ಕೊಪ್ಪಳ : ಬೆಳಗಾವಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಮನವಿ.

Spread the love

ಕೊಪ್ಪಳ : ಬೆಳಗಾವಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಮನವಿ.

ಕೊಪ್ಪಳ : ಬೆಳಗಾವಿ ವಿಭಾಗದ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಅವರ ಮೇಲೆ ಹಲ್ಲೆ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರ ಮುಖಾಂತರ ಕೆ,ಎಸ್,ಆರ್,ಟಿ,ಸಿ, ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಬೆಳಗಾವಿ ವಿಭಾಗದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ರವರು ದಿ. 21-02-2025 ರಂದು ಬೆಳಗಾವಿಯಿಂದ ಸುಳೆಬಾವಿ ಗ್ರಾಮಕ್ಕೆ ಸಂಚರಿಸುವ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದ ಪಂತಬಾಳೆಕುಂದ್ರಿ ಗ್ರಾಮಕ್ಕೆ ಓರ್ವ ಮಹಿಳೆ ಮತ್ತು ಯುವಕ ಜೊತೆಯಾಗಿ ಸಂಚರಿಸುತ್ತಿರುವಾಗ ನಿರ್ವಾಹಕರು ಸದರಿ ಯವರಿಗೆ ಟಿಕೇಟ್ ತೆಗೆದುಕೊಳ್ಳಿ ಎಂದು ಕೇಳಿರುತ್ತಾರೆ. ಆಗ ಸದರಿ ಮಹಿಳೆ ತನ್ನ ಒಂದು ಆಧಾರ್ ಕಾರ್ಡ್ ತೋರಿಸಿ 2 (ಎರಡು) ಫ್ರೀ ಟಿಕೇಟ್ ನೀಡಲು ಕೇಳಿರುತ್ತಾಳೆ. ಆಗ ಕಾರ್ಯನಿರತ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಸದರಿ 2 (ಎರಡು) ಟಿಕೇಟ್ ಯಾರಿಗೆ ಎಂದು ಆ ಮಹಿಳೆಗೆ ವಿಚಾರಿಸಲಾಗಿ, ಆ ಮಹಿಳೆ ತನ್ನ ಪಕ್ಕದಲ್ಲಿ ಕುತಿರುವ ಯುವಕನ ಕಡೆ ಕೈ ತೋರಿಸಿರುತ್ತಾಳೆ. ಆಗ ನಿರ್ವಾಹಕರು ನಿಮಗೆ ಫ್ರೀ ಟಿಕೇಟ್ ಕೊಡುತ್ತೇನೆ ಆದರೆ ಪುರುಷರು ದುಡ್ಡು ಕೊಟ್ಟು ಟಿಕೇಟ್ ಪಡೆಯಬೇಕು ಎಂದು ಹೇಳಿರುತ್ತಾರೆ. ಆಗ ಸದರಿ ಯುವಕ ನೀವು ಮರಾಠಿಯಲ್ಲಿ ಮಾತಾನಾಡಿ ಎಂದು ಹೇಳಿ ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿದಿರುತ್ತಾರೆ. ಆದರೆ ನಿರ್ವಾಹಕರು ಉಳಿದ ಪ್ರಯಾಣಿಕರಿಗೆ ಟಿಕೇಟ್ ವಿತರಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಬಸ್ ಪಂತಬಾಳೆಕುಂದ್ರಿ ಬಸ್ ನಿಲ್ದಾಣದಲ್ಲಿ ಬಂದಿದ್ದು, ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಲಾಗಿ ತಕ್ಷಣ ಸುಮಾರು 15 ಜನರ ಗುಂಪೊಂದು ಬಸ್ ಏರಿ ನಿರ್ವಾಹಕರ ಮೇಲೆ ಏಕಾಏಕೀಯಾಗಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಸದರಿ ಗುಂಡಾ ವರ್ತನೆಯನ್ನು ನಮ್ಮ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ.
ಅಲ್ಲದೇ ನಮ್ಮ ಸಂಸ್ಥೆಯ ಸದರಿ ನಿರ್ವಾಹಕರ ಮೇಲೆ ಸುಳ್ಳು ಪೋಕ್ಸೋ ಪ್ರಕರಣ ದಾಖಲು ಮಾಡಿರುವುದನ್ನು ಕೂಡ ನಾವು ಖಂಡಿಸುತ್ತೇವೆ. ಇದು ಅತ್ಯಂತ ಅಮಾನವೀಯ ಘಟನೆಯಾಗಿದೆ. ಆದ ಕಾರಣ ಕೂಡಲೇ ನಮ್ಮ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಮಹಾದೇವಪ್ಪ ಹುಕ್ಕೇರಿ ರವರ ಮೇಲೆ ದಾಖಲಿಸಿರುವ ಸುಳ್ಳು ಪೋಕ್ಸೋ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು.ಸಾರಿಗೆ ನೌಕರರ ಸುರಕ್ಷತೆಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.
ಮಹಾದೇವಪ್ಪ ಹುಕ್ಕೇರಿ ರವರ ಮೇಲೆ ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಲು ಕಾರಣರಾಗಿರುವ ಬೆಳಗಾವಿ ನಗರ ಪೊಲೀಸ್ ಕಮಿಷನರ್ ರವರನ್ನು ಕೂಡಲೇ ವರ್ಗಾವಣೆ ಮಾಡಬೇಕು.ರಾಜ್ಯದ ಎಲ್ಲಾ ನಗರ ಹಾಗೂ ಗ್ರಾಮೀಣ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಿಸಬೇಕು.ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಹಗಲಿರುಳು ಹಬ್ಬ ಹರಿದಿನಗಳು ಎನ್ನದೇ ಲಕ್ಷಾಂತರ ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ಜವಬ್ದಾರಿಯುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ನಿಷ್ಠಾವಂತ ನೌಕರರ ಮೇಲೆ ಹಲ್ಲೆ ಪ್ರಕರಣಗಳು ಜರುಗುತ್ತಿರುವುದು ಅತ್ಯಂತ ದುರದೃಷ್ಟಕರವಾಗಿದೆ. ದಯವಿಟ್ಟು, ಇಂತಹ ಪ್ರಕರಣಗಳು ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಒತ್ತಾಯಿಸುತ್ತೇವೆ ಎಂದು ಕೆ,ಎಸ್,ಆರ್,ಟಿ,ಸಿ, ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ವಿಭಾಗೀಯ ಅಧ್ಯಕ್ಷ ಬಸಯ್ಯ ಕಡ್ಲಿ,ಪ್ರಧಾನ ಕಾರ್ಯದರ್ಶಿ ಎ,ಬಿ,ದಿಂಡೂರ, ರಾಜ್ಯ ಜಂಟಿ ಕಾರ್ಯದರ್ಶಿ ಎ,ಜಿ,ಮಣ್ಣೂರ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್,ಮಲ್ಲಪ್ಪ ನೂಟಗಾರ, ಸತೀಶ್ ಮುಚ್ಚಂಡಿ,ಬಿ,ಕೆ,ಮುದೇನೂರು, ಶಿವಕುಮಾರ್ ಬೀಳಗಿ ಮಠ,ಗೂಡು ಸಾಬ್ ಸವಡಿ,ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅನೇಕರು ಆಗ್ರಹಿಸಿದರು.

Leave a Reply

Your email address will not be published. Required fields are marked *