ಅದ್ದೂರಿಯಾಗಿ ಜರುಗಿದ ಹೊನ್ನಮ್ಮ ದೇವಿ ಜಾತ್ರೆ, ಸಾವಿರಾರು ಭಕ್ತರಿಂದ ದರ್ಶನ.

Spread the love

ಅದ್ದೂರಿಯಾಗಿ ಜರುಗಿದ ಹೊನ್ನಮ್ಮ ದೇವಿ ಜಾತ್ರೆ, ಸಾವಿರಾರು ಭಕ್ತರಿಂದ ದರ್ಶನ.

ಕುಷ್ಟಗಿ : ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ಜಾತ್ರಾ ಮಹೋತ್ಸವ ವಾದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಯಲಬುರ್ತಿ ಗ್ರಾಮದ ಅಧಿದೇವತೆ ಯಾದ ಶ್ರೀ ಹೊನ್ನಮ್ಮ ದೇವಿ ಜಾತ್ರೆಯು 3 ದಿನಗಳ ಕಾಲ ನಡೆಯುತ್ತಿದ್ದು, ಮೊದಲ ದಿನ ಬೆಳಗ್ಗೆಯಿಂದ  ಅಕ್ಕಿ ಪಾಯಸ,ಪೂಜಾ ಕಾರ್ಯಕ್ರಮಗಳಾದ ಗಂಗಾ ಜಲ ಪೂಜೆ, ದೇವಿಗೆ ಹೂವಿನ ಅಲಂಕಾರ ಮಾಡಲಾಗಿದೆ.ದೇವಸ್ಥಾನಕ್ಕೆ  ಬಣ್ಣ ಬಣ್ಣದ ಲೈಟ್ಸ್ ಹಾಕಿ ಇಡೀ ಊರಿಗೆ ಊರೇ ಕಲರ್ಸ್ ಲೈಟ್ಸ್ ಗಳಿಂದ ಕಂಗೊಳಿಸುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರ ಮನಸೂರೆ ಗೊಂಡು ನೋಡುಗರ ಕಣ್ಮನ ಸೆಳೆಯುತ್ತಿದೆ. ಎರಡನೇ ದಿನ ಊರಿನ ಇನ್ನೊಬ್ಬ  ಶಕ್ತಿದೇವತೆಯಾದ ದ್ಯಾಮಮ್ಮ ದೇವತೆಯನ್ನು ಊರಿನ ಬೀದಿಗಳಲ್ಲಿ  ಡೊಳ್ಳು, ಕಂಸಾಳೆ, ಕರಡಿ ಮಜಲು ವಾದ್ಯಗಳೊಂದಿಗೆ ಉಚ್ಚಾಯ ಮೆರವಣಿಗೆ ಮಾಡುವ  ಮೂಲಕ ದೇವಸ್ಥಾನಕ್ಕೆ ಕರೆ ತಂದು ಹೊನ್ನಮ್ಮ ಹಾಗೂ ದ್ಯಾಮಮ್ಮ ದೇವತೆಗಳಿಗೆ ಊರಿನ ಜನರೆಲ್ಲಾ  ಸೇರಿ ಬಣ್ಣ ಬಣ್ಣದ ಉಡುಗೆ ತೋಡುಗೆಗಳನ್ನು ತೊಟ್ಟು ಮಕ್ಕಳು ಹಾಗೂ ಮಹಿಳೆಯರು ಮನೆಯಲ್ಲಿ ಪ್ರಸಾದ ವನ್ನು ಮಾಡಿ ತಂದು ದೇವರಿಗೆ ಎಡೆ ಸಮರ್ಪಣೆ ಮಾಡಿ, ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಮೂರನೇ ದಿನ ಸಂಜೆ ಸಾಮಾಜಿಕ ಸಂದೇಶ ಸಾರುವ ನಾಟಕ ಪ್ರದರ್ಶನ ಕೂಡ ನಡೆಯಲಿದ್ದು, ರಂಗಾಸಕ್ತರು, ನಾಟಕ ಪ್ರೇಮಿಗಳು ನಾಟಕ ವೀಕ್ಷಿಸಿ ಖುಷಿ ಪಡುತ್ತಾರೆ. ಇನ್ನು ಈ ಜಾತ್ರೆಗೆ ನಮ್ಮ ರಾಜ್ಯ ಸೇರಿದಂತೆ ಅಕ್ಕ ಪಕ್ಕದ ರಾಜ್ಯದ ಜಿಲ್ಲೆಗಳಿಂದ  ಸಾವಿರಾರು ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಬರುವಂತಹ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಭರ್ಜರಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆಗಾಯಿ ಬದನೇಕಾಯಿ, ಮಡಕಿ ಕಾಳು ಪಲ್ಯ, ಲಾಡು, ಸಿಹಿ ಹಾಗೂ ಅನ್ನ ಸಾಂಬಾರು,  ಬಗೆ ಬಗೆ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಲಬುರ್ತಿ ಗ್ರಾಮದ ಗುರು ಹಿರಿಯರು, ಮುಖಂಡರು ಮಹಿಳೆಯರು ಮಕ್ಕಳು ಎಲ್ಲರೂ ಸೇರಿ ಯಾವುದೇ ಜಾತಿ ಮತ ಕುಲ ಎನ್ನದೇ ದೇವಿ ಜಾತ್ರೆಯಲ್ಲಿ ಮನೆಯ ಎಲ್ಲ ಸದಸ್ಯರು ಪಾಲ್ಗೊಂಡು ಅದ್ದೂರಿಯಾಗಿ ಜಾತ್ರೆ ನಡೆಯಲು ತಮ್ಮ ಅಮೂಲ್ಯ ಸೇವೆ ಮಾಡುತ್ತಾರೆ.ಇನ್ನು ಈ ಜಾತ್ರಾ ಮಹೋತ್ಸವದಲ್ಲಿ ನಾಡಿನ ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲ ಪಕ್ಷದ ರಾಜಕಾರಣಿಗಳು ಆಗಮಿಸಿ ದೇವಿ ದರ್ಶನ ಪಡೆದರು.

Leave a Reply

Your email address will not be published. Required fields are marked *