ನಾ ಅಮ್ಮನೆಂದು…..
ಗರ್ಭದಲ್ಲಿಯೇ ಕನವರಿಕೆಯ ಕೂಗ ಕಲಿಸಿ
ನವಮಾಸಗಳ ಕಾಲ ನೋವ ಸಹಿಸಿ
ಜನ್ಮ ನೀಡುವಳು ಕರುಳ ಕತ್ತರಿಸಿ
ತಾ ಪಡೆಗಳು ಹೊಸದೊಂದು ಜನುಮವ
ಅದಕೆಸರಿಡುವಳು ಅಮ್ಮನೆಂದು
ಸೆರೆಗ ಮರೆಯಲಿ ಎದೆಯುಣಿಸಿ
ಚಂದಮನ ತೋರುತ ತುತ್ತಾ ತಿನ್ನಿಸಿ
ಬಿದ್ದಾಗ ನಕ್ಕು ರಮಿಸಿ
ಯಾಕೆಂದರೆ ಕೇಳಿದರೆ ಹೇಳುವಳು ನಾ ಅಮ್ಮನೆಂದು
ಬರದಿದ್ದರೂ ಕೈಹಿಡಿದು ಅಕ್ಷರ ತಿದ್ದಿಸುವಳು
ನಕ್ಷತ್ರವನ್ನು ಎಣಿಸುವುದ ಕಲಿಸುವಳು
ಅಕ್ಕರೆಯ ಅಪ್ಪುಗೆಯಲಿ ಮಲಗಿಸುವಳು
ಯಾಕೆಂದು ಕೇಳಿದರೆ ಹೇಳುವಳು
ನಾ ಅಮ್ಮನೆಂದು
ತಪ್ಪಿದಾಗ ಶಿಕ್ಷಿಸುವಳು
ಒಮ್ಮೊಮ್ಮೆ ಶತ್ರು ಆದವಳು
ನಕ್ಕಾಗ ನಲಿಯುವಳು
ಅತ್ತಾಗ ದುಃಖಿಸುವಳು
ಯಾಕೆಂದು ಕೇಳಿದರೆ ಹೇಳುವಳು
ನಾ ಅಮ್ಮನೆಂದು
ಅಪ್ಪನ ಪೆಟ್ಟುಗಳಿಗೆ ಅಡಗು ಕೋಣೆಯಾದವಳು
ಅಕ್ಕರೆಯ ಸಂಬಂಧಗಳ ಬೆಲೆ ತಿಳಿಸುವಳು
ಅನಂತ ದಿನಗಳ ಕಾಲ ಉಪವಾಸದಲ್ಲಿ ನರಳಿದವಳು
ಬಾಳ ಬಂಡಿಗೆ ಗಾಲಿಯಾಗಿ ಸವೆದವಳು
ಜೀವನದ ಪಥಕ್ಕೆ ಎಲ್ಲವ ನೀಡಿ ಶೂನ್ಯವಾಗಿ ಹಿಂದೆಸರಿದವಳು
ಯಾಕೆಂದು ಕೇಳಿದರೆ ಹೇಳುವಳು ನಾ ಅಮ್ಮನೆಂದು