ಸ್ತ್ರೀ ಎಂದರೆ ಅಷ್ಟೇ ಸಾಕೆ??

Spread the love

ಸ್ತ್ರೀ ಎಂದರೆ ಅಷ್ಟೇ ಸಾಕೆ??

ಆಕಾಶದ ನೀಲಿಯಲಿ

ಚಂದ್ರ ತಾರೆ ತೊಟ್ಟಿಲಲಿ

ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಎಂದರೆ ಅಷ್ಟೇ ಸಾಕೆ??

ಎಂಬಂತೆ ಹೆಣ್ಣು ಪ್ರಕೃತಿಯ ಕಣ್ಣು, ಪ್ರಕೃತಿಯ ಸಮತೋಲನಕ್ಕೆ ಗಂಡಿನಷ್ಟೇ ಹೆಣ್ಣು ಮುಖ್ಯ. ಸ್ತ್ರೀ ಪುರುಷರು ಒಂದೇ ನಾಣ್ಯದ ಎರಡು ಮುಖಗಳು. ಆದರೆ ಆಧುನಿಕತೆಯ ಒತ್ತಡಗಳ ನಡುವೆ ಅವಳ ಬದುಕು ಭಾವಗಳೇ ಇಲ್ಲದೆ ಬರಡಾಗಿ ಹೋಗಿದೆ ಅನ್ನಬಹುದು.

 

ಪ್ರತಿದಿನ ಬೆಳಗಾದರೆ ಬದುಕಿನ ಸಂತೋಷಕ್ಕಾಗಿ ಮನೆಯ ಒಳಗೂ ಹೊರಗೂ ನನ್ನವರಿಗಾಗಿ ದುಡಿಯುವ ಅವಳು ಒಂದು ಕಡೆ ಯಾಂತ್ರಿಕತೆಯ ಸಂಕೋಲೆಗೆ ಸಿಲುಕಿ ದೈಹಿಕವಾಗಿ ಮಾನಸಿಕವಾಗಿ ಜರ್ಜರಿತವಾಗುತ್ತಿದ್ದಾಳೆ.

ಪ್ರತಿಕ್ಷಣ ಕುಟುಂಬದ ಒಳಿತಿಗಾಗಿ ಮಿಡಿಯುವ ಒಳಮನ ತನಗಾಗಿ ಒಂದಿಷ್ಟು ಕಾಳಜಿಯನ್ನ ಹೊರೆತುಪಡಿಸಿ ಬೇರೇನನ್ನು ಬೇಡುವುದಿಲ್ಲ ಆದರೆ ಆ ಬದುಕಲ್ಲಿ ಅದು ಕೂಡ ಅವಳ ಪಾಲಿಗೆ ಬಡತನವಾಗಿ ಹೋಗಿದೆ.

ಮನೆಯ ಒಳಗೆ ದುಡಿಯುವ ಹೆಣ್ಣಿಗೆ ಸ್ವಾವಲಂಬನೆ ಇಲ್ಲ ಎನ್ನುವ ಕೊರಗು ಒಂದು ಕಡೆ, ನಿನಗೆ ಏನು ತಿಳಿಯುವುದಿಲ್ಲ ದಡ್ಡಿ ಎನ್ನುವ ಹಣೆಪಟ್ಟಿ ಒಂದು ಕಡೆಯಾದರೆ, ಹೊರಗೆ ಹೋಗಿ ದುಡಿಯುತ್ತಿರುವ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಹೆಸರುಗಳು ತನ್ನ ವ್ಯಕ್ತಿತ್ವಕ್ಕೆ ಅದು ಹೊಂದಿಕೆ ಆದರೂ ಆಗದಿದ್ದರೂ ಆ ಹಣೆ ಪಟ್ಟಿಯನ್ನು ಹೊತ್ತು ಅವಳು ತಿರುಗಲೇಬೇಕು. ಅಂತಹ ಸಮಾಜದ ಓರೆ ಕೋರೆಗಳಿಗೆ ಹೆದರಿ ಬದುಕನ್ನ ಬಲಿ ಕೊಟ್ಟ ಹೆಣ್ಣು ಮಕ್ಕಳ ಎಷ್ಟು?

ಅವುಗಳನ್ನ ಮೀರಿ ನಿಂತು ಹೆದರಿಸಿದ ಹೆಣ್ಣು ಮಕ್ಕಳ ಎಷ್ಟು,? ಇದೊಂದು ಉತ್ತರವೇ ಸಿಗದ ಪ್ರಶ್ನೆ ಹಾಗೆ ಬಿಟ್ಟಿದೆ.

ಜೀವನದ ಪ್ರತಿಯೊಂದು ತಾಯಿಯಾಗಿ ಸಹೋದರಿಯಾಗಿ ಹೆಂಡತಿಯಾಗಿ ಸ್ನೇಹಿತೆಯಾಗಿ ಮಗಳಾಗಿ ಸೊಸೆಯಾಗಿ ಬದುಕುವ ಅನಿವಾರ್ಯತೆಯಲ್ಲಿ ತಾನಾಗಿ ತನಗಾಗಿ ಬದುಕುವುದನ್ನು ಮರೆತುಬಿಡುವ ಬಾಲೆ ಒಮ್ಮೊಮ್ಮೆ ಬದುಕಿನ ಭಾವಯಾನದಲ್ಲಿ ಕುಗ್ಗಿ ಬಿಡುವಳು ಆಗ ಸಂತೈಸಲು ಯಾರು ಇಲ್ಲದೆ ನರಳಿ ನಲುಗುವಳು ಅಂತಹ ಹೆಣ್ಣಿಗೆ ಅವಳೇ ಸರಿಸಾಟಿ.

ಬದುಕಿನ ಬವಣೆಗಳ ನಡುವೆ ಒಂದಿಷ್ಟಾದರೂ ಅವಳ ಭಾವನೆಗಳಿಗೆ ಬೆಲೆ ಕೊಟ್ಟಾಗಲೇ ಈ ಮಹಿಳಾ ದಿನಾಚರಣೆಗೆ ಒಂದಿಷ್ಟು ಅರ್ಥ

ಸುಮಾಶಿವಕುಮಾರ್ (ದಾವಣಗೆರೆ )

ಸಹಶಿಕ್ಷಕರು

Leave a Reply

Your email address will not be published. Required fields are marked *