶ್ರೇಷ್ಠ,

ರಾಮನ ಆದರ್ಶಕ್ಕಿಂತ ರಾಮ ಮಂದಿರ ಶ್ರೇಷ್ಠ,

ಜೀವಕ್ಕಿಂತ ಮಸೀದಿ ಶ್ರೇಷ್ಠ,

ಪ್ರಾಣಕ್ಕಿಂತ ಚರ್ಚು ಶ್ರೇಷ್ಠ,….

ಇಸ್ಲಾಂ ಉಳಿಸಲು ಬಾಂಬುಗಳು,

ಹಿಂದೂ ಧರ್ಮ ಉಳಿಸಲು ಬಂದೂಕುಗಳು,

ಕ್ರಿಶ್ಚಿಯನ್ ಧರ್ಮ ಉಳಿಸಲು ಮತಾಂತರಗಳು,,…

ಇದೇ ಏನು ನನ್ನ ನೆಲದ ಸ್ವಭಾವ….

ಬರ್ತ್ ಸರ್ಟಿಫಿಕೇಟಗೂ, ಡೆತ್ ಸರ್ಟಿಫಿಕೇಟಗೂ ಲಂಚ ಪಡೆಯುವ ದೇಶವನ್ನು ವಿವರಿಸುವುದಾದರೂ ಹೇಗೆ ?…..

ಉಕ್ಕಿನ ಶರೀರದ ಯುವಕರೇ,…..ಈ ದೇಶದ ಭವಿಷ್ಯ ನೀವೇ ಎಂದು ಕನಸು ಕಂಡಿದ್ದೆ……

ಆದರೆ ,….ಓ ನನ್ನ ಭಾರತದ ಯುವಕರೇ ,

ಕೇಸರಿ, ಕೆಂಪು, ನೀಲಿ, ಹಸಿರು ಬಾವುಟಗಳ ಮುಖವಾಡಗಳಲ್ಲಿ ಹುದುಗಿರುವಿರಿ. ಕ್ರಿಯಾಶೀಲ ಚಿಂತನೆ ಮಾಡದೆ ದಾಸ್ಯಕ್ಕೆ ಗುಲಾಮಗಿರಿಗೆ ಒಳಗಾಗಿ ನೀರ್ವೀರ್ಯರಾಗಿರುವಿರಿ……..

ಅದು ಈ ನೆಲದ ಗುಣವಲ್ಲ. ರಕ್ತಕ್ಕೆ ರಕ್ತ ಕೊಲೆಗೆ ಕೊಲೆ‌ ಈ ಮಣ್ಣಿನ ಸ್ವಭಾವವಲ್ಲ………

ಹಿಂದುವೋ, ಮುಸ್ಲಿಮೋ, ಕ್ರಿಶ್ಚಿಯನ್ನೋ, ಸಿಖ್ಖೋ, ಬೌದ್ಧರೋ, ಜೈನರೋ,ಪಾರ್ಸಿಯೋ, ಲಿಂಗಾಯತರೋ ಏನಾದರೂ ಆಗಿರು ಅದು ನಿಮ್ಮ ವೈಯಕ್ತಿಕ ಗುರುತು ಮಾತ್ರ. ಈ ನೆಲದ ನೀವೆಲ್ಲರೂ ಭಾರತೀಯರು.

ನಿಮ್ಮ ನಿಷ್ಠೆ ಈ ನೆಲಕ್ಕೆ ಮಾತ್ರ…..

ಏಳಿ, ಎದ್ದೇಳಿ, ಎಚ್ಚರಗೊಳ್ಳಿ,…….

ದಿಕ್ಕರಿಸಿ ಜಾತಿ ಸಂಕೋಲೆಯನ್ನು, ಬೆಳೆಸಿಕೊಳ್ಳಿ ವಿಶಾಲ ಮನೋಭಾವವನ್ನು.

ಅಂದು ನಾನು ಚಿಕಾಗೋದಲ್ಲಿ ಬಾವಿ ಕಪ್ಪೆ ಮತ್ತು ಸಮುದ್ರದ ಕಪ್ಪೆಯ ಉದಾಹರಣೆ ನೀಡಿದ್ದೆ. ಇಂದು ಅದೇ ಉದಾಹರಣೆಯನ್ನು ಭಾರತೀಯ ಯುವಜನಾಂಗವನ್ನು ಕುರಿತು ಹೇಳಬೇಕಿದೆ…..

ವಿಶಾಲ ಚಿಂತನೆಯ ಮಾದರಿಯಾಗದೆ ಬಾವಿ ಕಪ್ಪೆಯಾಗಿರುವಿರಿ. ನನ್ನ ದೃಷ್ಟಿಕೋನವನ್ನೇ ತಿರುಚಿ ಸಂಕ್ಷಿಪ್ತಗೊಳಿಸಿರುವಿರಿ.

ವಿವೇಚನೆ ಕಳೆದುಕೊಂಡಿರುವಿರು. ಜಾತಿ ಧರ್ಮ ಪಂಥಗಳ ಆಧಾರದಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಅಸಹನೆಯಿಂದ ದೇಶವನ್ನು, ನಿಮ್ಮನ್ನೂ ವಂಚಿಸಿಕೊಳ್ಳುತ್ತಿರುವಿರಿ..

ಆಧುನಿಕ ಭಾರತೀಯ ಯುವಕರ ದೇಹ ಉಕ್ಕಿನಂತಿರಲಿ. ಮನಸ್ಸಿನಲ್ಲಿ ಪ್ರೀತಿ ಕರುಣೆ ತುಂಬಿರಲಿ.

ಉಡಾಫೆ ಬಿಡಿ. ಮತಾಂಧರಾಗಬೇಡಿ.

ಸಾರ್ವಜನಿಕ ಸೇವೆಯ – ದೇಶಭಕ್ತಿಯ ಹೆಸರಿನಲ್ಲಿ ದೇಶದ ಸಮಾಜದ ವಿಭಜನೆಗೆ ಕಾರಣರಾಗದೆ  ತಾಳ್ಮೆವಹಿಸಿ…..

ದೇವರು, ಧರ್ಮ ನಮ್ಮ ಒಳಿತಿಗಾಗಿ, ಸಮಾಜದ ಕ್ರಮಬದ್ಧತೆಗಾಗಿ, ಬದುಕಿನ ಸಾರ್ಥಕತೆಗಾಗಿ ಉಪಯೋಗವಾಗಬೇಕೆ ಹೊರತು ಮಾನವ ಜನಾಂಗದ ವಿನಾಶಕ್ಕಲ್ಲ.

ಇದನ್ನು ಮರೆತು

ವಿಶ್ವಗುರುವಾಗುವ ಭಾರತದ ಅವಕಾಶಗಳನ್ನು ನಾಶಮಾಡುತ್ತಿರುವಿರಿ…..

ಇನ್ನಾದರೂ ಎಚ್ವೆತ್ತುಕೊಳ್ಳಿ.

ನನ್ನ ಕನಸಿನ ಸಮಾನತೆಯ, ವೈಚಾರಿಕತೆಯ, ಸಹೋದರತೆಯ, ಸರ್ವ ಧರ್ಮ ಸಮನ್ವಯದ ಭಾರತವನ್ನು  ಮರು ಸೃಷ್ಟಿಸಲು ನಿಮ್ಮ ಎಲ್ಲಾ ಪ್ರಯತ್ನ ಸಾಗಲಿ ಎಂದು ಆಶಿಸುತ್ತಾ…….

ಯುವಕರ ಐಕಾನ್ ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಸಂದರ್ಭದಲ್ಲಿ…..

ಮತ್ತೊಮ್ಮೆ ಯುವಕರನ್ನು ಈ ವಿಷ ಚಕ್ರದಿಂದ ಬಿಡುಗಡೆ ಮಾಡಿ ಸಹಜ ಮೌಲ್ಯಯುತ ಸುಂದರ ಬದುಕಿನತ್ತ ಕರೆದೊಯ್ಯುವ ಜವಾಬ್ದಾರಿ ನಾವು ಹೊರಬೇಕಿದೆ. ಅದರ ಪ್ರಯತ್ನದ ಒಂದು ಸಣ್ಣ ಭಾಗವೇ……

ಮನಸ್ಸುಗಳ ಅಂತರಂಗದ ಚಳವಳಿ ಮತ್ತು ಮಾನವೀಯ ಮೌಲ್ಯಗಳ ಪುನರುತ್ಥಾನದ ಸಣ್ಣ ನಿರಂತರ ಪ್ರಯತ್ನ ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.

9844013068……..

Leave a Reply

Your email address will not be published. Required fields are marked *